ಪದ್ಯ ೧೯: ಸೈನ್ಯದ ನಂತರ ಭೀಷ್ಮನೆದುರು ಯಾರು ನಿಂತರು?

ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲಕೊಳ್ಳಎ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೈನ್ಯವು ಪುಡಿಯಾದ ಮೇಲೆ ರಾಜರು, ಭೀಷ್ಮನ ಬಾಣಗಳನ್ನು ಲೆಕ್ಕಿಸದೆ, ಭೀಷ್ಮನೆದುರಿಗೆ ಬಂದು ನಿಂತರು. ಭೀಷ್ಮನು ನಿಮ್ಮ ಪರಾಕ್ರಮ ಹಿರಿದಾದುದು, ಎಷ್ಟೇ ಆಗಲಿ ನೀವು ರಾಜರಲ್ಲವೇ ಎನ್ನುತ್ತಾ ಅವರ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಆಳು: ಸೈನಿಕ; ಮುರಿ: ಸೀಳು; ಹೊಕ್ಕು: ಸೇರು; ನೃಪಾಲ: ರಾಜ; ಬೊಬ್ಬಿರಿದು: ಅರಚು; ಕೋಲ: ಬಾಣ; ಹರಿ: ಸೀಳು; ರಥ: ಬಂಡಿ; ಹೊರೆ: ರಕ್ಷಣೆ, ಆಶ್ರಯ; ಆಳುತನ: ಪರಾಕ್ರಮ; ಅಂಗವಣೆ: ರೀತಿ, ಬಯಕೆ; ಒಳ್ಳಿತು: ಸರಿಯಾದ; ಮೇಳ: ಗುಂಪು; ಬಳಿಕ: ನಂತರ; ಪೃಥ್ವೀಪಾಲ: ರಾಜ; ಪೃಥ್ವಿ: ಭೂಮಿ; ಪೂತ: ಪುಣ್ಯವಂತ; ಮಝ: ಭಲೇ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಆಳು+ ಮುರಿದವು +ಮೇಲೆ +ಹೊಕ್ಕು +ನೃ
ಪಾಲಕರು+ ಬೊಬ್ಬಿರಿದು +ಭೀಷ್ಮನ
ಕೋಲಕೊಳ್ಳದೆ+ ಕೊಂಡು+ ಹರಿದರು +ರಥದ +ಹೊರೆಗಾಗಿ
ಆಳುತನದ್+ಅಂಗವಣೆ+ಒಳ್ಳಿತು
ಮೇಳವೇ +ಬಳಿಕೇನು +ಪೃಥ್ವೀ
ಪಾಲರಲ್ಲಾ +ಪೂತು +ಮಝ +ಎನುತ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ನೃಪಾಲ, ಪೃಥ್ವೀಪಾಲ – ಸಮಾನಾರ್ಥಕ ಪದ

ಪದ್ಯ ೧೧: ಗಣಿಕೆಯರು ಹೇಗೆ ವಾದಿಸಿದರು?

ಹೇಳಿದರೆ ಕುಂತೀಕುಮಾರರು
ಕೇಳಿ ಮಾಡುವುದಾವುದೋ ವನ
ಪಾಲಕರು ತಾವಿಂದು ಪೃಥ್ವೀಪಾಲ ನಮ್ಮೊಡೆಯ
ಹೇಳಿ ಬಳಿಕರ್ಜುನನ ಭೀಮನ
ದಾಳಿಯನು ತರಲಹಿರೆನುತ ಘಾ
ತಾಳಿಯರು ಮುನಿಜನವ ಬೈದರು ಬಹುವಿಕಾರದಲಿ (ಅರಣ್ಯ ಪರ್ವ, ೧೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಋಷಿಮುನಿಗಳ ಮಾತನ್ನು ಕೇಳಿ ಆ ಗಣಿಕೆಯರು, ನೀವು ಹೇಳಿದರೆ ಏನು ಮಾಡಿದ ಹಾಗಾಯಿತು? ನಮ್ಮ ಒಡೆಯನೇ ರಾಜ. ಆದುದರಿಂದ ಈ ವನಕ್ಕೆ ನಾವೇ ಒಡೆಯರು ನೀವು ದೂರು ಕೊಟ್ಟು ಭೀಮಾರ್ಜುನರ ದಾಳಿಯನ್ನು ತರುತ್ತೀರೋ ತನ್ನಿ, ಎಂದು ಆ ಗಟ್ಟಿಗಿತ್ತಿಯರು ವಾದಿಸಿದರು.

ಅರ್ಥ:
ಹೇಳು: ತಿಳಿಸು; ಕೇಳು: ಆಲಿಸು; ವನ: ಕಾಡು; ಪಾಲಕ: ಒಡೆಯ; ಪೃಥ್ವೀಪಾಲ: ರಾಜ; ಪೃಥ್ವಿ: ಭೂಮಿ; ಒಡೆಯ: ನಾಯಕ; ದಾಳಿ: ಆಕ್ರಮಣ; ತರಲು: ಬರೆಮಾಡು; ಘಾತಾಳಿ: ಗಟ್ಟಿಗಿತ್ತಿ; ಮುನಿ: ಋಷಿ; ಬೈದು: ಜರೆದು; ವಿಕಾರ: ಮನಸ್ಸಿನ ವಿಕೃತಿ;

ಪದವಿಂಗಡಣೆ:
ಹೇಳಿದರೆ +ಕುಂತೀಕುಮಾರರು
ಕೇಳಿ +ಮಾಡುವುದಾವುದೋ +ವನ
ಪಾಲಕರು+ ತಾವಿಂದು +ಪೃಥ್ವೀಪಾಲ+ ನಮ್ಮೊಡೆಯ
ಹೇಳಿ +ಬಳಿಕ್+ಅರ್ಜುನನ +ಭೀಮನ
ದಾಳಿಯನು +ತರಲಹಿರೆನುತ+ ಘಾ
ತಾಳಿಯರು +ಮುನಿಜನವ+ ಬೈದರು +ಬಹು+ವಿಕಾರದಲಿ

ಅಚ್ಚರಿ:
(೧) ಗಣಿಕೆಯರನು ಕರೆದ ಪರಿ – ಘಾತಾಳಿಯರು ಮುನಿಜನವ ಬೈದರು ಬಹುವಿಕಾರದಲಿ
(೨) ಪಾಲಕ, ಒಡೆಯ, ಪಾಲ – ಸಾಮ್ಯಾರ್ಥ ಪದಗಳು

ಪದ್ಯ ೨೯: ದುರ್ಯೋಧನನು ಸಭೆಯನ್ನು ಹೇಗೆ ರಚಿಸಿದನು?

ಕರೆಸಿದನು ಮಣಿಮಕುಟ ಕಿರಣದ
ಗರುವರನು ಗಾಢಪ್ರತಾಪರ
ಬರಿಸಿದನು ತೂಕದ ಮಹಾ ಮಂಡಳಿಕ ಮನ್ನೆಯರ
ಧುರವಿಜಯ ಸಿದ್ಧರನು ಚಾಮೀ
ಕರದ ಗದ್ದುಗೆಯಖಿಳ ಸಾಮಂ
ತರನು ಪೃಥ್ವೀಪಾಲರನು ನೆರಹಿದನು ಭೂಪಾಲ (ಉದ್ಯೋಗ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಸಭೆಗೆ ಮಣಿಮಕುಟ ಕಿರೀಟವನ್ನು ಅಲಂಕರಿಸಿದ ಹಿರಿಯರನ್ನು, ಹೆಚ್ಚು ಪರಾಕ್ರಮಶಾಲಿಗಳನ್ನು, ಗೌರವಕ್ಕೆ ಪಾತ್ರರಾದ ಮಂಡಳೀಕರನ್ನು, ಯುದ್ಧದಲ್ಲಿ ಜಯಗಳಿಸುವ ಸಾಮರ್ಥ್ಯವುಳ್ಳವರನ್ನು, ಬಂಗಾರದ ಸಿಂಹಾಸನವನ್ನು ಅಲಂಕರಿಸುವ ದೇಶದ ಎಲ್ಲಾ ಶ್ರೇಷ್ಠ ರಾಜರನ್ನು ಸಂಧಿಯ ಸಭೆಗೆ ಒಟ್ಟುಗೂಡಿಸಿದನು.

ಅರ್ಥ:
ಕರೆಸು: ಬರೆಮಾಡು; ಮಣಿ: ರತ್ನ; ಮಕುಟ: ಕಿರೀಟ; ಕಿರಣ: ಕಾಂತಿ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ, ಅತಿಶಯ; ಪ್ರತಾಪ: ಪರಾಕ್ರಮ; ಬರಿಸು: ತುಂಬಿಸು; ತೂಕ: ಭಾರ, ಗುರುತ್ವ; ಮಹಾ: ಶ್ರೇಷ್ಠ; ಮಂಡಳಿಕ: ಸಾಮಂತ; ಮನ್ನೆಯ: ಮೆಚ್ಚಿನ, ಗೌರವಕ್ಕೆ ಪಾತ್ರನಾದ; ಧುರ: ಸಿರಿ, ಸಂಪತ್ತು; ಧುರವಿಜಯ: ಯುದ್ಧದಲ್ಲಿ ವಿಜಯ ಸಾಧಿಸುವವ; ಸಿದ್ಧ: ಸಾಧಿಸಿದವನು; ಚಾಮೀಕರ:ಬಂಗಾರ, ಚಿನ್ನ; ಗದ್ದುಗೆ: ಸಿಂಹಾಸನ; ಅಖಿಳ: ಎಲ್ಲಾ; ಸಾಮಂತ:ಒಬ್ಬ ರಾಜನಿಗೆ ಅಧೀನದಲ್ಲಿದ್ದು ಕಪ್ಪಕಾಣಿಕೆಗಳನ್ನು ಒಪ್ಪಿಸುವ ಆಶ್ರಿತರಾಜ, ಮಾಂಡ ಲಿಕ; ಪೃಥ್ವಿ: ಭೂಮಿ; ಪೃಥ್ವೀಪಾಲ: ರಾಜ; ನೆರಹು: ಸೇರಿಸು, ಒಟ್ಟುಗೂಡಿಸು; ಭೂಪಾಲ: ರಾಜ;

ಪದವಿಂಗಡಣೆ:
ಕರೆಸಿದನು+ ಮಣಿಮಕುಟ +ಕಿರಣದ
ಗರುವರನು+ ಗಾಢ+ಪ್ರತಾಪರ
ಬರಿಸಿದನು +ತೂಕದ +ಮಹಾ +ಮಂಡಳಿಕ+ ಮನ್ನೆಯರ
ಧುರವಿಜಯ +ಸಿದ್ಧರನು +ಚಾಮೀ
ಕರದ +ಗದ್ದುಗೆಯ+ಅಖಿಳ +ಸಾಮಂ
ತರನು+ ಪೃಥ್ವೀಪಾಲರನು +ನೆರಹಿದನು +ಭೂಪಾಲ

ಅಚ್ಚರಿ:
(೧) ಗುಣವಿಶೇಷಣಗಳ ಬಳಕೆ – ಮಣೀಮಕುಟ ಕಿರಣದ, ಗಾಢ ಪ್ರತಾಪ, ಮಹಾ ಮಂಡಳಿಕ, ಚಾಮೀಕರದ ಗದ್ದುಗೆ
(೨) ‘ಮ’ ಕಾರದ ತ್ರಿವಳಿ ಪದ – ಮಹಾ ಮಂಡಳಿಕ ಮನ್ನೆಯರು
(೩) ಪೃಥ್ವೀಪಾಲ, ಭೂಪಾಲ – ಸಮನಾರ್ಥಕ ಪದ