ಪದ್ಯ ೩೧: ಬಲರಾಮನು ಭೀಮನ ಬಳಿ ಹೇಗೆ ಹೋದನು?

ಆದರಿನೀ ಕೌರವನ ತೊಡೆಗಳ
ಸದೆದನನ್ಯಾಯದಲಿ ನಿನ್ನವ
ನಿದಕೆ ಸೈರಿಸಬಹುದೆ ಹೇಳೈ ಧರ್ಮನಿರ್ಣಯವ
ಮದಮುಖನ ಭುಜಬಲವ ನೋಡುವ
ವಿದು ವಿಕಾರವಲಾ ಎನುತ ಮುರು
ಚಿದನು ಬಲ ಬಲಗಯ್ಯನುರವಣಿಸಿದನು ಖಾತಿಯಲಿ (ಗದಾ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ಬಲರಾಮನು ಕೃಷ್ಣನಿಗೆ ಉತ್ತರಿಸುತ್ತಾ, ಈ ಭೀಮನು ಅನ್ಯಾಯದಿಂದ ಕೌರವನ ತೊಡೆಗಳನ್ನು ಕತ್ತರಿಸಿದ್ದಾನೆ. ಈ ಅಧರ್ಮವನ್ನು ನಾನು ಹೇಗೆ ಸಹಿಸಲಿ? ಮದಿಸಿದ ಈ ಭೀಮನ ಭುಜಬಲವೆಷ್ಟಿದೆ ಎಂದು ನೋಡಿಕೊಳ್ಳುತ್ತೇನೆ. ಅವನ ವರ್ತನೆ ವಿಕಾರವಾದದ್ದು ಎಂದು ಬಲಗೈಯನ್ನು ಬಿಡಿಸಿಕೊಂಡು ಕೋಪದಿಂದ ಭೀಮನತ್ತ ಹೋದನು.

ಅರ್ಥ:
ತೊಡೆ: ಜಂಘೆ; ಸದೆದು: ನಾಶಮಾಡು; ಅನ್ಯಾಯ: ಸರಿಯಲ್ಲದ ರೀತಿ; ಸೈರಿಸು: ತಾಳು; ನಿರ್ಣಯ: ನಿರ್ಧಾರ; ಧರ್ಮ: ಧಾರಣೆ ಮಾಡಿದುದು; ಮದಮುಖ: ಅಹಂಕಾರಿ; ಭುಜಬಲ: ಶಕ್ತಿ, ಪರಾಕ್ರಮ; ನೋಡು: ವೀಕ್ಷಿಸು; ವಿಕಾರ: ರೂಪಾಂತರ; ಮುರುಚು: ಬಿಡಿಸಿಕೊಳ್ಳು; ಬಲ: ಬಲರಾಮ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಖಾತಿ: ಕೋಪ;

ಪದವಿಂಗಡಣೆ:
ಆದರಿನೀ +ಕೌರವನ +ತೊಡೆಗಳ
ಸದೆದನ್+ ಅನ್ಯಾಯದಲಿ +ನಿನ್ನವನ್
ಇದಕೆ +ಸೈರಿಸಬಹುದೆ +ಹೇಳೈ +ಧರ್ಮ+ನಿರ್ಣಯವ
ಮದಮುಖನ+ ಭುಜಬಲವ +ನೋಡುವವ್
ಇದು +ವಿಕಾರವಲಾ +ಎನುತ +ಮುರು
ಚಿದನು +ಬಲ +ಬಲಗಯ್ಯನ್+ಉರವಣಿಸಿದನು +ಖಾತಿಯಲಿ

ಅಚ್ಚರಿ:
(೧) ಭೀಮನನ್ನು ಮದಮುಖ (ಅಹಂಕಾರಿ) ಎಂದು ಕರೆದಿರುವುದು
(೨) ಬಲ ಪದದ ಬಳಕೆ – ಮುರುಚಿದನು ಬಲ ಬಲಗಯ್ಯನುರವಣಿಸಿದನು

ಪದ್ಯ ೨೭: ಯಾವ ದಳದ ಮಲ್ಲರು ರಾಜನೆದುರು ಬಂದರು?

ತುಳುವ ತುಂಬುರ ನಾಗನಾದಳ
ವಳಿಗ ಮುಖ್ಯರು ಬಂದು ಸಭೆಯಲಿ
ನಲಿದು ಮಿಗೆ ಗರ್ಜಿಸಿತು ರಾಯನ ಮುಂದೆ ಕೆಲಕೆಲರು
ಛಲದೊಳಗೆ ಬಲದೊಳಗೆ ಮಲ್ಲರ
ಬಳಗ ಗಂಡನು ತಾನು ಹೇಳೆಂ
ಬುಲುಹುಗಳ ಸಂತೈಸಿ ನಗುತ ವಿರಾಟನಿಂತೆಂದ (ವಿರಾಟ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ವಿರಾಟ ರಾಜನೆದುರು ತುಳುವ, ತುಂಬುರ, ನಾಗ ದಳಗಳು ಬಂದು ವಂದಿಸಿದರು. ಕೆಅಲ್ವರು ಛಲಬಲಗಳಲ್ಲಿ ನಾನು ಮಲ್ಲರ ಬಳಗಕ್ಕೆ ಗಂಡನೆಂದು ಆರ್ಭಟಿಸಿದರು. ಅವರನ್ನು ಸುಮ್ಮನೆ ಇರುವಂತೆ ಮಾಡಿ ವಿರಾಟನು ಹೇಳಿದನು.

ಅರ್ಥ:
ದಳ: ಸೈನ್ಯ, ಗುಂಪು; ಮುಖ್ಯ: ಪ್ರಮುಖ; ಬಂದು: ಆಗಮಿಸು; ಸಭೆ: ದರ್ಬಾರು; ನಲಿ: ಸಂತಸ; ಮಿಗೆ: ಮತ್ತು ಗರ್ಜಿಸು: ಜೋರಾಗಿ ಕೂಗು; ರಾಯ: ರಾಜ; ಮುಂದೆ: ಎದುರು; ಕೆಲರು: ಸ್ವಲ್ಪಜನ; ಛಲ: ದೃಢ ನಿಶ್ಚಯ; ಬಲ: ಶಕ್ತಿ; ಮಲ್ಲ: ಜಟ್ಟಿ; ಬಳಗ: ಗುಂಪು; ಗಂಡ: ಶೂರ, ವೀರ; ಉಲುಹು: ಶಬ್ದ; ಸಂತೈಸು: ಸಮಾಧಾನ ಪಡಿಸು; ನಗು: ಸಂತಸ;

ಪದವಿಂಗಡಣೆ:
ತುಳುವ +ತುಂಬುರ +ನಾಗನಾ+ದಳ
ವಳಿಗ +ಮುಖ್ಯರು +ಬಂದು +ಸಭೆಯಲಿ
ನಲಿದು +ಮಿಗೆ +ಗರ್ಜಿಸಿತು +ರಾಯನ +ಮುಂದೆ +ಕೆಲಕೆಲರು
ಛಲದೊಳಗೆ +ಬಲದೊಳಗೆ +ಮಲ್ಲರ
ಬಳಗ +ಗಂಡನು +ತಾನು +ಹೇಳೆಂಬ್
ಉಲುಹುಗಳ +ಸಂತೈಸಿ +ನಗುತ +ವಿರಾಟನ್+ಇಂತೆಂದ

ಅಚ್ಚರಿ:
(೧) ತುಳುವ, ತುಂಬುರ, ನಾಗ – ದಳಗಳ ಹೆಸರು

ಪದ್ಯ ೧೯: ಯಾರ ಒಟ್ಟುಗೂಡಿದರೆ ಕರ್ಣನನ್ನು ಸೋಲಿಸಲು ಸಾಧ್ಯ?

ಬಲನ ಜಂಭದ ಕೈಟಭನ ದಶ
ಗಳನ ನಮುಚಿಯ ಕಾಲನೇಮಿಯ
ಬಲ ನಿಶುಂಬ ಹಿರಣ್ಯಕಾದಿಯ ಖಳರ ಸಂದೋಹ
ಅಳವಿಗೊಡುವರೆ ಪಾಡಹುದು ನೀ
ನಿಲುಕಲಳವೇ ಕರ್ಣಜಯವತಿ
ಸುಲಭವೇ ನಿನ್ನಂದದವರಿಗೆ ಪಾರ್ಥ ಹೇಳೆಂದ (ಕರ್ಣ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಬಲ, ಜಂಭ, ಕೈಟಭ, ರಾವಣ, ನಮುಚಿ, ಕಾಲನೇಮಿ, ನಿಶುಂಭ, ಹಿರಣ್ಯಾಕ್ಷ, ಮೊದಲಾದ ರಾಕ್ಷಸರು ಒಟ್ಟಾಗಿ ಕರ್ಣನ ಮೇಲೆ ಬಿದ್ದರೆ ಆಗ ಸರಿ ಹೋದೀತು. ನೀನು ಅವನೊಡನೆ ನಿಂತು ಗೆಲ್ಲಬಲ್ಲೆಯಾ? ನಿನ್ನಂತಹವರಿಗೆ ಕರ್ಣನನ್ನು ಗೆಲ್ಲುವುದು ಸುಲಭವೇ ಅರ್ಜುನ ಹೇಳು ಎಂದು ಧರ್ಮಜನು ಅರ್ಜುನನನ್ನು ಹಂಗಿಸಿದ.

ಅರ್ಥ:
ದಶಗಳ: ದಶಮುಖ (ರಾವಣ); ಆದಿ: ಮುಂತಾದ; ಖಳ:ದುಷ್ಟ; ಸಂದೋಹ: ಗುಂಪು; ಆಳವಿ: ಯುದ್ಧ; ಪಾಡು:ರೀತಿ, ಬಗೆ; ನಿಲುಕು: ದೊರಕು; ಸುಲಭ: ಕಠಿಣವಲ್ಲದ, ನಿರಾಯಾಸ; ಜಯ: ಗೆಲುವು; ಹೇಳು: ತಿಳಿಸು;

ಪದವಿಂಗಡಣೆ:
ಬಲನ +ಜಂಭದ +ಕೈಟಭನ +ದಶ
ಗಳನ +ನಮುಚಿಯ +ಕಾಲನೇಮಿಯ
ಬಲ ನಿಶುಂಬ +ಹಿರಣ್ಯಕಾದಿಯ +ಖಳರ+ ಸಂದೋಹ
ಅಳವಿಗೊಡುವರೆ+ ಪಾಡಹುದು +ನೀ
ನಿಲುಕಲ್+ಅಳವೇ +ಕರ್ಣ+ಜಯವ್+ಅತಿ
ಸುಲಭವೇ +ನಿನ್ನಂದದವರಿಗೆ+ ಪಾರ್ಥ +ಹೇಳೆಂದ

ಅಚ್ಚರಿ:
(೧) ೮ ರಾಕ್ಷಸರ ಹೆಸರುಗಳನ್ನು ಹೇಳಿರುವ ಪದ್ಯ – ಬಲ, ಜಂಭ, ಕೈಟಭ ದಶಗಳ, ನಮುಚಿ, ಕಾಲನೇಮಿ, ನಿಶುಂಬ, ಹಿರಣ್ಯ
(೨) ಅರ್ಜುನನನ್ನು ಹಂಗಿಸುವ ಪರಿ – ನೀನಿಲುಕಲಳವೇ ಕರ್ಣಜಯವತಿ ಸುಲಭವೇ ನಿನ್ನಂದದವರಿಗೆ ಪಾರ್ಥ

ಪದ್ಯ ೩: ರಾಜರಿಗಿರಬೇಕಾದ ಸಪ್ತಾಂಗಗಳಾವುವು?

ಕೋಶ ಬಲ ತಳತಂತ್ರ ಹೆಚ್ಚಿದ
ದೇಶ ದುರ್ಗವಮಾತ್ಯ ಮಿತ್ರಮ
ಹೀಶಜನವೆಂಬಿದುವೆ ಕೇಳ್ ಸಪ್ತಾಂಗ ಸನ್ನಾಹ
ಈಸು ನಿನಗುಂಟಿಲ್ಲ ಮಿತ್ರಮ
ಹೀಶರೆಂಬುದು ಕೊರತೆ ಪಾಂಡವ
ರಾ ಸಹಾಯವು ಬರಲು ಬಳಿಕಿದಿರಿಲ್ಲ ನಿನಗೆಂದ (ಉದ್ಯೋಗ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಭಂಡಾರ, ಬಲ, ಸೈನ್ಯ, ದೇಶ, ಕೋಟೆ, ಮಂತ್ರಿ, ಮಿತ್ರರಾಜರು, ಈ ಏಳು ಅಂಗಗಳು ರಾಜರಿಗಿರಬೇಕಾದವು. ದುರ್ಯೋಧನ ಇದರಲ್ಲಿ ನಿನಗೆ ಎಲ್ಲವೂ ಇದೆ ಮಿತ್ರರಾಜರನ್ನು ಬಿಟ್ಟು. ಪಾಂಡವರನ್ನು ನೀನು ಮಿತ್ರರಾಗಿಸಿ, ಅವರು ನಿನಗೆ ಮಿತ್ರರಾಜರಾಗಿ ಸಹಾಯ ಮಾಡಿದರೆ ನಿನ್ನೆದುರು ನಿಲ್ಲುವವರಾರಿರುವುದಿಲ್ಲ.

ಅರ್ಥ:
ಕೋಶ:ಬೊಕ್ಕಸ; ಬಲ: ಶಕ್ತಿ, ಸೈನ್ಯ; ತಳತಂತ್ರ: ಕಾಲಾಳುಗಳ, ಪಡೆ, ಸೈನ್ಯ; ಹೆಚ್ಚು: ಅಧಿಕ; ದೇಶ: ರಾಷ್ಟ್ರ; ದುರ್ಗ: ಕೋಟೆ; ಅಮಾತ್ಯ: ಮಂತ್ರಿ; ಮಿತ್ರ: ಸ್ನೇಹಿತ; ಮಹೀಶ: ರಾಜ; ಸನ್ನಾಹ: ಕವಚ, ಜೋಡು; ಈಸು: ಇವೆಲ್ಲವು; ಕೊರತೆ: ಚಿಂತೆ; ಸಹಾಯ: ನೆರವು; ಬರಲು: ಆಗಮಿಸಲು; ಬಳಿಕ: ನಂತರ; ಇದಿರು: ಎದುರು;

ಪದವಿಂಗಡಣೆ:
ಕೋಶ +ಬಲ +ತಳತಂತ್ರ +ಹೆಚ್ಚಿದ
ದೇಶ +ದುರ್ಗವ್+ಅಮಾತ್ಯ +ಮಿತ್ರ+ಮ
ಹೀಶಜನ+ವೆಂಬ್+ಇದುವೆ +ಕೇಳ್ +ಸಪ್ತಾಂಗ +ಸನ್ನಾಹ
ಈಸು +ನಿನಗುಂಟಿಲ್ಲ+ ಮಿತ್ರ+ಮ
ಹೀಶರ್+ಎಂಬುದು +ಕೊರತೆ +ಪಾಂಡವ
ರಾ +ಸಹಾಯವು +ಬರಲು+ ಬಳಿಕ್+ಇದಿರಿಲ್ಲ+ ನಿನಗೆಂದ

ಅಚ್ಚರಿ:
(೧) ಮಹೀಶ – ೩, ೫ ಸಾಲಿನ ಮೊದಲ ಪದ
(೨) ರಾಜರ ಸಪ್ತಾಂಗಗಳ ವರ್ಣನೆ – ಕೋಶ, ಬಲ, ತಳತಂತ್ರ, ದೇಶ, ದುರ್ಗ, ಅಮಾತ್ಯ, ಮಿತ್ರರಾಜ

ಪದ್ಯ ೧೧೩: ಶಿವನೊಲಿದರೆ ಯಾವ ಗುಣವುಳ್ಳ ಮಕ್ಕಳನ್ನು ಪಡೆಯಬಹುದು?

ಗುರುಸುತನವೋಲಾಯು ನೀಲಾಂ
ಬರನವೊಲು ಬಲ ದಶರಥನ ವೋಲ್
ಸಿರಿ ನದೀಜನವೋಲು ಶೌರ್ಯವು ರಘುಪತಿಯ ವೋಲು
ಅರಿ ವಿನಾಶನ ನಹುಷನವೊಲೈ
ಶ್ವರಿಯ ಮಾರುತಿಯವೊಲುಗತಿ
ವರಿಸುವುದು ಶಿವನೊಲಿದವರುಗಳಿಗಲ್ಲದಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೧೧೩ ಪದ್ಯ)

ತಾತ್ಪರ್ಯ:
ಶಿವನನ್ನು ಒಲಿಸಿದರೆ ಅವನ ಆಶೀರ್ವಾದದಿಂದ ಯಾವ ಗುಣಗಳನ್ನು ಪಡೆಯಬಹುದೆಂದು ಇಲ್ಲಿ ವಿವರಿಸಲಾಗಿದೆ. ಅಶ್ವತ್ಥಾಮನ ಹಾಗೆ ಆಯುಷ್ಯವು, ಬಲರಾಮನಂತೆ ಬಲವು, ದಶರಥನಿಗಿದ್ದಂತೆ ಸಿರಿಯು, ಭೀಷ್ಮನಿಗಿರುವಷ್ಟು ಶೌರ್ಯ, ಶ್ರೀರಾಮನಿಗಿದ್ದಂತಹ ಶತ್ರು ಜಯ, ನಹುಷನಿಗಿದ್ದ ಐಶ್ವರ್ಯ, ಹನುಮಂತನಿಗಿದ್ದ ಗಮನ ಸಾಮರ್ಥ್ಯ ಇವೆಲ್ಲ ಗುಣಗಳು ಶಿವನ ಆಶೀರ್ವಾದದಿಂದ ಮಾತ್ರ ಪಡೆಯಬಹುದು, ಉಳಿದವರಿಗೆ ಇದು ಸಿಗುವುದಿಲ್ಲವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಗುರು: ಆಚಾರ್ಯ; ಸುತ: ಪುತ್ರ; ವೊಲ್: ರೀತಿ; ಆಯು: ಆಯಸ್ಸು; ಅಂಬರ: ಬಟ್ಟೆ; ಬಲ: ಶಕ್ತಿ; ಸಿರಿ: ಐಶ್ವರ್ಯ; ನದೀಜ: ಭೀಷ್ಮ; ಶೌರ್ಯ: ಬಲ; ರಘುಪತಿ: ರಾಮ; ಅರಿ: ತಿಳುವಳಿಕೆ, ವೈರಿ; ವಿನಾಶ: ಕೊಲ್ಲು; ಐಶ್ವರ್ಯ: ಸಿರಿ; ಗತಿ: ಗಮನ, ಸಂಚಾರ, ಚಲನೆ; ವರಿಸು: ಬರುವಂತೆ ಮಾಡು;ಒಲಿ: ಅಪೇಕ್ಷಿಸು;

ಪದವಿಂಗಡಣೆ:
ಗುರುಸುತನವೋಲ್+ಆಯು ನೀಲಾಂ
ಬರನವೊಲು +ಬಲ +ದಶರಥನ+ ವೋಲ್
ಸಿರಿ +ನದೀಜನ+ವೋಲು +ಶೌರ್ಯವು +ರಘುಪತಿಯ +ವೋಲು
ಅರಿ +ವಿನಾಶನ +ನಹುಷನ+ ವೊಲ್+
ಐಶ್ವರಿಯ +ಮಾರುತಿಯ+ವೊಲು+ಗತಿ
ವರಿಸುವುದು +ಶಿವನ್+ಒಲಿದವರುಗಳಿಗ್+ಅಲ್ಲದಿಲ್ಲೆಂದ

ಅಚ್ಚರಿ:
(೧) ಆಯು, ಬಲ, ಐಶ್ವರ್ಯ, ಶೌರ್ಯ, ಗತಿ, ಶತ್ರುನಾಶ, ಸಿರಿ – ಈ ಗುಣಗಳು ತಪಸ್ಸು ಮಾಡಿ ಪಡೆಯಬೇಕೆಂದು ಹೇಳುವ ಪದ್ಯ
(೨) ಅಶ್ವತ್ಥಾಮನನ್ನು ಗುರುಸುತ, ಭೀಷ್ಮರನ್ನು ನದೀಜ, ರಾಮನನ್ನು ರಘುಪತಿ, ಬಲರಾಮನನ್ನು ನೀಲಾಂಬರ ಎಂದು ಕರೆದಿರುವುದು

ಪದ್ಯ ೭೦: ಯಾವ ರಾಜನ ಐಶ್ವರ್ಯವು ಗಾಳಿಗೊಡ್ಡಿದ ದೀಪದಂತಿರುತ್ತದೆ?

ಬಲು ಪ್ರಧಾನರ ವೈರ ಹಿತವಹ
ಲಲನೆಯರ ಮನದಳಲು ಹಗೆಯಲಿ
ಬಳಸುವಂತಸ್ಥತೆಯನಾಮಿಕರೊಡನೆ ಕೆಳೆ ಗೋಷ್ಠಿ
ಬಲದೊಡನೆ ನಿರ್ಬಂಧ ಧರ್ಮದ
ನೆಲೆಯನರಿಯದ ದಾನಿಗಳ ಸಿರಿ
ಸುಳಿವ ಗಾಳಿಗೆ ಮಲೆವ ದೀಪವು ಕೇಳು ಧೃತರಾಷ್ಟ್ರ (ಉದ್ಯೋಗ ಪರ್ವ, ೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ರಾಜನ ಐಶ್ವರ್ಯವು ಹೇಗೆ ಕ್ಷೀಣಿಸುತ್ತದೆ ಎಂದು ವಿದುರ ಇಲ್ಲಿ ತಿಳಿಸುತ್ತಾರೆ. ಪ್ರಧಾನರ ವೈರವನ್ನು ಬೆಳೆಸಿಕೊಂಡವನು, ಹಿತವರಾದ ಸ್ತ್ರೀಯರು ಸಂತಾಪಕ್ಕೊಳಗಾಗುವಂತೆ ನಡೆಯುವವನು, ಶತ್ರುಗಳೊಡನೆ ಆಪ್ತತೆಯನ್ನು ಬೆಳೆಸುವವನು, ತಿಳಿಯದವರೊಡನೆ ಸ್ನೇಹ ಮಾದುವವನು, ಸೈನ್ಯದೊಂದಿಗೆ ನಿರ್ಬಂಧವನ್ನು ಬೆಳೆಸುವವನು, ಧರ್ಮವನ್ನರಿಯದೆ ದಾನಮಾದುವವನು, ಇಂತಹ ರಾಜನ ಐಶ್ವರ್ಯವು ಗಾಳಿಗೊಡಿದ ದೀಪದಂತೆ ಆರಿ ಹೋಗುತ್ತದೆ.

ಅರ್ಥ:
ಬಲು: ಬಹಳ; ಪ್ರಧಾನ: ಮುಖ್ಯ; ವೈರ: ಹಗೆ; ಹಿತ: ಒಳಿತು; ಲಲನೆ: ಸ್ತ್ರೀ; ಮನ: ಮನಸ್ಸು; ಅಳಲು: ದುಃಖ, ಅಳು; ಬಳಸು: ಸುತ್ತುವರಿ; ಅನಾಮಿಕ: ಅಪ್ರಸಿದ್ಧ; ಕೆಳೆ: ಸ್ನೇಹ, ಗೆಳೆತನ; ಗೋಷ್ಠಿ: ಗುಂಪು, ಕೂಟ; ಬಲ: ಶಕ್ತಿ; ನಿರ್ಬಂಧ: ತಡೆ; ಧರ್ಮ: ಧಾರಣೆ ಡಿದುದು, ನಿಯಮ, ಆಚಾರ ; ನೆಲೆ: ಆಶ್ರಯ, ಆಧಾರ; ಅರಿ: ತಿಳಿ; ದಾನಿ: ಕೊಡುವವ; ಸಿರಿ: ಐಶ್ವರ್ಯ; ಸುಳಿ: ನುಸುಳು, ಬೀಸು; ಗಾಳಿ: ವಾಯು; ಮಲೆ: ಎದುರಿಸು; ದೀಪ: ಹಣತೆ;

ಪದವಿಂಗಡಣೆ:
ಬಲು +ಪ್ರಧಾನರ+ ವೈರ+ ಹಿತವಹ
ಲಲನೆಯರ +ಮನದಳಲು+ ಹಗೆಯಲಿ
ಬಳಸುವಂತಸ್ಥತೆಯ+ಅನಾಮಿಕರೊಡನೆ+ ಕೆಳೆ+ ಗೋಷ್ಠಿ
ಬಲದೊಡನೆ+ ನಿರ್ಬಂಧ+ ಧರ್ಮದ
ನೆಲೆಯನರಿಯದ +ದಾನಿಗಳ+ ಸಿರಿ
ಸುಳಿವ+ ಗಾಳಿಗೆ+ ಮಲೆವ+ ದೀಪವು+ ಕೇಳು+ ಧೃತರಾಷ್ಟ್ರ

ಅಚ್ಚರಿ:
(೧) ಪ್ರಧಾನ, ಲಲನೆ, ಅನಾಮಿಕ, ಬಲ, ದಾನಿ, ಹಗೆ – ಈ ಆರರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು ಎಂದು ವಿದುರ ನೀತಿ ತಿಳಿಸುತ್ತದೆ.

ಪದ್ಯ ೩೩: ಯಾವದಕ್ಕೆ ಸರಿಸಾಟಿಯಾದ ಉದಾಹರಣೆ ಸಿಗುವುದಿಲ್ಲ?

ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ (ಉದ್ಯೋಗ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಾವು ಆರ್ಜಿಸಿದ ವಿದ್ಯೆಗೆ ಸಮವೆನಿಸುವ ಬಂಧು, ರೋಗಕ್ಕೆ ಸಮನಾದ ಶತ್ರು, ಮಕ್ಕಳಿಗೆ ಸಮನಾದ ಸಂತೋಷವನ್ನು ಕೊಡುವಂಥವರು, ಸೂರ್ಯನಿಗೆ ಸಮನಾದ ತೇಜಸ್ಸು, ಇಂದ್ರನಿಗೆ ಸಮನಾದ ಭೋಗ, ಶಿವನಿಗೆ ಸಮನಾದ ಬಲವಂಥನನ್ನು ನಾನು ಕಾಣೆ ಎಂದು ವಿದುರ ಹೇಳಿದ.

ಅರ್ಥ:
ನಿವಡ: ಆಯ್ಕೆ, ಆರಿಸುವಿಕೆ; ವಿದ್ಯ: ಜ್ಞಾನ; ಸಮ: ಸರಿಸಾಟಿ; ಬಂಧು: ಸಂಬಂಧಿಕರು; ರೋಗ: ಬೇನೆ, ಕಾಯಿಲೆ; ಆವಳಿ: ಸಾಲು, ಗುಂಪು; ಶತ್ರು: ವೈರಿ; ಸಂತಾನ: ಮಕ್ಕಳು; ಸಂತೋಷ: ಹರ್ಷ; ಉದಯ: ಹುಟ್ಟು; ರವಿ: ಸೂರ್ಯ; ತೇಜ: ಕಾಂತಿ, ತೇಜಸ್ಸು; ವಾಸವ:ಇಂದ್ರ; ಭೋಗ:ಸುಖವನ್ನು ಅನುಭವಿಸುವುದು; ಬಲ: ಶಕ್ತಿ; ಅಧಿಕ: ಹೆಚ್ಚು; ಕಾಣೆ: ಸಿಗದು;

ಪದವಿಂಗಡಣೆ:
ನಿವಡಿಸಿದ +ವಿದ್ಯಕ್ಕೆ +ಸಮ +ಬಂ
ಧುವನು +ರೋಗಾವಳಿಗೆ +ಸಮಶ
ತ್ರುವನು +ಸಂತಾನಕ್ಕೆ +ಸಮ +ಸಂತೋಷದ್+ಉದಯವನು
ರವಿಗೆ+ ಸಮವಹ+ ತೇಜವನು +ವಾ
ಸವನ +ಸಮ+ಭೋಗವನು +ಬಲದಲಿ
ಶಿವನ +ಬಲದಿಂದ್+ಅಧಿಕ +ಬಲವನು +ಕಾಣೆ +ನಾನೆಂದ

ಅಚ್ಚರಿ:
(೧) ವಿದ್ಯೆ, ರೋಗ, ಸಂತಾನ, ತೇಜಸ್ಸು, ಭೋಗ, ಬಲ – ಇವುಗಳ ಮಹತ್ವವನ್ನು ತಿಳಿಸುವ ಪದ್ಯ
(೨) ಬಲದಲಿ ಶಿವನ ಬಲದಿಂದಧಿಕ ಬಲ – ಬಲ ಪದದ ಪ್ರಯೋಗ

ಪದ್ಯ ೩೩: ಕೃಷ್ಣನು ಇಬ್ಬರ ಮಾತನ್ನು ಕೇಳಿ ಏನು ಹೇಳಿದನು?

ಆದೊಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮನಾ ರಾಯನ ಮಹಾಸೇನೆ
ಕಾದುವವರಿವರೊಂದು ದೆಸೆಯೆರ
ಡಾದುದಿವರೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ (ಉದ್ಯೋಗ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾರ್ಥನ ಮಾತನ್ನು ಕೇಳಿ, ಹಾಗಾದರೆ ನಾನೊಬ್ಬನೆ ಒಂದು ಕಡೆ, ನಾನು ಯುದ್ಧ ಮಾಡುವುದಿಲ್ಲ, ಬಲರಾಮನೊಡನೆ ಸಮಸ್ತ ಯಾದವ ಸೈನ್ಯ, ಕೃತವರ್ಮನ ಸೈನ್ಯ ಇವೆರಡು ಒಂದು ಕಡೆ, ಇವರು ಯುದ್ಧ ಮಾಡುವವರು. ಇವೆರಡರಲ್ಲಿ ಯಾವುದು ನಿನಗಿಷ್ಟವೋ ಅದನ್ನು ತೆಗೆದುಕೊ ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ಆದೊಡೆ: ಹಾಗಾದರೆ; ಕಡೆ: ಪಕ್ಷ; ಕಾದು: ಜಗಳ; ಬಲ: ಸೈನ್ಯ, ಬಲರಾಮ; ರಾಯ: ರಾಜ; ಮಹಾ: ಶ್ರೇಷ್ಠ; ಸೇನೆ: ಸೈನ್ಯ; ದೆಸೆ: ದಿಕ್ಕು; ಮೆಚ್ಚು: ಇಷ್ಟಪಡು; ಆದರಿಸು: ವರಿಸು: ಆರಿಸು;
ಆದರಿಸು: ಗೌರವಿಸು; ಆವು:ನಾವು

ಪದವಿಂಗಡಣೆ:
ಆದೊಡ್+ಆವಿಹೆವ್+ಒಂದು +ಕಡೆಯಲಿ
ಕಾದುವವರ್+ಆವಲ್ಲ+ ಬಲನೊಳು
ಯಾದವರು+ ಕೃತವರ್ಮನಾ +ರಾಯನ +ಮಹಾಸೇನೆ
ಕಾದುವವರ್+ಇವರೊಂದು ದೆಸೆ+ಯೆರಡ್
ಆದುದ್+ಇವರೊಳು +ಮೆಚ್ಚಿದುದ +ನೀನ್
ಆದರಿಸಿ +ವರಿಸೆಂದು +ಪಾರ್ಥಂಗ್+ಅಸುರರಿಪು+ ನುಡಿದ

ಪದ್ಯ ೮: ಸಾತ್ಯಕಿಯ ಪ್ರಕಾರ ಯಾವ ರೀತಿಯಿಂದ ರಾಜ್ಯವನ್ನು ಪಡೆಯಬೇಕು?

ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀ ಕುಮಾರಕನೆ
ನೆಲನ ನಲಗಿನ ಮೊನೆಯೊಳಲ್ಲದೆ
ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು (ಉದ್ಯೋಗ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತನ್ನ ಮಾತನ್ನು ಮುಂದುವರೆಸುತ್ತಾ, ಬಲರಾಮನ ಮಾತುಗಳು ಕೌರವರ ಭಾಗ್ಯಕ್ಕೆ ಮೂಲ ಆಧಾರವೇನೂ ಅಲ್ಲವಲ್ಲ. ಆದರಿಂದೇನು ಆಗುತ್ತದೆ? ಕೌರವರ ನೂರು ತಲೆಗಳನ್ನು ಕಡಿದುಕೊಂಡು ಬಾ ಎಂದು ನನಗೆ ವೀಳೆ ಕೊಡಿ, ಭೂಮಿಯನ್ನು ಶಸ್ತ್ರಧಾರೆಯಿಂದ ಪಡೆಯಬೇಕೆ ಹೊರತು ಸಂಧಾನ, ವಿನಯದ ಮಾತುಗಳಿಗೆ ಒಪ್ಪಿ ಕ್ಷತ್ರಿಯಉ ರಾಜ್ಯವನ್ನು ಕೊಡುವುದಿಲ್ಲ” ಎಂದು ಹೇಳಿದನು.

ಅರ್ಥ:
ಬಲ: ಶೌರ್ಯ; ಮಾತು: ವಾಣಿ; ಭಾಗ್ಯ: ಮಂಗಳ, ಶುಭ; ನೆಲೆ: ಬೀಡು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಶತ: ನೂರು; ತಲೆ: ಶಿರ; ವೀಳೆ:ತಾಂಬೂಲ; ಕುಮಾರ: ಮಗ; ನೆಲ: ಭೂಮಿ; ನಲುಗು: ಬಾಡು, ಮುದುಡು; ಮೊನೆ:ತುದಿ, ಕೊನೆ; ಮೆಲು: ಮೃದು; ನುಡಿ: ಮಾತು; ಸಾಮ: ಶಾಂತಗೊಳಿಸುವಿಕೆ; ಅಳುಕು: ಹೆದರಿಕೆ; ಕೊಡು: ನೀಡು; ಧರೆ: ಭೂಮಿ; ಅಧಿಕ: ಹೆಚ್ಚು; ಆತ್ಮಜ: ಮಗ;

ಪದವಿಂಗಡಣೆ:
ಬಲನ +ಮಾತೇನ್+ಇವರ +ಭಾಗ್ಯದ
ನೆಲೆಯೆ +ಫಡ +ಕೌರವರ+ ಶತಕದ
ತಲೆಗೆ +ತಾ +ವೀಳೆಯವನೆಲೆ+ ಕುಂತೀ +ಕುಮಾರಕನೆ
ನೆಲನ +ನಲಗಿನ +ಮೊನೆಯೊಳ್+ಅಲ್ಲದೆ
ಮೆಲುನುಡಿಯ +ಸಾಮದೊಳು +ನಿಮಗಿನ್
ಅಳುಕಿ+ ಕೊಡುವರೆ+ ಧರೆಯೊಳ್+ಅಧಿಕ+ ಕ್ಷತ್ರಿಯಾತ್ಮಜರು

ಅಚ್ಚರಿ:
(೧) ‘ನ’ ಕಾರದ ಜೋಡಿ ಪದ – ನೆಲನ ನಲಗಿನ
(೨) ಕ್ಷತ್ರಿಯರು ಯಾವುದಕ್ಕೆ ಮಣಿಯುವುದಿಲ್ಲ – ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ

ಪದ್ಯ ೩೮: ಸೈನ್ಯದ ನಡೆ ಯಾವ ರಭಸದಲ್ಲಿತ್ತು?

ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ
ಕಡಲು ಮೊಗೆದುದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ (ವಿರಾಟ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ದುರ್ಯೋಧನನ ಸೈನ್ಯವು ಮುನ್ನುಗ್ಗಲು, ಭೂಮಿಯು ಕುಗ್ಗಿತು, ಹಾವಿನ (ಆಸಿಶೇಷನ) ಹೆಡೆಗಳು ಬಾಗಿದವು, ದಿಗ್ಗಜಗಳು ತಲೆತಗ್ಗಿಸಿದವು, ಕಡಲಿನ ಅಡಿಯಲ್ಲಿದ್ದ ರತುನಗಳು ಹೊರಬಂದವು, ಸಮುದ್ರವು ಬತ್ತಿತು, ಭೂಮಿ ಒಡೆಯಿತು, ಕಾಲುಧೂಳು ಸೂರ್ಯಮಂಡಲವನ್ನು ಮುಸುಕಿತು.

ಅರ್ಥ:
ಪೊಡವಿ: ಭೂಮಿ; ಜಡಿ: ಕುಗ್ಗು; ಫಣಿ: ಹಾವು; ಹೆಡೆ: ಪೆಡೆ, ಹಾವಿನ ಬಿಚ್ಚಿದ ತಲೆ, ಫಣಿ; ಮಡಿ: ತಗ್ಗಿಸು ಸಾವು; ಆಶಾದಂತಿ: ದಿಗ್ಗಜ; ತಲೆಗೊಡು: ಸಿದ್ಧನಾಗು; ಬಲ: ಶಕ್ತಿ; ಮೊಳಗು: ಹೊರಹೊಮ್ಮು; ಲಗ್ಗೆ:ಮುತ್ತಿಗೆ, ಆಕ್ರಮಣ; ಕಡಲು: ಸಮುದ್ರ; ಮೊಗೆ: ಹೊರಹಾಕು, ಹೊರಹೊಮ್ಮಿಸು; ರತುನ: ರತ್ನ, ಮಣಿ; ನೆಲ: ಭೂಮಿ; ಅಗ್ಗ:ಕಡಿಮೆ ಬೆಲೆ, ಶ್ರೇಷ್ಠ; ಸೇನೆ: ಸೈನ್ಯ; ವಹಿಲ: ಭೂಮಿ; ನಡೆ: ಮುನ್ನುಗ್ಗು; ಧೂಳು: ಮಣ್ಣಿನ ಪುಡಿ; ಮುಸುಕು: ಆವರಿಸು; ರವಿ: ಭಾನು; ಮಂಡಲ: ವರ್ತುಲಾಕಾರ;

ಪದವಿಂಗಡಣೆ:
ಪೊಡವಿ +ಜಡಿದುದು +ಫಣಿಯ +ಹೆಡೆಗಳು
ಮಡಿದವ್+ಆಶಾದಂತಿಗಳು +ತಲೆ
ಗೊಡಹಿದವು +ಬಲದೊಳಗೆ +ಮೊಳಗುವ +ಲಗ್ಗೆವರೆಗಳಲಿ
ಕಡಲು +ಮೊಗೆದುದು +ರತುನವನು +ನೆಲ
ನೊಡೆಯಲ್+ಅಗ್ಗದ +ಸೇನೆ +ವಹಿಲದಿ
ನಡೆದು +ಬರಲಾ +ಧೂಳಿ +ಮುಸುಕಿತು +ರವಿಯ +ಮಂಡಲವ

ಅಚ್ಚರಿ:
(೧) ಸಮುದ್ರದ ನೀರು ಕಡಿಮೆಯಾಯಿತು (ಉಕ್ಕಿತು) ಎಂದು ಹೇಳಲು – ಕಡಲು ಮೊಗೆದುದು ರತುನವನು