ಪದ್ಯ ೪೫: ದುಶ್ಯಾಸನು ಅಭಿಮನ್ಯುವನ್ನು ಹೇಗೆ ಆಕ್ರಮಣ ಮಾಡಿದನು?

ಕಾತರಿಸದಿರು ಬಾಲ ಭಾಷೆಗ
ಳೇತಕಿವು ನೀ ಕಲಿತ ಬಲುವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ (ದ್ರೋಣ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುಶ್ಯಾಸನನು ಉತ್ತರಿಸುತ್ತಾ, ಸಲ್ಲದ ಮಾತಾಡಬೇಡ, ನಿನ್ನ ಬಿಲ್ಲುಗಾರಿಕೆಯ ಚಾತುರ್ಯವಿದ್ದರೆ ಅದನ್ನು ತೋರಿಸು, ಹೆದರುಪುಕ್ಕರನು ಸೋಲಿಸಿ ಅಹಂಕಾರದ ಅತಿರೇಕಕ್ಕೆ ತೆರಳುವ ಜಾಗವಿದಲ್ಲ ಎಂದು ನೂರುಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಕಾತರ: ಕಳವಳ, ಉತ್ಸುಕತೆ; ಬಾಲ: ಚಿಕ್ಕವ, ಮಗು; ಭಾಷೆ: ಮಾತು; ಕಲಿತ: ಅಭ್ಯಾಸಮಾಡಿದ; ಬಲು: ಶಕ್ತಿ; ಅತಿಶಯ: ಹೆಚ್ಚು, ಅಧಿಕ; ತೋರು: ಪ್ರದರ್ಶಿಸು; ಕೈಗುಣ: ಚಾಣಾಕ್ಷತೆ; ಭೀತ: ಭಯ; ಭಟ: ಸೈನಿಕ; ಹೊಳ್ಳು: ಸಾರವಿಲ್ಲದ; ಮದ: ಅಹಂಕಾರ; ಅತಿರೇಕ: ಅತಿಶಯ, ರೂಢಿಗೆ ವಿರೋಧವಾದ ನಡೆ; ಠಾವು: ಎಡೆ, ಸ್ಥಳ, ತಾಣ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಬಾಣ: ಅಂಬು, ಶರ; ಇಂದ್ರ: ಸುರೇಶ; ಸುತ: ಮಗ;

ಪದವಿಂಗಡಣೆ:
ಕಾತರಿಸದಿರು +ಬಾಲ +ಭಾಷೆಗಳ್
ಏತಕಿವು +ನೀ +ಕಲಿತ +ಬಲುವ್
ಇದ್ +ಅತಿಶಯವುಂಟಾದಡ್+ಎಮ್ಮೊಳು +ತೋರು +ಕೈಗುಣವ
ಭೀತ +ಭಟರನು +ಹೊಳ್ಳು+ಕಳೆದ +ಮದ
ಅತಿರೇಕದ +ಠಾವಿದಲ್ಲೆಂದ್
ಈತನ್+ಎಚ್ಚನು +ನೂರು +ಬಾಣದಲ್+ಇಂದ್ರಸುತ+ ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಸುತಸುತನ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಹಂಗಿಸುವ ಪರಿ – ಭೀತ ಭಟರನು ಹೊಳ್ಳುಗಳೆದ ಮದಾತಿರೇಕದ ಠಾವಿ

ಪದ್ಯ ೪೧: ಅಭಿಮನ್ಯುವು ಧರ್ಮಜನಿಗೆ ಯಾವ ಉತ್ತರವನ್ನಿತ್ತನು?

ಗಾಳಿ ಬೆಮರುವುದುಂಟೆ ವಹ್ನಿ
ಜ್ವಾಲೆ ಹಿಮಕಂಜುವುದೆ ಮಂಜಿನ
ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ
ಬಾಲನಿವನೆನ್ನದಿರು ದುಗುಡವ
ತಾಳಲಾಗದು ಬೊಪ್ಪ ನಿಮ್ಮಡಿ
ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ (ದ್ರೋಣ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಗಾಳಿಯು ಬೆವರುವುದುಂಟೇ? ಅಗ್ನಿಜ್ವಾಲೆಯು ಮಂಜಿಗೆ ಹೆದರುವುದೇ? ಬಿಸಿಲಿನ ಬೇಗೆಯ ವಿರುದ್ಧ ಮಂಜು ಮೇಲೆ ಬಿದ್ದು ಹೋರಾಡಲಾದೀತೇ? ದೊಡ್ಡಪ್ಪ, ಇವನು ಹುಡುಗನೆಂದು ಒಗೆಯಬೇಡ, ದುಃಖಿಸಬೇಡ, ಶತ್ರು ಸೈನ್ಯವನ್ನು ಒರಸಿ ಹಾಕಿ, ನಿಮ್ಮ ಕಣ್ಣುಗಳಿಗೆ ಔತಣವನ್ನುಣಿಸುತ್ತೇನೆ ಎಂದು ಅಭಿಮನ್ಯುವು ನುಡಿದನು.

ಅರ್ಥ:
ಗಾಳಿ: ವಾಯು; ಬೆಮರು: ಬೆವರು, ಸ್ವೇದಜಲ; ವಹ್ನಿ: ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಹಿಮ: ಮಂಜಿನ ಹನಿ; ಅಂಜು: ಹೆದರು; ಮಂಜು: ಇಬ್ಬನಿ, ಹಿಮ; ಬಲು: ಬಹಳ; ಬೇಸಗೆ: ಸಕೆಗಾಲ; ಬಾಲ: ಚಿಕ್ಕವ, ಕುಮಾರ; ದುಗುಡ: ದುಃಖ; ತಾಳು: ಸಹಿಸು; ಬೊಪ್ಪ: ತಂದೆ; ಆಲಿ: ಕಣ್ಣು; ಔತಣ: ವಿಶೇಷವಾದ ಊಟ; ಒರಸು: ನಾಶಮಾಡು; ರಿಪುಬಲ: ವೈರಿ ಸೈನ್ಯ;

ಪದವಿಂಗಡಣೆ:
ಗಾಳಿ +ಬೆಮರುವುದುಂಟೆ +ವಹ್ನಿ
ಜ್ವಾಲೆ +ಹಿಮಕಂಜುವುದೆ+ ಮಂಜಿನ
ಮೇಲುಗಾಳೆಗವುಂಟೆ +ಬಲುಬೇಸಗೆಯ+ ಬಿಸಿಲೊಳಗೆ
ಬಾಲನಿವನೆನ್ನದಿರು+ ದುಗುಡವ
ತಾಳಲಾಗದು +ಬೊಪ್ಪ +ನಿಮ್ಮಡಿ
ಆಲಿಗಳಿಗ್+ಔತಣವನ್+ಇಕ್ಕುವೆನ್+ಒರಸಿ +ರಿಪುಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿ ಬೆಮರುವುದುಂಟೆ ವಹ್ನಿಜ್ವಾಲೆ ಹಿಮಕಂಜುವುದೆ ಮಂಜಿನ
ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ

ಪದ್ಯ ೨೭: ಅರ್ಜುನನು ದ್ರೌಪದಿಗೆ ಏನು ಹೇಳಿದನು?

ಕೇಳಿದನು ಕಲಿ ಪಾರ್ಥನೀತನ
ಬಾಲ ಭಾಷೆಗಳೆಲ್ಲವನು ಪಾಂ
ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ
ಕಾಲ ಸವೆದುದು ನಮ್ಮ ರಾಜ್ಯದ
ಮೇಲೆ ನಿಲುಕಲು ಬೇಕು ಕೌರವ
ರಾಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ (ವಿರಾಟ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಮಕ್ಕಳಂತೆ ಆಡಿದ ಮಾತುಗಳನ್ನು ಕೇಳಿ, ದ್ರೌಪದಿಯನ್ನು ಒಂದು ಕಡೆಗೆ ಕರೆದು, ನಾವು ಇಲ್ಲಿ ಇರುವುದು ತರವಲ್ಲ, ಇನ್ನು ನಾವು ಸುಮ್ಮನಿರಬಾರದು. ಅಜ್ಞಾತವಾಸದ ಅವಧಿ ಮುಗಿಯಿತು. ನಾವು ನಮ್ಮ ರಾಜ್ಯವನ್ನು ಪಡೆಯಬೇಕು. ಕೌರವರ ಸೈನ್ಯ ನಮ್ಮನು ಹುಡುಕಲೆಂದೇ ಬಂದಿದೆ, ಎಂದು ಹೇಳಿದನು.

ಅರ್ಥ:
ಕೇಳು: ಆಲಿಸು; ಕಲಿ: ಶೂರ; ಬಾಲ: ಮಕ್ಕಳ; ಬಾಷೆ: ಮಾತು; ಪಾಂಚಾಲೆ: ದ್ರೌಪದಿ; ಎಕ್ಕಟಿ: ಏಕಾಂತವಾದ; ನುಡಿ: ಮಾತಾಡು; ಮತ: ಅಭಿಪ್ರಾಯ; ಕಾಲ: ಸಮಯ; ಸವೆದು: ಕಳೆದು; ನಿಲುಕು: ಕೈಗೆ – ಸಿಕ್ಕು; ಆಳು: ಸೈನ್ಯ; ಕಾಂತೆ: ಪ್ರಿಯೆ;

ಪದವಿಂಗಡಣೆ:
ಕೇಳಿದನು +ಕಲಿ +ಪಾರ್ಥನ್+ಈತನ
ಬಾಲ +ಭಾಷೆಗಳೆಲ್ಲವನು +ಪಾಂ
ಚಾಲೆಗ್+ಎಕ್ಕಟಿ +ನುಡಿದ +ನಾವಿನ್+ಇಹುದು +ಮತವಲ್ಲ
ಕಾಲ +ಸವೆದುದು +ನಮ್ಮ +ರಾಜ್ಯದ
ಮೇಲೆ +ನಿಲುಕಲು +ಬೇಕು +ಕೌರವರ್
ಆಳು +ನಮಗೋಸುಗವೆ +ಬಂದುದು +ಕಾಂತೆ +ಕೇಳೆಂದ

ಅಚ್ಚರಿ:
(೧) ಜೋಡಿ ಪದಗಳು – ಕೇಳಿದನು ಕಲಿ, ಬಾಲ ಭಾಷೆಗಳೆಲ್ಲ
(೨) ಬಾಲ, ಕಾಲ – ಪ್ರಾಸ ಪದಗಳು