ಪದ್ಯ ೪೦: ಅಶ್ವತ್ಥಾಮನು ಯಾವು ವಿಚಾರವನ್ನು ಕೌರವನಿಗೆ ತಿಳಿಸಿದನು?

ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರವಿದೆಂದನಶ್ವತ್ಥಾಮನವನಿಪನ (ಗದಾ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು, ರಾಜಾ, ನಿನ್ನ ಪುಣ್ಯವನ್ನು ಅರೆಬರೆಯಾಗಿದ್ದರೂ ಪೂರ್ಣಗೊಳಿಸುತ್ತೇನೆ. ಉದ್ವೇಗದ ಮಾತನ್ನು ಬಿಡು, ಮೇಲೇಳು, ಹಸ್ತಿನಾಪುರಕ್ಕೆ ಹೋಗೋಣ, ಶತ್ರುಗಳು ಮುತ್ತಿದರೆ ಕೋಟೆಯನ್ನು ಬಲಗೊಳಿಸೋಣ. ಇದೇ ಅತ್ಯುತ್ತಮವಾದ ಉಪಾಯ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸುಕೃತ: ಒಳ್ಳೆಯ ಕೆಲಸ; ವಿಸ್ತರಿಸು: ಹರಡು; ಪೂರಾಯ: ಪೂರ್ಣವಾಗಿ; ಕಾಹುರ: ಆವೇಶ, ಸೊಕ್ಕು, ಕೋಪ; ನುಡಿ: ಮಾತು; ಬೇಡ: ತ್ಯಜಿಸು; ನಡೆ: ಚಲಿಸು; ಅರಿ: ವೈರಿ; ಐತಂದು: ಬಂದು ಸೇರು; ಔಕು: ನೂಕು; ದುರ್ಗ: ಕೋಟೆ; ಬಲಿ: ಗಟ್ಟಿ, ದೃಢ; ನಿಲು: ನಿಲ್ಲು; ಪರಮ: ಶ್ರೇಷ್ಠ; ಮಂತ್ರ: ವಿಚಾರ; ಅವನಿಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಸುಕೃತವನು+ ವಿ
ಸ್ತರಿಸುವೆನು +ಪೂರಾಯವೆನೆ +ಕಾ
ಹುರದ +ನುಡಿ +ಬೇಡ್+ಏಳು +ನಡೆವುದು +ಹಸ್ತಿನಾಪುರಿಗೆ
ಅರಿಗಳ್+ಐತಂದ್+ಔಕಿದಡೆ +ಗಜ
ಪುರದ +ದುರ್ಗವ +ಬಲಿದು +ನಿಲುವುದು
ಪರಮ+ಮಂತ್ರವಿದೆಂದನ್+ಅಶ್ವತ್ಥಾಮನ್+ಅವನಿಪನ

ಅಚ್ಚರಿ:
(೧) ೬ನೇ ಸಾಲು ಒಂದೇ ಪದವಾಗಿ ರಚಿತವಾಗಿರುವುದು – ಪರಮಮಂತ್ರವಿದೆಂದನಶ್ವತ್ಥಾಮನವನಿಪನ
(೨) ಅರಸ, ಅವನಿಪ – ಪದ್ಯದ ಮೊದಲ ಹಾಗು ಕೊನೆಯ ಪದ

ಪದ್ಯ ೩: ಸಂಜಯನು ಕೌರವನ ಯುದ್ಧವನ್ನು ಹೇಗೆ ವರ್ಣಿಸಿದನು?

ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರ ತ್ರಿಗರ್ತರನು ಸೌಬಲ ಸುಶರ್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ (ಗದಾ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ನಿಮಗೆ ಇದು ತಿಳಿಯದೇ? ಪಾಂಡವರು ಕೌರವರನನ್ನು ಹುಡುಕುತ್ತಾ ಹೋಗಿ ಶಕುನಿಯ ಸೇನೆಯನ್ನು ಮುತ್ತಿದರು. ಸುಶರ್ಮ ಶಕುನಿಗಳನ್ನು ಕೊಂದರು. ಹೀಗೆ ಸೋತ ಮೇಲೆ ದೊರೆಯು ನೂರಾನೆಗಳೊಡನೆ ಪಾಂಡವರ ಸೇನೆಯನ್ನು ಸಂಹರಿಸುತ್ತಾ ನುಗ್ಗಿದನು.

ಅರ್ಥ:
ಅರಿ: ತಿಳಿ; ಅರಸು: ಹುಡುಕು; ದಳ: ಸೈನ್ಯ; ಮುತ್ತು: ಆವರಿಸು; ಇರಿ: ಚುಚ್ಚು; ಮುರಿ: ಸೀಳು; ಬವರ: ಕಾಳಗ, ಯುದ್ಧ; ಬಲಿ: ಗಟ್ಟಿಯಾಗು; ಗಜ: ಆನೆ; ನೂರು: ಶತ; ಹೊಕ್ಕು: ಸೇರು; ಅಹಿತ: ವೈರಿ; ಜರಿ: ಬಯ್ಯು; ಝಾಡಿಸು: ಒದರು; ಬೀದಿ: ವಿಸ್ತಾರ, ವ್ಯಾಪ್ತಿ; ರಾಯ: ರಾಜ; ದಳ: ಸೈನ್ಯ;

ಪದವಿಂಗಡಣೆ:
ಅರಿದುದಿಲ್ಲಾ +ಕೌರವೇಂದ್ರನನ್
ಅರಸಿ +ಶಕುನಿಯ+ ದಳವ +ಮುತ್ತಿದರ್
ಇರಿದರ್+ಅವರ +ತ್ರಿಗರ್ತರನು +ಸೌಬಲ +ಸುಶರ್ಮಕರ
ಮುರಿದ+ ಬವರವ +ಬಲಿದು +ಗಜ+ ನೂ
ರರಲಿ+ ಹೊಕ್ಕನು +ರಾಯನ್+ಅಹಿತರ
ಜರಿದು+ ಝಾಡಿಸಿ +ಬೀದಿವರಿದನು +ರಾಯದಳದೊಳಗೆ

ಅಚ್ಚರಿ:
(೧) ಕೌರವನ ಯುದ್ಧದ ವರ್ಣನೆ – ಮುರಿದ ಬವರವ ಬಲಿದು ಗಜ ನೂರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು
(೨) ಅರಿ, ಇರಿ, ಮುರಿ, ಜರಿ – ಪ್ರಾಸ ಪದಗಳು