ಪದ್ಯ ೩೬: ಧರ್ಮಜನೇಕೆ ದುಃಖಿಸಿದನು?

ಈಸುದಿನ ಪರಿಯಂತ ಧರ್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ (ಗದಾ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಇಷ್ಟು ದಿನ ಧರ್ಮವನ್ನು ಬಿಡದೆ ಬಹಳ ಆಯಾಸವನ್ನು ಸಹಿಸಿಕೊಂಡಿರಿ, ಎನ್ನಲು ಧರ್ಮಜನು ಈ ದಿನ ಯುದ್ಧದಲ್ಲಿ ಧರ್ಮಕ್ಕೆ ಭಂಗ ಬಂದಿತು. ಜ್ಞಾನಿಗಳು ಎಷ್ಟು ನೊಂದಾರು. ಮಕುಟವನ್ನು ಭಂಗಿಸಿದುದು ಸಲ್ಲದ ಕೆಲಸ ಎಂದು ದುಃಖಿಸಿದನು.

ಅರ್ಥ:
ಈಸುದಿನ: ಇಷ್ಟುದಿನ; ದಿನ: ದಿವಸ; ಪರಿಯಂತ: ವರೆಗೆ, ತನಕ; ಧರ್ಮ: ಧಾರಣೆ ಮಾಡಿದುದು; ಮೀಸಲು: ಮುಡಿಪು; ಅಳಿ: ನಾಶ; ಬಳಸು: ಆವರಿಸುವಿಕೆ; ಆಯಾಸ: ಪ್ರಯತ್ನ, ಬಳಲಿಕೆ; ಸೈರಿಸು:ತಾಳು, ಸಹಿಸು; ಯುದ್ಧ: ರಣ, ಕಾಳಗ; ಕೇಳಿ: ಕ್ರೀಡೆ; ಘಾಸಿ: ಪೆಟ್ಟು; ಬುಧ: ವಿದ್ವಾಂಸ; ಏಸು: ಎಷ್ಟು; ಮನಗಾಣು: ತಿಳಿದುಕೊಳ್ಳು; ವೃಥ: ಸುಮ್ಮನೆ; ಅಭಿನಿವೇಶ: ಆಸಕ್ತಿ, ಅಭಿಪ್ರಾಯ; ಮಕುಟ: ಕಿರೀಟ; ಭಂಗ: ಮುರಿ; ಭೂಪ: ರಾಜ;

ಪದವಿಂಗಡಣೆ:
ಈಸುದಿನ+ ಪರಿಯಂತ +ಧರ್ಮದ
ಮೀಸಲ್+ಅಳಿಯದೆ +ಬಳಸಿ +ಬಹಳ
ಆಯಾಸವನು +ಸೈರಿಸಿದಿರ್+ಇಂದಿನ +ಯುದ್ಧ+ಕೇಳಿಯಲಿ
ಘಾಸಿಯಾದುದು +ಧರ್ಮಗತಿ +ಬುಧರ್
ಏಸು +ಮನಗಾಣರು +ವೃಥ+ಅಭಿನಿ
ವೇಶವಾದುದು +ಮಕುಟ+ಭಂಗದೊಳ್+ಎಂದನಾ +ಭೂಪ

ಅಚ್ಚರಿ:
(೧) ಈಸು, ಏಸು – ಪ್ರಾಸ ಪದ

ಪದ್ಯ ೩೦: ವಂದಿ ಮಾಗಧರು ಏನೆಂದು ಹೊಗಳಿದರು?

ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಮ್ದುದು ವಂದಿಜನಜಲಧಿ (ಶಲ್ಯ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ವಂದಿಗಳು ನುಡಿಯುತ್ತಾ ಜೀಯಾ, ಬುಧ, ಪುರೂರವ ಅವನ ಮಗ ಆಯು, ನಹುಷ, ಯಯಾತಿಗಳು ಅನುಭವಿಸಿದ ರಾಜ್ಯಭೋಗವನ್ನು ಅನುಭವಿಸಲು ನೀನು ಭೂಮಿಯಲ್ಲಿ ಅವತರಿಸಿರುವೆ. ಜೂಜಿನಲ್ಲಿ ಸೋತೆ, ಯುದ್ಧದಲ್ಲಿ ಕೌರವನು ಸೋಲುತ್ತಾನೆ, ನಿನ್ನ ಘನತೆಯನ್ನು ಯುದ್ಧದಲ್ಲಿ ತೋರಿಸು ಎಂದು ವಂದಿ ಮಾಗಧರು ಹೊಗಳಿದರು.

ಅರ್ಥ:
ಜೀಯ: ಒಡೆಯ; ಸುತ: ಮಗ; ಭೋಗ: ಸುಖವನ್ನು ಅನುಭವಿಸುವುದು; ನಿಧಿ: ಐಶ್ವರ್ಯ; ಅವತರಿಸು: ಕಾಣಿಸು; ಧರೆ: ಭೂಮಿ; ಜೀಯ: ಒಡೆಯ; ಜೂಜು: ಜುಗಾರಿ, ಸಟ್ಟ; ರಣ: ಯುದ್ಧ; ಆಯತಿ: ವಿಸ್ತಾರ; ಸಂಭಾಸಿವು: ಯೋಚಿಸು, ಯೋಚಿಸು; ವಂದಿ: ಹೊಗಳುಭಟ್ಟ; ಜಲಧಿ: ಸಾಗರ; ಜನ: ಮನುಷ್ಯ; ಜೇಯ: ಗೆಲುವು;

ಪದವಿಂಗಡಣೆ:
ಜೀಯ +ಬುಧನ +ಪುರೂರವನ+ ಸುತನ್
ಆಯುವಿನ +ನಹುಷನ+ ಯಯಾತಿಯದ್
ಆಯಭಾಗದ+ ಭೋಗ+ನಿಧಿ+ಅವತರಿಸಿದೈ+ ಧರೆಗೆ
ಜೇಯನ್+ಎನಿಸಿದೆ +ಜೂಜಿನಲಿ +ರಣ
ಜೇಯನಹನ್+ಈ +ಕೌರವನು+ ನಿನ್ನ್
ಆಯತಿಯ +ಸಂಭಾವಿಸೆಂದುದು +ವಂದಿ+ಜನಜಲಧಿ

ಅಚ್ಚರಿ:
(೧) ಜೇಯ ಪದದ ಬಳಕೆ – ೪, ೫ ಸಾಲು
(೨) ಬಹಳ ಹೊಗಳುಭಟರು ಎಂದು ಹೇಳಲು – ವಂದಿಜನಜಲಧಿ ಪದದ ಬಳಕೆ

ಪದ್ಯ ೫೬: ಮುನಿವರ್ಯರು ದ್ರೋಣರಿಗೆ ಏನೆಂದು ಹೇಳಿದರು?

ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತಕರ್ಮಶ್ರುತಿ ಪರಿತ್ಯಾಗ (ದ್ರೋಣ ಪರ್ವ, ೧೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ವರ್ಣ ಧರ್ಮವನ್ನು ಮೀರಿ ನಡೆಯುವುದೇ ಲೋಕದ ರೀತಿ. ವೇದೋಕ್ತ ಮಾರ್ಗಕ್ಕೆ ತಿಳಿದ ನಾವು ತಪ್ಪಿದರೆ ವಿದ್ವಾಂಸರೂ ಭ್ರಮಿಸುತ್ತಾರೆ. ತಮ್ಮ ತಪ್ಪು ಮಾರ್ಗಕ್ಕೆ ನಾವೇ ಕಾರಣರೆಂದು ಉದಾಹರಣೆ ಕೊಡುತ್ತಾರೆ. ಕೆಟ್ಟ ಮಾರ್ಗದಲ್ಲೇ ನಡೆಯುತ್ತಾರೆ. ವೇದವು ವಿಹಿತವೆಂದು ಹೇಳಿರುವ ಕರ್ಮಗಳನ್ನು ನೀನೇಕೆ ಬಿಡಬೇಕು ಎಂದು ಮುನಿವರ್ಯರು ಕೇಳಿದರು.

ಅರ್ಥ:
ಲೋಕ: ಜಗತ್ತು; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಔಕು: ಒತ್ತು; ನಡೆ: ಚಲಿಸು; ವೈದಿಕ: ವೇದಗಳನ್ನು ಬಲ್ಲವನು; ಆಕೆವಾಳ: ವೀರ, ಪರಾಕ್ರಮಿ; ತಪ್ಪು: ಸರಿಯಿಲ್ಲದ್ದು; ಭ್ರಮಿಸು: ಭ್ರಾಂತಿ, ಹುಚ್ಚು; ಬುಧ: ವಿದ್ವಾಂಸ; ಉದಾಹರಣೆ: ದೃಷ್ಟಾಂತ; ಕಾಕ: ಕಾಗೆ, ನೀಚ; ಬಳಸು: ಉಪಯೋಗಿಸು; ದುರ್ಯಶ: ಅಪಯಶಸ್ಸು; ವಿಹಿತ: ಸರಿಯಾದ; ಕರ್ಮ: ಕಾರ್ಯ; ಶೃತಿ: ವೇದ; ತ್ಯಾಗ: ತೊರೆ;

ಪದವಿಂಗಡಣೆ:
ಲೋಕವೆಂಬುದು +ವರ್ಣ+ಧರ್ಮವನ್
ಔಕಿ +ನಡೆವುದು +ವೈದಿಕಕೆ +ನಾವ್
ಆಕೆವಾಳರು +ತಪ್ಪಿ+ ನಡೆದರೆ +ಭ್ರಮಿಸುವರು +ಬುಧರು
ಲೋಕ +ನಮ್ಮನ್+ಉದಾಹರಿಸುವುದು
ಕಾಕನೇ +ಬಳಸುವುದು +ದುರ್ಯಶವ್
ಏಕೆ +ನಿಮಗಿದು +ವಿಹಿತ+ಕರ್ಮ+ಶ್ರುತಿ +ಪರಿತ್ಯಾಗ

ಅಚ್ಚರಿ:
(೧) ಲೋಕದ ನೀತಿ – ಲೋಕವೆಂಬುದು ವರ್ಣಧರ್ಮವ ನೌಕಿ ನಡೆವುದು
(೨) ಮುನಿವರ್ಯರು ತಮ್ಮನ್ನು ಪರಿಚಯಿಸಿದ ಪರಿ – ವೈದಿಕಕೆ ನಾವಾಕೆವಾಳರು

ಪದ್ಯ ೩೦: ಯಾವುದಕ್ಕೆ ಯಾವುದು ಮೂಲವೆಂದು ವ್ಯಾಸರು ತಿಳಿಸಿದರು?

ಇರುಳು ಹಗಲಿನ ಬೀಜ ನೆರವಿಯೆ
ಹರೆವುದಕೆ ಮೊದಲುನ್ನತೋಜ್ಜತ
ಮರುಳೆ ಕೇಡಿನ ಕಾಳಕೂಟವೆ ವೀರನಿರ್ವಹಣ
ಸಿರಿ ದರಿದ್ರತೆಗಡಹು ಜನನವೆ
ಮರಣ ಫಲವಿದನರಿದು ಬುಧರಾ
ಚರಿಸುವುದು ಕೇಳೆಂದು ವೇದವ್ಯಾಸ ಮುನಿ ನುಡಿದ (ದ್ರೋಣ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾತ್ರಿಯು ಹಗಲಿನ ಮೂಲ, ಕೂಡುವುದೇ ಅಗಲುವುದಕ್ಕೆ ಮೂಲ, ಹುಚ್ಚರಲ್ಲಿ ಮಹಾಹುಚ್ಚನೇ ಕೇಳು, ವೀರರನ್ನು ಸಾಕುವುದೇ ಕೇಡಿನ ವಿಷಸಂಗ್ರಹಣೆ. ದಾರಿದ್ರ್ಯಕ್ಕೆ ಸಿರಿಯೇ ಗ್ರಾಸ, ಮರಣದ ಫಲ ಜನನ, ಇದನ್ನರಿತು ತಿಳಿದವರು ನಡೆಯಬೇಕೆಂದು ವ್ಯಾಸರು ನುಡಿದರು.

ಅರ್ಥ:
ಇರುಳು: ರಾತ್ರಿ: ಹಗಲು: ದಿನ; ಬೀಜ: ಮೂಲವಸ್ತು; ನೆರವಿ: ಗುಂಪು, ಸಮೂಹ; ಹರೆ:ವ್ಯಾಪಿಸು, ವಿಸ್ತರಿಸು; ಮೊದಲು: ಮುನ್ನ; ಉನ್ನತೋನ್ನತ: ಶ್ರೇಷ್ಠ; ಮರುಳೆ: ಮೂಢ; ಕೇಡು: ನಾಶ; ಕಾಳಕೂಟ: ವಿಷ; ವೀರ: ಶೂರ, ಪರಾಕ್ರಮಿ; ನಿರ್ವಹಣೆ: ನಿಭಾಯಿಸುವಿಕೆ; ಸಿರಿ: ಐಶ್ವರ್ಯ; ದರಿದ್ರತೆ: ಬಡತನ; ಎಡರು: ಅಡಚಣೆ; ಜನನ: ಹುಟ್ಟು; ಮರಣ: ಸಾವು; ಫಲ: ಪ್ರಾಪ್ತಿ, ಪ್ರಯೋಜನ; ಅರಿ: ತಿಳಿ; ಬುಧ: ಪಂಡಿತ; ಆಚರಿಸು: ನಿರ್ವಹಿಸು; ಕೇಳು: ತಿಳಿಸು; ಮುನಿ: ಋಷಿ; ನುಡಿ: ಮಾತು;

ಪದವಿಂಗಡಣೆ:
ಇರುಳು +ಹಗಲಿನ +ಬೀಜ +ನೆರವಿಯೆ
ಹರೆವುದಕೆ +ಮೊದಲ್+ಉನ್ನತೋನ್ನತ
ಮರುಳೆ +ಕೇಡಿನ +ಕಾಳಕೂಟವೆ + ವೀರ+ನಿರ್ವಹಣ
ಸಿರಿ +ದರಿದ್ರತೆಗ್+ಅಡಹು +ಜನನವೆ
ಮರಣ +ಫಲವಿದನ್+ಅರಿದು +ಬುಧರ್
ಆಚರಿಸುವುದು +ಕೇಳೆಂದು +ವೇದವ್ಯಾಸ +ಮುನಿ +ನುಡಿದ

ಅಚ್ಚರಿ:
(೧) ವ್ಯಾಸರ ನುಡಿಗಳು – ಕೇಡಿನ ಕಾಳಕೂಟವೆ ವೀರನಿರ್ವಹಣ; ಇರುಳು ಹಗಲಿನ ಬೀಜ; ಸಿರಿ ದರಿದ್ರತೆಗಡಹು; ಜನನವೆಮರಣ ಫಲ

ಪದ್ಯ ೨೨: ಭೀಷ್ಮರು ಹೇಗೆ ಲೆಕ್ಕವನ್ನು ವಿವರಿಸಿದರು?

ಮಗನೆ ಕೇಳೀರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ (ವಿರಾಟ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಪ್ರಶ್ನೆಗೆ ಭೀಷ್ಮರು ಉತ್ತರಿಸುತ್ತಾ, ಮಗನೇ ಹತ್ತು ವರ್ಷಗಳ ಅವಧಿಯಲ್ಲಿ ಎರಡು ಅಧಿಕಮಾಸಗಳು ಬರುತ್ತವೆ, ಅವನ್ನೂ ಸೇರಿಸಿ ಅವರು ವನವಾಸ ಅಜ್ಞಾತವಾಸಗಳನ್ನು ಮುಗಿಸಿದರು. ತಿಳಿದವರ ಲೆಕ್ಕದಂತೆ ನಿನ್ನೆಯ ಹಗಲು ನಿನ್ನದು, ಈ ಹಗಲು ಪಾಂಡವರದು ಎಂದು ಭೀಷ್ಮರು ಹೇಳಿದರು.

ಅರ್ಥ:
ಮಗ: ಸುತ, ಪುತ್ರ; ಕೇಳು: ಆಲಿಸು; ಈರೈದು: ಹತ್ತು; ವರುಷ: ಸಂವತ್ಸರ; ಮಿಗು: ಹೆಚ್ಚಾಗು, ಅಧಿಕವಾಗು; ಮಾಸ: ತಿಂಅಳು; ಅನುಭವಿಸು: ಕಷ್ಟಪಡು; ಆದಿ: ಪೂರ್ವ ಕಾಲ; ವತ್ಸರ: ವರ್ಷ; ಮಿಗು: ಹೆಚ್ಚಾಗು, ಅಧಿಕವಾಗು; ಬುಧ: ವಿದ್ವಾಂಸ; ಅರಿ: ತಿಳಿ; ಹಗಲು: ದಿನ; ತನಯ: ಮಕ್ಕಳು; ಕಂದ: ಮಗು; ಹೊಗು: ಮುಟ್ಟು, ಪ್ರವೇಶಿಸು;

ಪದವಿಂಗಡಣೆ:
ಮಗನೆ +ಕೇಳ್+ಈರೈದು +ವರುಷಕೆ
ಮಿಗುವವ್+ಎರಡೇ +ಮಾಸ +ಮಾಸಾ
ದಿಗಳನ್+ಅವರ್+ಅನುಭವಿಸಿದರು+ ಹದಿಮೂರು +ವತ್ಸರವ
ಮಿಗುವ್+ಅವಧಿ +ಬುಧರ್+ಅರಿಯೆ +ನಿನ್ನಿನ
ಹಗಲು +ನಿನ್ನದು +ಪಾಂಡು+ತನಯರು
ಹೊಗುವಡ್+ಇಂದಿನ +ದಿವಸವ್+ಅವರದು +ಕಂದ +ಕೇಳೆಂದ

ಅಚ್ಚರಿ:
(೧) ವರುಷ, ವತ್ಸರ; ತನಯ, ಮಗ, ಕಂದ – ಸಮಾನಾರ್ಥಕ ಪದಗಳು

ಪದ್ಯ ೩೬: ಚಂದ್ರವಂಶಕ್ಕೆ ಯಾರು ಮೊದಲಿಗರು?

ಆದಿಯಲಿ ಕೃತಯುಗ ಹರಿಶ್ಚಂ
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದೊಳವರೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ (ಅರಣ್ಯ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೃತಯುಗವು ಮೊದಲನೆಯ ಯುಗ. ಹರಿಶ್ಚಂದ್ರನೇ ಮೊದಲಾದವರು ಆಗ ಸೂರ್ಯವಂಶದ ರಾಜರು. ನಿಮ್ಮ ಚಂದ್ರ ವಂಶಕೆ ಬುಧನೇ ಮೊದಲು. ಆನಂತರ ಪುರೂರವ. ಆ ಯುಗದಲ್ಲಿ ಅವರ ಹಾಗೆ ರಾಜ್ಯಭಾರ ಮಾಡಿದವರಾರು ಇಲ್ಲ. ವೈದಿಕ ಧರ್ಮವು ಆಗ ಸೂರ್ಯ ಪ್ರಕಾಶಕ್ಕೆ ಸರಿಯಾಗಿ ಬೆಳಗಿತು.

ಅರ್ಥ:
ಆದಿ: ಮುಂಚೆ, ಮೊದಲು; ಕೃತಯುಗ: ಸತ್ಯಯುಗ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಆದಿ: ಮೊದಲಾದ; ಅನ್ವಯ: ವಂಶ; ಬಳಿಕ: ನಂತರ; ಕ್ಷಿತಿಪ: ರಾಜ; ಮೇದಿನಿ: ಭೂಮಿ; ಉಪಾಧಿ: ಕಾರಣ; ಸಲಹು: ಪೋಷಿಸು; ಬೆಳಗು: ಪ್ರಜ್ವಲಿಸು; ವೇದ: ಶೃತಿ; ಬೋಧಿತ: ಹೇಳಿದ; ಧರ್ಮ: ಧಾರಣ ಮಾಡಿದುದು, ನಿಯಮ; ಸೂರ್ಯ: ರವಿ; ಪ್ರಭೆ: ಕಾಂತಿ, ಪ್ರಕಾಶ; ಸರಿ: ಸಮ;

ಪದವಿಂಗಡಣೆ:
ಆದಿಯಲಿ +ಕೃತಯುಗ +ಹರಿಶ್ಚಂ
ದ್ರಾದಿಗಳು +ಸೂರ್ಯ+ಅನ್ವಯಕೆ+ ಬುಧ
ನಾದಿ +ನಿಮ್ಮ್+ಅನ್ವಯಕೆ +ಬಳಿಕ+ ಪುರೂರವ +ಕ್ಷಿತಿಪ
ಮೇದಿನಿಯನ್+ಆ+ ಯುಗದೊಳ್+ಅವರೋ
ಪಾದಿ +ಸಲಹಿದರಿಲ್ಲ+ ಬೆಳಗಿತು
ವೇದ+ ಬೋಧಿತ+ ಧರ್ಮ +ಸೂರ್ಯಪ್ರಭೆಗೆ+ ಸರಿಯಾಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೆಳಗಿತು ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ

ಪದ್ಯ ೬೩: ಬ್ರಾಹ್ಮಣೋತ್ತಮರ ಪಾದೋದಕ ಏಕೆ ಪವಿತ್ರವಾದುದು?

ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹಾಲಿನ ಸಮುದ್ರದಲ್ಲಿ ವಿಷ್ಣುವು ಯೋಗನಿದ್ರೆಯಲ್ಲಿ ಮುಳುಗಿರಲು ಭೃಗು ಮಹರ್ಷಿಯು ಅವನನ್ನು ನೋಡಲು ಬಂದು, ಬಂದ ಬ್ರಾಹ್ಮಣನನ್ನು ಆಹ್ವಾನಿಸಲಿಲ್ಲವೆಂದು ಕೋಪಗೊಂಡು ವಿಷ್ಣುವಿನ ವಕ್ಷಸ್ಥಳವನ್ನು ಒದೆಯುತ್ತಾನೆ. ವಿಷ್ಣುವು ಭೃಗು ಮಹರ್ಷಿಯ ಪಾದಕ್ಕೆ ನೋವಾಯಿತೇನೋ ಎಂದು ಅದನ್ನು ತನ್ನ ಎದೆಯ ಮೇಲಿಟ್ಟು ಒತ್ತಿ ಆ ಪಾದಗಳ ಮಹಿಮೆಯನ್ನು ಮೆರೆದನು. ಬ್ರಾಹ್ಮಣೋತ್ತಮರ ಪಾದೋದಕಕ್ಕಿಂತ ಹೆಚ್ಚಿನ ತೀರ್ಥವಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಶರಧಿ: ಸಮುದ್ರ; ಹರಿ: ವಿಷ್ಣು; ಯೋಗ: ಹೊಂದಿಸುವಿಕೆ, ಮನಸ್ಸು ಹಾಗೂ ಇಂದ್ರಿಯಗಳನ್ನು ನಿಗ್ರಹಿಸಿ ಏಕಚಿತ್ತದಿಂದ ಧ್ಯಾನ ಮಾಡುವಿಕೆ; ನಿದ್ರೆ: ಶಯನ; ಲಕ್ಷ್ಮೀ; ಶ್ರೀದೇವಿ; ಲಕ್ಷ್ಮೀಧರ: ವಿಷ್ಣು; ವಕ್ಷ: ಹೃದಯ; ಸ್ಥಳ: ಜಾಗ; ಒದೆ: ದೂಕು; ಮುನಿ: ಋಷಿ; ಚರಣ: ಪಾದ; ಸಿರಿ: ಲಕ್ಷ್ಮೀ; ಉದರ: ಮಧ್ಯಭಾಗ, ಹೊಟ್ಟೆ; ಒತ್ತು: ಸ್ಪರ್ಶ; ಧರಣಿ: ಭೂಮಿ; ಸುರ: ದೇವ; ಧರಣೀಸುರ: ಬ್ರಾಹ್ಮಣ; ಮೆರೆ:ಪ್ರಸಿದ್ಧವಾಗು, ಪ್ರಖ್ಯಾತವಾಗು; ತೀರ್ಥ: ಪವಿತ್ರವಾದ ಜಲ; ಪಾದ: ಚರಣ; ಧರೆ: ಭೂಮಿ; ಬುಧ: ವಿದ್ವಾಂಸ, ಬ್ರಾಹ್ಮಣ; ಅಧಿಕ: ಹೆಚ್ಚು;

ಪದವಿಂಗಡಣೆ:
ಶರಧಿಯೊಳು+ ಹರಿ +ಯೋಗ+ನಿದ್ರೆಯೊಳ್
ಇರಲು +ಭೃಗುವೈತಂದು +ಲಕ್ಷ್ಮೀ
ಧರನ+ ವಕ್ಷಸ್ಥಳವನ್+ಒದೆಯಲು +ಮುನಿಯ +ಚರಣವನು
ಸಿರಿ+ಯುದರದೊಳಗ್+ಒತ್ತಿ +ಧರಣೀ
ಸುರರ+ ಮೆರೆದನು+ ತೀರ್ಥ+ಪಾದವ
ಧರೆಯೊಳಗೆ+ ಬುಧರಿಂದ್+ಅಧಿಕವಹ+ ತೀರ್ಥವಿಲ್ಲೆಂದ

ಅಚ್ಚರಿ:
(೧) ಹರಿ, ಲಕ್ಷ್ಮೀಧರ; ಲಕ್ಷ್ಮೀ, ಸಿರಿ – ಸಮಾನಾರ್ಥಕ ಪದ
(೨) ಧರಣೀಸುರ, ಬುಧ – ಸಾಮ್ಯಪದಗಳ ಬಳಕೆ

ಪದ್ಯ ೫೩: ಅಧಮ ರಾಜರ ವಿನಾಶಕ್ಕೆ ಯಾವೆಂಟು ಕಾರಣಗಳು?

ಬುಧರೊಳಗೆ ಹಗೆಗೊಳುವ ಬುಧರನು
ನಿಧನವೈದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರನು ಹೊಗಳುವರ ಹಳಿವ
ಬುಧರನಧಮರ ಮಾಳ್ಪ ಬುಧರಂ
ವಿಧಿಗೊಳಿಪ ಬುಧರೆನಲು ಕನಲುವ
ನಧಮ ಭೂಪರಿಗೆಂಟು ಗುಣವು ವಿನಾಶಕರವೆಂದ (ಉದ್ಯೋಗ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಧಮ ರಾಜನ ವಿನಾಶಕ್ಕೆ ಈ ಎಂಟು ಗುಣಗಳನ್ನು ವಿದುರ ಇಲ್ಲಿ ಹೇಳುತ್ತಾರೆ. ಈ ಪದ್ಯದಲ್ಲಿ ವಿದ್ವಾಂಸರನ್ನು ರಾಜ್ಯದಲ್ಲಿ ಹೇಗೆ ನಡೆಸಿಕೊಳ್ಳಬೇಕೆಂದು ನಾವು ಅರ್ಥೈಸಬಹುದು. ಪಂಡಿತರನ್ನು ದ್ವೇಷಿಸುವುದು, ವಿದ್ವಾಂಸರನ್ನು ಕೊನೆಗೊಳಿಸುವುದು, ಬುಧರನ್ನು ಅಪಹಾಸ್ಯ ಮಾದುವುದು, ಜ್ಞಾನಿಗಳನ್ನು ಬೈದಾಗ ಸಂತೋಷಪಡುವುದು, ಅವರನ್ನು ಹೊಗಳುವವರನ್ನು ನಿಂದಿಸುವುದು, ಜ್ಞಾನಿಗಳನ್ನು ಅಧಮರೆಂದು ಪರಿಗಣಿಸುವುದು, ಅವರ ಮೇಲೆ ನಿಯಂತ್ರಣ ಸಾಧಿಸಲು ಆಜ್ಞೆಯನ್ನು ಮಾಡುವುದು, ತಿಳಿದವರೆಂದರೆ ಕೋಪಗೊಳ್ಳುವುದು, ಈ ಎಂಟು ಗುಣಗಳು ರಾಜನಲ್ಲಿ ವ್ಯಕ್ತವಾದರೆ ಆವನು ವಿನಾಶದ ಹಾದಿಯಲ್ಲಿದ್ದಾನೆ ಎಂದು ತಿಳಿಯಬಹುದು.

ಅರ್ಥ:
ಬುಧ: ಪಂಡಿತ, ವಿದ್ವಾಂಸ; ಹಗೆ: ದ್ವೇಷ, ವೈರತ್ವ; ನಿಧನ: ಕೊನೆಗೊಳ್ಳು, ಸಾವು; ಐದು: ಹೊಂದು; ಏಳು:ಜೀವವನ್ನು ಪಡೆ; ಜರಿ: ನಿಂದಿಸು; ನಲಿ: ಸಂತೋಷ ಪಡು; ಹೊಗಳು: ಗೌರವಿಸು; ಹಳಿ: ನಿಂದಿಸು, ದೂಷಿಸು; ಅಧಮ: ಕೀಳು; ಮಾಳ್ಪ: ಮಾಡು; ವಿಧಿ:ಆಜ್ಞೆ, ಆದೇಶ; ಎನಲು: ಹೇಳುತ್ತಲೆ; ಕನಲು:ಸಿಟ್ಟಿಗೇಳು; ಅಧಮ: ಕೀಳುದರ್ಜೆಯ; ಭೂಪ: ರಾಜ; ಗುಣ: ನಡತೆ, ಸ್ವಭಾವ; ವಿನಾಶ: ಅಂತ್ಯ;

ಪದವಿಂಗಡಣೆ:
ಬುಧರೊಳಗೆ+ ಹಗೆಗೊಳುವ +ಬುಧರನು
ನಿಧನವೈದಿಪ+ ಬುಧರನ್+ಏಳಿಪ
ಬುಧರ+ ಜರೆದೊಡೆ +ನಲಿವ +ಬುಧರನು+ ಹೊಗಳುವರ+ ಹಳಿವ
ಬುಧರನ್+ಅಧಮರ+ ಮಾಳ್ಪ +ಬುಧರಂ
ವಿಧಿಗೊಳಿಪ+ ಬುಧರೆನಲು +ಕನಲುವನ್
ಅಧಮ +ಭೂಪರಿಗೆಂಟು +ಗುಣವು +ವಿನಾಶಕರವೆಂದ

ಅಚ್ಚರಿ:
(೧) ಬುಧ – ೮ ಬಾರಿ ಪ್ರಯೋಗ
(೨) ೮ ಗುಣಗಳನ್ನು ವಿವರಿಸುವ ಪದ್ಯ, ಹಗೆ, ನಿಧನ, ಏಳು, ಜರೆ, ಹಳಿ, ಅಧಮ, ವಿಧಿ, ಕನಲು

ಪದ್ಯ ೫೦: ಯಾವುದು ಶೋಭಿಸುವುದಿಲ್ಲ?

ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ದಾನವಿಲ್ಲದ ಸುದತಿ ಸೂರಿಗಳಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಯಾವ ವಸ್ತುವಿಗೆ ಯಾವುದಿಲ್ಲದಿದ್ದರೆ ಅದು ಶೋಭಿಸದು ಎಂದು ವಿದುರ ಈ ಪದ್ಯದಲ್ಲಿ ತಿಳಿಸಿದ್ದಾರೆ. ದಾನ ಮಾಡದೆ ಇರುವ ಐಶ್ವರ್ಯ, ವಿದ್ವಾಂಸರನ್ನು ಗೌರವಿಸದ ರಾಷ್ಟ್ರ, ರಕ್ಷಕರಿಲ್ಲದ ಸ್ತ್ರೀ, ವಿದ್ವಾಂಸರಿಲ್ಲದ ರಾಜನಾಸ್ಥಾನ, ಜ್ಞಾನವಿಲ್ಲದ ತಪಸ್ಸು, ವೇದಮಾರ್ಗವನ್ನರಿಯದ ಬ್ರಾಹ್ಮಣ, ಬಾಣ ಪ್ರಯೋಗವನ್ನರಿಯದೆ ಮಾಡಿದ ಯುದ್ಧ, ಇವು ಶೋಭಿಸುವುದಿಲ್ಲ ಎಂದು ವಿದುರ ತನ್ನ ನೀತಿಯನ್ನು ಹೇಳಿದ.

ಅರ್ಥ:
ದಾನ: ನೀಡು, ಚತುರೋಪಾಯಗಳಲ್ಲಿ ಒಂದು; ವಿತ್ತ: ಹಣ; ಬುಧ: ವಿದ್ವಾಂಸ; ಸನ್ಮಾನ: ಗೌರವ; ರಾಜ್ಯ: ದೇಶ; ಬಲು: ಹೆಚ್ಚು; ಸುಯ್ದಾನ: ರಕ್ಷಣೆ; ಸುದತಿ: ಸುಂದರಿ, ಹೆಣ್ಣು; ಸೂರಿ:ಜ್ಞಾನಿ; ಆಸ್ಥಾನ; ದರ್ಬಾರು; ಜ್ಞಾನ: ವಿದ್ಯೆ; ತಪ: ತಪಸ್ಸು; ವೇದ: ಜ್ಞಾನ; ವಿಧಾನ: ರೀತಿ; ವಿಪ್ರ: ಬ್ರಾಹ್ಮಣ; ಶರ: ಬಾಣ; ಸಂಧಾನ: ಬಾಣವನ್ನು ಹೂಡುವಂಥದು; ಸಮರ: ಯುದ್ಧ; ಮೆರೆ: ಶೋಭಿಸು;

ಪದವಿಂಗಡಣೆ:
ದಾನವಿಲ್ಲದ +ವಿತ್ತ +ಬುಧ +ಸ
ನ್ಮಾನವಿಲ್ಲದ+ ರಾಜ್ಯ +ಬಲು +ಸುಯಿ
ದಾನವಿಲ್ಲದ+ ಸುದತಿ +ಸೂರಿಗಳಿಲ್ಲದ+ಆಸ್ಥಾನ
ಜ್ಞಾನವಿಲ್ಲದ +ತಪವು +ವೇದ +ವಿ
ಧಾನವಿಲ್ಲದ +ವಿಪ್ರ +ಶರ+ಸಂ
ಧಾನವಿಲ್ಲದ +ಸಮರ +ಮೆರೆಯದು +ರಾಯ +ಕೇಳೆಂದ

ಅಚ್ಚರಿ:
(೧) ವಿಲ್ಲದ – ೭ ಬಾರಿ ಪ್ರಯೋಗ, ೧-೬ ಸಾಲಿನ ಮೊದಲ ಪದದಲ್ಲಿ ಕಾಣುವ ಪದ
(೨) ೭ ಉದಾಹರಣೆಗಳನ್ನು ನೀಡಿರುವುದು
(೩) ‘ವ’ ಕಾರದ ತ್ರಿವಳಿ ಪದ – ವೇದ ವಿಧಾನವಿಲ್ಲದ ವಿಪ್ರ
(೪) ಬುಧ, ಜ್ಞಾನಿ – ಸಮನಾರ್ಥಕ ಪದ

ಪದ್ಯ ೧೮: ಧರ್ಮರಾಯನು ಜನರ ಯೋಗಕ್ಷೇಮವನ್ನು ಹೇಗೆ ನೋಡಿಕೊಳ್ಳುತ್ತಿದ್ದನು?

ದಿವಸ ದಿವಸದೊಳುಂಡುದವನೀ
ದಿವಿಜ ಸಂತತಿ ಹತ್ತುಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ
ವಿವಿಧ ರತ್ನಾಭರಣ ಕಾಂಚನ
ನವದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ (ಸಭಾ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮರಾಯನು ಜನರ ಯೋಗಕ್ಷೇಮದ ಬಗ್ಗೆ ಬಹಳ ಕಾಳಜಿವಹಿಸಿ ರಾಜ್ಯಭಾರ ಮಾಡುತ್ತಿದ್ದನು. ಪ್ರತಿನಿತ್ಯವೂ ಹತ್ತು ಸಾವಿರ ಬ್ರಾಹ್ಮಣರ ಊಟವಾಗುತ್ತಿತ್ತು, ಬೇಡಲು ಬರುವವರ ಸಮುದ್ರವೇ ಇರುತ್ತಿತ್ತು, ಅಸಂಖ್ಯ ವಿದ್ವಾಂಸರಿಗೆ ರತ್ನಾಭರಣ, ಹೊನ್ನು, ರೇಷ್ಮೆ ವಸ್ತ್ರಗಳ ಉಡುಗೊರೆ ದೊರೆಯುತ್ತಿತ್ತು, ಬಡವರು ಧರ್ಮರಾಯನಿಮ್ದ ಭಿಕ್ಷೆ ಪಡೆದು ತೃಪ್ತರಾಗುತ್ತಿದ್ದರು.

ಅರ್ಥ:
ದಿವಸ: ದಿನ; ದಿವಸ ದಿವಸ: ಪ್ರತಿನಿತ್ಯ; ಉಂಡು: ಊಟಮಾಡಿ; ಅವನಿ:ಭೂಮಿ; ದಿವಿಜ: ದೇವತೆ; ಅವನಿದಿವಿಜ: ಬ್ರಾಹ್ಮಣ; ಸಂತತಿ: ವಂಶ; ಮಾರ್ಗಣ:ಯಾಚಕ, ಬೇಡುವವ; ಉದಧಿ:ಸಮುದ್ರ; ಮಹ: ದೊಡ್ಡ; ವಿವಿಧ: ಹಲವಾರು; ರತ್ನಾಭರಣ: ಆಭರಣ, ಒಡವೆ; ಕಾಂಚನ: ಹೊನ್ನು, ಚಿನ್ನ; ನವ: ಹೊಸ, ನವೀನ; ದುಕೂಲ: ರೇಷ್ಮೆ ಬಟ್ಟೆ; ದಿಂಡು: ಬಟ್ಟೆ; ಬುಧ: ಪಂಡಿತ; ನಿವಹ: ಗುಂಪು, ಸಮೂಹ; ದಣಿ: ಆಯಾಸ; ಅನಂತ: ಹಲವಾರು, ತುಂಬ; ಕೃಪಣ: ದೀನ; ಜನ: ಜನರು, ಮನುಷ್ಯರು;

ಪದವಿಂಗಡಣೆ:
ದಿವಸ +ದಿವಸದೊಳ್+ಉಂಡುದ್+ಅವನೀ
ದಿವಿಜ+ ಸಂತತಿ+ ಹತ್ತುಸಾವಿರವ್
ಅವರನ್+ಏನೆಂದ್+ಎಣಿಸುವೆನು+ ಮಾರ್ಗಣ +ಮಹ+ಉದಧಿಯ
ವಿವಿಧ+ ರತ್ನಾಭರಣ+ ಕಾಂಚನ
ನವ+ದುಕೂಲದ+ ದಿಂಡಿನಲಿ+ ಬುಧ
ನಿವಹ+ ದಣಿದುದ್+ಅನಂತ +ಕೃಪಣಾನಾಥ +ಜನಸಹಿತ

ಅಚ್ಚರಿ:
(೧) ಅವನೀದಿವಿಜ – ಬ್ರಾಹ್ಮಣ; ಬುಧ- ಪಂಡಿತ, ಮಾರ್ಗಣ – ಯಾಚಕ; ಪದಗಳ ಬಳಕೆ
(೨) ಹೆಚ್ಚು, ತುಂಬಾ ಎಂದು ವರ್ಣಿಸಲು ಬಳಸಿದ ಪದಗಳು – ಹತ್ತುಸಾವಿರ, ಮಹೋದಧಿ, ದಿಂಡು