ಪದ್ಯ ೧೧: ದ್ರೋಣನನ್ನು ಎದುರಿಸಲು ಯಾರು ಹೊರಟರು?

ನಿಲ್ಲು ಫಲುಗುಣ ನಿನ್ನ ಪರಿಯಂ
ತೆಲ್ಲಿಯದು ರಣವಕಟ ಹಾರುವ
ನಲ್ಲಿ ಕೆಲಬರ ಹೊಯ್ದು ಕೊಂದನು ಬಿನುಗು ಬಿಚ್ಚಟೆಯ
ಬಲ್ಲೆನಾತನ ಬಲುಹನೀಶ್ವರ
ನಲ್ಲಿ ಹರಿಮೇಖಳೆಯ ಸಾಕಿ
ನ್ನೆಲ್ಲವೇತಕೆಯೆನುತ ಧೃಷ್ಟದ್ಯುಮ್ನನನುವಾದ (ದ್ರೋಣ ಪರ್ವ, ೧೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನ, ಈ ಯುದ್ಧಕ್ಕೆ ನೀನೇಕೆ ಹೋಗಬೇಕು. ಆ ಬ್ರಾಹ್ಮಣನು ನಿರ್ಬಲರನ್ನು ಕೊಂದು ಹಾಕಿದ. ಅವನ ಸತ್ವ ನನಗೆ ಗೊತ್ತು. ಈಶ್ವರನ ಮುಂದೆ ಇಂದ್ರಜಾಲ ವಿದ್ಯೆ ನಡೆದೀತೇ? ಬರಿಯ ಮಾತೇಕೆ ಎಂದು ಧೃಷ್ಟದ್ಯುಮ್ನನು ಯುದ್ಧಕ್ಕೆ ಹೊರಟನು.

ಅರ್ಥ:
ಪರಿ: ರೀತಿ; ರಣ: ಯುದ್ಧರಂಗ; ಅಕಟ: ಅಯ್ಯೋ; ಹಾರುವ: ಬ್ರಾಹ್ಮಣ; ಹೊಯ್ದು: ಹೊಡೆ; ಕೊಂದು: ಸಾಯಿಸು; ಬಿನುಗು: ಅಲ್ಪವ್ಯಕ್ತಿ; ಬಿಚ್ಚಟೆ: ವಿಸ್ತಾರ; ಬಲ್ಲೆ: ತಿಳಿ; ಬಲುಹು: ಶಕ್ತಿ; ಈಶ್ವರ: ಶಂಕರ; ಹರಿಮೇಖಳೆ: ರತ್ನದ ಡಾಬು; ಅನುವು: ಅನುಕೂಲ;

ಪದವಿಂಗಡಣೆ:
ನಿಲ್ಲು +ಫಲುಗುಣ +ನಿನ್ನ +ಪರಿಯಂತ್
ಎಲ್ಲಿಯದು +ರಣವ್+ಅಕಟ +ಹಾರುವನ್
ಅಲ್ಲಿ +ಕೆಲಬರ +ಹೊಯ್ದು +ಕೊಂದನು +ಬಿನುಗು +ಬಿಚ್ಚಟೆಯ
ಬಲ್ಲೆನಾತನ+ ಬಲುಹನ್+ಈಶ್ವರನ್
ಅಲ್ಲಿ +ಹರಿಮೇಖಳೆಯ+ ಸಾಕಿನ್
ಎಲ್ಲವೇತಕೆ+ಎನುತ +ಧೃಷ್ಟದ್ಯುಮ್ನನ್+ಅನುವಾದ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿನುಗು ಬಿಚ್ಚಟೆಯ ಬಲ್ಲೆನಾತನ ಬಲುಹನೀಶ್ವರನಲ್ಲಿ

ಪದ್ಯ ೧೩: ದೇವತೆಗಳು ಯಾವ ನಗರಕ್ಕೆ ಮುತ್ತಿಗೆ ಹಾಕಿದರು?

ಆಳು ನಡೆದುದು ಮುಂಗುಡಿಯ ಹರಿ
ಧಾಳಿ ನೂಕಿ ಹಿರಣ್ಯ ನಗರಿಯ
ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ದನುಜ ಪುರೋಪಕಂಠದ
ಕೂಲವತಿಗಳ ತೀರದಲಿ ಬಿಡಿಸಿದೆನು ಪಾಳೆಯವ (ಅರಣ್ಯ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೇವತೆಗಳ ಮುಂಭಾಗದಲ್ಲಿದ್ದ ಸೈನಿಕರು ಹಿರಣ್ಯಕ ಪುರದ ಹೊರವಲಯವನ್ನು ಸೇರಿ ಅಲ್ಲಿದ್ದ ದುರ್ಬಲ ದೈತ್ಯರನ್ನೆಲ್ಲಾ ಹೊಡೆದರ್. ಕಹಳೆಗಳ ಧ್ವನಿಯ ಘೋಷದ ನಡುವೆ ಆ ನಗರದ ಪಕ್ಕದ ನದಿಗಳ ತೀರದಲ್ಲಿ ದೇವ ಸೈನ್ಯವು ಬೀಡು ಬಿಟ್ಟಿತು.

ಅರ್ಥ:
ಆಳು: ಸೈನ್ಯ; ನಡೆ: ಚಲಿಸು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಹರಿ: ಕುದುರೆ; ಧಾಳಿ: ಆಕ್ರಮಣ; ನೂಕು: ತಳ್ಳು; ನಗರಿ: ಊರು; ಮೂಲೆ: ಕೊನೆ; ಐದು: ಸೇರು; ಹೊಯ್ದು: ಹೊಡೆ; ಬಿನುಗು: ಅಲ್ಪ; ಬಿಚ್ಚಟೆ: ವಿಸ್ತಾರ; ಸೂಳವಿಸು: ಧ್ವನಿಮಾಡು; ಸನ್ನೆ: ಗುರುತು; ನಿಸ್ಸಾಳ: ಚರ್ಮವಾದ್ಯ; ದನುಜ: ರಾಕ್ಷಸ; ಪುರ: ಊರು; ಪುರೋಪಕಂಠ: ಊರಿನ ಹತ್ತಿರ; ಕೂಲವತಿ: ನದಿ; ತೀರ: ದಡ; ಬಿಡಿಸು: ಕಳಚು, ಸಡಿಲಿಸು; ಪಾಳೆ: ಸೀಮೆ;

ದವಿಂಗಡಣೆ:
ಆಳು+ ನಡೆದುದು +ಮುಂಗುಡಿಯ +ಹರಿ
ಧಾಳಿ +ನೂಕಿ +ಹಿರಣ್ಯ +ನಗರಿಯ
ಮೂಲೆಗೈದಿತು +ಹೊಯ್ದರ್+ಅಲ್ಲಿಯ +ಬಿನುಗು +ಬಿಚ್ಚಟೆಯ
ಸೂಳವಿಸಿದವು+ ಸನ್ನೆಯಲಿ +ನಿ
ಸ್ಸಾಳ +ದನುಜ+ ಪುರೋಪಕಂಠದ
ಕೂಲವತಿಗಳ+ ತೀರದಲಿ+ ಬಿಡಿಸಿದೆನು +ಪಾಳೆಯವ

ಅಚ್ಚರಿ:
(೧) ಪುರೋಪಕಂಠ, ಕೂಲವತಿ, ಹರಿಧಾಳಿ, ಬಿಚ್ಚಟೆ – ಪದಗಳ ಬಳಕೆ