ಪದ್ಯ ೬೭: ಆದಿಶೇಷನ ಕೊರಳೇಕೆ ನೆಟ್ಟಗೆ ನಿಂತಿತು?

ರಥಚಯವ ನುಗ್ಗೊತ್ತಿದನು ಸಾ
ರಥಿಗಳನು ಸೀಳಿದನು ಸುಮಹಾ
ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ
ಶಿಥಿಲವಾಯಿತು ವೈರಿಬಲವತಿ
ಮಥನವಾಯಿತು ದೈತ್ಯನೂಳಿಗ
ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ (ದ್ರೋಣ ಪರ್ವ, ೧೫ ಸಂಧಿ, ೬೭ ಪದ್ಯ)

ತಾತ್ಪರ್ಯ:
ಬಕಾಸುರನ ಮಗನ ಸೇನೆಯ ರಥಗಳನ್ನು ಪುಡಿಯಾಗುವಂತೆ ಕುಕ್ಕಿದನು. ಸಾರಥಿಗಳನ್ನು ಸೀಳಿದನು. ಮಹಾರಥರ ನಡುವೆ ನುಗ್ಗಿ ಅವರ ಬಿಂಕವನ್ನು ಮುರಿದನು. ವೈರಿ ಸೈನ್ಯವು ಬಲಹೀನವಾಯಿತು. ಘಟೋತ್ಕಚನ ಹಾವಳಿ ಮಿತಿ ಮೀರಿತು. ಭೂಮಿಯ ಭಾರವು ಕುಗ್ಗಿದುದರಿಂದ ಆದಿಶೇಷನ ಕೊರಳು ನೆಟ್ಟನೆ ನಿಂತಿತು.

ಅರ್ಥ:
ರಥ: ಬಂಡಿ; ಚಯ: ಸಮೂಹ, ರಾಶಿ; ನುಗ್ಗು: ತಳ್ಳು; ಒತ್ತು: ಆಕ್ರಮಿಸು, ಮುತ್ತು; ಸಾರಥಿ: ಸೂತ; ಸೀಳು: ಕಡಿದು ಹಾಕು; ಮಹಾರಥ: ಪರಾಕ್ರಮಿ; ಬಿಂಕ: ಗರ್ವ, ಜಂಬ; ಬಿಗುಹು: ಗಟ್ಟಿ; ಮುರಿ: ಸೀಳು; ಹೊಕ್ಕು: ಸೇರು; ಬೀದಿ: ಮಾರ್ಗ; ಶಿಥಿಲ: ದೃಢವಲ್ಲದ; ವೈರಿ: ಶತ್ರು; ಬಲ: ಶಕ್ತಿ; ಮಥನ: ನಾಶ; ದೈತ್ಯ: ರಾಕ್ಷಶ; ಊಳಿಗ: ಕೆಲಸ, ಕಾರ್ಯ; ಪೃಥು: ಭೂಮಿ; ಲಘು: ಭಾರವಿಲ್ಲದ; ಫಣಿ: ಹಾವು; ಕೊರಳು: ಕಂಠ; ನಿಮಿರು: ನೆಟ್ಟಗಾಗು;

ಪದವಿಂಗಡಣೆ:
ರಥ+ಚಯವ +ನುಗ್+ಒತ್ತಿದನು +ಸಾ
ರಥಿಗಳನು +ಸೀಳಿದನು +ಸುಮಹಾ
ರಥರ +ಬಿಂಕದ +ಬಿಗುಹ +ಮುರಿದನು +ಹೊಕ್ಕು +ಬೀದಿಯಲಿ
ಶಿಥಿಲವಾಯಿತು +ವೈರಿಬಲವ್+ಅತಿ
ಮಥನವಾಯಿತು +ದೈತ್ಯನ್+ಊಳಿಗ
ಪೃಥುವಿ +ಲಘುತರವಾಯ್ತು +ಫಣಿಪನ+ ಕೊರಳು +ಸೈನಿಮಿರೆ

ಅಚ್ಚರಿ:
(೧) ರೂಪಕದ ಪ್ರಯೋಗ – ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ
(೨) ರಥ, ರಥಿ, ರಥ – ೧-೩ ಸಾಲಿನ ಪದಗಳ ರಚನೆ

ಪದ್ಯ ೪೧: ಕರ್ಣನು ಮತ್ತೆ ಯುದ್ಧಕ್ಕೆ ಹೇಗೆ ಬಂದನು?

ರಥವ ಮೇಳೈಸಿದನು ಹೊಸ ಸಾ
ರಥಿಯ ಕರಸಿದನಾಹವದೊಳತಿ
ರಥಭಯಂಕರನೇರಿದನು ಬಲುಬಿಲ್ಲನೊದರಿಸುತ
ಪೃಥುವಿ ನೆಗ್ಗಲು ಸುಭಟ ಸಾಗರ
ಮಥನ ಕರ್ಣನು ಭೀಮಸೇನನ
ರಥವನರಸುತ ಬಂದು ಪುನರಪಿ ಕಾಳೆಗವ ಹಿಡಿದ (ದ್ರೋಣ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅತಿರಥ ಭಯಂಕರನಾದ ಕರ್ಣನು ಹೊಸ ರಥವನ್ನು ಜೋಡಿಸಿದನು. ಹೊಸ ಸಾರಥಿಯನ್ನು ಕರೆಸಿಕೊಂಡನು. ರಥವನ್ನೇರಿ ಹೆದೆಯನ್ನು ಧ್ವನಿಮಾಡಿ, ಭೂಮಿ ಕುಸಿಯುವ ವೇಗದಿಂದ ಸುಭಟ ಸಮುದ್ರವನ್ನು ಕಡೆಯಬಲ್ಲ ಕರ್ಣನು ಭೀಮನ ರಥವನ್ನು ಹುಡುಕುತ್ತಾ ಬಂದು ಅವನೊಡನೆ ಯುದ್ಧವನ್ನಾರಂಭಿಸಿದನು.

ಅರ್ಥ:
ರಥ: ಬಂಡಿ; ಮೇಳೈಸು: ಸೇರು, ಜೊತೆಯಾಗು; ಹೊಸ: ನವೀನ; ಸಾರಥಿ: ಸೂತ; ಕರಸು: ಬರೆಮಾಡು; ಆಹವ: ಯುದ್ಧ; ಅತಿರಥ: ಪರಾಕ್ರಮಿ; ಭಯಂಕರ: ಸಾಹಸಿ, ಗಟ್ಟಿಗ; ಏರು: ಹೆಚ್ಚಾಗು; ಬಲು: ಬಹಳ; ಬಿಲ್ಲು: ಚಾಪ, ಧನುಸ್ಸು; ಒದರು: ಗುಂಪು, ತೊಡಕು; ಪೃಥು: ಭೂಮಿ; ನೆಗ್ಗು: ಕುಗ್ಗು, ಕುಸಿ; ಸುಭಟ: ಪರಾಕ್ರಮಿ; ಸಾಗರ: ಸಮುದ್ರ; ಮಥನ: ಕಡೆಯುವುದು, ಮಂಥನ; ಅರಸು: ಹುಡುಕು; ಬಂದು: ಆಗಮಿಸು; ಪುನರಪಿ: ಪುನಃ; ಕಾಳೆಗ: ಯುದ್ಧ; ಹಿಡಿ: ಗ್ರಹಿಸು;

ಪದವಿಂಗಡಣೆ:
ರಥವ +ಮೇಳೈಸಿದನು +ಹೊಸ +ಸಾ
ರಥಿಯ +ಕರಸಿದನ್+ಆಹವದೊಳ್+ಅತಿ
ರಥ+ಭಯಂಕರನ್+ಏರಿದನು +ಬಲುಬಿಲ್ಲನ್+ಒದರಿಸುತ
ಪೃಥುವಿ +ನೆಗ್ಗಲು +ಸುಭಟ +ಸಾಗರ
ಮಥನ+ ಕರ್ಣನು +ಭೀಮಸೇನನ
ರಥವನ್+ಅರಸುತ +ಬಂದು +ಪುನರಪಿ +ಕಾಳೆಗವ +ಹಿಡಿದ

ಅಚ್ಚರಿ:
(೧) ರಥ, ಅತಿರಥ – ಪ್ರಾಸ ಪದ
(೨) ಕರ್ಣನ ಶಕ್ತಿ – ಸುಭಟ ಸಾಗರ ಮಥನ ಕರ್ಣನು

ಪದ್ಯ ೩೫: ದ್ರೌಪದಿಯ ಯಾವ ನುಡಿಯಿಂದ ಫಲವು ಮೇಲಕ್ಕೇರಿತು?

ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ
ಪೃಥುವಿಯಲಿ ಪರಪುರುಷರನು ದು
ರ್ಮತಿಯಲೊಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು (ಅರಣ್ಯ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೃಷ್ಣನಿಗೆ ನಮಸ್ಕರಿಸುತ್ತಾ, ಭಗವಂತನ ಅಪ್ಪಣೆಯಂತೆ ನನಗೆ ಐವರು ಗಂಡರು, ಮನಸ್ಸಿನಲ್ಲಿ ಆರು, ಮತ್ತೇನು ನನ್ನ ಮನಸ್ಸಿನಲ್ಲಿಲ್ಲ, ಭೂಮಿಯಲ್ಲಿ ಬೇರೊಬ್ಬ ಗಂಡಸನ್ನು ಸಮ್ಮತಿಸುವವಳು ಹೆಣ್ಣೇ ಎಂದು ದ್ರೌಪೈದ್ಯು ಹೇಳಲು ಹಣ್ಣು ತನ್ನ ಸ್ಥಾನಕ್ಕೆ ಹೋಗಿ ಸೇರಿತು.

ಅರ್ಥ:
ಪತಿ: ಗಂಡ; ಈಶ್ವರ: ಭಗವಂತ; ಆಜ್ಞೆ: ಅಪ್ಪಣೆ; ಅತಿಶಯ: ಹೆಚ್ಚು, ಅಧಿಕ; ಮನಸ್ಸು: ಚಿತ್ತ; ಮತ: ವಿಚಾರ; ಪೃಥುವಿ: ಭೂಮಿ; ಪರಪುರುಷ: ಬೇರೆ ಗಂಡಸು; ದುರ್ಮತಿ: ಕೆಟ್ಟ ಬುದ್ಧಿ; ಒಡಬಡು: ಒಪ್ಪು; ಸತಿ: ಹೆಣ್ಣು; ಸತತ: ಯಾವಾಗಲು; ಕರುಣಾಕರ: ಕರುಣೆಗೆ ಗಣಿಯಾದವನು; ಫಲ: ಹಣ್ಣು; ಠಾವು: ಎಡೆ, ಸ್ಥಳ; ಅಡರು: ಮೇಲಕ್ಕೆ ಹತ್ತು;

ಪದವಿಂಗಡಣೆ:
ಪತಿಗಳ್+ಈಶ್ವರನ್+ಆಜ್ಞೆ+ಇಂದವೆ
ಅತಿಶಯದಲ್+ಐವರು +ಮನಸ್ಸಿನ
ಮತದಲ್+ಆರಾಗಿಹುದು+ ಬೇರೊಂದಿಲ್ಲ +ಚಿತ್ತದಲಿ
ಪೃಥುವಿಯಲಿ +ಪರಪುರುಷರನು+ ದು
ರ್ಮತಿಯಲ್+ಒಡಬಡುವವಳು +ಸತಿಯೇ
ಸತತ+ ಕರುಣಾಕರ+ಎನಲು +ಫಲ +ಠಾವನ್+ಅಡರಿದುದು

ಅಚ್ಚರಿ:
(೧) ದ್ರೌಪದಿಯ ನುಡಿ – ಪೃಥುವಿಯಲಿ ಪರಪುರುಷರನು ದುರ್ಮತಿಯಲೊಡಬಡುವವಳು ಸತಿಯೇ