ಪದ್ಯ ೨೮: ಗಣಿಕೆಯರು ಕಾವಲುಗಾರರಿಗೆ ಏನು ಹೇಳಿದರು?

ಆರಿವರು ಕರೆವವರೆನುತ ಸುರ
ವೀರರೌಕಿತು ಬಾಗಿಲಲಿ ನೀ
ವಾರೆನಲು ತೆಗೆ ಕದವನರಿಯಾ ರಾಯಕುರುಪತಿಯ
ವಾರನಾರಿಯರವನಿಪತಿಯ ಕು
ಮಾರರಿದೆ ಬೇಹವರು ಸರಸಿಯ
ವಾರಿಕೇಳಿಗೆ ಬಂದೆವೆಂದರು ಗಜರಿ ಗರ್ಜಿಸುತ (ಅರಣ್ಯ ಪರ್ವ, ೧೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ದೇವತೆಗಳು ಹೊರಬಂದು, ಯಾರಿವರು ನಮ್ಮನ್ನು ಕರೆಯುತ್ತಿರುವವರು ಎಂದು ಕೇಳಲು, ಅಲ್ಲಿ ನೆರೆದಿದ್ದ ಗಣಿಕೆಯರು ದೇವತೆಗಳನ್ನು ಬೆದರಿಸುತ್ತಾ, ನಿನಗೆ ತಿಳಿಯದೇ, ನಾವು ಕೌರವನ ವಾರನಾರಿಯರು, ರಾಜಕುಮಾರರು, ರಾಜನ ಆಪ್ತರು ಎಲ್ಲರೂ ಜಲಕ್ರೀಡೆಯಾಡಲು ಬಂದಿದ್ದೇವೆ ಎಂದು ಬೆದರಿಸುವ ಧ್ವನಿಯಲ್ಲಿ ಗರ್ಜಿಸಿದರು.

ಅರ್ಥ:
ಕರೆ: ಬರೆಮಾಡು; ಸುರ: ದೇವತೆ; ವೀರ: ಪರಾಕ್ರಮಿ; ಔಕು: ಒತ್ತು; ಬಾಗಿಲು: ಕದ; ತೆಗೆ: ಹೊರತರು; ಕದ: ಬಾಗಿಲು; ಅರಿ: ತಿಳಿ; ರಾಯ: ರಾಜ; ವಾರನಾರಿ: ಗಣಿಕೆ; ಅವನಿಪತಿ: ರಾಜ; ಕುಮಾರ: ಮಕ್ಕಳು; ಬೇಹ: ಬೇಕಾದ; ಸರಸಿ: ನೀರು, ಸರೋವರ; ವಾರಿಕೇಳಿ: ಜಲಕ್ರೀಡೆ; ಬಂದೆವು: ಆಗಮಿಸು; ಗಜರು: ಬೆದರಿಸು; ಗರ್ಜಿಸು: ಆರ್ಭಟಿಸು;

ಪದವಿಂಗಡಣೆ:
ಆರಿವರು+ ಕರೆವವರ್+ಎನುತ +ಸುರ
ವೀರರ್+ಔಕಿತು +ಬಾಗಿಲಲಿ +ನೀವ್
ಆರೆನಲು +ತೆಗೆ +ಕದವನ್+ಅರಿಯಾ+ ರಾಯ+ಕುರುಪತಿಯ
ವಾರನಾರಿಯರ್+ಅವನಿಪತಿಯ+ ಕು
ಮಾರರಿದೆ+ ಬೇಹವರು+ ಸರಸಿಯ
ವಾರಿಕೇಳಿಗೆ+ ಬಂದೆವೆಂದರು +ಗಜರಿ +ಗರ್ಜಿಸುತ

ಅಚ್ಚರಿ:
(೧) ಅವನಿಪತಿ, ರಾಯ; ಸರಸಿ, ವಾರಿ – ಸಮನಾರ್ಥಕ ಪದ
(೨) ಜಲಕ್ರೀಡೆಗೆ ವಾರಿಕೇಳಿ ಎಂಬ ಪದ ಪ್ರಯೋಗ