ಪದ್ಯ ೨೦: ಪಾಂಡವರು ಹೇಗೆ ದುಃಖಿಸಿದರು?

ಬೊಪ್ಪ ದೇಸಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆಯಿ
ದೊಪ್ಪುದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು (ಆದಿ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಪ್ಪಾ, ನಾವು ಅನಾಥರಾದೆವು. ನಮ್ಮ ಭಾಗ್ಯವನ್ನು ವಿಧಿಯು ಸೆಳೆದುಕೊಂಡಿತು. ನಮ್ಮನ್ನು ಯಾರಿಗೊಪ್ಪಿಸಿ ಹೋದೆ? ಈ ಮುಪ್ಪಿನಲ್ಲಿ ಅಡವಿಯಲ್ಲಿ ಹೀಗೆ ಮಲಗಿರುವುದೇಕೆ? ನಿನಗೆ ಇದು ಒಪ್ಪುತ್ತದೆಯೇ? ಎಂದು ಪಾಂಡವರು ದುಃಖಿಸಿದರು.

ಅರ್ಥ:
ಬೊಪ್ಪ: ಅಪ್ಪ, ತಂದೆ; ದೇಸಿಗ: ಅನಾಥ; ವಿಧಿ: ನಿಯಮ; ತಪ್ಪಿಸು: ಅಡ್ಡಿಮಾಡು; ಭಾಗ್ಯ: ಶುಭ; ಒಪ್ಪಿಸು: ಸಮರ್ಪಿಸು; ಪೂರ್ವ: ಹಿಂದೆ; ಕಾಲ: ಸಮಯ; ಮುಪ್ಪು: ವಯಸ್ಸಾದ ಸ್ಥಿತಿ; ಅವಸ್ಥೆ: ಸ್ಥಿತಿ; ಒಪ್ಪು: ಸರಿಹೊಂದು; ಹೇರಡವಿ: ದಟ್ಟವಾದ ಕಾಡು; ಮಲಗು: ನಿದ್ರಿಸು; ಒರಲು: ಅರಚು; ಮರುಗು: ತಳಮಳ, ಸಂಕಟ; ಕುಮಾರಕರು: ಮಕ್ಕಳು;

ಪದವಿಂಗಡಣೆ:
ಬೊಪ್ಪ +ದೇಸಿಗರಾದೆವೈ +ವಿಧಿ
ತಪ್ಪಿಸಿತಲಾ +ನಮ್ಮ+ ಭಾಗ್ಯವನ್
ಒಪ್ಪಿಸಿದೆ +ನೀನಾರಿಗ್+ಎಮ್ಮನು +ಪೂರ್ವ+ಕಾಲದಲಿ
ಮುಪ್ಪಿನಲಿ +ನಿನಗೀ+ಅವಸ್ಥೆ+ಇದ್
ಒಪ್ಪುದೇ +ಹೇರಡವಿಯಲಿ +ಮಲ
ಗಿಪ್ಪುದ್+ಏಕೆಂದ್+ಒರಲಿ +ಮರುಗಿದರಾ+ ಕುಮಾರಕರು

ಅಚ್ಚರಿ:
(೧) ದುಃಖವನ್ನು ವಿವರಿಸುವ ಪರಿ – ದೇಸಿಗರಾದೆವೈ ವಿಧಿತಪ್ಪಿಸಿತಲಾ ನಮ್ಮ ಭಾಗ್ಯವ

ಪದ್ಯ ೪೧: ದುರ್ಯೋಧನನು ಯಾವ ವಿದ್ಯೆಯನ್ನು ಸ್ಮರಿಸಿಕೊಂಡನು?

ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗಸಬುಜಾಕ್ಷಿಯರ ಕಳುಹು
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ (ಗದಾ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಸಂಜಯನೊಂದಿಗೆ ಮಾತನಾಡುತ್ತಾ, ಸಂಜಯ ಜೋರಾಗಿ ಅಳಬೇಡ, ಶತ್ರುಗಳು ನಾನಿರುವ ಸ್ಥಳವನ್ನು ತಿಳಿದುಕೊಂಡುಬಿಡುತ್ತಾರೆ. ನನ್ನನ್ನು ಮರೆತು ಹಿಂದಿರುಗಿ ಹೋಗಿ ಪಾಳೆಯವನ್ನು ಎತ್ತಿಸು. ಸ್ತ್ರೀಯರನ್ನು ಗಜಪುರಕ್ಕೆ ಕಳಿಸು, ನನಗೆ ಜಾಗಬಿಡು, ಎನ್ನುತ್ತಾ ತನ್ನ ಮುಂಜೆರಗನ್ನು ಸರಿಯಾಗಿ ಕಟ್ಟಿಕೊಂಡು, ಹಿಂದೆ ತಾನು ಕಲಿತಿದ್ದ ಜಲಸ್ತಂಭವಿದ್ಯೆಯನ್ನು ಸ್ಮರಿಸಿಕೊಂಡನು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ವಿರೋಧಿ: ವೈರಿ; ಅರಿ: ತಿಳಿ; ಮರೆ: ನೆನಪಿನಿಂದ ದೂರಮಾಡು; ಕಳೆ: ಬೀಡು, ತೊರೆ; ಪಾಳೆಯ: ಬೀಡು, ಶಿಬಿರ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳ, ಸ್ತ್ರೀ; ಕಳುಹು: ಕಳುಹಿಸು; ತೆರಹು: ಎಡೆ, ಜಾಗ; ಹೋಗು: ತೆರಳು; ಮುಂಜೆರಗು: ಹೊದ್ದ ವಸ್ತ್ರದ ಅಂಚು, ಸೆರಗಿನ ತುದಿ; ಅಳವಡಿಸು: ಸರಿಮಾಡು; ಸೆಕ್ಕಿ: ಸಿಕ್ಕಿಸು; ಪೂರ್ವ: ಹಿಂದೆ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ, ನಿಶ್ಚಲತೆ; ವಿದ್ಯೆ: ಜ್ಞಾನ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಒರಲದಿರು +ಸಂಜಯ +ವಿರೋಧಿಗಳ್
ಅರಿವರ್+ಆನಿದ್ದೆಡೆಯನ್+ಇಲ್ಲಿಯೆ
ಮರೆದು +ಕಳೆ +ಪಾಳೆಯವ +ತೆಗಸ್+ಅಬುಜಾಕ್ಷಿಯರ+ ಕಳುಹು
ತೆರಹುಗೊಡು +ನೀ +ಹೋಗೆನುತ +ಮುಂ
ಜೆರಗನ್+ಅಳವಡೆ+ ಸೆಕ್ಕಿ+ ಪೂರ್ವದಲ್
ಅರಿದ +ಸಲಿಲಸ್ತಂಭ+ವಿದ್ಯೆಯನ್+ಅರಸ +ಚಿಂತಿಸಿದ

ಅಚ್ಚರಿ:
(೧) ಅರಿ – ೨, ೬ ಸಾಲಿನ ಮೊದಲ ಪದ
(೨) ಹೆಂಗಸು ಎಂದು ಹೇಳಲು ಅಬುಜಾಕ್ಷಿ ಪದದ ಬಳಕೆ