ಪದ್ಯ ೪೪: ಮೂಕಾಸುರನು ಶಿವಗಣರ ಯುದ್ಧದಲ್ಲಿ ಹೇಗೆ ಮುಂದುವರೆದನು?

ಇಡುವ ಸೆಲ್ಲೆಹ ಬಲ್ಲೆಹದ ಹೆ
ಗ್ಗಿಡಿಯನುಗುಳವ ಬಾಯಧಾರೆಯ
ನುಡಿದು ಹರಹಿ ಮಹೋಗ್ರತರ ಜಾಯಿಲನ ಜಂಗುಳಿಯ
ಕಡಿದು ಕೆಡಹಿ ಪುಳಿಂದ ಶಬರಿ
ರೆಡೆಗೆಡೆಯಲಡಹಾಯ್ದು ಮಿಗೆ ಘುಡಿ
ಘುಡಿಸಿ ಕವಿದೈತರಲು ಧೃತಿಗೆಟ್ಟುದು ಗಣಸ್ತೋಮ (ಅರಣ್ಯ ಪರ್ವ, ೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಬೇಟೆಗಾರರು ಎಸೆಯುವ ತಿವಿಯುವ ಈಟಿಗಳ ಬಾಯಿಧಾರೆಗಳನ್ನು ಮುರಿದು, ಕೆಡವಿ, ಅತ್ಯಂತ ಉಗ್ರವಾದ ಬೇಟೆಯ ನಾಯಿಗಳನ್ನು ಕಡಿದು, ಕೆಡವಿ, ಬೇಡ ಬೇಡತಿಯರು ಬಂದು ತಡೆವಾದ, ಅವರನ್ನು ಹಾದು ಮೂಕಾಸುರನೆಂಬ ಹಂದಿಯು ಘುಡಿಘುಡಿಸುತ್ತಾ ಬರಲು ಶಿವನ ಗಣಗಳು ಹೆದರಿದವು.

ಅರ್ಥ:
ಇಡು: ಅಣಿಗೊಳಿಸು, ಇರಿಸು; ಸೆಲ್ಲೆಹ: ಈಟಿ, ಭರ್ಜಿ; ಬಲ್ಲೆ: ಈಟಿ; ಹೆಗ್ಗಿಡಿ: ದೊಡ್ಡ ಕಿಡಿ; ಉಗುಳು: ಹೊರಹಾಕು; ಧಾರೆ: ಮೇಲಿನಿಂದ ಹರಿದುಬರುವ ನೀರು; ನುಡಿ: ಮಾತು; ಹರಹು: ವಿಸ್ತಾರ, ವೈಶಾಲ್ಯ; ಮಹಾ: ದೊಡ್ಡ; ಉಗ್ರ: ಭಯಂಕರ; ಜಾಯಿಲು: ನಾಯಿ; ಜಂಗುಳಿ: ಗುಂಪು; ಕಡಿ: ಸೀಳು; ಕೆಡಹು: ಕೆಡವಿ; ಪುಳಿಂದ: ಬೇಡ; ಶವರಿ: ಬೇಡತಿ; ಎಡೆಗೆಡೆ: ಕೆಳಕ್ಕೆ ಬೀಳು; ಅಡಹಾಯ್ದು: ಮಧ್ಯ ಹೊಕ್ಕು; ಮಿಗೆ: ಅಧಿಕ; ಘುಡಿಘುಡಿ: ಶಬ್ದವನ್ನು ವಿವರಿಸುವ ಪದ; ಕವಿದು: ಆವರಿಸು; ಐದು: ಬಂದು ಸೇರು; ಧೃತಿ: ಧೈರ್ಯ; ಗಣ: ಶಿವಗಣ; ಸ್ತೋಮ: ಗುಂಫು;

ಪದವಿಂಗಡಣೆ:
ಇಡುವ +ಸೆಲ್ಲೆಹ +ಬಲ್ಲೆಹದ +ಹೆ
ಗ್ಗಿಡಿಯನ್+ಉಗುಳವ +ಬಾಯಧಾರೆಯ
ನುಡಿದು +ಹರಹಿ +ಮಹ+ಉಗ್ರತರ+ ಜಾಯಿಲನ+ ಜಂಗುಳಿಯ
ಕಡಿದು +ಕೆಡಹಿ+ ಪುಳಿಂದ +ಶಬರಿಯ
ಏಡೆಗೆಡೆಯಳ್+ಆಡಹಾಯ್ದು +ಮಿಗೆ +ಘುಡಿ
ಘುಡಿಸಿ +ಕವಿದ್+ ಐತರಲು+ ಧೃತಿಗೆಟ್ಟುದು +ಗಣಸ್ತೋಮ

ಅಚ್ಚರಿ:
(೧) ಸೆಲ್ಲೆಹ, ಬಲ್ಲೆಹ – ಸಮನಾರ್ಥಕ, ಪ್ರಾಸ ಪದ
(೨) ನಾಯಿಗೆ ಜಾಯಿಲು ಪದದ ಬಳಕೆ
(೩) ಜ ಕಾರದ ೨ ಪದಗಳ ಬಳಕೆ – ಜಾಯಿಲನ ಜಂಗುಳಿಯ
(೪) ಬೇಡ ಬೇಡತಿ ಎಂದು ಹೇಳಲು, ಪುಳಿಂದ, ಶಬರಿ ಪದಗಳ ಬಳಕೆ

ಪದ್ಯ ೩೧ : ಅರ್ಜುನನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು -೩?

ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿದಡಾಯ್ದಕೆ ಸುಳಿವ ಸುರಗಿಗೆ ತಿವಿದ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ (ಕರ್ಣ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬೈಗಳನ್ನು ಮುಂದುವರೆಸುತ್ತಾ, ರಾಜ ಯುದ್ಧವೆಂದರೆ ಊಟದ ಮನೆಯಲ್ಲ. ತಲೆಯ ಮೇಲೆರಗುವ ಕತ್ತಿಗೆ ಸುಳಿಯುವ ಸುರಗಿಗೆ, ತಿವಿಯುವ ಬಲ್ಲೆಯಹಕ್ಕೆ, ಹೊಡೆಯುವ ಲೌಡಿಗೆ, ಹಾರಿಬಂದು ತಾಗುವ ಬಾಣಕ್ಕೆ ಯುದ್ಧದಲ್ಲಿ ರಕ್ತದ ಮೃಷ್ಟಾನ ಭೋಜನವನ್ನು ಮಾಡಿಸದೇ ಸುಮ್ಮನಿದ್ದು ರಾಜ್ಯವನ್ನು ಪಡೆಯುವೆಯಾ ಎಂದು ಕೇಳಿದನು.

ಅರ್ಥ:
ರಣ: ಯುದ್ಧ; ಘಾರಾಘಾರಿ: ಕಡೆತದಿಂದ ಉಂಟಾದ ಹಿಂಸೆ; ಆರೋಗಣೆ: ಊಟ, ಭೋಜನ; ಮನೆ: ಆಲಯ; ಅರಸ: ರಾಜ; ಶಿರ: ತಲೆ; ಕುಣಿ: ನರ್ತಿಸು, ಆಡು; ಸುಳಿ: ತಿರುಗು; ಸುರಗಿ: ಸಣ್ಣ ಕತ್ತಿ, ಚೂರಿ; ತಿವಿ: ಚುಚ್ಚು; ಹಣಿವ: ಬಲ್ಲೆಹ: ಈಟಿ, ಆಯುಧದ ಬಗೆ; ಹಣಿತ: ಹೊಡೆಯುವ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಹಾಯ್ದು: ಮೇಲೆ ಬಿದ್ದು; ಬೀಳು: ಕೆಳಕ್ಕೆ ಕುಸಿ; ಕಣೆ:ಬಾಣ; ಖಂಡ: ತುಂಡು, ಚೂರು; ರುಧಿರ: ರಕ್ತ; ಔತಣ:ವಿಶೇಷವಾದ ಊಟ; ರಚಿಸು: ತಯಾರಿಸು; ಬರಿ: ಕೇವಲ; ರಾಜ್ಯ: ರಾಷ್ಟ್ರ; ಕೊಂಬೆ: ಪಡೆ;

ಪದವಿಂಗಡಣೆ:
ರಣದ +ಘಾರಾಘಾರಿ+ಆರೋ
ಗಣೆಯ +ಮನೆಯಲ್ಲ್+ಅರಸ +ಶಿರದಲಿ
ಕುಣಿದಡ್+ಆಯ್ದಕೆ +ಸುಳಿವ +ಸುರಗಿಗೆ +ತಿವಿದ +ಬಲ್ಲೆಹಕೆ
ಹಣಿವ +ಲೌಡಿಗೆ +ಪಾಯ್ದು +ಬೀಳುವ
ಕಣೆಗೆ +ಖಂಡದ +ರುಧಿರ +ರಣದೌ
ತಣವ +ರಚಿಸದೆ +ಬರಿದೆ +ರಾಜ್ಯವ +ಕೊಂಬೆ +ನೀನೆಂದ

ಅಚ್ಚರಿ:
(೧) ರಣರಂಗವನ್ನು ಅಡುಗೆಮನೆಗೆ ಹೋಲಿಕೆ ನೀಡಿರುವ ಪದ್ಯ
(೨) ರ ಕಾರದ ತ್ರಿವಳಿ ಪದ – ರುಧಿರ ರಣದೌತಣವ ರಚಿಸದೆ
(೩) ಆಯುಧಗಳ ಪದಗಳು – ಸುರಗಿ, ಬಲ್ಲೆಹ, ಲೌಡಿ,ಕಣೆ

ಪದ್ಯ ೯: ಕೌರವ ಸೇನೆಯು ಭೀಮನನ್ನು ಹೇಗೆ ಆವರಿಸಿತು?

ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ (ಕರ್ಣ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ರಣದುತ್ಸಾಹಿಗಳಾಗಿ ಕರ್ಣದ್ರೋಹಿಯೆಲ್ಲಿ ತೋರಿಸಿ ಎಂದು ಕೂಗುತ್ತಾ ಬಂದು ಎದುರಾಳಿ ಸೈನ್ಯವನ್ನು ಮುತ್ತಿದರು. ಭಲ್ಲೆಹಗಳ ತಿವಿತ, ಎಸೆದ ಚಕ್ರ, ಮುತ್ತುವ ಬಾಣ, ಬೀಸಿದ ಖಡ್ಗಗಳು ಭೀಮನನ್ನು ಮುತ್ತಿದವು.

ಅರ್ಥ:
ಕವಿದು: ಆವರಿಸು; ಗರಿಗಟ್ಟು: ಸಂಭ್ರಮಗೊಳ್ಳು; ನಿವಹ: ಗುಂಪು; ಮೋಡಾಮೋಡಿ: ಆಶ್ಚರ್ಯಕರ; ರಣ: ಯುದ್ಧ; ರಣದವಕಿ: ಯುದ್ಧದಲ್ಲಿ ಉತ್ಸುಕನಾದವ; ದ್ರೋಹಿ: ವೈರಿ; ತೋರು: ಗೋಚರ, ಕಾಣಿಸು; ತಿವಿ: ಚುಚ್ಚು; ಬಲ್ಲೆ:ಈಟಿ; ಚಕ್ರ: ಗಾಲಿ; ಕವಿ: ಮುಚ್ಚು; ಬಾಣ: ಶರ; ಹೊಯ್ವ: ಹೊಡೆಯುವ; ಖಡ್ಗ: ಕತ್ತಿ; ವಿವಿಧ: ಹಲವಾರು; ಬಲ; ಶಕ್ತಿ; ಔಕು: ಒತ್ತು; ಮುತ್ತು: ಆವರಿಸು; ಪವನ: ವಾಯು; ನಂದನ: ಮಗ;

ಪದವಿಂಗಡಣೆ:
ಕವಿದುದಿದು +ಗರಿಗಟ್ಟಿ+ ಕೌರವ
ನಿವಹ +ಮೋಡಾಮೋಡಿಯಲಿ +ರಣ
ದವಕಿ+ ಕರ್ಣ+ದ್ರೋಹಿಯಾವೆಡೆ+ ತೋರು +ತೋರೆನುತ
ತಿವಿವ+ ಬಲ್ಲೆಹದ್+ಇಡುವ +ಚಕ್ರದ
ಕವಿವ +ಬಾಣದ +ಹೊಯ್ವ +ಖಡ್ಗದ
ವಿವಿಧಬಲ+ ಬಿಡದೌಕಿ+ ಮುತ್ತಿತು+ ಪವನ+ನಂದನನ

ಅಚ್ಚರಿ:
(೧) ಉತ್ಸಾಹದ ಮಾತುಗಳು – ತೋರು ತೋರೆನುತ
(೨) ಬಲ್ಲೆಹ, ಚಕ್ರ, ಬಾಣ, ಖಡ್ಗ – ಆಯುಧಗಳ ವಿವರ

ಪದ್ಯ ೧೦ : ರಾವುತರ ಗುಂಪಿನಲ್ಲಿ ಯಾವ ಮಾತುಗಳು ಕೇಳಿಬರುತ್ತಿದ್ದವು?

ಸವೆದುದಿರುಳರುಣೋದಯದಲಾ
ಹವದ ಸಂಭ್ರಮರಭಸವೆದ್ದುದು
ವಿವಿಧ ಬಲ ಭಾರಣೆಯ ಭುಲ್ಲವಣೆಯ ಛಡಾಳದಲಿ
ತವಕಿಸುತ ಬಿಗಿ ವಾರುವನ ತಾ
ಸವಗನು ಬಲ್ಲೆಹವ ಸೀಸಕ
ಕವಚಗಳನೆಂಬಬ್ಬರಣೆ ರಂಜಿಸಿತು ರಾವ್ತರಲಿ (ಕರ್ಣ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ರಾತ್ರಿ ಶಸ್ತ್ರಾಸ್ತ್ರ ಪೂಜೆ ಕಳೆದು ಸೂರ್ಯೋದಯವಾಗಲು ಯುದ್ಧದ ತಯಾರಿಯ ಸಂಭ್ರಮ ಶುರುವಾಯಿತು. ಚತುರಂಗದಲ್ಲಿಯೂ ಸಿದ್ಧತೆ ಜೋರಾಗಿ ನಡೆಯುತ್ತಿತ್ತು, ಕಾತುರತೆ ಹೆಚ್ಚುತ್ತಿತ್ತು, ಬೇಗ ಬೇಗ ಸಿದ್ಧತೆಗಳನ್ನು ಮಾಡಲು ಪ್ರಾರಂಭಿಸುತ್ತಿದ್ದರು, ಕುದುರೆಗೆ ಹಲ್ಲಣ, ಕವಚ, ಬಲ್ಲೆಹ, ಶಿರಸ್ತ್ರಾಣಗಳನ್ನು ತೆಗೆದುಕೊಂಡು ಬಾ ಎಂಬ ಮಾತುಗಳು ರಾವುತರ ಗುಂಪಿನಲ್ಲಿ ಕೇಳಿಬರುತ್ತಿದ್ದವು.

ಅರ್ಥ:
ಸವೆದು: ಕುಗ್ಗು, ಕಡಿಮೆಯಾಗು; ಇರುಳು: ರಾತ್ರಿ; ಅರುಣೋದಯ: ಸೂರ್ಯೋದಯ; ಆಹವ: ಯುದ್ಧ; ಸಂಭ್ರಮ: ಸಡಗರ; ರಭಸ: ವೇಗ; ಎದ್ದು: ಮೇಲೇಳು; ವಿವಿಧ: ಹಲವಾರು; ಬಲ: ಸೈನ್ಯ; ಭಾರಣೆ: ಮಹಿಮೆ, ಗೌರವ; ಭುಲ್ಲವಣೆ: ಹರ್ಷ; ಛಡಾಳ: ಹೆಚ್ಚಳ, ಆಧಿಕ್ಯ; ತವಕ: ಹಂಬಲ; ಕಾತುರ; ಬಿಗಿ: ಭದ್ರ, ಗಟ್ಟಿ; ವಾರುವ: ಕುದುರೆ, ಅಶ್ವ; ಸವಗ: ಕವಚ; ತಾ: ಬರೆಮಾಡು; ಬಲ್ಲೆ: ಈಟಿ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ; ಅಬ್ಬರ: ಆರ್ಭಟ; ರಂಜಿಸು: ಹೊಳೆ, ಪ್ರಕಾಶಿಸು; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಸವೆದುದ್+ಇರುಳ್+ಅರುಣೋದಯದಲ್+ಆ
ಹವದ+ ಸಂಭ್ರಮ+ರಭಸವ್+ಎದ್ದುದು
ವಿವಿಧ+ ಬಲ +ಭಾರಣೆಯ +ಭುಲ್ಲವಣೆಯ+ ಛಡಾಳದಲಿ
ತವಕಿಸುತ +ಬಿಗಿ +ವಾರುವನ +ತಾ
ಸವಗನು +ಬಲ್ಲೆಹವ+ ಸೀಸಕ
ಕವಚಗಳನ್+ಎಂಬ್+ಅಬ್ಬರಣೆ +ರಂಜಿಸಿತು+ ರಾವ್ತರಲಿ

ಅಚ್ಚರಿ:
(೧) ಸೂರ್ಯೋದಯವಾಯಿತು ಎಂದು ಹೇಳಲು: ಸವೆದುದಿರುಳರುಣೋದಯದಲಾ
ಹವದ ಸಂಭ್ರಮರಭಸವೆದ್ದುದು
(೨) ಪದಗಳ ಜೋಡಣೆ: ಭಾರಣೆಯ ಭುಲ್ಲವಣೆಯ ಛಡಾಳದಲಿ
(೩) ಕುದುರೆಗಳಿಗೆ ಜೋಡಿಸುವ ವಸ್ತುಗಳು – ಸವಗ, ಬಲ್ಲೆಹ, ಸೀಸಕ, ಕವಚ