ಪದ್ಯ ೬೨: ರಾವುತರ ಯುದ್ಧ ವೈಖರಿ ಹೇಗಿತ್ತು?

ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದವು ಲೋಹ ಸೀಸಕ
ವಡಸಿ ಬಲ್ಲೆಯ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ರಾವುತರ ದೂಹತ್ತಿಗಳ ಹೊಡೆತಕ್ಕೆ ಲೋಹದ ಶಿರಸ್ತ್ರಾಣಗಳು ಸಿಡಿದವು. ಈಟಿಯ ಮೂತಿಗಳು ಸರಪಣಿಗಳನ್ನು ಪುಡಿಪುಡಿ ಮಾದಿದವು. ಲೌಡಿಗಳು ನೆತ್ತಿಗಳನ್ನು ಒಡೆಯಲು ಮಿದುಳು ಹಾರಿತು. ಎರಡೂ ಕಡೆಗಳಿಂದ ರಕ್ತದ ಕಡಲು ಉಕ್ಕಿ ಒಂದಾದವು.

ಅರ್ಥ:
ಹೊಡೆ: ಏಟು, ಹೊಡೆತ; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಘಾಯ; ಪೆಟ್ಟು; ಸಿಡಿ: ಚಿಮ್ಮು; ಲೋಹ: ಕಬ್ಬಿಣ, ಉಕ್ಕು; ಸೀಸಕ: ಶಿರಸ್ತ್ರಾಣ; ಬಲ್ಲೆ: ಈಟಿ; ಬಿಗಿ: ಕಟ್ಟು; ನಟ್ಟು: ತಾಗು; ಸರಪಣಿ: ಸಂಕೋಲೆ, ಶೃಂಖಲೆ; ಝಗೆ: ಹೊಳಪು, ಪ್ರಕಾಶ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಒತ್ತು: ಚುಚ್ಚು; ನೆತ್ತಿ: ಶಿರ; ಬಿಡುಮಿದುಳು: ಒಡೆದ ತಲೆಯದಂಗ; ಕೆದರು: ಹರಡು; ರಕುತ: ನೆತ್ತರು; ಕಡಲು: ಸಾಗರ; ಕೂಡೆ: ಜೊತೆ; ಹೊಯ್ದಾಡು: ಹೋರಾಡು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಅಡಸು: ಬಿಗಿಯಾಗಿ ಒತ್ತು, ಆಕ್ರಮಿಸು;

ಪದವಿಂಗಡಣೆ:
ಹೊಡೆವ +ದೂಹತ್ತಿಗಳ +ಘಾಯದಲ್
ಒಡೆದು +ಸಿಡಿದವು+ ಲೋಹ +ಸೀಸಕವ್
ಅಡಸಿ +ಬಲ್ಲೆಯ+ ಬಗಿದು+ ನಟ್ಟುದು +ಸರಪಣಿಯ +ಝಗೆಯ
ಹೊಡೆವ+ ಲೌಡಿಗಳೊತ್ತಿ+ ನೆತ್ತಿಯ
ಬಿಡುಮಿದುಳ +ಕೆದರಿದವು +ರಕುತದ
ಕಡಲು+ ಕಡಲನು+ ಕೂಡೆ +ಹೊಯ್ದಾಡಿದರು+ ರಾವುತರು

ಅಚ್ಚರಿ:
(೧) ಯುದ್ದದ ತೀವ್ರತೆ – ರಕುತದ ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು

ಪದ್ಯ ೩೭: ಯುದ್ಧವನ್ನು ಮಳೆಗಾಳಕ್ಕೆ ಹೇಗೆ ಹೋಲಿಸಬಹುದು?

ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ
ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ
ಬಿಡುಮಿದುಳ ಹೊರಳಿಗಳ ಹಂಸೆಯ
ನಡಹುಗಳ ನವಖಂಡದೊಳು ಹೆಣ
ನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ (ಭೀಷ್ಮ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕತ್ತಿಗಳ ಹೊಳಪೇ ಮಿಂಚು, ಕತ್ತಿಗಳ ತಾಕಲಾಟ ಸಿಡಿಲು, ರಕ್ತದ ಮಳೆಯಿಂದ ಬಂದ ಪ್ರವಾಹ, ತೋಳು ಆಚಿ ಕುಣಿಯುವ ಮುಂಡಗಳೇ ಗರಿಗೆದರಿದ ನವಿಲುಗಳು, ಮಿದುಗ್ಳುಗಳ ತೆಕ್ಕೆಗಳೇ ಹಂಸಗಳು, ಹೆಣಗಳ ಕಾಡು ಚಿಗುರಿದಂತಿರಲು ಯುದ್ಧವೆಂಬ ಮಳೆಗಾಲ ಶೋಭಿಸಿತು.

ಅರ್ಥ:
ಕಡಿತಲೆ: ಖಡ್ಗ; ಮಿಂಚು: ಹೊಳಪು, ಕಾಂತಿ; ಹೊಯ್ಲು: ಹೊಡೆತ; ಸಿಡಿಲು: ಅಶನಿ; ರಕ್ತ: ನೆತ್ತರು; ಪ್ರವಾಹ: ರಭಸ; ಕಡುವಳೆ: ಜೋರಾದ ಮಲೆ; ನೃತ್ಯ: ನಾಟ್ಯ; ಕಬಂಧ: ತಲೆಯಿಲ್ಲದ ದೇಹ, ಮುಂಡ; ಸೋಗು: ನಟನೆ, ವೇಷ; ನವಿಲು: ಮಯೂರ; ಬಿಡು: ತೊರೆ; ಮಿದುಳು: ತಲೆ; ಹೊರಳಿ: ತಿರುವು, ಬಾಗು; ಹಂಸ: ಮರಾಲ; ನವ: ನವೀನ, ಹೊಸ; ಖಂಡ: ಚೂತು, ತುಂಡು; ಹೆಣ: ಜೀವವಿಲ್ಲದ ಶರೀರ; ಅಡವಿ: ಕಾಡು; ತಳಿತ: ಚಿಗುರಿದ; ಮೆರೆ: ಶೋಭಿಸು; ಸಂಗ್ರಾಮ: ಯುದ್ಧ; ಕಾರ್ಗಾಲ: ಮಳೆಗಾಲ;

ಪದವಿಂಗಡಣೆ:
ಕಡಿತಲೆಯ +ಮಿಂಚುಗಳ +ಹೊಯ್ಲಿನ
ಸಿಡಿಲುಗಳ +ರಕ್ತ+ಪ್ರವಾಹದ
ಕಡುವಳೆಯ +ನೃತ್ಯತ್+ಕಬಂಧದ +ಸೋಗೆ+ನವಿಲುಗಳ
ಬಿಡುಮಿದುಳ +ಹೊರಳಿಗಳ +ಹಂಸೆಯ
ನಡಹುಗಳ+ ನವಖಂಡದೊಳು +ಹೆಣನ್
ಅಡವಿ +ತಳಿತಿರೆ+ ಮೆರೆದುದೈ +ಸಂಗ್ರಾಮ+ ಕಾರ್ಗಾಲ

ಅಚ್ಚರಿ:
(೧) ಯುದ್ಧವನ್ನು ಮಳೆಗಾಲಕ್ಕೆ ಹೋಲಿಸುವ ಕವಿಯ ಕಲ್ಪನೆ – ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ