ಪದ್ಯ ೨೮: ಕೌರವಾನುಜರು ಏನೆಂದು ಕೂಗಿದರು?

ಎಲವೊ ಕರ್ಣನ ಗೆಲಿದ ಗರ್ವವ
ಕಲಕುವೆವು ಫಡ ನಿಲ್ಲೆನುತ ಕೈ
ಚಳಕಿಗರು ಪೂರಾಯಚಾಪದ ಬೆರಳ ಕಿವಿಗಡಿಯ
ಬಲುಸರಳ ಸರಿವಳೆಯ ಸಾಹಸಿ
ಗಳು ಭರದಿ ಕವಿದೆಸುತ ಬರೆ ಕಂ
ಡೆಲೆಮಿಡುಕನಾ ಭೀಮ ಮೂಗಿನ ಬೆರಳ ಬೆರಗಿನಲಿ (ದ್ರೋಣ ಪರ್ವ, ೧೩ ಸಂಧಿ, ೨೮ ಪದ್ಯ
)

ತಾತ್ಪರ್ಯ:
ಕೌರವಾನುಜರು, “ಎಲವೋ ಕರ್ಣನನ್ನು ಗೆದ್ದ ಗರ್ವವನ್ನು ಇಳಿಸುತ್ತೇವೆ ನಿಲ್ಲು, ಎನ್ನುತ್ತಾ ಬಿಲ್ಲಿನಲ್ಲಿ ಬಾಣಗಳನ್ನು ಹೂಡಿ ಕಿವಿವರೆಗೆಳೆದು ಕೈಚಳಕವನ್ನು ತೋರಿಸುತ್ತಾ, ಶರವರ್ಷವನ್ನು ಕರೆಯುತ್ತಾ ವೇಗದಿಂದ ಮುನ್ನುಗ್ಗಿದರೆ, ಭೀಮನು ಮೂಗಿನ ಮೇಲೆ ಬೆರಳನ್ನಿಟ್ಟು, ಒಂದು ಎಲೆಯಷ್ಟೂ ಮಿಸುಕಲಿಲ್ಲ.

ಅರ್ಥ:
ಗೆಲಿದ: ಜಯಿಸಿದ; ಗರ್ವ: ಅಹಂಕಾರ; ಕಲಕು: ಅಲ್ಲಾಡಿಸು; ಫಡ: ತಿರಸ್ಕಾರದ ಮಾತು; ನಿಲ್ಲು: ತಡೆ; ಕೈಚಳಕ: ಹಸ್ತಕೌಶಲ, ನೈಪುಣ್ಯ; ಪೂರಾಯ: ಪರಿಪೂರ್ಣ; ಚಾಪ: ಬಿಲ್ಲು; ಬೆರಳು: ಅಂಗುಲಿ; ಕಿವಿ: ಕರ್ಣ; ಬಲು: ಬಹಳ; ಸರಳ: ಬಾಣ; ಸರಿವಳೆ: ವರ್ಷ; ಸಾಹಸಿ: ಪರಾಕ್ರಮಿ; ಭರ: ವೇಗ; ಕವಿ: ಆವರಿಸು; ಎಸು: ಬಾಣ ಪ್ರಯೋಗ ಮಾಡು; ಬರೆ: ಗೆರೆ, ರೇಖೆ; ಕಂಡು: ನೋಡು; ಮಿಡುಕು: ಅಲುಗು, ಕದಲು; ಬೆರಗು: ವಿಸ್ಮಯ, ಸೋಜಿಗ; ಎಲೆ: ಪರ್ಣ;

ಪದವಿಂಗಡಣೆ:
ಎಲವೊ +ಕರ್ಣನ +ಗೆಲಿದ +ಗರ್ವವ
ಕಲಕುವೆವು+ ಫಡ +ನಿಲ್ಲೆನುತ +ಕೈ
ಚಳಕಿಗರು +ಪೂರಾಯ+ಚಾಪದ +ಬೆರಳ +ಕಿವಿಗಡಿಯ
ಬಲುಸರಳ +ಸರಿವಳೆಯ +ಸಾಹಸಿ
ಗಳು +ಭರದಿ +ಕವಿದೆಸುತ +ಬರೆ +ಕಂಡ್
ಎಲೆ+ಮಿಡುಕನಾ +ಭೀಮ +ಮೂಗಿನ +ಬೆರಳ +ಬೆರಗಿನಲಿ

ಅಚ್ಚರಿ:
(೧) ಸರಳ ಸರಿವಳೆಯ ಸಾಹಸಿಗಳು – ಸ ಕಾರದ ತ್ರಿವಳಿ ಪದ

ಪದ್ಯ ೧೨: ಭೀಮನು ದ್ರೋಣರ ಮೇಲೆ ಹೇಗೆ ನುಗ್ಗಿದನು?

ಮಳೆಗೆ ತೆರಳದೆ ಕೋಡ ಬಾಗಿಸಿ
ಕಲಿ ವೃಷಭ ಹೊಗುವಂತೆ ದ್ರೋಣನ
ಬಲುಸರಳ ಸರಿವಳೆಗೆ ದಂಡೆಯನೊಡ್ಡಿ ದಳವುಳಿಸಿ
ಅಳವಿದಪ್ಪದೆ ಕೆಲದ ಖಡ್ಗವ
ಸೆಳೆದು ಗುರುವಪ್ಪಳಿಸೆ ಕೈಯಲಿ
ಕಳೆದು ಕಟ್ಟಳವಿಯಲಿ ಹೊಕ್ಕನು ಭೀಮ ಬೊಬ್ಬಿರಿದು (ದ್ರೋಣ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜೋರಾಗಿ ಮಳೆಯು ಬರುವಾಗ ಗೂಳಿಯು ಕೋಡು ಬಾಗಿಸಿ ಮುಂದಕ್ಕೆ ನುಗ್ಗುವಂತೆ, ದ್ರೋಣನ ಬಾಣಗಳ ಸುರಿಮಳೆಗೆ ಅಡ್ಡವಾಗಿ ಕೈಹಿಡಿದು, ಉತ್ಸಾಹಿಸಿ ಭೀಮನು ನೇರವಾಗಿ ನುಗ್ಗಿದನು. ಆಗ ದ್ರೋಣನು ಬಿಲ್ಲನ್ನು ಬಿಟ್ಟು ಕತ್ತಿಯನ್ನೆಳೆದು ಅಪ್ಪಳಿಸಿದನು. ಭೀಮನು ಅದನ್ನು ಕೈಯಿಂದ ತಪ್ಪಿಸಿಕೊಂಡು ಜೋರಾಗಿ ಕೂಗುತ್ತಾ ದ್ರೋಣನ ರಥದ ಅತಿಸಮೀಪಕ್ಕೆ ಬಂದನು.

ಅರ್ಥ:
ಮಳೆ: ವರ್ಷ; ತೆರಳು: ಹಿಂದಿರುಗು; ಕೋಡು: ಕೊಂಬು; ಬಾಗಿಸು: ಎರಗಿಸು; ಕಲಿ: ಶೂರ; ವೃಷಭ: ಗೂಳಿ, ನಂದಿ; ಹೊಗು: ಚಲಿಸು; ಬಲು: ಬಹಳ; ಸರಳು: ಬಾಣ; ದಂಡೆ: ಬಿಲ್ಲನ್ನು ಹಿಡಿಯುವ ಒಂದು ವರಸೆ; ಒಡ್ಡು: ಅಡ್ಡ ಗಟ್ಟೆ; ದಳ: ಸೈನ್ಯ; ಅಳವು: ಶಕ್ತಿ; ಕೆಲ: ಪಕ್ಕ, ಮಗ್ಗುಲು; ಖಡ್ಗ: ಕತ್ತಿ; ಸೆಳೆ: ಆಕರ್ಷಿಸು; ಗುರು: ಆಚಾರ್ಯ; ಅಪ್ಪಳಿಸು: ತಟ್ಟು, ತಾಗು; ಕಳೆ: ಬೀಡು, ತೊರೆ; ಅಳವಿ: ಯುದ್ಧ; ಹೊಕ್ಕು: ಸೇರು; ಬೊಬ್ಬಿರಿ: ಆರ್ಭಟಿಸು;

ಪದವಿಂಗಡಣೆ:
ಮಳೆಗೆ +ತೆರಳದೆ +ಕೋಡ +ಬಾಗಿಸಿ
ಕಲಿ +ವೃಷಭ +ಹೊಗುವಂತೆ +ದ್ರೋಣನ
ಬಲುಸರಳ +ಸರಿವಳೆಗೆ +ದಂಡೆಯನೊಡ್ಡಿ +ದಳವುಳಿಸಿ
ಅಳವಿದ್+ಅಪ್ಪದೆ +ಕೆಲದ +ಖಡ್ಗವ
ಸೆಳೆದು +ಗುರುವ್+ಅಪ್ಪಳಿಸೆ +ಕೈಯಲಿ
ಕಳೆದು+ ಕಟ್ಟಳವಿಯಲಿ +ಹೊಕ್ಕನು +ಭೀಮ +ಬೊಬ್ಬಿರಿದು

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೈಯಲಿ ಕಳೆದು ಕಟ್ಟಳವಿಯಲಿ
(೨) ಉಪಮಾನದ ಪ್ರಯೋಗ – ಮಳೆಗೆ ತೆರಳದೆ ಕೋಡ ಬಾಗಿಸಿ ಕಲಿ ವೃಷಭ ಹೊಗುವಂತೆ

ಪದ್ಯ ೪: ಕೀಚಕನ ಮೇಲೆ ಯಾರು ಬಾಣಗಳನ್ನು ತೂರಿದರು?

ಎಲವೊ ಕೀಚಕ ಹೋಗದಿರು ನಿ
ಲ್ಲೆಲವೊ ಹುಲು ಮಂಡಳಿಕ ನಿನ್ನಯ
ಬಲುಗಡಿಯ ತೋರುವುದು ನಿನ್ನಂತರದ ರಾಯರಲಿ
ತೊಲಗು ಸೈರಿಸೆನುತ್ತಲುರೆ ಬಿಲು
ಬಲುಸರಳ ಸರಿವಳೆಯ ಸುರಿಯ
ಲ್ಕಲಘು ವಿಕ್ರಮ ಕೀಚಕನು ಸವರಿದನು ಶರತತಿಯ (ಅರಣ್ಯ ಪರ್ವ, ೨೪ ಸಂಧಿ, ೪ ಪದ್ಯ)

ತಾತ್ಪರ್ಯ:
ಕೌರವ ವೀರರು, ಎಲವೋ ಕೀಚಕ ಹೋಗ ಬೇಡ, ನೀನು ಹುಲು ಮಂಡಲಿಕ. ನಿನ್ನ ಪರಾಕ್ರಮವನ್ನು ನಿನ್ನ ಸಮಾನ ರಾಜರೊಡನೆ ತೋರಿಸು, ಎಂದು ಕೌರವ ವೀರರು ಹೇಳಿ ಬಾಣಗಳ ಮಳೆಯನ್ನು ಸುರಿಸಲು, ಪರಾಕ್ರಮಿಯಾದ ಕೀಚಕನು ಆ ಬಾಣಗಳನ್ನು ಕಡಿದೆಸೆದನು.

ಅರ್ಥ:
ಹೋಗು: ತೆರಳು; ನಿಲ್ಲು: ತಡೆ; ಹುಲು: ಕ್ಷುಲ್ಲಕ; ಮಂಡಳಿಕ: ಒಂದು ಪ್ರಾಂತ್ಯದ ಅಧಿಪತಿ; ಬಲುಗಡಿ: ಮಹಾಪರಾಕ್ರಮ; ತೋರು: ಪ್ರದರ್ಶಿಸು; ರಾಯ: ರಾಜ; ತೊಲಗು: ತೆರಳು; ಸೈರಿಸು: ತಾಳು; ಬಿಲು: ಬಿಲ್ಲು; ಉರು: ವಿಶೇಷವಾದ; ಸರಳು: ಬಾಣ; ಸರಿವಳೆ: ಒಂದೇ ಸಮನಾಗಿ ಸುರಿವ ಮಳೆ; ಸುರಿ: ವರ್ಷಿಸು; ವಿಕ್ರಮ: ಪರಾಕ್ರಮಿ; ಸವರು: ನಾಶಗೊಳಿಸು; ಶರ: ಬಾಣ; ತತಿ: ಗುಂಪು; ಅಲಘು: ಭಾರವಾದ;

ಪದವಿಂಗಡಣೆ:
ಎಲವೊ +ಕೀಚಕ +ಹೋಗದಿರು +ನಿಲ್
ಎಲವೊ +ಹುಲು +ಮಂಡಳಿಕ +ನಿನ್ನಯ
ಬಲುಗಡಿಯ +ತೋರುವುದು +ನಿನ್ನಂತರದ+ ರಾಯರಲಿ
ತೊಲಗು +ಸೈರಿಸೆನುತ್ತಲ್+ಉರೆ +ಬಿಲು
ಬಲುಸರಳ+ ಸರಿವಳೆಯ+ ಸುರಿಯಲ್ಕ್
ಅಲಘು ವಿಕ್ರಮ +ಕೀಚಕನು +ಸವರಿದನು +ಶರತತಿಯ

ಅಚ್ಚರಿ:
(೧) ಕೀಚಕನನ್ನು ಹಂಗಿಸುವ ಪರಿ – ಎಲವೊ ಹುಲು ಮಂಡಳಿಕ
(೨) ಕೀಚಕನ ಪರಾಕ್ರಮ – ಅಲಘು ವಿಕ್ರಮ ಕೀಚಕನು ಸವರಿದನು ಶರತತಿಯ