ಪದ್ಯ ೨೩: ಕೌರವನು ಭೀಮನ ಯಾವ ಭಾಗಕ್ಕೆ ಹೊಡೆದನು?

ಘಾಯಗತಿ ಲೇಸಾಯ್ತು ಪೂತುರೆ
ವಾಯುಸುತ ದಿಟ ಸೈರಿಸೆನ್ನಯ
ಘಾಯವನು ಘೋರಪ್ರಹಾರಸಹಿಷ್ಣು ಗಡ ನೀನು
ಕಾಯಲಾಪಡೆ ಫಲುಗುಣನನಬು
ಜಾಯತಾಕ್ಷನ ಕರೆಯೆನುತ ಕುರು
ರಾಯನೆರಗಿದನನಿಲಜನ ಕರ್ಣ ಪ್ರದೇಶದಲಿ (ಗದಾ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಿನ್ನ ಹೊಡೆತದ ರೀತಿ ಬಹಳ ಉತ್ತಮವಾಗಿತ್ತು ಭೀಮ, ಭಲೇ, ನನ್ನ ಹೊಡೆತವನ್ನು ಸಹಿಸಿಕೋ ಎಂದು ಹೇಳುತ್ತಾ ಘೋರವಾದ ಪ್ರಹಾವರು ಬಿದ್ದರೂ ನೀನು ಸಹಿಸಿಕೊಳ್ಳಬಲ್ಲೆ ಆದರೆ ನನ್ನ ಹೊಡೆತದಿಂದ ನೀನು ತಪ್ಪಿಸಿಕೊಳ್ಳಲಾರೆ, ನಿನ್ನನ್ನು ಉಳಿಸಿಕೊಳ್ಳಲು ಅರ್ಜುನನನ್ನೋ, ಕೃಷ್ಣನನ್ನೋ ಕರೆ ಎನ್ನುತ್ತಾ ಕೌರವನು ಭೀಮನ ಕಿವಿಯ ಪ್ರದೇಶಕ್ಕೆ ಹೊಡೆದನು.

ಅರ್ಥ:
ಘಾಯ: ಪೆಟ್ಟು; ಗತಿ: ವೇಗ; ಲೇಸು: ಒಳಿತು; ಪೂತು: ಭಲೇ; ವಾಯುಸುತ: ಭೀಮ; ವಾಯು: ಅನಿಲ; ದಿಟ: ಸತ್ಯ; ಸೈರಿಸು: ತಾಳು; ಘೋರ: ಭಯಂಕರ; ಪ್ರಹಾರ: ಹೊಡೆಯುವಿಕೆ, ಪೆಟ್ಟು; ಸಹಿಷ್ಣು: ತಾಳ್ಮೆಯುಳ್ಳವನು; ಗಡ: ಅಲ್ಲವೆ; ತ್ವರಿತವಾಗಿ; ಕಾಯು: ರಕ್ಷಿಸು; ಅಬುಜಾಯತಾಕ್ಷ: ಕಮಲದಂತ ಕಣ್ಣುಳ್ಳ (ಕೃಷ್ಣ); ಕರೆ: ಬರೆಮಾದು; ರಾಯ: ರಾಜ; ಎರಗು: ಬಾಗು; ಅನಿಲಜ: ವಾಯುಪುತ್ರ; ಕರ್ಣ: ಕಿವಿ; ಪ್ರದೇಶ: ಜಾಗ;

ಪದವಿಂಗಡಣೆ:
ಘಾಯಗತಿ +ಲೇಸಾಯ್ತು +ಪೂತುರೆ
ವಾಯುಸುತ +ದಿಟ +ಸೈರಿಸ್+ಎನ್ನಯ
ಘಾಯವನು +ಘೋರ+ಪ್ರಹಾರ+ಸಹಿಷ್ಣು +ಗಡ +ನೀನು
ಕಾಯಲಾಪಡೆ +ಫಲುಗುಣನನ್+ಅಬು
ಜಾಯತಾಕ್ಷನ+ ಕರೆ+ಎನುತ +ಕುರು
ರಾಯನ್+ಎರಗಿದನ್+ಅನಿಲಜನ +ಕರ್ಣ+ ಪ್ರದೇಶದಲಿ

ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ಕಾಯಲಾಪಡೆ ಫಲುಗುಣನನಬುಜಾಯತಾಕ್ಷನ ಕರೆ

ಪದ್ಯ ೮೫: ಅರ್ಜುನನನ್ನು ನೋಡಲು ಯಾರು ಬಂದರು?

ನುಸಿಗಳಿವದಿರು ಮರ್ತ್ಯರೆಂಬವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬಂದಾತನಾರೋ ಪೂತುರೇಯೆನುತ
ವಸುಗಳಾದಿತ್ಯರು ಭುಜಂಗಮ
ವಿಸರ ಗಂಧರ್ವಾದಿ ದೇವ
ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ (ಅರಣ್ಯ ಪರ್ವ, ೮ ಸಂಧಿ, ೮೫ ಪದ್ಯ)

ತಾತ್ಪರ್ಯ:
ಮನುಷ್ಯರು ದೇವತೆಗಳಿಗೆ ನುಸಿಗಳಿದ್ದ ಹಾಗೆ, ಅಂತಹದರಲ್ಲಿ ಈ ಹುಲು ಮಾನವನು ಬಂದುದಕ್ಕೆ ಅಮರಾವತಿಯಲ್ಲೇಕೆ ಶುಭಸಮಾರಂಭ? ಬಂದವನು ಯಾರೋ ಹೋಗಿ ನೋಡೋಣ ಎಂದು ವಸುಗಳು, ಆದಿತ್ಯರು, ಸರ್ಪಗಳು, ಗಂಧರ್ವರ ಗುಂಪುಗಳು ಅರ್ಜುನನನ್ನು ನೋಡಲು ಬಂದರು.

ಅರ್ಥ:
ನುಸಿ: ಹುಡಿ, ಧೂಳು; ಇವದಿರು: ಇವರು; ಮರ್ತ್ಯ: ಮನುಷ್ಯ; ಒಸಗೆ: ಶುಭ, ಮಂಗಳಕಾರ್ಯ;
ಹೊಸತು: ನವೀನ; ಬಂದು: ಆಗಮಿಸು; ಪೂತುರೆ: ಭಲೇ, ಭೇಷ್; ವಸು: ದೇವತೆಗಳ ಒಂದು ವರ್ಗ; ಆದಿತ್ಯ: ಸೂರ್ಯ; ಭುಜಂಗ: ಹಾವು; ವಿಸರ: ವಿಸ್ತಾರ, ವ್ಯಾಪ್ತಿ; ಗಂಧರ್ವ: ದೇವಲೋಕದ ಸಂಗೀತಗಾರ; ಪ್ರಸರ: ಹರಡುವುದು; ಕಾಣಿಕೆ: ಉಡುಗೊರೆ, ದಕ್ಷಿಣೆ; ಪುರುಹೂತ: ಇಂದ್ರ; ನಂದನ: ಮಗ;

ಪದವಿಂಗಡಣೆ:
ನುಸಿಗಳ್+ಇವದಿರು +ಮರ್ತ್ಯರೆಂಬ್+ಅವರ್
ಒಸಗೆ+ಅಮರಾವತಿಯೊಳ್+ಏನಿದು
ಹೊಸತಲಾ +ಬಂದಾತನ್+ ಆರೋ +ಪೂತುರೇ+ಎನುತ
ವಸುಗಳ್+ಅದಿತ್ಯರು +ಭುಜಂಗಮ
ವಿಸರ +ಗಂಧರ್ವಾದಿ+ ದೇವ
ಪ್ರಸರ +ಬಂದುದು+ ಕಾಣಿಕೆಗೆ+ ಪುರುಹೂತ+ ನಂದನನ

ಅಚ್ಚರಿ:
(೧) ದೇವತೆಗಳ ವರ್ಗ: ಅದಿತ್ಯರು, ಭುಜಂಗ, ಗಂಧರ್ವ

ಪದ್ಯ ೨೨: ದೇವತೆಗಳೇಕೆ ಸಂತಸ ಪಟ್ಟರು?

ಅದ್ದ ರಥ ಹರಿಯುರವಣೆಗೆ ಚಿಗಿ
ದೆದ್ದು ಸಮವಾಯ್ತುಭಯ ಘಟ ನೆಗೆ
ದೆದ್ದು ವಳಯವ ಕೊಡಹಿ ನಿಂದವು ವೇದವಾಜಿಗಳು
ಎದ್ದುದೋ ರಥ ಖಳ ಮನೋರಥ
ವದ್ದುದೋ ಮಝ ಪೂತುರೆನುತು
ಬ್ಬೆದ್ದುದಮರಕದಂಬ ಭಾರಿಯ ಭುಜದ ಬೊಬ್ಬೆಯಲಿ (ಕರ್ಣ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕುಸಿದಿದ್ದ ರಥವು ವಿಷ್ಣುವಿನ ಶಕ್ತಿಯಿಂದ ಮೇಲಕ್ಕೆ ಚಿಗಿದು ಎರಡೂ ಗಾಲಿಗಳೂ ಸಮತಲದಲ್ಲಿ ನಿಂತವು. ವೇದಗಳೆಂಬ ಕುದುರೆಗಳು ಮೇಲೆದ್ದು ಸರಿಯಾಗಿ ನಿಂತು ತಲೆಯನ್ನು ಕೊಡವಿದವು. ರಥ ಮೇಲೆದ್ದಿತು, ರಾಕ್ಷಸರ ಮನಸ್ಸಿನ ಅಭಿಲಾಷೆ ಕುಸಿಯಿತು ಮಝ, ಭಲೇ ಎಂದು ದೇವತೆಗಳು ಕೂಗಿದರು.

ಅರ್ಥ:
ಅದ್ದ: ಮುಳುಗಿದ್ದ; ರಥ: ಬಂಡಿ, ತೇರು; ಹರಿ: ವಿಷ್ಣು; ಉರವಣೆ:ಹೆಚ್ಚಳ, ಅಬ್ಬರ; ಚಿಗಿದು: ಚಿಮ್ಮು; ಎದ್ದು: ಮೇಲೇಳು; ಸಮ: ಮಟ್ಟಸವಾದ; ಉಭಯ: ಎರಡು; ಘಟ: ಸೇರಿಕೆ; ನೆಗೆ: ಹಾರುವಿಕೆ, ನೆಗೆತ; ವಳಯ: ತಳಮಳ, ಚಡಪಡಿಕೆ; ಕೊಡಹು: ಒದರು; ನಿಂದು: ನಿಲ್ಲು; ವೇದ: ಆಗಮ; ವಾಜಿ: ಕುದುಎ; ಎದ್ದು: ಮೇಲೇಳು; ರಥ: ಬಂಡಿ; ಖಳ: ದುಷ್ಟ; ಮನೋರಥ: ಸುಂದರ; ಅದ್ದು: ಮುಳುಗು; ಮಝ: ಭಲೆ, ಕೊಂಡಾಟದ ನುಡಿ; ಪೂತುರೆ: ಭಲೆ; ಎನುತ: ಹೇಳುತ್ತಾ; ಉಬ್ಬೆದ್ದು: ಕೂಗು; ಅಮರ: ದೇವತೆ; ಕದಂಬ: ಗುಂಪು; ಭಾರಿ: ಜೋರು; ಭುಜ: ತೋಳು, ಬಾಹು; ಬೊಬ್ಬೆ: ಕೂಗು, ಗರ್ಜನೆ;

ಪದವಿಂಗಡಣೆ:
ಅದ್ದ +ರಥ +ಹರಿ+ಉರವಣೆಗೆ +ಚಿಗಿ
ದೆದ್ದು +ಸಮವಾಯ್ತ್+ಉಭಯ +ಘಟ +ನೆಗೆ
ದೆದ್ದು +ವಳಯವ +ಕೊಡಹಿ +ನಿಂದವು +ವೇದ+ವಾಜಿಗಳು
ಎದ್ದುದೋ +ರಥ +ಖಳ +ಮನೋರಥವ್
ಅದ್ದುದೋ +ಮಝ +ಪೂತುರೆನುತ್
ಉಬ್ಬೆದ್ದುದ್+ಅಮರ+ಕದಂಬ +ಭಾರಿಯ +ಭುಜದ+ ಬೊಬ್ಬೆಯಲಿ

ಅಚ್ಚರಿ:
(೧) ಚಿಗಿದೆದ್ದು, ನೆಗೆದೆದ್ದು – ಪ್ರಾಸ ಪದ
(೨) ಮಝ, ಪೂತುರೆ – ಸಮನಾರ್ಥಕ ಪದ, ಜನರನ್ನು ಉತ್ತೆಜಿಸುವ ಪದಗಳು

ಪದ್ಯ ೩೧: ದೇವೆಂದ್ರನ ಕೋಪದನುಡಿಗಳು ಹೇಗಿದ್ದವು?

ಐಸಲೇ ನಮ್ಮವರಲಾ ಹೋ
ಹೋ ಸುರರು ಕಳವಳಿಸದಿರಿ ಯಾ
ಪೈಸನಾಹುತಿಗೊಳಲಿ ಪಾವಕನೆಮ್ಮ ಖಾಂಡವವ
ಈ ಸುರರಿಗಾ ನರರಿಗಂತರ
ವೇಸು ಪೂತುರೆ ಕಾಲಗತಿಯೆನು
ತಾ ಸುರೇಶ್ವರ ಖಾತಿಗೊಂಡನು ಕೃಷ್ಣಪಾರ್ಥರಿಗೆ (ಆದಿ ಪರ್ವ, ೨೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹಿಂದೆ ಮನ್ನೆಯಗಂಡನಾಗು ಎಂದು ದೇವತೆಗಳು ಹೇಳಿದ ಬಳಿಕ, ಇಂದ್ರ ಮಾತು:
ಇವರೆಲ್ಲರೂ ನಮ್ಮವರೆ ಅಲ್ಲವೆ, ಓಹೋ, ದೇವತೆಗಳೇ ನೀವು ಕಳವಳ ಗೊಳ್ಳದಿರಿ, ತನಗಾಗುವಷ್ಟನ್ನು ಅಗ್ನಿಯು ನಮ್ಮ ಖಾಂಡವ ವನವನ್ನು ಆಹುತಿಗೊಳ್ಳಲಿ, ಈ ದೇವತೆಗಳಿಗೆ ಮತ್ತು ಮನುಷ್ಯರಿಗೆ ಅಂತರ ಎಲ್ಲಿಂದೆಲ್ಲಿಗೆ, ಭಲೇ ಕಾಲಗತಿಯೇ, ಎಂದು ಇಂದ್ರನು ಕೃಷ್ಣಾರ್ಜುನರ ಮೇಲೆ ಕೋಪಗೊಂಡನು.

ಅರ್ಥ:
ಐಸಲೇ: ಅಲ್ಲವೇ; ನಮ್ಮವರು: ಹತ್ತಿರದವರು; ಸುರರು: ದೇವತೆಗಳು; ಕಳವಳ: ಭಯ, ಆತಂಕ; ಆಹುತಿ: ಬಲಿ; ಪಾವಕ:ಅಗ್ನಿ; ವೇಸು: ಎಷ್ಟು; ಪೂತುರೆ: ಭಲೆ; ಕಾಲ: ಸಮಯ; ಗತಿ: ವೇಗ; ಖಾತಿ:ಕೋಪ;

ಪದವಿಂಗಡಣೆ:
ಐಸಲೇ +ನಮ್ಮವರಲಾ +ಹೋ
ಹೋ +ಸುರರು+ ಕಳವಳಿಸದಿರಿ+ ಯಾ
ಪೈಸನ್+ಆಹುತಿಗೊಳಲಿ +ಪಾವಕನ್+ಎಮ್ಮ +ಖಾಂಡವವ
ಈ +ಸುರರಿಗ್+ಆ +ನರರಿಗ್+ಅಂತರ
ವೇಸು +ಪೂತುರೆ +ಕಾಲಗತಿ+ಯೆನುತ್
ಆ+ ಸುರೇಶ್ವರ+ ಖಾತಿಗೊಂಡನು +ಕೃಷ್ಣ+ಪಾರ್ಥರಿಗೆ

ಅಚ್ಚರಿ:
(೧) ಒಂದು ಸಂವಾದದ ರೀತಿ ಇಂದ್ರನ ಮಾತುಗಳನ್ನು ಹೇಳಿರುವುದು
(೨) ಐಸಲೇ, ಹೋ ಹೋ, ಪೂತುರೆ – ಘೋಷಣಾ ಪದಗಳ ಬಳಕೆ