ಪದ್ಯ ೩೪: ಭೀಮನು ಕೌರವನನ್ನು ಹೇಗೆ ಹಂಗಿಸಿದನು?

ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ್ಯ ಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಕೇವಲ ನಿಷ್ಪ್ರಯೋಜಕ ಮಾತುಗಳಿಂದ ಬೈದರೆ ನೀನೇನು ದೊಡ್ಡವನೇ? ಬಾಯಿಂದ ಗದಾಪ್ರಹಾರ ಮಾಡುವೆಯೋ ಅಥವ ಕೈಗಳಿಂದ ತೋರುವೆಯೋ? ನೀನು ಜಾತಿಯಿಂದ ಕ್ಷತ್ರಿಯನಲ್ಲವೇ? ನಿನ್ನ ಕೈಯಲ್ಲಿ ಆಯುಧವಿದೆ, ಗುರಿಯಾಗಿ ನಾನಿದ್ದೇನೆ, ನಿನ್ನಲ್ಲಡಗಿರುವ ಪರಾಕ್ರಮವನ್ನು ಪ್ರಕಟಿಸು ಎನ್ನುತ್ತಾ ಭಿಮನು ಕೌರವನನ್ನು ತಿವಿದನು.

ಅರ್ಥ:
ಹೊಯ್ದು: ಹೊಡೆ; ತೋರು: ಗೋಚರಿಸು; ಬಂಜೆ: ನಿಷ್ಫಲ; ನುಡಿ: ಮಾತು; ಬಯ್ದು: ಜರೆ, ಹಂಗಿಸು; ಅಧಿಕ: ಹೆಚ್ಚು; ಬಾಹು: ತೋಳು; ಮೇಣ್: ಅಥವ; ಮುಖ: ಆನನ; ಜಾತಿ: ಕುಲ; ಕಯ್ದು: ಆಯುಧ; ಪಣ: ಸ್ಪರ್ಧೆ, ಧನ; ಗುಪ್ತ: ಗುಟ್ಟು; ಪ್ರತಾಪ: ಶಕ್ತಿ, ಪರಾಕ್ರಮ; ಪ್ರಕಟಿಸು: ತೋರು; ತಿವಿ: ಚುಚ್ಚು;

ಪದವಿಂಗಡಣೆ:
ಹೊಯ್ದು +ತೋರಾ +ಬಂಜೆ +ನುಡಿಯಲಿ
ಬಯ್ದಡ್+ಅಧಿಕನೆ +ಬಾಹುವಿಂ +ಹೊರ
ಹೊಯ್ದವನೊ+ ಮೇಣ್ +ಮುಖದಲೋ +ನೀನಾರು +ಜಾತಿಯಲಿ
ಕಯ್ದು+ ನಿನಗಿದೆ +ಲಕ್ಷ್ಯ+ ಪಣ +ನಮಗ್
ಎಯ್ದುವಡೆ +ಗುಪ್ತ+ಪ್ರತಾಪವನ್
ಎಯ್ದೆ +ಪ್ರಕಟಿಸ್+ಎನುತ್ತ+ ತಿವಿದನು +ಭೀಮ +ಕುರುಪತಿಯ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಬಂಜೆ ನುಡಿಯಲಿಬಯ್ದಡಧಿಕನೆ
(೨) ಕೌರವನನ್ನು ಕೆರಳಿಸುವ ಪರಿ – ಬಾಹುವಿಂ ಹೊರಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ

ಪದ್ಯ ೩೪: ಶಿಶುವಾದ ಶಿಶುಪಾಲನನ್ನು ನೋಡಲು ಯಾರು ಬಂದರು?

ಇವನ ಕಾಣಲು ಬಂದರವನಿಪ
ರವರವರ ಕೈಗಳಲಿ ತಾಯ್ತಂ
ದಿವನನಿತ್ತಳು ಮಾಣವಿವನಧಿಕಾಕ್ಷಿ ಬಾಹುಗಳು
ಇವನ ತಾಯ್ತಮ್ಮತ್ತೆಯೆಂದು
ತ್ಸವದಲೀ ಮುರವೈರಿ ಬರಲಂ
ದಿವನತಂದಿವನವ್ವೆ ಕೊಟ್ಟಳು ಹರಿಯಹಸ್ತದಲಿ (ಸಭಾ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಇವನ ತಾಯಿಯು ಇವನನ್ನು ನೋಡಲು ಬಂದ ರಾಜರ ಕೈಗೆ ಶಿಶುವನ್ನು ಕೊಟ್ಟಾಗ ಇವನಲ್ಲಿ ಅಧಿಕವಾದ ಹಣೆಗಣ್ಣು ಮತ್ತು ಎರಡು ಭುಜಗಳು ಹೋಗಲಿಲ್ಲ. ಶ್ರೀಕೃಷ್ಣನು ತನ್ನ ಅತ್ತೆಯಾದ ಶುತಶ್ವವೆ (ವಸುದೇವನ ತಂಗಿ) ಯನ್ನು ನೋಡುವ ಸಂತಸದಲ್ಲಿ ಆಗಮಿಸಿದನು, ಆಗ ಶ್ರುತಶ್ರವೆಯು ಶಿಶುವನ್ನು ಕೃಷ್ಣನ ಕೈಯಲ್ಲಿ ನೀಡಿದಳು.

ಅರ್ಥ:
ಕಾಣಲು: ನೋಡಲು; ಬಂದು: ಆಗಮಿಸು; ಅವನಿಪ: ರಾಜ; ಕೈ: ಹಸ್ತ; ತಾಯಿ: ಮಾತೆ; ಮಾಣು: ನಿಲ್ಲಿಸು; ಅಧಿಕ: ಹೆಚ್ಚಿನ; ಅಕ್ಷಿ: ಕಣ್ಣು; ಬಾಹು: ಭುಜ; ಉತ್ಸವ: ಸಂತಸ; ಮುರವೈರಿ: ಕೃಷ್ಣ; ಬರಲು: ಆಗಮಿಸಲು; ಅವ್ವೆ: ತಾಯಿ; ಕೊಡು: ನೀಡು; ಹರಿ: ಕೃಷ್ಣ; ಹಸ್ತ: ಕೈ;

ಪದವಿಂಗಡಣೆ:
ಇವನ+ ಕಾಣಲು +ಬಂದರ್+ಅವನಿಪರ್
ಅವರವರ+ ಕೈಗಳಲಿ + ತಾಯ್
ತಂದ್+ಇವನನ್+ಇತ್ತಳು +ಮಾಣವ್+ಇವನ್+ಅಧಿಕ+ಅಕ್ಷಿ +ಬಾಹುಗಳು
ಇವನ +ತಾಯ್+ತಮ್ಮತ್ತೆಯೆಂದ್
ಉತ್ಸವದಲ್+ಈ+ ಮುರವೈರಿ +ಬರಲಂದ್
ಇವನ+ತಂದ್+ಇವನ್+ಅವ್ವೆ +ಕೊಟ್ಟಳು +ಹರಿಯ+ಹಸ್ತದಲಿ

ಅಚ್ಚರಿ:
(೧) ಇವನ – ೧, ೩, ೬ ಸಾಲಿನ ಮೊದಲ ಪದ
(೨) ಇವನತಂದಿವನವ್ವೆ – ಇವನ ಪದದ ಬಳಕೆ
(೩) ತಾಯಿ, ಅವ್ವೆ; ಮುರವೈರಿ, ಹರಿ – ಸಮನಾರ್ಥಕ ಪದ