ಪದ್ಯ ೨: ಭೀಮ ದುರ್ಯೋಧನರು ಯಾವ ರೀತಿ ಹೋರಾಡಿದರು?

ಹಳಚಿದರು ಸುಳಿ ಘಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು (ಗದಾ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಸುಳಿಗಾಳಿಯಂತೆ ಎರಗುವ ಗರುಡನಂತೆ ಹೊಯ್ದು ಸುತ್ತಿ ಬಿಗಿದು ಮದಗಜಗಳಂತೆ ಮೇಲ್ಬಿದ್ದು ಅಗ್ನಿಯಂತೆ ಮುನ್ನುಗ್ಗಿ ಸುಟ್ಟು, ಹಾವಿನಂತೆ ಅಪ್ಪಳಿಸಿ, ಪಾದರಸದಂತೆ ಚುರುಕಾಗಿ ವೀರರಿಬ್ಬರೂ ಕಾದಿದರು.

ಅರ್ಥ:
ಹಳಚು: ತಾಗು, ಬಡಿ; ಸುಳಿ: ಆವರಿಸು, ಮುತ್ತು; ಗಾಳಿ: ವಾಯು; ಖಗ: ಪಕ್ಷಿ; ಖಗಪತಿ: ಪಕ್ಷಿರಾಜ (ಗರುಡ); ಹೊಯ್ಲು: ಹೊಡೆ; ಬಳಸು: ಆವರಿಸು; ಬಿಗಿ: ಭದ್ರವಾಗಿರುವುದು; ಎರಗು: ಬೀಳು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಮತ್ತಗಜ: ಮದಕರಿ; ಶಿಖಿ: ಬೆಂಕಿ; ಚೂರಿಸು: ಚಳಪಳಿಸುವಂತೆ ತಿರುಗಿಸು; ನಿಲುಕು: ಬಿಡುವು, ವಿರಾಮ; ಫಣಿ: ಹಾವು; ಪಯ: ಪಾದ; ಲುಳಿ: ರಭಸ, ವೇಗ; ಒದೆ: ತುಳಿ, ಮೆಟ್ಟು; ಪಾದರಸ: ಒಂದು ಬಗೆಯ ದ್ರವ ರೂಪದ ಲೋಹ, ಪಾರಜ; ಪಟುಭಟ: ಪರಾಕ್ರಮಿ;

ಪದವಿಂಗಡಣೆ:
ಹಳಚಿದರು +ಸುಳಿ +ಘಾಳಿಯಂತಿರೆ
ಸುಳಿದು +ಖಗಪತಿಯಂತೆ +ಹೊಯ್ಲಲಿ
ಬಳಸಿ +ಬಿಗಿದ್+ಎರಗಿದರು +ಬಿಡೆಯದ +ಮತ್ತ+ಗಜದಂತೆ
ಅಳುವಿದರು +ಶಿಖಿಯಂತೆ +ಚೂರಿಸಿ
ನಿಲುಕಿದರು +ಫಣಿಯಂತೆ +ಪಯ+ಮೈ
ಲುಳಿಯಲ್+ಒಲೆದರು +ಪಾದರಸದಂದದಲಿ+ ಪಟುಭಟರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುವಿದರು ಶಿಖಿಯಂತೆ ಚೂರಿಸಿ ನಿಲುಕಿದರು ಫಣಿಯಂತೆ

ಪದ್ಯ ೪೫: ಧರ್ಮಜನೇಕೆ ಮೂರ್ಛೆಹೋದನು?

ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ರ್ಜ್ಝರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ (ಶಲ್ಯ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಗರುಡನ ಕೊಕ್ಕಿನ ಪೆಟ್ಟಿಗೆ ಹಾವಿನೆದೆಯು ಬಿರಿಯುವಂತೆ ಧರ್ಮಜನ ದೇಹವು ಗಾಯಗೊಂಡಿತು. ಕವಚವು ಹರಿದು ಬೀಳಲು ಮೈಯೆಲ್ಲಾ ರಕ್ತಸಿಕ್ತವಾಯಿತು. ಕಣ್ಣುಗುಡ್ಡೆಗಳು ತಿರುಮುರುವಾದವು. ಅತಿಶಯವಾದ ನೋವಿನ ಭರಕ್ಕೆ ಒಂದು ನಿಮಿಷ ಧರ್ಮಜನು ಮೂರ್ಛೆಹೋದನು.

ಅರ್ಥ:
ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ತುಂಡ: ಮುಖ, ಆನನ; ಹತಿ: ಸಾವು; ಫಣಿ: ಹಾವು; ಎದೆ: ಉರ; ಬಿರಿ: ಬಿರುಕು, ಸೀಳು; ಸುತ: ಮಗ; ತನು: ದೇಹ; ಜರ್ಝರಿತ: ಭಗ್ನವಾಗು; ಜರಿ: ನಿಂದಿಸು, ತಿರಸ್ಕರಿಸು; ಜೋಡು: ಜೊತೆ, ಜೋಡಿ; ಜಿಗಿ: ಹಾರು; ಶೋಣಿತ: ರಕ್ತ; ಮುರಿ: ಸೀಳು; ಕಂಗಳು: ಕಣ್ಣು; ಮಲಗು: ನಿದ್ರೆ; ಪೈಸರ: ಕುಗ್ಗು, ಕುಸಿ; ಗಾತ್ರ: ಒಡಲು, ದೇಹ, ಅವಯವ; ವೇದನೆ: ನೋವು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಸೊಂಪು: ಸೊಗಸು; ಅಡಗು: ಅವಿತುಕೊಳ್ಳು; ನಿಮಿಷ: ಕ್ಷಣ; ಮಹೀಶ: ರಾಜ; ಮರೆ: ಗುಟ್ಟು, ರಹಸ್ಯ;

ಪದವಿಂಗಡಣೆ:
ಗರುಡ+ತುಂಡದ +ಹತಿಗೆ +ಫಣಿ+ಎದೆ
ಬಿರಿವವೊಲು +ಯಮಸುತನ+ ತನು+ ಜ
ರ್ಜ್ಝರಿತವಾದುದು +ಜರಿವ +ಜೋಡಿನ +ಜಿಗಿಯ +ಶೋಣಿತದ
ಮುರಿದ +ಕಂಗಳ +ಮಲಗಿನಲಿ +ಪೈ
ಸರದ+ ಗಾತ್ರದ +ಗಾಢವೇದನೆ
ಉರವಣಿಸೆ +ಸೊಂಪಡಗಿ +ನಿಮಿಷ +ಮಹೀಶ +ಮೈಮರೆದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರುಡತುಂಡದ ಹತಿಗೆ ಫಣಿಯೆದೆ ಬಿರಿವವೊಲು
(೨) ಜ ಕಾರದ ತ್ರಿವಳಿ ಪದ – ಜರ್ಜ್ಝರಿತವಾದುದು ಜರಿವ ಜೋಡಿನ ಜಿಗಿಯ
(೩) ಮೂರ್ಛೆಯನ್ನು ವಿವರಿಸುವ ಪರಿ – ಗಾಢವೇದನೆಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ

ಪದ್ಯ ೯: ಘಟೋತ್ಕಚನ ಮಾಯಾವತಾರಗಳು ಹೇಗಿದ್ದವು?

ಬೀಳಹೊಯ್ದನು ಬಿರುದರನು ಬಿರು
ಗಾಳಿಯಾಗಿ ವರೂಥಚಯವನು
ಕಾಳುಕಿಚ್ಚಾಗುರುಹಿದನು ಫಣಿಯಾಗಿ ತುಡುಕಿದನು
ಮೇಲುಗವಿದನು ಜಲಧಿಯಾಗಿ ನೃ
ಪಾಲನಿಕರದೊಳುರುಳಿದನು ಗಿರಿ
ಜಾಳವಾಗಿ ಘಟೋತ್ಕಚನು ಘಲ್ಲಿಸಿದನತಿರಥರ (ದ್ರೋಣ ಪರ್ವ, ೧೬ ಸಂಧಿ, ೯ ಪದ್ಯ)

ತಾತ್ಪರ್ಯ:
ಬಿರುಗಾಳಿಯಾಗಿ ಬೀಸಿ ವೀರರನ್ನುರುಳಿಸಿದನು. ಕಾಡುಗಿಚ್ಚಾಗಿ ರಥಗಳನ್ನು ಸುಟ್ಟನು. ಹಾವಾಗಿ ಕಚ್ಚಿದನು, ಸಮುದ್ರವಾಗಿ ಕೊಚ್ಚಿಕೊಂಡು ಹೋದನು. ಬೆಟ್ಟವಾಗಿ ಶತ್ರುಗಳ ಮೇಲೆ ಬಿದ್ದು ಅತಿರಥರನ್ನು ಪೀಡಿಸಿದನು.

ಅರ್ಥ:
ಬೀಳು: ಬಾಗು; ಹೊಯ್ದು: ಹೊಡೆ; ಬಿರುದು: ಗೌರವ ಸೂಚಕ ಪದ; ಬಿರುದರು: ಪರಾಕ್ರಮಿ; ಬಿರುಗಾಳಿ: ಸುಂಟರಗಾಳಿ; ವರೂಥ: ತೇರು, ರಥ; ಚಯ: ಗುಂಪು; ಕಾಳುಕಿಚ್ಚು: ಬೆಂಕಿ; ಉರು: ತಾಪಗೊಳಿಸು; ಫಣಿ: ಹಾವು; ತುಡುಕು: ಹೋರಾಡು, ಸೆಣಸು; ಕವಿ: ಆವರಿಸು; ಜಲಧಿ: ಸಾಗರ; ನೃಪಾಲ: ರಾಜ; ನಿಕರ: ಗುಂಪು; ಉರುಳು: ಕೆಳಕ್ಕೆ ಬೀಳು, ನೆಲದ ಮೇಲೆ ತಿರುಗು; ಗಿರಿ: ಬೆಟ್ಟ; ಘಲ್ಲಿಸು: ಪೀಡಿಸು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಬೀಳಹೊಯ್ದನು+ ಬಿರುದರನು +ಬಿರು
ಗಾಳಿಯಾಗಿ +ವರೂಥ+ಚಯವನು
ಕಾಳುಕಿಚ್ಚಾಗ್+ಉರುಹಿದನು +ಫಣಿಯಾಗಿ +ತುಡುಕಿದನು
ಮೇಲು+ಕವಿದನು +ಜಲಧಿಯಾಗಿ +ನೃ
ಪಾಲ+ನಿಕರದೊಳ್+ಉರುಳಿದನು +ಗಿರಿ
ಜಾಳವಾಗಿ +ಘಟೋತ್ಕಚನು +ಘಲ್ಲಿಸಿದನ್+ಅತಿರಥರ

ಅಚ್ಚರಿ:
(೧) ಬಿರುದರನು ಬಿರುಗಾಳಿಯಾಗಿ, ಘಟೋತ್ಕಚನು ಘಲ್ಲಿಸಿದ – ಪದಗಳ ಬಳಕೆ
(೨) ಬಿರುಗಾಳಿ, ಕಾಳುಕಿಚ್ಚು, ಫಣಿ, ಜಲಧಿ, ಗಿರಿಜಾಳ – ಮಾಯಾವತಾರಗಳು

ಪದ್ಯ ೩೯: ಅರ್ಜುನನ ಬಾಣಗಳು ಭೀಷ್ಮನನ್ನು ಹೇಗೆ ಆವರಿಸಿದವು?

ಮುತ್ತಿದವು ನರನಂಬು ಫಣಿಗಳು
ಹುತ್ತ ಹೊಗುವಂದದಲಿ ಖಂಡವ
ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ
ಮೆತ್ತಿದವು ಕೈಮೈಗಳಲಿ ತಲೆ
ಯೊತ್ತಿದವು ವಜ್ರಾಂಗಿಯಲಿ ಭಟ
ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ (ಭೀಷ್ಮ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹಾವುಗಳು ಹುತ್ತವನ್ನು ಹೊಗುವಂತೆ ಅರ್ಜುನನ ಬಾಣಗಳು ಭೀಷ್ಮನನ್ನು ಮುಸುಕಿದವು. ಮೈಯೊಳಗೆ ನೆಟ್ಟು ಹೊರಬಂದವು. ಪಕ್ಕೆಯೆಲುಬುಗಳನ್ನು ಮುರಿದವು. ಮೈಕೈಗಳಿಗೆ ಮೆತ್ತಿಕೊಂಡವು. ವಜ್ರಾಂಗಿಯಾದ ಭೀಷ್ಮನ ಅತ್ತಲೂ ಇತ್ತಲೂ ಎಲ್ಲಾ ಕಡೆಗೂ ಬಾಣಗಳು ನಾಟಿದವು.

ಅರ್ಥ:
ಮುತ್ತು: ಆವರಿಸು; ನರ: ಅರ್ಜುನ; ಅಂಬು: ಬಾಣ; ಫಣಿ: ಹಾವು; ಹುತ್ತ: ಹಾವುಗಳಿರುವ ಸ್ಥಳ; ಹೊಗು: ಸೇರು; ಖಂಡ: ತುಂಡು, ಚೂರು; ಕುತ್ತು: ತೊಂದರೆ, ಆಪತ್ತು; ಹಾಯಿ: ಮೇಲೆಬೀಳು; ಕೆತ್ತು: ಅದಿರು, ನಡುಗು; ಹರಿ: ಚಲಿಸು; ಕಿಬ್ಬರಿ:ಪಕ್ಕೆಯ ಕೆಳ ಭಾಗ; ಎಲುವು: ಮೂಳೆ; ಮೆತ್ತು: ಬಳಿ, ಲೇಪಿಸು; ಕೈ: ಹಸ್ತ; ಮೈ: ತನು; ತಲೆ: ಶಿರ; ಒತ್ತು: ಮುತ್ತು; ವಜ್ರಾಂಗಿ: ಗಟ್ಟಿಯಾದ ಕವಚ; ಭಟ: ಸೈನಿಕ; ಅತ್ತಲಿತ್ತ: ಅಲ್ಲಿಂದಿಲ್ಲಿಗೆ; ಬಳಸು: ಹರಡು; ನದೀಸುತ: ಭೀಷ್ಮ;

ಪದವಿಂಗಡಣೆ:
ಮುತ್ತಿದವು +ನರನ್+ಅಂಬು +ಫಣಿಗಳು
ಹುತ್ತ +ಹೊಗುವಂದದಲಿ +ಖಂಡವ
ಕುತ್ತಿ +ಹಾಯ್ದವು +ಕೆತ್ತಿ +ಹರಿದವು +ಕಿಬ್ಬರಿಗಳ್+ಎಲುವ
ಮೆತ್ತಿದವು +ಕೈ+ಮೈಗಳಲಿ +ತಲೆ
ಒತ್ತಿದವು+ ವಜ್ರಾಂಗಿಯಲಿ +ಭಟನ್
ಅತ್ತಲಿತ್ತಲ್+ ಎನಲ್ಕೆ +ಬಳಸಿದವಾ +ನದೀಸುತನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುತ್ತಿದವು ನರನಂಬು ಫಣಿಗಳು ಹುತ್ತ ಹೊಗುವಂದದಲಿ

ಪದ್ಯ ೫೦: ಕುರುಸೇನೆಯು ಎಲ್ಲಿಗೆ ಬಂದಿತು?

ಅರರೆ ನಡೆದುದು ಸೇನೆ ಕುಲಗಿರಿ
ಯೆರಡು ಕೂರುಮ ಫಣಿಪರಿಬ್ಬಿ
ಬ್ಬರ ದಿಶಾಮಾತಂಗಗಳ ಹದಿನಾರನಳವಡಿಸಿ
ಸರಸಿಜೋದ್ಭವ ಸೃಜಿಸದಿರ್ದರೆ
ಧರಿಸಲಾಪುದೆ ಧರಣಿಯೆನೆ ಕುರು
ಧರೆಗೆ ಬಂದುದು ಸೇನೆ ಪಯಣದ ಮೇಲೆ ಪಯಣದಲಿ (ಭೀಷ್ಮ ಪರ್ವ, ೧ ಸಂಧಿ, ೫೦ ಪದ್ಯ)

ತಾತ್ಪರ್ಯ:
ಆಬ್ಬಾ ಆ ಕುರುಸೈನ್ಯದ ಭರದ ವೇಗವಾದ ನಡಿಗೆಗೆ ಭೂಮಿಯು ನಡುಗಿತು. ಎರಡು ಕುಲಗಿರಿಗಳಾದ ಮೇರು, ವಿಂಧ್ಯಾ, ಆಮೆ, ಆದಿಶೇಷರಿಬ್ಬರು, ಹದಿನಾರು ದಿಕ್ಕುಗಳು ಇವೆಲ್ಲವನ್ನು ಬ್ರಹ್ಮನು ಸೃಷ್ಟಿಸಿ ಭೂಮಿಯನ್ನು ನಿಲ್ಲಿಸದೆ ಹೋಗಿದ್ದರೆ, ಈ ಸೈನ್ಯವನ್ನು ಭೂಮಿಯು ಹೊರಬಲ್ಲುದೆ ಎನ್ನಿಸುವಂತೆ, ಕೌರವನ ಸೈನ್ಯವು ಪಯಣಗಳನ್ನು ಮಾಡಿ ಕುರುಕ್ಷೇತ್ರಕ್ಕೆ ಬಂದಿತು.

ಅರ್ಥ:
ಅರರೆ: ಆಶ್ಚರ್ಯವನ್ನು ಸೂಚಿಸುವ ಪದ; ನಡೆ: ಚಲಿಸು; ಸೇನೆ: ಸೈನ್ಯ; ಕುಲಗಿರಿ: ಕುಲಾಚಲ, ಎತ್ತರದ ಬೆಟ್ಟ; ಕೂರುಮ: ಆಮೆ; ಫಣಿ: ಹಾವು; ಇಬ್ಬಿಬ್ಬ: ಎರಡೆರಡು; ದಿಶ: ದಿಕ್ಕು; ಮಾತಂಗ: ಪರ್ವತದ ಹೆಸರು; ಅಳವಡಿಸು: ಜೊತೆಕೂಡಿಸು; ಸರಸಿಜೋದ್ಭವ: ಬ್ರಹ್ಮ; ಸರಸಿಜ: ಕಮಲ; ಉದ್ಭವ: ಹುಟ್ಟು; ಸೃಜಿಸು: ರುಚಿಸು, ನಿರ್ಮಿಸು; ಧರಿಸು: ಹೊರು; ಧರಣಿ: ಭೂಮಿ; ಕುರುಧರೆ: ಕುರುಕ್ಷೇತ್ರ; ಪಯಣ: ಪ್ರಯಾಣ;

ಪದವಿಂಗಡಣೆ:
ಅರರೆ +ನಡೆದುದು+ ಸೇನೆ +ಕುಲಗಿರಿ
ಯೆರಡು+ ಕೂರುಮ +ಫಣಿಪರ್+ಇಬ್ಬಿ
ಬ್ಬರ +ದಿಶಾ+ಮಾತಂಗಗಳ+ ಹದಿನಾರನ್+ಅಳವಡಿಸಿ
ಸರಸಿಜೋದ್ಭವ +ಸೃಜಿಸದಿರ್ದರೆ
ಧರಿಸಲಾಪುದೆ +ಧರಣಿ+ಎನೆ +ಕುರು
ಧರೆಗೆ+ ಬಂದುದು +ಸೇನೆ+ ಪಯಣದ+ ಮೇಲೆ +ಪಯಣದಲಿ

ಅಚ್ಚರಿ:
(೧) ಧ ಕಾರದ ತ್ರಿವಳಿ ಪದ – ಧರಿಸಲಾಪುದೆ ಧರಣಿಯೆನೆ ಕುರುಧರೆಗೆ

ಪದ್ಯ ೧೧೯: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೮?

ತುರುವ ನುಂಗಿದ ಫಣಿಯ ಗಂಟಲ
ಮುರಿದು ಕಾಯ್ದೈ ಗೋವುಗಳ ಗಿರಿ
ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
ಮೆರೆದೆಲಾ ಕೃಪೆಯಲಿ ಗಜೇಂದ್ರನ
ಮುರಿಯಲೀಯದೆ ಖಳನು ಸೋಕಿದ
ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ (ಸಭಾ ಪರ್ವ, ೧೫ ಸಂಧಿ, ೧೧೯ ಪದ್ಯ)

ತಾತ್ಪರ್ಯ:
ಹಸುಗಳನ್ನು ನುಂಗುತ್ತಿದ್ದ ಕಾಳಿಯೆಂಬ ರಾಕ್ಷಸನ ಗಂಟಲನ್ನು ಸಂಹಾರಮಾಡಿ ಗೋವುಗಳನ್ನು ರಕ್ಷಿಸಿದೆ, ಇಂದ್ರನಿಗೆ ಹೆದರದೆ ಗೋವರ್ಧನ ಪರ್ವತವನ್ನು ಎತ್ತಿ ಗೋಕುಲವನ್ನು ಕಾಪಾಡಿದೆ, ಗಜೇಂದ್ರನನ್ನು ರಕ್ಷಿಸಿದೆ, ಹೇ ಕೃಷ್ಣ ಈ ಖಳನು ಹಿಡಿದಿರುವ ನನ್ನ ಸೆರಗನ್ನು ಬಿಡಿಸಲಾರೆಯಾ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ತುರು: ದನ, ಗೋವು; ನುಂಗು: ಕಬಳಿಸು, ತಿನ್ನು; ಫಣಿ: ಹಾವು; ಗಂಟಲು: ಕಂಠ; ಮುರಿ: ಸೀಳು; ಕಾಯ್ದೆ: ಕಾಪಾಡು; ಗೋವು: ಹಸು; ಗಿರಿ: ಬೆಟ್ಟ; ಮರೆ: ಗುಟ್ಟು, ರಹಸ್ಯ; ಖಾತಿ: ಕೋಪ, ಕ್ರೋಧ; ಅಳುಕು: ಹೆದರು; ಕಾಯ್ದೆ: ಕಾಪಾಡು; ಮೆರೆ: ಹೊಳೆ, ಪ್ರಕಾಶಿಸು; ಕೃಪೆ: ಕರುಣೆ; ಗಜೇಂದ್ರ: ಆನೆಗಳ ರಾಜ; ಮುರಿ: ಸೀಳು; ಖಳ: ದುಷ್ಟ; ಸೋಕು: ಮುಟ್ಟು; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿಸು: ಕಳಚು, ಸಡಿಲಿಸು; ರಾಣಿ: ಅರಸಿ;

ಪದವಿಂಗಡಣೆ:
ತುರುವ +ನುಂಗಿದ +ಫಣಿಯ +ಗಂಟಲ
ಮುರಿದು +ಕಾಯ್ದೈ +ಗೋವುಗಳ+ ಗಿರಿ
ಮರೆಯಲ್+ಇಂದ್ರನ +ಖಾತಿಗ್+ಅಳುಕದೆ +ಕಾಯ್ದೆ +ಗೋಕುಲವ
ಮೆರೆದೆಲಾ+ ಕೃಪೆಯಲಿ +ಗಜೇಂದ್ರನ
ಮುರಿಯಲೀಯದೆ +ಖಳನು +ಸೋಕಿದ
ಸೆರಗ+ ಬಿಡಿಸೈ+ ಕೃಷ್ಣ+ಎಂದಳು +ಪಾಂಡವರ +ರಾಣಿ

ಅಚ್ಚರಿ:
(೧) ತುರು, ಗೋವು – ಸಮನಾರ್ಥಕ ಪದ
(೨) ಕಾಳಿಂಗ ಮರ್ಧನದ ವಿವರ – ತುರುವ ನುಂಗಿದ ಫಣಿಯ ಗಂಟಲಮುರಿದು ಕಾಯ್ದೈ ಗೋವುಗಳ
(೩) ಗೋವರ್ಧನ ಗಿರಿಧಾರಿಯ ವಿವರ – ಗಿರಿ ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
(೪) ಗಜೇಂದ್ರ ಮೋಕ್ಷದ ವಿವರ – ಮೆರೆದೆಲಾ ಕೃಪೆಯಲಿ ಗಜೇಂದ್ರನ

ಪದ್ಯ ೩೮: ತಿಮಿರಾಸ್ತ್ರಕ್ಕೆ ಪ್ರತಿಯಾಗಿ ಯಾವ ಅಸ್ತ್ರವನ್ನು ಕರ್ಣನು ಪ್ರಯೋಗಿಸಿದನು?

ವೈರಿಶರಕೇನರಿಯನೇ ಪ್ರತಿ
ಕಾರವನು ನಿನ್ನಾತನಗ್ಗದ
ಸೌರಮಯ ಮಂತ್ರಾಭಿಮಂತ್ರಿತ ಭಾನುಮಾರ್ಗಣವ
ಆರು ಕಂಡರು ತಿಮಿರಜನಿತವಿ
ಕಾರವನು ಹೇಳಿಗೆಯ ಮುಚ್ಚುಳ
ಜಾರಿಸಿದ ಫಣಿಯಂತೆ ಭುಲ್ಲವಿಸಿತ್ತು ಕುರುಸೇನೆ (ಕರ್ಣ ಪರ್ವ, ೨೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ವೀರನಾದ ಕರ್ಣನಿಗೆ ತಿಮಿರಾಸ್ತ್ರದ ಪ್ರತಿಯಸ್ತ್ರವು ತಿಳಿಯದೇ? ನಿನ್ನ ಸೇನೆಯಲ್ಲಿ ಶ್ರೇಷ್ಠನಾದ ಕರ್ಣನು ಸೂರ್ಯಾಸ್ತ್ರವನ್ನು ಅಭಿಮಂತ್ರಿಸಿ ಪ್ರಯೋಗ ಮಾಡಿದನು. ಯಾರು ನೋಡಿದರು ಕತ್ತಲೆಯ ಹುಟ್ಟನ್ನು ಎನ್ನುವಂತೆ ಸೂರ್ಯಾಸ್ತ್ರವು ಕತ್ತಲೆಯನ್ನು ಹೊರನೂಕಿತು, ಬುಟ್ಟಿಯಲ್ಲಿದ್ದ ಹಾವು ಮುಚ್ಚಳ ತೆಗೆದನಂತರ ಸಂತೋಷದಿಂದ ಹೊರಬರುವಂತೆ, ಕುರುಸೇನೆಯು ಹರ್ಷಿಸಿತು.

ಅರ್ಥ:
ವೈರಿ: ಶತ್ರು; ಶರ: ಬಾಣ; ಅರಿ: ತಿಳಿ; ಪ್ರತಿಕಾರ: ಮಾಡಿದುದಕ್ಕೆ ಪ್ರತಿಯಾಗಿ ಮಾಡುವುದು; ಅಗ್ಗದ: ಶ್ರೇಷ್ಠ; ಸೌರ: ಸೂರ್ಯ; ಮಯ: ಆವರಿಸು, ತುಂಬಿದ; ಮಂತ್ರ: ಛಂದೋಬದ್ಧವಾದ ವೇದಸ್ತುತಿ; ಅಭಿಮಂತ್ರಿತ: ಆಶೀರ್ವದಿಸಿದ; ಭಾನು: ಸೂರ್ಯ; ಮಾರ್ಗಣ: ಬಾಣ; ಕಂಡು: ನೋಡು; ತಿಮಿರ: ಕತ್ತಲೆ; ಜನಿತ: ಜನಿಸಿದ್ದು; ವಿಕಾರ: ರೂಪಾಂತರ; ಹೇಳಿಗೆ: ಬುಟ್ಟಿ; ಮುಚ್ಚುಳ: ಮೇಲುಭಾಗವನ್ನು ಮುಚ್ಚುವ ಸಾಧನ; ಜಾರಿಸು: ಸರಿಸು; ಫಣಿ: ಹಾವು; ಭುಲ್ಲವಿಸು: ಸಂತೋಷಿಸು;

ಪದವಿಂಗಡಣೆ:
ವೈರಿ+ಶರಕೇನ್+ಅರಿಯನೇ +ಪ್ರತಿ
ಕಾರವನು+ ನಿನ್ನಾತನ್+ಅಗ್ಗದ
ಸೌರಮಯ +ಮಂತ್ರ+ಅಭಿಮಂತ್ರಿತ +ಭಾನು+ಮಾರ್ಗಣವ
ಆರು +ಕಂಡರು +ತಿಮಿರ+ಜನಿತ+ವಿ
ಕಾರವನು +ಹೇಳಿಗೆಯ +ಮುಚ್ಚುಳ
ಜಾರಿಸಿದ +ಫಣಿಯಂತೆ +ಭುಲ್ಲವಿಸಿತ್ತು+ ಕುರುಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೇಳಿಗೆಯ ಮುಚ್ಚುಳ ಜಾರಿಸಿದ ಫಣಿಯಂತೆ ಭುಲ್ಲವಿಸಿತ್ತು ಕುರುಸೇನೆ
(೨) ಕತ್ತಲು ಓಡಿತು ಎಂದು ಹೇಳಲು – ಆರು ಕಂಡರು ತಿಮಿರಜನಿತವಿಕಾರವನು

ಪದ್ಯ ೧: ಸೋತ ಕೌರವ ಸೈನ್ಯದವರ ಸ್ಥಿತಿ ಹೇಗಿತ್ತು?

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳಿನಗ್ಗಳಿಕೆಯ ವಿಘಾತಿಯ
ಗಾಳಿ ತಾಗಿತು ತಿರುಗಿದುದು ಬಳಿಕೀ ಸಮಸ್ತಬಲ
ಕೋಲು ತಪ್ಪಿದ ಫಣಿಯವೊಲು ಲಯ
ಕಾಲಕೊದರುವ ಸಿಡಿಲವೊಲು ಹೀ
ಹಾಳಿಸುತ ತಮತಮಗೆ ಬಯ್ದುದು ಕೂಡೆ ಪರಿವಾರ (ಕರ್ಣ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಪರಾಕ್ರಮಿಯಾದ ಕರ್ಣನ ಸೋಲಿನ ಗಾಳಿಯು ಕೌರವರ ಸೈನ್ಯಕ್ಕೆಲ್ಲಾ ಮುಟ್ಟಿತು, ಇಡೀ ಸೈನ್ಯವು ಈ ಸೋಲಿನಿಂದ ಬಲಕಳೆದು ಕೊಂಡು ಇತರರನ್ನು ಬಯ್ಯಲು ಶುರುಮಾಡಿದರು. ಪೆಟ್ಟುತಿಂದ ತಪ್ಪಿಸಿಕೊಂಡ ಹಾವಿನಂತೆ, ಪ್ರಳಯಕಾಲದ ಸಿಡಿಲಂತೆ ಕೌರವ ವೀರರು ದೊಡ್ಡದನಿಯಿಂದ ತಮ್ಮ ಬಲದ ಇತರರನ್ನು ಜರಿದರು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಅವನಿ: ಭೂಮಿ; ಆಳಿ: ವಂಶ, ಗುಂಪು; ಅಗ್ಗಳಿಕೆ: ದೊಡ್ಡಸ್ತಿಕೆ; ವಿಘಾತ: ನಾಶ, ಧ್ವಂಸ; ತಾಗು: ಸ್ಪರ್ಷಿಸು, ಮುಟ್ಟು; ತಿರುಗು: ಸುತ್ತು; ಬಳಿಕ: ನಂತರ; ಸಮಸ್ತ: ಎಲ್ಲಾ; ಬಲ: ಸೈನ್ಯ; ಕೋಲು: ದಂಡ; ತಪ್ಪಿದ: ಸಿಕ್ಕದ; ಪಣಿ: ಹಾವು; ಲಯ: ನಾಶ; ಕಾಲ: ಸಮಯ; ಒದಗು: ಲಭ್ಯ, ದೊರೆತುದು; ಸಿಡಿಲು: ಎರಡು ಮೋಡಗಳ ಗುಂಪಿನ ನಡುವಿನ ಘರ್ಷಣೆಯ ಫಲವಾಗಿ ಜೋರಾದ ಶಬ್ದದೊಂದಿಗೆ ಗೋಚರಿಸುವ ವಿದ್ಯುತ್ಪ್ರವಾಹ; ಅಶನಿ; ಹೀಹಾಳಿ: ತೆಗಳಿಕೆ, ಅವಹೇಳನ; ಬಯ್ದು: ಜರಿದು; ಕೂಡೆ: ಜೊತೆ; ಪರಿವಾರ: ಸುತ್ತಲಿನವರು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ+ ನಿ
ನ್ನಾಳಿನ್+ಅಗ್ಗಳಿಕೆಯ +ವಿಘಾತಿಯ
ಗಾಳಿ +ತಾಗಿತು +ತಿರುಗಿದುದು +ಬಳಿಕೀ +ಸಮಸ್ತಬಲ
ಕೋಲು +ತಪ್ಪಿದ +ಫಣಿಯವೊಲು +ಲಯ
ಕಾಲಕ್+ಒದರುವ +ಸಿಡಿಲವೊಲು +ಹೀ
ಹಾಳಿಸುತ+ ತಮತಮಗೆ +ಬಯ್ದುದು +ಕೂಡೆ +ಪರಿವಾರ

ಅಚ್ಚರಿ:
(೧) ಉಪಮಾನದ ಪ್ರಯೋಗ: ಕೋಲು ತಪ್ಪಿದ ಫಣಿಯವೊಲು; ಲಯಕಾಲಕೊದರುವ ಸಿಡಿಲವೊಲು

ಪದ್ಯ ೧೦: ಕ್ಷೇಮದೂರ್ತಿಯು ಪಲಾಯನ ಮಾಡಿದ ಸೈನ್ಯವನ್ನು ನೋಡಿ ಏನೆಂದನು?

ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರ ಗಜಸಹಿತ (ಕರ್ಣ ಪರ್ವ, ೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಲಾಯನ ಮಾಡುತ್ತಿದ್ದ ಕುರುಬಲವನ್ನು ನೋಡಿ ಕ್ಷೇಮಧೂರ್ತಿಯು (ಸಾಲ್ವರಾಜನ ಸೇನಾಧಿಪತಿ) ಇವರು ಸ್ವಾಮಿದ್ರೋಹಿಗಳು, ಎಲ್ಲಿಗೆ ಹೋಗಿ ತಮ್ಮ ಕುಲದ ಕೀರ್ತಿಯ ಬೇರುಗಳನ್ನು ಮುರಿದರೋ ಏನೋ ಇವರು ಕೌರವಸೇನೆಯ ಪಟ್ಟದಾನೆಗಳಂತೆ! ಪಾಂಡವರ ಸೈನ್ಯವು ಕೊಡದಲ್ಲಿಟ್ಟ ಕರಿನಾಗರಹಾವಿನಂತೆ ಇವರು. ಇದನ್ನು ಇದಿರಿಸಬಹುದೇ? ಎಂದು ಸಹಸ್ರ ಆನೆಗಳ ಸೈನ್ಯದೊಡನೆ ಪಾಂಡವ ಸೇನೆಯನ್ನು ತರುಬಿ ನಿಂತನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸ್ವಾಮಿ: ದೊರೆ; ದ್ರೋಹ: ಮೋಸ; ಸಿಡಿ: ಹೊರಹೊಮ್ಮು; ನಿಜ: ದಿಟ; ಕುಲ: ವಂಶ; ಬೇರು: ಮೂಲ, ಬುಡ; ಕಡಿ: ಕಿತ್ತುಹಾಕು, ಸೀಳು; ಬಲ: ಸೈನ್ಯ; ಕಾಹಿ: ರಕ್ಷಿಸುವ, ಕಾಯುವ; ಪಟ್ಟ:ಅಧಿಕಾರ ಸೂಚಕವಾದ ಚಿನ್ನದ ಪಟ್ಟಿ; ಆನೆ: ಕರಿ, ಗಜ; ಕೊಡ: ಕುಂಭ; ಫಣಿ: ಹಾವು; ಬಲ: ಸೈನ್ಯ; ತುಡುಕು: ಹೋರಾಡು, ಸೆಣಸು; ಸೇನೆ: ಸೈನ್ಯ; ತಡೆ: ಅಡ್ಡಹಾಕು; ನಿಂದು: ನಿಲ್ಲು; ಸಹಸ್ರ: ಸಾವಿರ; ಗಜ: ಆನೆ; ಸಹಿತ: ಜೊತೆ;

ಪದವಿಂಗಡಣೆ:
ಫಡಫಡ್+ಎತ್ತಲು +ಸ್ವಾಮಿ+ದ್ರೋಹರು
ಸಿಡಿದರೋ +ನಿಜಕುಲದ+ ಬೇರ್ಗಳ
ಕಡಿದರೋ +ಕುರುಬಲದ +ಕಾಹಿನ +ಪಟ್ಟದಾನೆಗಳು
ಕೊಡನ +ಫಣಿಯಿದು +ಪಾಂಡವರ +ಬಲ
ತುಡುಕಬಹುದೇ +ಎನುತ +ಸೇನೆಯ
ತಡೆದು +ನಿಂದನು +ಕ್ಷೇಮಧೂರ್ತಿ +ಸಹಸ್ರ +ಗಜ+ಸಹಿತ

ಅಚ್ಚರಿ:
(೧) ಫಡಫಡ – ಪದದ ರಚನೆ
(೨) ಕೊಡನ ಫಣಿಯಿದು – ಪದ ರಚನೆ
(೩) ಓಡುವ ಸೈನ್ಯವನ್ನು ವಿವರಿಸುವ ಬಗೆ – ಸ್ವಾಮಿದ್ರೋಹರು, ನಿಜಕುಲದ ಬೇರ್ಗಳ
ಕಡಿದರೋ, ಕುರುಬಲದ ಕಾಹಿನ ಪಟ್ಟದಾನೆಗಳು, ಕೊಡನ ಫಣಿಯಿದು

ಪದ್ಯ ೩೮: ಪಾಂಡವರು ಯುದ್ಧರಂಗಕ್ಕೆ ಹೇಗೆ ಹೊರಟರು?

ಮುಂದೆ ಹರಿರಥವಸುರ ವೈರಿಯ
ಹಿಂದೆ ಧರ್ಮಜನೆಡಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದರು ಪಾಂಡುನಂದನರು (ಉದ್ಯೋಗ ಪರ್ವ, ೧೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸೈನ್ಯದ ಮುಂಬಾಗದಲ್ಲಿ ಶ್ರೀಕೃಷ್ಣನ ರಥ, ಅವನ ಹಿಂದೆ ಯುಧಿಷ್ಠಿರನು, ಅವನ ಎಡಬಲದಲ್ಲಿ ಪಾಂಡವರ ಮಕ್ಕಳು, ಬಲಭಾಗದ ಪಕ್ಕದಲ್ಲಿ ಭೀಮಾರ್ಜುನರು, ಹೀಗೆ ಹಲವಾರು ಮಂದಿ ರಥವೇರಿ ಸಿದ್ಧರಾದರು. ಸೈನ್ಯವೂ ಸೇರಿತು. ಈ ಭಾರಕ್ಕೆ ತಲೆ ಬಾಗಿಸದೆ ನೆಟ್ಟನಿದ್ದರೆ ಆದಿಶೇಷನಿಗೆ ಯಾರೂ ಸರಿಯಿಲ್ಲ ಎಂದು ದೇವತೆಗಳು ಮಾತನಾಡುತ್ತಿರಲು ಪಾಂಡವರು ಯುದ್ಧರಂಗಕ್ಕೆ ನಡೆದರು.

ಅರ್ಥ:
ಮುಂದೆ: ಅಗ್ರ, ಮೊದಲು; ರಥ: ಬಂಡಿ; ಅಸುರವೈರಿ: ರಾಕ್ಷರಸ ರಿಪು (ಕೃಷ್ಣ); ಹಿಂದೆ: ಹಿಂಬಾಗ; ಧರ್ಮಜ: ಯುಧಿಷ್ಠಿರ; ಎಡಬಲ: ಆಚೆಯೀಚೆ, ಪಕ್ಕದಲ್ಲಿ; ನಂದನ: ಮಕ್ಕಳು; ಕೆಲಬಲ: ಬಲಭಾಗದಲ್ಲಿ; ಆದಿ: ಮುಂತಾದವರು; ಸಂದಣಿ: ಗುಂಪು; ಸೇನೆ: ಸೈನ್ಯ; ಸೈರಿಸಿ: ತಾಳು, ಸಹಿಸು; ನಿಂದು: ನಿಲ್ಲು; ಫಣಿ: ಹಾವು; ಸರಿ: ಸದೃಶ, ತಪ್ಪಲ್ಲದ್ದು; ಸುರ: ದೇವತೆ; ಕುಲ: ವಂಶ; ಉಲಿ: ಧ್ವನಿ; ನಡೆ: ಸಾಗು;

ಪದವಿಂಗಡಣೆ:
ಮುಂದೆ +ಹರಿ+ರಥವ್+ಅಸುರ ವೈರಿಯ
ಹಿಂದೆ +ಧರ್ಮಜನ್+ಎಡಬಲದಲ್
ಆ+ನಂದನರು+ ಕೆಲಬಲದಲ್+ಆ+ ಭೀಮಾರ್ಜುನ+ಆದಿಗಳು
ಸಂದಣಿಸಿದುದು +ಸೇನೆ +ಸೈರಿಸಿ
ನಿಂದನಾದಡೆ+ ಫಣಿಗೆ+ ಸರಿಯಿ
ಲ್ಲೆಂದು+ ಸುರ+ಕುಲ+ಉಲಿಯೆ +ನಡೆದರು +ಪಾಂಡು+ನಂದನರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೈರಿಸಿ ನಿಂದನಾದಡೆ ಫಣಿಗೆ ಸರಿಯಿಲ್ಲೆಂದು ಸುರಕುಲವುಲಿಯೆ
(೨) ಹರಿ, ಅಸುರವೈರಿ – ಕೃಷ್ಣನಿಗೆ ಉಪಯೋಗಿಸಿದ ಪದಗಳು