ಪದ್ಯ ೪೨: ಅಭಿಮನ್ಯುವಿನ ಖಡ್ಗದ ಯುದ್ಧವು ಹೇಗೆ ತೋರಿತು?

ಕರುಳ ಹೂಗೊಂಚಲಿನ ಮೂಳೆಯ
ಬರಿಮುಗುಳ ನವ ಖಂಡದಿಂಡೆಯ
ಕರತಳದ ತಳಿರೆಲೆಯ ಕಡಿದೋಳುಗಳ ಕೊಂಬುಗಳ
ಬೆರಳ ಕಳಿಕೆಯ ತಲೆಯ ಫಲ ಬಂ
ಧುರದ ಘೂಕಧ್ವಾಂಕ್ಷ ನವ ಮಧು
ಕರದ ರಣವನವೆಸೆದುದೀತನ ಖಡ್ಗಚೈತ್ರದಲಿ (ದ್ರೋಣ ಪರ್ವ, ೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಖಡ್ಗ ಚೈತ್ರಮಾಸಕ್ಕೆ ಕರುಳಿನ ಹೂಗೊಂಚಲು, ಮೂಳೆಯೇ ಬಿರಿದ ಮೊಗ್ಗು, ಹೊಸ ಮಾಂಸ ಖಂಡಗಳು ಕೈಗಳ ಚಿಗುರೆಲೆಗಳು, ಕಡಿದುಬಿದ್ದ ತೋಳುಗಳೇ ಕೊಂಬುಗಳು, ಬೆರಳುಗಳೇ ದೀಪ, ತಲೆಗಳೇ ಹಣ್ಣುಗಳು, ಗೂಬೆ ಕಾಗೆಗಳೇ ಮರಿ ದುಂಬಿಗಳು.

ಅರ್ಥ:
ಕರುಳು: ಪಚನಾಂಗ; ಹೂ: ಪುಷ್ಪ; ಗೊಂಚಲು: ಗುಂಪು; ಮೂಳೆ: ಎಲುಬು; ಬಿರಿ: ಬಿರುಕು, ಸೀಳು; ಮುಗುಳು: ಮೊಗ್ಗು, ಕುಟ್ಮಲ; ನವ: ಹೊಸ; ಖಂಡ: ತುಂಡು; ಖಂಡದಿಂಡೆ: ಮಾಂಸದ ತುಂಡು; ಕರತಳ: ಅಂಗೈ; ತಳಿರು: ಚಿಗುರು; ಎಲೆ: ಪರ್ಣ; ಕಡಿ: ಸೀಳು; ತೋಳು: ಬಾಹು; ಕೊಂಬು: ವಾದ್ಯ; ಬೆರಳು: ಅಂಗುಲಿ; ಕಳಿಕೆ: ದೀಪದ ಕುಡಿ; ತಲೆ: ಶಿರ; ಫಲ: ಹಣ್ಣು; ಬಂಧುರ: ಬಾಗಿರುವುದು; ಘೂಕ: ಗೂಬೆ; ಧ್ವಾಂಕ್ಷ: ಕಾಗೆ; ನವ: ಹೊಸ; ಮಧುಕರ: ದುಂಬಿ, ಭ್ರಮರ; ರಣ: ಯುದ್ಧಭೂಮಿ; ವನ: ಕಾಡು; ಎಸೆದು: ತೋರು; ಖಡ್ಗ: ಕತ್ತಿ; ಚೈತ್ರ: ವಸಂತಮಾಸ, ಆರಂಭದ ಸಂಕೇತ;

ಪದವಿಂಗಡಣೆ:
ಕರುಳ +ಹೂಗೊಂಚಲಿನ +ಮೂಳೆಯ
ಬರಿಮುಗುಳ+ ನವ+ ಖಂಡ+ದಿಂಡೆಯ
ಕರತಳದ +ತಳಿರ್+ಎಲೆಯ +ಕಡಿ+ತೋಳುಗಳ +ಕೊಂಬುಗಳ
ಬೆರಳ +ಕಳಿಕೆಯ +ತಲೆಯ +ಫಲ+ ಬಂ
ಧುರದ +ಘೂಕ+ಧ್ವಾಂಕ್ಷ +ನವ +ಮಧು
ಕರದ +ರಣವನವ್+ಎಸೆದುದ್+ಈತನ +ಖಡ್ಗ+ಚೈತ್ರದಲಿ

ಅಚ್ಚರಿ:
(೧) ಅತ್ಯಂತ ಸುಂದರವಾದ ಹೋಲಿಕೆ, ಖಡ್ಗದ ಹೋರಾಟವನ್ನು ಚೈತ್ರಮಾಸಕ್ಕೆ ಹೋಲಿಸುವ ಪರಿ

ಪದ್ಯ ೨: ಪರ್ವತ ಪ್ರದೇಶದಲ್ಲಿ ಯಾವ ಗಾಳಿಯು ಬೀಸಿತು?

ಪರಮ ಧರ್ಮಶ್ರವಣ ಸೌಖ್ಯದೊ
ಳರಸನಿರೆ ಬದರಿಯಲಿ ಪೂರ್ವೋ
ತ್ತರದ ದೆಸೆವಿಡಿದೆಸೆಗಿತತಿಶಯ ಗಂಧ ಬಂಧುರದ
ಭರಣಿ ಮನ್ಮಥ ಪೋತವಣಿಜನ
ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ (ಅರಣ್ಯ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಬದರಿಕಾಶ್ರಮದಲ್ಲಿ ಯುಧಿಷ್ಠಿರನು ಧರ್ಮಶಾಸ್ತ್ರವನ್ನು ಶ್ರವಣ ಮಾಡುತ್ತಾ ಸುಖದಿಂದಿರಲು ಈಶಾನ್ಯ ದಿಕ್ಕಿನಿಂದ ಅತಿಶಯ ಸುಗಂಧ ದ್ರವ್ಯದ ಭರಣಿಯೋ, ಮರಿಮನ್ಮಥನೆಂಬ ವ್ಯಾಪಾರಿಯ ಸರಕುತುಂಬಿದ ದೋಣಿಯೋ ಮರಿದುಂಬಿಗಳ ಹಿಂಡಿನ ಸರಣಿಯೋ ಎನ್ನುವಂತಹ ಸುಗಂಧವಾಯುವು ಆ ಪರ್ವತ ಪ್ರದೇಶದಲ್ಲಿ ಬೀಸಿತು.

ಅರ್ಥ:
ಪರಮ: ಶ್ರೇಷ್ಠ; ಧರ್ಮ: ಧಾರಣೆ ಮಾಡಿದುದು; ಶ್ರವಣ: ಕೇಳು; ಸೌಖ್ಯ: ನೆಮ್ಮದಿ; ಅರಸ: ರಾಜ; ಪೂರ್ವೋತ್ತರ: ಈಶಾನ್ಯ; ದೆಸೆ: ದಿಕ್ಕು; ಎಸೆ: ತೋರು; ಅತಿಶಯ: ಹೆಚ್ಚು; ಗಂಧ: ಸುವಾಸನೆ; ಬಂಧುರ: ಚೆಲುವಾದ, ಸುಂದರವಾದ; ಭರಣಿ: ಕರಂಡಕ; ಮನ್ಮಥ: ಕಾಮ; ಪೋತ: ಮರಿ, ದೋಣಿ, ನಾವೆ; ತರಣಿ: ಸೂರ್ಯ,ದೋಣಿ, ಹರಿಗೋಲು; ತರುಣ: ಯೌವ್ವನ, ಚಿಕ್ಕವಯಸ್ಸಿನ; ಭ್ರಮರ: ದುಂಬಿ; ಸೇವೆ: ಚಾಕರಿ; ಸರಣಿ: ದಾರಿ, ಹಾದಿ; ಸುಳಿ: ಬೀಸು, ತೀಡು; ಸಮೀರ: ವಾಯು; ಅದ್ರಿ: ಬೆಟ್ಟ; ಮಹಾ: ದೊಡ್ಡ, ಶ್ರೇಷ್ಠ;

ಪದವಿಂಗಡಣೆ:
ಪರಮ+ ಧರ್ಮ+ಶ್ರವಣ +ಸೌಖ್ಯದೊಳ್
ಅರಸನಿರೆ+ ಬದರಿಯಲಿ +ಪೂರ್ವೋ
ತ್ತರದ +ದೆಸೆವಿಡಿದ್+ಎಸೆಗಿತ್+ಅತಿಶಯ +ಗಂಧ +ಬಂಧುರದ
ಭರಣಿ +ಮನ್ಮಥ +ಪೋತವಣಿಜನ
ತರಣಿ+ ತರುಣ+ ಭ್ರಮರ +ಸೇವಾ
ಸರಣಿಯೆನೆ +ಸುಳಿದುದು +ಸಮಿರಣನ್+ಆ+ಮಹ+ಅದ್ರಿಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭರಣಿ ಮನ್ಮಥ ಪೋತವಣಿಜನ ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ

ಪದ್ಯ ೩೩: ಆಸ್ಥಾನವು ಹೇಗೆ ಕಂಗೊಳಿಸುತ್ತಿತ್ತು?

ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣೆಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ತರಸಿದವರಾರೆನಲು ಮಣಿ ಬಂ
ಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ (ಸಭಾ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದಲ್ಲಿ ದುರ್ಯೋಧನನು ಕಂಡ ಆಲಯದ ವರ್ಣನೆಮಾಡಲು ಶುರುಮಾಡಿದ, ಒಂದು ಬದಿಯಲ್ಲಿ ಬಹಳ ವಿಶಾಲವಾದ ಕೆಂದಾವರೆಯ ವನವು ಕಾಣಿಸುತ್ತಿತ್ತು. ಇನ್ನೊಂದು ಕಡೆ ಬೆಳದಿಂಗಳು ಹರಡಿತ್ತು. ಹಸ್ತಿನಾಪುರದ ಬಳಿ ಹರಿಯುವ ಯಮುನಾ ನದಿಯನ್ನು ಇಲ್ಲಿಗೆ ಯಾರು ತರಿಸಿದರು ಎನ್ನುವ ಅನುಮಾನಬರುವಂತೆ ದಿವ್ಯರತ್ನಗಳ ಬೆಳಕು ಒಂದು ಕಡೆ ಬಿದ್ದಿರಲು, ನನ್ನ ಜಾಣ್ಮೆಯನ್ನು ನಾನು ಕಳೆದುಕೊಂಡೆ ಎಂದು ಹೇಳಿದನು.

ಅರ್ಥ:
ಹರಹು: ವಿಸ್ತಾರ, ವೈಶಾಲ್ಯ; ಹಿರಿ: ಹೆಚ್ಚು; ಕೆಂದಾವರೆ: ಕೆಂಪಾದ ಕಮಲ; ವನ: ಕಾಡು; ತಾಣ: ನೆಲೆ, ಬೀಡು; ಉರವಣೆ: ಆತುರ, ಆಧಿಕ್ಯ; ಬೆಳದಿಂಗಳು: ಪೂರ್ಣಚಂದ್ರ, ಹುಣ್ಣಿಮೆ; ಔಕು: ನೂಕು; ಹರಿವ: ಚಲಿಸುವ; ನದಿ: ಸರೋವರ; ತರಸು: ಬರೆಮಾಡು; ಮಣಿ: ಮುತ್ತು, ರತ್ನ; ಬಂಧುರ: ಬಾಗಿರುವುದು, ಮಣಿದಿರುವುದು; ಬೆಳಗಿನ: ದಿನದ; ಲಹರಿ: ರಭಸ, ಆವೇಗ; ಮುರಿ: ಸೀಳು; ಜಾಣು: ಬುದ್ಧಿವಂತಿಕೆ;

ಪದವಿಂಗಡಣೆ:
ಹರಹಿನಲಿ +ಹಿರಿದಾಯ್ತು +ಕೆಂದಾ
ವರೆಯ +ವನ +ಬೇರೊಂದು +ತಾಣದೊಳ್
ಉರವಣೆಯ +ಬೆಳದಿಂಗಳ್+ಔಕಿದುದ್+ಒಂದು +ತಾಣದಲಿ
ಹರಿವ+ ಯಮುನಾ +ನದಿಯನ್+ಇಲ್ಲಿಗೆ
ತರಸಿದವರ್+ಆರೆನಲು +ಮಣಿ +ಬಂ
ಧುರದ +ಬೆಳಗಿನಲಹರಿ+ ಮುರಿದುದು +ತನ್ನ +ಜಾಣುಮೆಯ

ಅಚ್ಚರಿ:
(೧) ಹಿರಿದು, ಉರವಣೆ – ಸಾಮ್ಯಾರ್ಥ ಪದಗಳು
(೨) ದುರ್ಯೋಧನನು ತನ್ನ ಜಾಣ್ಮೆಯನ್ನು ಕಳೆದುಕೊಂಡ ಪರಿ – ಮಣಿ ಬಂಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ