ಪದ್ಯ ೪೩: ಕೌರವನ ಮಲ್ಲರು ಭೀಮನಿಗೆ ಏನು ಹೇಳಿದರು?

ದಿಟ್ಟನಹೆ ಬಾಣಸಿನ ಮನೆಯಲಿ
ಕಟ್ಟುಳಿಲ್ಲದ ಕೂಳ ತಿಂದುರೆ
ಹೊಟ್ಟೆಯನು ನೆರೆ ಬೆಳೆಸಿ ದೇಹದಲುಬ್ಬಿ ಕೊಬ್ಬಿನಲಿ
ಹೊಟ್ಟುಗುಟ್ಟದೊಡಾಗದೆಲೆ ಜಗ
ಜಟ್ಟಿಗಳ ಕೂಡಕಟ ಮಝರೇ
ಬಿಟ್ಟು ಸುಮ್ಮನೆ ಹೋಗು ನಿನಗಳವಲ್ಲ ಹೋಗೆಂದ (ವಿರಾಟ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೌರವನ ಮಲ್ಲರಲ್ಲೊಬ್ಬನಾದ ಸಿಂಧುರನು, ನೀನು ಧೈರ್ಯಶಾಲಿ, ಅಡುಗೆ ಮನೆಯಲ್ಲಿ ಮಿತಿಯಿಲ್ಲದೆ ಕೂಳನ್ನು ತಿಂದು ಹೊಟ್ಟೆಯನ್ನು ಬೆಳೆಸಿ, ಕೊಬ್ಬಿನಿಂದ ಜಗಜಟ್ಟಿಗಳೊಡನೆ ಮಲ್ಲಯುದ್ಧಕ್ಕೆ ಬಂದೆಯಾ? ಭಲೇ ಸುಮ್ಮನೆ ಹೋಗಿ ಬಿಡು, ಇದು ನಿನ್ನ ಕೈಲಾಗದ ಮಾತು ಎಂದನು.

ಅರ್ಥ:
ದಿಟ್ಟ: ಧೈರ್ಯಶಾಲಿ, ಸಾಹಸಿ; ಬಾಣಸಿ: ಅಡುಗೆಯವ; ಮನೆ: ಆಲಯ; ಕಟ್ಟು:ಬಂಧ; ಕೂಳು: ಊಟ; ತಿಂದು: ಊಟಮಾದು; ಹೊಟ್ಟೆ: ಉದರ; ನೆರೆ: ಜೊತೆ, ಪಕ್ಕ; ಬೆಳೆಸು: ವೃದ್ಧಿಸು; ದೇಹ: ಕಾಯ; ಉಬ್ಬು: ಹೆಚ್ಚು; ಕೊಬ್ಬು: ಸೊಕ್ಕು, ಅಹಂಕಾರ, ಮೇದಸ್ಸು; ಹೊಟ್ಟುಗುಟ್ಟು: ವ್ಯರ್ಥವಾದ ಮಾತು; ಜಗಜಟ್ಟಿ: ಪರಾಕ್ರಮಿ; ಕೂಡ: ಜೊತೆ; ಅಕಟ: ಅಯ್ಯೋ; ಮಝ: ಭಲೇ; ಬಿಟ್ಟು: ತೊರೆ; ಸುಮ್ಮನೆ: ವ್ಯರ್ಥವಾಗಿ; ಹೋಗು: ತೆರಳು; ಅಳವು: ಶಕ್ತಿ;

ಪದವಿಂಗಡಣೆ:
ದಿಟ್ಟನಹೆ +ಬಾಣಸಿನ +ಮನೆಯಲಿ
ಕಟ್ಟುಳಿಲ್ಲದ+ ಕೂಳ +ತಿಂದುರೆ
ಹೊಟ್ಟೆಯನು +ನೆರೆ +ಬೆಳೆಸಿ +ದೇಹದಲ್+ಉಬ್ಬಿ +ಕೊಬ್ಬಿನಲಿ
ಹೊಟ್ಟುಗುಟ್ಟದೊಡ್+ಆಗದೆಲೆ +ಜಗ
ಜಟ್ಟಿಗಳ+ ಕೂಡ್+ಅಕಟ+ ಮಝರೇ
ಬಿಟ್ಟು +ಸುಮ್ಮನೆ+ ಹೋಗು +ನಿನಗ್+ಅಳವಲ್ಲ+ ಹೋಗೆಂದ

ಅಚ್ಚರಿ:
(೧) ಹೊಟ್ಟುಗುಟ್ಟು – ಪದದ ಬಳಕೆ

ಪದ್ಯ ೧೦೪: ಜನರು ಯಾವ ರೀತಿ ಮಾತನಾಡುತ್ತಿದ್ದರು?

ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ (ವಿರಾಟ ಪರ್ವ, ೩ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಅವಿವೇಕಿಯಾದ ಕೀಚಕನು ಇವಳಿಗಾಗಿ ಸತ್ತ ಎಂದು ಕೆಲವರೆಂದರು. ನಮಗೇಕಿದ್ದೀತು ಇದರ ಚಿಂತೆ ಶಿವ ಶಿವಾ ಎಂದು ಕೆಲವರೆಂದರು. ಕುತೂಹಲದಿಂದ ಜನರು ಬೀದಿಯ ಇಕ್ಕೆಲದಲ್ಲೂ ನಿಂತು ನೋಡುತ್ತಿರಲು ದ್ರೌಪದಿಯು ನಿಧಾನವಾಗಿ ನಡೆಯುತ್ತಾ ಬಂದು ಬಾಣಸಿನ ಮನೆಯ ಬಾಗಿಲಲ್ಲಿ ಲೋಕೈಕವೀರನಾದ ಭೀಮನನ್ನು ನೋಡಿದಳು.

ಅರ್ಥ:
ಅಳಿ: ನಾಶ, ಸಾವು; ಅಕಟ: ಅಯ್ಯೋ; ಅವಿವೇಕಿ: ವಿವೇಚನೆ ಇಲ್ಲದೆ; ಕೆಲಬರು: ಸ್ವಲ್ಪ ಜನ; ಚಿಂತೆ: ಕಳವಳ, ಯೋಚನೆ; ನೂಕು: ತಳ್ಳು; ಕವಿದು: ಆವರಿಸು; ಮಂದಿ: ಜನ; ಮಧ್ಯ: ನಡುವೆ; ಮೆಲ್ಲನೆ: ನಿಧಾನ; ಬರುತ: ಆಗಮನ; ಲೋಕ: ಜಗತ್ತು; ವೀರ: ಶೂರ; ಬಾಣಸಿಗ: ಅಡುಗೆ; ಬಾಗಿಲು: ಕದನ;

ಪದವಿಂಗಡಣೆ:
ಈಕೆಗೋಸುಗವ್+ಅಳಿದನ್+ಅಕಟ+ಅವಿ
ವೇಕಿ +ಕೀಚಕನೆಂದು+ ಕೆಲಬರ್
ಇದೇಕೆ +ನಮಗೀ +ಚಿಂತೆ +ಶಿವ +ಶಿವಯೆಂದು +ಕೆಲಕೆಲರು
ನೂಕಿ +ಕವಿದುದು +ಮಂದಿ +ಮಧ್ಯದೊಳ್
ಈಕೆ +ಮೆಲ್ಲನೆ +ಬರುತಲಾ +ಲೋ
ಕೈಕ +ವೀರನ +ಕಂಡಳಾ +ಬಾಣಸಿನ +ಬಾಗಿಲಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಲೋಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ

ಪದ್ಯ ೭೮: ದ್ರೌಪದಿಯು ಸಂತಸಗೊಂಡು ಯಾರ ಮನೆಗೆ ಬಂದಳು?

ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನನ್ನು ನಾಟ್ಯಮಂದಿರಕ್ಕೆ ಬರಲು ಹೇಳಲು, ಆತ ಇದು ಮಹಾಪ್ರಸಾದವೆಂದು ಭಾವಿಸಿ ಆಕೆಗೆ ಕೈಮುಗಿದು ತನ್ನ ಮನೆಗೆ ಹೋದನು. ಸೂರ್ಯನು ಮುಳುಗಿದನು, ದ್ರೌಪದಿಯು ಸಂತೋಷಭರಿತಳಾಗಿ, ಕಗ್ಗತ್ತಲೆಯಲ್ಲಿ ತನ್ನ ಕಣ್ಣ ಬೆಳಕಿನ ಸಹಾಯದಿಂದ ಅಡುಗೆಯ ಮನೆಗೆ ಬಂದಳು.

ಅರ್ಥ:
ಖಳ: ದುಷ್ಟ; ಹಸಾದ: ಪ್ರಸಾದ, ಅನುಗ್ರಹ; ಹಾಯ್ಕಿ: ಬೀಸು, ತೆಗೆ; ನಿಳಯ: ಮನೆ; ಐದು: ಬಂದು ಸೇರು; ಅಬುಜ: ಕಮಲ; ಬಾಂಧವ: ಸಂಬಂಧಿಕ; ಅಬುಜಬಾಂಧವ: ಸೂರ್ಯ, ರವಿ; ಇಳಿ: ಕೆಳಕ್ಕೆ ಹೋಗು; ಅಸ್ತಾಚಲ: ಪಡುವಣದ ಬೆಟ್ಟ; ತಪ್ಪಲು: ಬೆಟ್ಟದ ತಳಭಾಗ; ತಾವರೆ: ಕಮಲ; ಬನ: ಕಡು; ನಳಿನಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ನಲ: ನಲಿವು, ಸಂತೋಷ; ಏರು: ಹೆಚ್ಚಾಗು; ಕಗ್ಗತ್ತಲೆ: ಗಾಡಾಂಧಕಾರ; ಹಬ್ಬುಗೆ: ಹರಡು; ಕಂಗಳು: ಕಣ್ಣು, ನಯನ; ಬೆಳಗು: ಪ್ರಕಾಶ; ಬಟ್ಟೆ: ಹಾದಿ, ಮಾರ್ಗ; ತೋರು: ಗೋಚರಿಸು; ಬಂದು: ಆಗಮಿಸು; ಬಾಣಸಿಗ: ಅಡುಗೆಯವ; ಮನೆ: ಆಲಯ;

ಪದವಿಂಗಡಣೆ:
ಖಳ +ಹಸಾದವ +ಹಾಯ್ಕಿ +ತನ್ನಯ
ನಿಳಯಕ್+ಐದಿದನ್+ಅಬುಜಬಾಂಧವನ್
ಇಳಿದನ್+ಅಸ್ತಾಚಲದ+ ತಪ್ಪಲ +ತಾವರೆಯ +ಬನಕೆ
ನಳಿನಮುಖಿ +ನಲವೇರಿ+ ಕಗ್ಗ
ತ್ತಲೆಯ+ ಹಬ್ಬುಗೆಯೊಳಗೆ+ ಕಂಗಳ
ಬೆಳಗು +ಬಟ್ಟೆಯ +ತೋರೆ +ಬಂದಳು +ಬಾಣಸಿನ +ಮನೆಗೆ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಅಬುಜಬಾಂಧವನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
(೨) ದ್ರೌಪದಿಯ ಕಣ್ಣಿನ ಪ್ರಕಾಶ – ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ

ಪದ್ಯ ೩೫: ದ್ರೌಪದಿಯು ಎಲ್ಲಿಗೆ ಬಂದಳು?

ನಿಳಯವನು ಹೊರವಂಟು ಕಂಗಳ
ಬೆಳಗು ತಿಮಿರವ ಕೆಡಿಸೆ ಕಂಕಣ
ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ
ಒಲಿದು ಮೇಲುದು ನೂಕಿ ನಡುಗುವ
ಮೊಲೆಯ ಭರದಲಿಯಡಿಯಿಡುತ ಕಳ
ವಳದ ಕರಣದ ಮುಗುದೆ ಬಂದಳು ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಕತ್ತಲಿನಲ್ಲಿ ತನ್ನ ಮನೆಯಿಂದ ಹೊರಟು, ಕಣ್ಣಿನ ಬೆಲಕಿನಲ್ಲೇ ದಾರಿಯನ್ನು ಕಂಡುಕೊಂಡು, ಕಂಕಣದ ಝೇಂಕಾರ ಮಾಡುವ ಎಡ ಭುಜವನ್ನು ಸೆರಗಿನಲ್ಲಿ ಮುಚ್ಚಿ, ತನ್ನ ನಡಿಗೆಯ ರಭಸಕ್ಕೆ ಸ್ತನಗಳು ಅಲ್ಲಾಡುತ್ತಿರಲು, ದ್ರೌಪದಿಯು ಕಾತರದಿಂದ ಹೆಜ್ಜೆಯಿಡುತ್ತಾ ಭೀಮನು ಕೆಲಸ ಮಾಡುತ್ತಿದ್ದ ಅಡುಗೆಯ ಮನೆಗೆ ಬಂದಳು.

ಅರ್ಥ:
ನಿಳಯ: ಮನೆ, ಆಲಯ; ಹೊರವಂಟು: ತೆರಳು; ಕಂಗಳು: ಕಣ್ಣು, ನಯನ; ಬೆಳಗು: ಕಾಂತಿ; ತಿಮಿರ: ಕತ್ತಲು; ಕೆಡಿಸು: ಹಾಳುಮಾದು; ಕಂಕಣ: ಕಡಗ, ಬಳೆ; ಲಲಿತ: ಚೆಲುವು, ಸೌಂದರ್ಯ; ಝೇಂಕೃತಿ: ಧ್ವನಿ; ತೂಗು: ಅಲ್ಲಾಡು; ವಾಮ: ಎಡ; ಭುಜ: ಬಾಹು; ಲತೆ: ಬಳ್ಳಿ; ಒಲಿದು: ಪ್ರೀತಿ; ಮೇಲುದು: ಹೊರ ಹೊದಿಕೆ; ನೂಕು: ತಳ್ಳು; ನಡುಗು: ಅಲ್ಲಾಡು; ಮೊಲೆ: ಸ್ತನ; ಭರದಲಿ: ವೇಗ; ಅಡಿಯಿಡು: ಹೆಜ್ಜೆ ಹಾಕು; ಕಳವಳ: ಗೊಂದಲ; ಕರಣ: ಜ್ಞಾನೇಂದ್ರಿಯ, ಕಿವಿ, ಮನಸ್ಸು; ಮುಗುದೆ: ಕಪಟವರಿಯದವಳು; ಬಂದಳು: ಆಗಮಿಸು; ಬಾಣಸಿನ: ಅಡುಗೆಯವನ; ಮನೆ: ಆಲಯ;

ಪದವಿಂಗಡಣೆ:
ನಿಳಯವನು +ಹೊರವಂಟು +ಕಂಗಳ
ಬೆಳಗು +ತಿಮಿರವ+ ಕೆಡಿಸೆ +ಕಂಕಣ
ಲಲಿತ+ ಝೇಂಕೃತಿಯಿಂದ +ತೂಗುವ+ ವಾಮ+ಭುಜಲತೆಯ
ಒಲಿದು +ಮೇಲುದು+ ನೂಕಿ +ನಡುಗುವ
ಮೊಲೆಯ +ಭರದಲಿ+ಅಡಿಯಿಡುತ +ಕಳ
ವಳದ +ಕರಣದ +ಮುಗುದೆ +ಬಂದಳು +ಬಾಣಸಿನ +ಮನೆಗೆ

ಅಚ್ಚರಿ:
(೧) ಪದ್ಯದ ಮೊದಲ ಹಾಗು ಕೊನೆಯ ಪದ – ನಿಳಯ, ಮನೆ – ಸಮನಾರ್ಥಕ ಪದ
(೨) ದ್ರೌಪದಿಯ ಕಣ್ಣಿನ ಕಾಂತಿಯ ವರ್ಣನೆ – ಕಂಗಳ ಬೆಳಗು ತಿಮಿರವ ಕೆಡಿಸೆ

ಪದ್ಯ ೨೩: ಧರ್ಮಜನು ಭೀಮನಿಗೆ ಏನು ಹೇಳಿದನು?

ಆತನಿಂಗಿತದನುವನಿಅರಿದು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯಊರಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನ ಮನಸ್ಸಿನ ಭಾವನೆಯನ್ನರಿತು, ವಲಲ ದುಡುಕಬೇಡ, ತಾಳ್ಮೆಯಿಂದಿರು, ಆ ಮರವನ್ನು ಬೀಳಿಸಬೇಡ, ಊರಿನ ಸಜ್ಜನರು ಇದರಡಿ ಕುಳಿತಿರುತ್ತಾರೆ, ಊರ ಹೊರಗೆ ಒಣಗಿದ ಮರವಿದೆ ಅದನ್ನು ತರಿಸಿಕೋಮ್ಡು ಅಡುಗೆ ಮಾಡು ಎಂದನು.

ಅರ್ಥ:
ಇಂಗಿತ: ಭಾವನೆ; ಅನುವು: ರೀತಿ; ಅರಿ: ತಿಳಿ; ಮಹೀತಳಾಧಿಪ: ರಾಜ; ಮಹೀತಳ: ಭೂಮಿ; ಅಧಿಪ: ಒಡೆಯ; ಕಾತರ: ಕಳವಳ; ಸೈರಿಸು: ಸಮಾಧಾನ; ಅಕಟ: ಅಯ್ಯೋ; ತರು: ಮರ; ಮುರಿ: ಸೀಳು, ನಾಶಮಾಡು; ಸುಜನ: ಸಜ್ಜನ; ವ್ರಾತ: ಗುಂಪು; ಆಶ್ರಯ: ಆಸರೆ; ಊರು: ಪುರ; ಹೊರಗೆ: ಆಚೆ; ಮಹಾತಿಶಯ: ಅತಿ ದೊಡ್ಡ; ಬಾಣಸಿನ: ಅಡುಗೆ; ಮನೆ: ಆಲಯ;

ಪದವಿಂಗಡಣೆ:
ಆತನ್+ಇಂಗಿತದ್+ಅನುವನ್+ಅರಿದು +ಮ
ಹೀತಳಾಧಿಪ+ ಧರ್ಮಸುತನ್+ಅತಿ
ಕಾತರಿಸದಿರು +ವಲಲ +ಸೈರಿಸು +ಸೈರಿಸ್+ಅಕಟೆನುತ
ಈ +ತರುವ +ಮುರಿಯದಿರು +ಸುಜನ
ವ್ರಾತಕ್+ಆಶ್ರಯ+ ಊರ+ಹೊರಗೆ+ ಮ
ಹಾತಿಶಯ +ತರುವುಂಟು +ನಿನ್ನಯ +ಬಾಣಸಿನ +ಮನೆಗೆ

ಅಚ್ಚರಿ:
(೧) ರಾಜ ಎಂದು ಹೇಳುವ ಪರಿ – ಮಹೀತಳಾಧಿಪ