ಪದ್ಯ ೧೫: ಪಾರ್ಥನು ವೀರರಿಗೆ ಏನು ಹೇಳಿದನು?

ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
ಮಕ್ಕಳೊಳು ನೋಡಿದನು ಕಂದನ
ನಿಕ್ಕಿದಿರಲಾ ಲೇಸು ಮಾಡಿದಿ
ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ (ದ್ರೋಣ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶೋಕದ ಕಡಲು ಉಕ್ಕಿ ಪಾರ್ಥನನ್ನು ಉಗುಳಿತು. ಆ ಶೋಕ ಸಮುದ್ರವನ್ನು ಕೋಪವು ವಡಬಾಗ್ನಿಯಂತೆ ಹೊಕ್ಕು ಹೆಚ್ಚಿತು. ರಾಜಕುಮಾರರಿರುವ ಕಡೆಗೆ ನೋಡಿ, ಅಲ್ಲಿ ಅಭಿಮನ್ಯುವನ್ನು ಕಾಣದೆ, ಮಗನನ್ನ್ ಕೊಂದು ಮಹಾವೀರರಾದ ನೀವು ಒಳಿತನ್ನೇ ಮಾಡಿದಿರಿ ಎಂದು ಹೇಳುತ್ತಾ ಧರ್ಮಜನಿಗೆ ನಮಸ್ಕರಿಸಿದನು.

ಅರ್ಥ:
ಉಕ್ಕು: ಹೊಮ್ಮಿ ಬರು; ಶೋಕ: ದುಃಖ; ಕಡಲು: ಸಾಗರ; ಮುಕ್ಕುಳಿಸು: ಹೊರಹಾಕು; ಶರಧಿ: ಸಾಗರ; ಹೊಕ್ಕು: ಸೇರು; ಬೆಳೆ: ಎತ್ತರವಾಗು; ಕೋಪ: ಸಿಟ್ಟು; ಶಿಖಿ: ಬೆಂಕಿ; ವಡಬಾಗ್ನಿ: ಸಮುದ್ರದೊಳಗಿನ ಬೆಂಕಿ; ಮಕ್ಕಳು: ಸುತರು; ನೋಡು: ವೀಕ್ಷಿಸು; ಕಂದ: ಮಗ; ಇಕ್ಕು: ಬಿಟ್ಟು ಹೋಗು; ಲೇಸು: ಒಳಿತು; ಎಕ್ಕತುಳ: ಮಹಾವೀರ; ಭೂಪತಿ: ರಾಜ; ಪೊಡವಡು: ನಮಸ್ಕರಿಸು;

ಪದವಿಂಗಡಣೆ:
ಉಕ್ಕಿ+ ಶೋಕದ +ಕಡಲು +ಪಾರ್ಥನ
ಮುಕ್ಕುಳಿಸಿತ್+ಆ+ ಶೋಕ+ಶರಧಿಯ
ಹೊಕ್ಕು +ಬೆಳೆದುದು +ಕೋಪ+ಶಿಖಿ+ವಡಬಾಗ್ನಿಯಂದದಲಿ
ಮಕ್ಕಳೊಳು +ನೋಡಿದನು+ ಕಂದನನ್
ಇಕ್ಕಿದಿರಲಾ +ಲೇಸು +ಮಾಡಿದಿರ್
ಎಕ್ಕತುಳದಾಳುಗಳ್+ಎನುತ +ಭೂಪತಿಗೆ+ ಪೊಡವಂಟ

ಅಚ್ಚರಿ:
(೧) ಶೋಕದ ತೀವ್ರತೆಯನ್ನು ವಿವರಿಸುವ ಪರಿ – ಉಕ್ಕಿ ಶೋಕದ ಕಡಲು ಪಾರ್ಥನ ಮುಕ್ಕುಳಿಸಿತಾ; ಶೋಕಶರಧಿಯ ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
(೨) ಕಡಲು, ಶರಧಿ – ಸಮಾನಾರ್ಥಕ ಪದ