ಪದ್ಯ ೪೭: ವೇದವ್ಯಾಸರು ಗಾಂಧಾರಿಗೆ ಯಾವ ಉಪದೇಶವನ್ನು ನೀಡಿದರು?

ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತದ ಕದಡು ಹಣಿಯಲಿ
ಮಗಳೆ ಮರುಳಾದೌ ವಿಳಾಸದ ವಿಹಿತವಿಹಪರಕೆ
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ವೇದವ್ಯಾಸರು ಗಾಂಧಾರಿಯನ್ನು ಸಮಾಧಾನ ಪಡಿಸಲು ಮುಂದಾದರು. ಗಾಂಧಾರಿ, ದುಃಖವನ್ನು ಬಿಡು, ಮೋಹದಂದ ಕಟ್ಟುವಡೆದ ಚಿತ್ತದ ಕೊಳೆಯನ್ನು ತೆಗೆದುಹಾಕು. ಇಹ ಪರಗಳಲ್ಲಿ ಸಂಭವಿಸುವ ಇಂತಹದಕ್ಕೆ ನೀನು ಚಿಂತಿಸಬಾರದು. ಇಂತಹ ಮಕ್ಕಳ ತಾಯಿಗೆ ಅಂಜಿಕೆ, ನೋವುಗಳು ಎಂದೂ ತಪ್ಪಲಾರವು. ನಿನ್ನ ಮಕ್ಕಳು ಮಾದಿದ ಅಕಾರ್ಯಗಳನ್ನು ನೆನೆಸಿಕೊಂಡು ವಿಚಾರಿಸು ಎಂದು ನುಡಿದರು.

ಅರ್ಥ:
ದುಗುಡ: ದುಃಖ; ಬಿಡು: ತೊರೆ; ಮೋಹ: ಆಸೆ; ಬಂಧ: ಕಟ್ಟು, ಬಂಧನ, ಪಾಶ; ಸ್ಥಗಿತ: ನಿಂತು ಹೋದುದು; ಚಿತ್ತ: ಮನಸ್ಸು; ಕದಡು: ಕಲಕಿದ ದ್ರವ, ಕಲ್ಕ; ಹಣಿ: ಬಾಗು, ಮಣಿ; ಮಗಳೆ: ಪುತ್ರಿ; ಮರುಳ: ತಿಳಿಗೇಡಿ, ದಡ್ಡ; ಆದೌ: ಹಿಂದೆ; ವಿಲಾಸ: ಕ್ರೀಡೆ, ವಿಹಾರ; ವಿಹಿತ: ಯೋಗ್ಯವಾದುದು; ಇಹಪರ: ಈ ಲೋಕ ಮತ್ತು ಪರಲೋಕ; ಅಗಡು: ತುಂಟತನ; ಮಕ್ಕಳು: ಪುತ್ರರು; ತಾಯಿ: ಮಾತೆ; ತಪ್ಪದು: ಬೇರ್ಪಡಿಸಲಾಗದು; ಬೆಗಡು: ಭಯ, ಅಂಜಿಕೆ; ಬೇಗೆ: ಬೆಂಕಿ, ಕಿಚ್ಚು; ಆದಿ: ಮುಂತಾದ; ವಿಗಡ: ಶೌರ್ಯ, ಪರಾಕ್ರಮ; ನೆನೆ: ಜ್ಞಾಪಿಸು; ನೋಡು: ವೀಕ್ಷಿಸು; ಮುನಿ: ಋಷಿ;

ಪದವಿಂಗಡಣೆ:
ದುಗುಡವನು +ಬಿಡು +ಮೋಹ+ಬಂಧ
ಸ್ಥಗಿತ +ಚಿತ್ತದ +ಕದಡು +ಹಣಿಯಲಿ
ಮಗಳೆ +ಮರುಳ್+ಆದೌ +ವಿಳಾಸದ +ವಿಹಿತವ್+ಇಹಪರಕೆ
ಅಗಡು+ಮಕ್ಕಳ+ ತಾಯ್ಗೆ +ತಪ್ಪದು
ಬೆಗಡು+ಬೇಗೆ +ಸುಯೋಧನಾದ್ಯರ
ವಿಗಡತನವನು +ನೆನೆದು +ನೀ +ನೋಡೆಂದನಾ +ಮುನಿಪ

ಅಚ್ಚರಿ:
(೧) ಲೋಕ ನೀತಿ – ಅಗಡುಮಕ್ಕಳ ತಾಯ್ಗೆ ತಪ್ಪದು ಬೆಗಡುಬೇಗೆ

ಪದ್ಯ ೧೩: ಸುಪ್ರತೀಕ ಗಜವು ಸೈನ್ಯದಲ್ಲಿ ಹೇಗೆ ಕೋಲಾಹಲ ಸೃಷ್ಟಿಸಿತು?

ಮೊಗದ ಜವನಿಕೆದೆಗೆದು ನೆತ್ತಿಯ
ಬಗಿದು ಕೂರಂಕುಶದಲಾನೆಯ
ಬೆಗಡುಗೊಳಿಸಲು ಬೀದಿವರಿದುದು ಸುಭಟರೆದೆಯೊದೆಯೆ
ಹಗೆಯ ಬಲದಲಿ ಹರಿದು ಸುಭಟರ
ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು ದಿಕ್ಕರಿ ಹೊಕ್ಕು ಮೋಹರವ (ದ್ರೋಣ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಸುಪ್ರತೀಕದ ಮುಖದ ಪರದೆಯನ್ನು ತೆಗೆದು ಚೂಪಾದ ಅಂಕುಶದಿಂದ ನೆತ್ತಿಯನ್ನು ಚುಚ್ಚಿದೊಡನೆ, ಅದು ಮುಂದೆ ನುಗ್ಗಿತು. ಪಾಂಡವ ಸೈನ್ಯದಲ್ಲಿ ಹೆಜ್ಜೆಯಿಟ್ಟು ಸುಭಟರನ್ನು ತುಳಿದು ತಲೆಗಳನ್ನು ಕಿತ್ತು ಆಕಾಶದಲ್ಲಿ ಎಸೆಯಿತು.

ಅರ್ಥ:
ಮೊಗ: ಮುಖ; ಜವನಿಕೆ: ತೆರೆ, ಪರದೆ; ತೆಗೆ: ಈಚೆಗೆ ತರು, ಹೊರತರು; ನೆತ್ತಿ: ಶಿರ; ಬಗಿ: ಸೀಳುವಿಕೆ, ಕತ್ತರಿಸುವಿಕೆ; ಕೂರಂಕುಶ: ಹರಿತವಾದ ಅಂಕುಶ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಆನೆ: ಗಜ; ಬೆಗಡು: ಆಶ್ಚರ್ಯ, ಬೆರಗು; ಬೀದಿ: ರಸ್ತೆ; ಸುಭಟ: ಪರಾಕ್ರಮಿ; ಎದೆ: ವಕ್ಷಸ್ಥಳ; ಒದೆ: ತಳ್ಳು; ಹಗೆ: ವೈರಿ; ಬಲ: ಶಕ್ತಿ; ಹರಿ: ಕಡಿ, ಕತ್ತರಿಸು; ಚಿಗುಳಿದುಳಿ: ಜಿಗಿಜಿಗಿಯಾಗುವಂತೆ ತುಳಿ; ತಲೆ: ಶಿರ; ಮುಗಿಲು: ಆಗಸ; ಅಗಲ: ವಿಸ್ತಾರ; ಹರಹು: ವಿಸ್ತಾರ, ವೈಶಾಲ್ಯ; ದಿಕ್ಕರಿ: ದಿಗ್ಗಜ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಮೊಗದ +ಜವನಿಕೆ+ತೆಗೆದು +ನೆತ್ತಿಯ
ಬಗಿದು+ ಕೂರಂಕುಶದಲ್+ಆನೆಯ
ಬೆಗಡುಗೊಳಿಸಲು+ ಬೀದಿವರಿದುದು +ಸುಭಟರ್+ಎದೆ+ಒದೆಯೆ
ಹಗೆಯ +ಬಲದಲಿ +ಹರಿದು +ಸುಭಟರ
ಚಿಗುಳಿದುಳಿದುದು +ತಲೆಗಳನು +ಮುಗಿಲ್
ಅಗಲದಲಿ +ಹರಹಿದುದು +ದಿಕ್ಕರಿ+ ಹೊಕ್ಕು +ಮೋಹರವ

ಅಚ್ಚರಿ:
(೧) ಸುಪ್ರತೀಕದ ಬಲ – ಹಗೆಯ ಬಲದಲಿ ಹರಿದು ಸುಭಟರ ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು

ಪದ್ಯ ೨೨: ಬೇಡರು ಅಡವಿಯಲ್ಲಿ ಹೇಗೆ ಸಾಗಿದರು?

ಬಗೆಯನವ ಶಕುನವ ಮೃಗವ್ಯದ
ಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲುಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ (ಅರಣ್ಯ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬೇಟೆಯ ವ್ಯಸನದಲ್ಲಿ ಸಿಕ್ಕ ಮನೋವೃತ್ತಿಯುಳ್ಳವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವು ವಿವೇಕೆ ಜ್ಞಾನ ಇರುವುದೇ? ಭೀಮನು ಶುಭ ಅಶುಭಗಳನ್ನು ಲೆಕ್ಕಿಸಲಿಲ್ಲ. ಬಂಗಾರದ ಕಾಂತಿಯುಳ್ಳ ರೆಕ್ಕೆಗಳಿಂದ ಅಲಂಕೃತಗೊಂಡು, ಬಿಲ್ಲು ಬಾಣಗಳನ್ನು ಹಿಡಿದ ಬೇಡರು ಅಡವಿಯನ್ನು ಬೆರಗುಗೊಳಿಸುತ್ತಾ ಅಡವಿಯಲ್ಲಿ ಭೀಮನ ಮುಂದೆ ನಡೆದರು.

ಅರ್ಥ:
ಬಗೆ: ಆಲೋಚನೆ, ಯೋಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮೃಗವ್ಯ: ಬೇಟೆ; ಸೊಗಡು: ತೀಕ್ಷ್ಣವಾದ ಗಂಧ; ಸಿಲುಕು: ಬಂಧನ; ಮನ: ಮನಸ್ಸು; ವೃತ್ತಿ: ನಡವಳಿಕೆ, ಸ್ಥಿತಿ; ವಿವೇಕ: ಯುಕ್ತಾಯುಕ್ತ ವಿಚಾರ; ಧರ್ಮ: ಧಾರಣೆ ಮಾಡಿದುದು; ವಿಚಾರ: ಪರ್ಯಾಲೋಚನೆ, ವಿಮರ್ಶೆ; ವಿಸ್ತಾರ: ಹರಹು; ಹೊಗರು: ಪ್ರಕಾಶಿಸು, ಕಾಂತಿ; ಒಗು: ಹೊರಹೊಮ್ಮುವಿಕೆ; ಹೊಂಗರಿ: ಚಿನ್ನದ ರೆಕ್ಕೆ; ಬಿಲು: ಚಾಪ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ನಡೆ: ಚಲಿಸು; ಅಡವಿ: ಕಾಡು; ಬೆಗಡು: ಆಶ್ಚರ್ಯ, ಬೆರಗು; ಮುಂದೆ: ಮುನ್ನ, ಎದುರು; ಪುಳಿಂದ: ಬೇಡ; ಸಂದೋಹ: ಗುಂಪು;

ಪದವಿಂಗಡಣೆ:
ಬಗೆಯನವ+ ಶಕುನವ +ಮೃಗವ್ಯದ
ಸೊಗಡಿನಲಿ +ಸಿಲುಕಿದ+ ಮನೋ +ವೃ
ತ್ತಿಗಳೊಳ್+ಉಂಟೆ +ವಿವೇಕ +ಧರ್ಮ +ವಿಚಾರ+ ವಿಸ್ತಾರ
ಹೊಗರೊಗುವ+ ಹೊಂಗರಿಯ+ ಬಿಲು+ಸರ
ಳುಗಳ +ಹೊದೆಗಳ+ ನಡೆದುದ್+ಅಡವಿಯ
ಬೆಗಡುಗೊಳಿಸುತ +ಮುಂದೆ +ಮುಂದೆ +ಪುಳಿಂದ +ಸಂದೋಹ

ಅಚ್ಚರಿ:
(೧) ವ್ಯಸನಕ್ಕೀಡಾದ ಮನಸ್ಸಿನ ಸ್ಥಿತಿ – ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ

ಪದ್ಯ ೫: ಭೀಷ್ಮಾದಿಗಳ ಪರಿಸ್ಥಿತಿ ಹೇಗಿತ್ತು?

ಬೆಗಡಿನಲಿ ಮುದ ಖೇದ ನಯನಾಂ
ಬುಗಳೊಳಾನಂದಾಶ್ರು ಶೋಕದ
ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ
ದುಗುಡದಲಿ ಪರಿತೋಷ ಕಂದಿದ
ಮೊಗದಲುಜ್ವಲ ವೃತ್ತಿ ಭೀಷ್ಮಾ
ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮುಹೂರ್ತದಲಿ (ಸಭಾ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯ ಸೀರೆಯನ್ನು ಸೆಳೆಯಲು ಮುಂದಾಗಿ ಅದರಲ್ಲಿ ಆಶ್ಚರ್ಯಕರವಾಗಿ ಆಕೆಯ ಮಾನವುಳಿದ ರೀತಿಯು ಭೀಷ್ಮಾದಿಗಳಲ್ಲಿ ಹಲವಾರು ಭಾವನೆಗಳು ಸೇರಿಕೊಂಡವು. ದ್ರೌಪದಿಯ ಸೀರೆಗೆ ಕೈಹಾಕಿದಾಗ ಆಶ್ಚರ್ಯ ಮತ್ತು ದುಃಖದ ಭಾವನೆ, ಹಾಗೆಯೇ ಆಶ್ಚರ್ಯಕರ ರೀತಿಯಲ್ಲಿ ಅವಳ ಮಾನವುಳಿದುದು ಸಂತಸದ ನಗೆ, ಕಣ್ಣೀರೊಡನೆ ಆನಂದಾಶ್ರುಗಳು ಒಮ್ಮೆಗೆ ಹೊರಬಂದವು. ದುಃಖಿತ ಮನಸ್ಥಿತಿಯಲ್ಲಿದ್ದವರಿಂದ ಉಕ್ಕಿಬಂದ ಸಂತಸದ ನಗೆ, ಉದ್ವೇಗದ ಬೆವರೊಂದು ಕಡೆ, ಅದರಲ್ಲೇ ಇನ್ನೊಂದೆಡೆ ರೋಮಾಂಚನ, ದುಃಖದಲ್ಲಿ ಅತಿಶಯ ಸಂತೋಷ, ಬಾಡಿಹೋಗಿದ್ದ ಮುಖದಲ್ಲಿ ಬೆಳಗಿದ ಬೆಳಕು, ಇವು ಭೀಷ್ಮಾದಿಗಳಲ್ಲಿ ಮೂಡಿಬಂದ ಭಾವನೆಗಳು.

ಅರ್ಥ:
ಬೆಗಡು: ಆಶ್ಚರ್ಯ, ಬೆರಗು; ಮುದ: ಸಂತೋಷ; ಖೇದ: ದುಃಖ, ಉಮ್ಮಳ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಆನಂದ: ಸಂತೋಷ; ಆಶ್ರು: ಕಣ್ಣೀರು; ಶೋಕ: ದುಃಖ; ಬಗೆ: ಆಲೋಚನೆ; ಉಬ್ಬು: ಹಿಗ್ಗು; ನಗೆ: ಸಂತಸ; ಸ್ವೇದ: ಬೆವರು; ರೋಮಾಂಚ: ಮೈಗೂದಲು ನಿಮಿರುವಿಕೆ, ಪುಳಕ; ದುಗುಡ: ದುಃಖ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಕಂದು: ಕಳಾಹೀನ; ಮೊಗ: ಮುಖ; ಉಜ್ವಲ: ಪ್ರಕಾಶ; ಉಜ್ವಲವೃತ್ತಿ: ಜ್ವಾಜಲ್ಯಮಾನ ಪ್ರಕಾಶ; ಆದಿ: ಮುಂತಾದ; ಪಲ್ಲಟ: ಬದಲಾವಣೆ, ಮಾರ್ಪಾಟು; ಪಡಿ: ಸಮಾನವಾದುದು, ಎಣೆ; ಮುಹೂರ್ತ: ಒಳ್ಳೆಯ ಸಮಯ;

ಪದವಿಂಗಡಣೆ:
ಬೆಗಡಿನಲಿ +ಮುದ +ಖೇದ +ನಯನಾಂ
ಬುಗಳೊಳ್+ಆನಂದ+ಆಶ್ರು+ ಶೋಕದ
ಬಗೆಯೊಳ್+ಉಬ್ಬಿದ +ನಗೆಯಲಾ +ಸ್ವೇದದಲಿ +ರೋಮಾಂಚ
ದುಗುಡದಲಿ +ಪರಿತೋಷ +ಕಂದಿದ
ಮೊಗದಲ್+ಉಜ್ವಲ +ವೃತ್ತಿ +ಭೀಷ್ಮಾ
ದಿಗಳೊಳಗೆ+ ಪಲ್ಲಟಿಸುತಿರ್ದುದು +ಪಡಿ+ಮುಹೂರ್ತದಲಿ

ಅಚ್ಚರಿ:
(೧) ಮುದ ಖೇದ; ಆನಂದ, ಶೋಕ; ದುಗುಡ, ಪರಿತೋಷ – ವೈರುಧ್ಯ ಭಾವನೆಗಳನ್ನು ವಿವರಿಸುವ ಪರಿ

ಪದ್ಯ ೩೨: ಸಂತಸಗೊಂಡ ದೇವತೆಗಳು ಶಿವನಿಗೆ ಹೇಗೆ ಕೊಂಡಾಡಿದರು?

ಜಗವುಘೇ ಎಂದುದು ಜಯಧ್ವನಿ
ಜಗವ ಝೊಂಪಿಸಿತೊಗ್ಗಿ ನಂಜುಳಿ
ಗಗನದಗಲಕೆ ಕುಣಿವುತಿದ್ದುದು ಸುರರ ಭಾಳದಲಿ
ಬೆಗಡು ಬೀತುದು ಬೇಸರಿನ ಬಲು
ದಗಹು ಸೋತುದು ಶಿವಗೆ ದೈತ್ಯಾ
ರಿಗಳು ಮುದದಲಿ ಮಾಡಿದರು ಮೂರ್ಧಾಭಿಷೇಚನವ (ಕರ್ಣ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಇಡೀ ಜಗತ್ತು ಶಿವನಿಗೆ ಉಘೇ ಉಘೇ ಎಂದು ಜಯಕಾರವನ್ನು ಕೂಗಿತು. ಆ ಸದ್ದು ಜಗತ್ತನ್ನೇ ತುಂಬಿತು. ಹಸ್ತವನ್ನು ಜೋಡಿಸಿ ದೇವತೆಗಳು ಶಿವನಿಗೆ ನಮಸುತ್ತಿದ್ದುದು (ಹಣೆಗೆ ತಮ್ಮ ಹಸ್ತವನಿಟ್ಟು ನಮಸ್ಕರಿಸುತ್ತಿದ್ದರು) ಆಕಾಶದೆಲ್ಲಡೆ ಕಾಣುತ್ತಿತ್ತು. ದೇವತೆಗಳ ವಿಸ್ಮಯ, ದೊಡ್ಡ ಬೆಟ್ಟದಂತಿದ್ದ ಬೇಸಗಳು ಸೋತವು, ದೇವತೆಗಳೆಲ್ಲರೂ ಶಿವನಿಗೆ ಮುದದಿಂದ ಶಿರಸ್ಸಿನಮೇಲೆ ಅಭಿಷೇಕವನ್ನು ಮಾಡಿದರು.

ಅರ್ಥ:
ಜಗ: ಜಗತ್ತು; ಉಘೇ: ಜಯಘೋಷ; ಜಯ: ಗೆಲುವು, ಹೊಗಳು; ಧ್ವನಿ: ರವ, ಶಬ್ದ; ಝೊಂಪಿಸು: ಮೈಮರೆ, ಎಚ್ಚರ ತಪ್ಪು; ಒಗ್ಗು: ಗುಂಪು, ಸಮೂಹ; ಅಂಜುಳಿ: ಬೊಗಸೆ, ಹಸ್ತ; ಗಗನ: ಆಗಸ; ಅಗಲ: ವಿಸ್ತಾರ; ಕುಣಿ: ನರ್ತನ; ಸುರ: ದೇವತೆ; ಭಾಳ: ಹಣೆ; ಬೆಗಡು: ಆಶ್ಚರ್ಯ, ಬೆರಗು; ಬೀತುದು: ಒಣಗಿದ, ಮುಗಿಯಿತು; ಬೇಸರ: ದುಃಖ; ಬಲು: ಬಹಳು; ಅಗ: ಬೆಟ್ಟ; ಸೋತು: ಪರಾಜಯ; ಶಿವ: ಶಂಕರ; ದೈತ್ಯ: ರಾಕ್ಷಸ; ಅರಿ: ವೈರಿ; ದೈತ್ಯಾರಿ: ಸುರರು; ಮುದ: ಸಂತೋಷ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಅಭಿಷೇಕ: ದೇವರಿಗೆ ಮಾಡಿಸುವ ಹಾಗು ಪಟ್ಟ ಕಟ್ಟುವಾಗ ಮಾಡಿಸುವ ಮಂಗಳಸ್ನಾನ;

ಪದವಿಂಗಡಣೆ:
ಜಗವುಘೇ +ಎಂದುದು +ಜಯಧ್ವನಿ
ಜಗವ+ ಝೊಂಪಿಸಿತ್+ಒಗ್ಗಿನ್ +ಅಂಜುಳಿ
ಗಗನದಗಲಕೆ +ಕುಣಿವುತಿದ್ದುದು +ಸುರರ+ ಭಾಳದಲಿ
ಬೆಗಡು +ಬೀತುದು +ಬೇಸರಿನ+ ಬಲು
ದಗಹು +ಸೋತುದು +ಶಿವಗೆ+ ದೈತ್ಯಾ
ರಿಗಳು +ಮುದದಲಿ +ಮಾಡಿದರು+ ಮೂರ್ಧಾಭಿಷೇಚನವ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೆಗಡು ಬೀತುದು ಬೇಸರಿನ ಬಲುದಗಹು
(೨) ದುಃಖವು ಇಲ್ಲವಾಯಿತು ಎಂದು ಹೇಳಲು – ಬೆಗಡು ಬೀತುದು ಬೇಸರಿನ ಬಲುದಗಹು ಸೋತುದು – ಬೇಸರದ ದೊಡ್ಡ ಬೆಟ್ಟವು ಕರಗಿತು ಎಂದು ಹೇಳುವ ಪರಿ

ಪದ್ಯ ೬: ಉತ್ತರನ ಬಳಿ ಬಂದ ಗೋಪಾಲಕನು ಏನು ನಿವೇದಿಸಿದನು?

ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಆಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ (ವಿರಾಟ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಗೋಪಾಲಕನು ಉತ್ತರನ ಆಸ್ಥಾನಕ್ಕೆ ಬಂದ. ಮುಖದಲ್ಲಿ ಭಯವು ಆವರಿಸಿದೆ. ಆ ಭೀತಿಯ ತಾಪದಿಂದ ಎದೆ ಹೊಡೆದುಕೊಳ್ಳುತ್ತ್ದಿದೆ; ತುದಿನಾಲಗೆಯಲ್ಲಿ ತೊದಲು ಮಾತು ಬರುತ್ತಿವೆ. ಅಂಗಳು ಒಣಗಿದೆ; ಭಯದಿಂದ ಉತ್ತರನ ಮುಂದೆ ಗೋಪಾಲಕನು ಮೊರೆಯಿಡುತ್ತಿದ್ದಾನೆ.

ಅರ್ಥ:
ಬೆಗಡು:ಭಯ, ಅಂಜಿಕೆ; ಮುಸುಕು: ಆವರಿಸು; ಮುಖ: ಆನನ; ಭೀತಿ: ಭಯ; ಢಗೆ: ಕಾವು, ದಗೆ; ಹೊಯ್ಲು: ಏಟು, ಹೊಡೆತ; ಹೃದಯ: ಎದೆ, ವಕ್ಷ; ತುದಿ: ಅಗ್ರ;ನಾಲಗೆ: ಜಿಹ್ವೆ; ತೊದಳು: ಸ್ವಷ್ಟವಾಗಿ ಮಾತಾಡದಿರುವುದು; ನುಡಿ: ಮಾತು; ಬೆರಗು: ಆಶ್ಚರ್ಯ; ಬರ: ಕ್ಷಾಮ; ಹುಯ್ಯಲು: ಪೆಟ್ಟು, ಹೊಡೆತ; ಬಹಳ: ತುಂಬ; ಓಲಗ: ದರ್ಬಾರು; ಬಂದನು: ಆಗಮಿಸಿದನು; ನೃಪ: ರಾಜ; ಮಗ: ಸುತ; ಕಾಲು: ಪಾದ; ಎರಗು: ನಮಸ್ಕರಿಸು; ದೂರು: ಮೊರೆ, ಅಹವಾಲು; ಕಳವಳ: ಚಿಂತೆ, ಗೊಂದಲ; ತಾಳಿಗೆ: ಗಂಟಲು;

ಪದವಿಂಗಡಣೆ:
ಬೆಗಡು+ ಮುಸುಕಿದ +ಮುಖದ +ಭೀತಿಯ
ಢಗೆಯ +ಹೊಯ್ಲಿನ +ಹೃದಯ +ತುದಿ+ನಾ
ಲಗೆಯ +ತೊದಳಿನ+ ನುಡಿಯ +ಬೆರಗಿನ +ಬರತ +ತಾಳಿಗೆಯ
ಆಗಿವ +ಹುಯ್ಯಲುಗಾರ+ ಬಹಳ
ಓಲಗಕೆ +ಬಂದನು +ನೃಪ +ವಿರಾಟನ
ಮಗನ +ಕಾಲಿಂಗ್+ಎರಗಿದನು +ದೂರಿದನು +ಕಳಕಳವ

ಅಚ್ಚರಿ:
(೧) ಬೆಗಡು, ಭೀತಿ – ಸಮನಾರ್ಥಕ ಪದ
(೨) ಹೆದರಿದ ಮನುಷ್ಯನ ಸ್ಥಿತಿಯನ್ನು ವರ್ಣಿಸುವ ಪದ್ಯ –
ಬೆಗಡು ಮುಸುಕಿದ ಮುಖ; ಭೀತಿಯ ಢಗೆಯ ಹೊಯ್ಲಿನ ಹೃದಯ; ತುದಿನಾಲಿಗೆಯ ತೊದಳಿನ ನುಡಿ; ಬೆರಗಿನ ಬರತ ತಾಳಿಗೆಯ