ಪದ್ಯ ೩: ಕೌರವನನ್ನು ಹೇಗೆ ಎಚ್ಚರಿಸಿದರು?

ಕಂಡು ಕಂಬನಿದುಂಬಿದರು ಭೂ
ಮಂಡಲಾಧಿಪ ವೈರಿಮದವೇ
ತಂಡ ಕೇಸರಿಯಿರವಿದೇ ಮಝ ಪೂತು ವಿಧಿಯೆನುತ
ಗಂಡುಗಲಿಯವಧಾನ ರಿಪುಬಲ
ದಂಡಧರನವಧಾನ ಕುರುಕುಲ
ಚಂಡಕರನವಧಾನವೆನುತೆಚ್ಚರಿಸಿದರು ನೃಪನ (ಗದಾ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಕೃಪ, ಕೃತವರ್ಮ, ಅಶ್ವತ್ಥಾಮ, ಈ ಮೂವರು ದುರ್ಯೋಧನನು ಇದ್ದ ಸ್ಥಿತಿಯನ್ನು ನೋಡಿ ಕಣ್ಣಿರಿಟ್ಟರು. ವೈರಿಗಳೆಂಬ ಮದಗಜಗಳಿಗೆ ಸಿಂಹದಂತಿದ್ದ ದುರ್ಯೋಧನನಿಗೆ ಇಂತಹ ಸ್ಥಿತಿಯುಂಟಾಯಿತೇ? ಭಲೇ ವಿಧಿಯೇ, ನಿನ್ನ ಆಟ ಎಂತಹುದು! ಎಂದು ಉದ್ಗರಿಸಿದರು. ಗಂಡುಗಲಿಯೇ ಕೇಳು, ಶತ್ರುಗಳ ಪಾಲಿಗೆ ಯಮನೇ ಕೇಳು, ಕುರುಕುಲಕ್ಕೆ ಸೂರ್ಯನಾದವನೇ ಕೇಳು ಎಂದು ಅವನನ್ನು ಎಚ್ಚರಿಸಿದರು.

ಅರ್ಥ:
ಕಂಡು: ನೋಡು; ಕಂಬನಿ: ಕಣ್ಣೀರು; ತುಂಬು: ಭರಿತವಾಗು; ಭೂಮಂಡಲ: ಭೂಮಿ; ಅಧಿಪ: ಒಡೆಯ; ಭೂಮಂಡಲಾಧಿಪ: ರಾಜ; ವೈರಿ: ಶತ್ರು; ಮದ: ಅಹಂಕಾರ; ತಂಡ: ಗುಂಪು; ಕೇಸರಿ: ಸಿಂಹ; ಮಝ: ಭಲೇ; ಪೂತು: ಭಲೇ; ವಿಧಿ: ನಿಯಮ; ಗಂಡುಗಲಿ: ಪರಾಕ್ರಮಿ; ಅವಧಾನ: ಕೇಳು; ರಿಪು: ವೈರಿ; ಬಲ: ಸೈನ್ಯ, ಶಕ್ತಿ; ದಂಡಧರ: ಯಮ; ಕುಲ: ವಂಶ; ಚಂಡಕರ: ತೀಕ್ಷ್ಣವಾದ ಕಿರಣಗಳುಳ್ಳವನು, ಸೂರ್ಯ; ಎಚ್ಚರ: ಪ್ರಜ್ಞೆ ಬಂದಿರುವ ಸ್ಥಿತಿ;

ಪದವಿಂಗಡಣೆ:
ಕಂಡು +ಕಂಬನಿ+ತುಂಬಿದರು +ಭೂ
ಮಂಡಲಾಧಿಪ+ ವೈರಿಮದವೇ
ತಂಡ +ಕೇಸರಿ+ಇರವಿದೇ+ ಮಝ +ಪೂತು +ವಿಧಿಯೆನುತ
ಗಂಡುಗಲಿ+ಅವಧಾನ +ರಿಪುಬಲ
ದಂಡಧರನ್+ಅವಧಾನ +ಕುರುಕುಲ
ಚಂಡಕರನ್+ಅವಧಾನವ್+ಎನುತ್+ಎಚ್ಚರಿಸಿದರು +ನೃಪನ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಗಂಡುಗಲಿ, ರಿಪುಬಲದಂಡಧರ, ಕುರುಕುಲಚಂಡಕರ, ವೈರಿಮದವೇತಂಡ ಕೇಸರಿ

ಪದ್ಯ ೨೭: ಶಲ್ಯನನ್ನು ಹೇಗೆ ಹೊಗಳಿದರು?

ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇಅ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು (ಶಲ್ಯ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಾತ್ಯಕಿ ಸೋಮಕ ಮೊದಲಾದವರು, ಭಲೇ, ಕರ್ನನ ಸೇಡನ್ನು ತೀರಿಸಲು ಶಲ್ಯನು ಮುಂದಾದನೇ? ಇವನೇ ಸೇನಾಧಿಪತಿಯಾಗಲು ಅರ್ಹನಾದ ವೀರನು. ನಿಲುಮೆ, ಸತ್ವ, ನಿರ್ಭೀತಿ ದರ್ಪಗಳು ಇವನಲ್ಲಿ ಎದ್ದುಕಾಣುತ್ತಿದೆ ಎಂದು ಶಲ್ಯನನ್ನು ಹೊಗಳಿದರು.

ಅರ್ಥ:
ಪೂತು: ಭಲೇ; ಮಝ: ಕೊಂಡಾಟದ ಮಾತು; ಹೊಕ್ಕು: ಸೇರು; ಸೂತಜ: ಸೂತನ ಮಗ (ಕರ್ಣ); ಹರಿಬ: ಕೆಲಸ, ಕಾರ್ಯ; ವೀರ: ಶೂರ; ವ್ರಾತ: ಗುಂಪು; ಗಣನೆ: ಲೆಕ್ಕ; ಧಾತು: ಮೂಲ ವಸ್ತು, ತೇಜಸ್ಸು; ದಿಟ್ಟ: ನಿಜ; ನಿರ್ಭೀತ: ಭಯವಿಲ್ಲದ; ಗರ್ವಿತ: ಅಹಂಕಾರಿ; ಭಟ: ಸೈನಿಕ; ಹೊಗಳು: ಪ್ರಶಂಶಿಸು; ಆದಿ: ಮುಂತಾದ;

ಪದವಿಂಗಡಣೆ:
ಪೂತು +ಮಝರೇ +ಶಲ್ಯ+ ಹೊಕ್ಕನೆ
ಸೂತಜನ+ ಹರಿಬದಲಿ +ವೀರ
ವ್ರಾತ+ಗಣನೆಯೊಳ್+ಈತನೊಬ್ಬನೆ +ಹಾ +ಮಹಾದೇವ
ಧಾತುವೊಳ್ಳಿತು+ ದಿಟ್ಟನೈ +ನಿ
ರ್ಭೀತ+ಗರ್ವಿತನ್+ಇವನೆನುತ +ಭಟರ್
ಈತನನು +ಹೊಗಳಿದರು +ಸಾತ್ಯಕಿ +ಸೋಮಕಾದಿಗಳು

ಅಚ್ಚರಿ:
(೧) ಶಲ್ಯನನ್ನು ಹೊಗಳಿದ ಪರಿ – ಧಾತುವೊಳ್ಳಿತು, ದಿಟ್ಟ, ನಿರ್ಭೀತ, ಗರ್ವಿತ

ಪದ್ಯ ೪೪: ನಾರಾಯಣಾಸ್ತ್ರವು ಭೀಮನಿಗೆ ಏನು ಹೇಳಿತು?

ಪೂತು ಪಾಯಿಕು ಭೀಮ ನೆರೆದೀ
ಬೂತು ಬಲದಲಿ ವೀರ ನೀನಹ
ಯೇತಕಿವದಿರು ಗಂಡು ಜೋಹದ ಗರುವ ಸೂಳೆಯರು
ಸೋತಡೆಯು ಜಯ ನಿನ್ನದೆನುತ ವಿ
ಧೂತಧೂಮದಿ ಕಿಡಿಯ ಝಾಡಿಗ
ಳೀತನನು ಮುಸುಕಿದವು ಚುಂಬಿಸಿತಂಬು ಪವನಜನ (ದ್ರೋಣ ಪರ್ವ, ೧೯ ಸಂದಿ, ೪೪ ಪದ್ಯ)

ತಾತ್ಪರ್ಯ:
ಭೀಮನು ಆಯುಧವನ್ನು ಹಿಡಿದುದನ್ನು ಕಂಡು ನಾರಾಯಣಾಸ್ತ್ರವು ಸಂತಸ ಪಟ್ಟು, ಭಲೇ ಭೀಮ ಇಲ್ಲಿ ಸೇರಿರುವ ನಾಚಿಕೆಗೆಟ್ಟ ಸೈನ್ಯದಲ್ಲಿ ನೀನೊಬ್ಬನೇ ವೀರ. ಗಂಡುವೇಷದ ಮಾನಿಷ್ಠರಂತೆ ನಟಿಸುವ ಈ ಸೂಳೆಯರಿದ್ದರೇನು ಬಿಟ್ಟರೇನು, ನೀನು ಈ ಯುದ್ಧದಲ್ಲಿ ಸೋತರೂ ನೀನೇ ಗೆದ್ದಂತೆ, ಎನ್ನುತ್ತಾ ತನ್ನ ಕಿಡಿಗಳ ಹೊಗೆಗಳಿಂದ ಭೀಮನನ್ನು ಮುತ್ತಿಟ್ಟಿತು.

ಅರ್ಥ:
ಪೂತು: ಭಲೇ; ಪಾಯಿಕು: ಭೇಷ್; ನೆರೆ: ಗುಂಪು; ಬೂತು: ನಾಚಕೆಗೆಟ್ಟ ಮಾತು, ನಟನೆ; ಬಲ: ಸೈನ್ಯ; ವೀರ: ಪರಾಕ್ರಮಿ; ಇವದಿರು: ಇಷ್ಟು ಜನ; ಗಂಡು: ಪುರುಷ; ಜೋಹ: ಮೋಸದ ವೇಷ, ಸೋಗು; ಗರುವ: ಗರ್ವ, ಸೊಕ್ಕು, ಶ್ರೇಷ್ಠ; ಸೂಳೆ: ವೇಷ್ಯೆ; ಸೋತು: ಪರಾಭವ; ಜಯ: ಗೆಲುವು; ವಿಧೂತ:ಅಲುಗಾಡುವ, ಅಲ್ಲಾಡುವ; ಧೂಮ: ಹೊಗೆ; ಕಿಡಿ: ಬೆಂಕಿ; ಝಾಡಿ: ಕಾಂತಿ; ಮುಸುಕು: ಆವರಿಸು; ಚುಂಬಿಸು: ಮುತ್ತಿಡು; ಪವನಜ: ಭೀಮ;

ಪದವಿಂಗಡಣೆ:
ಪೂತು +ಪಾಯಿಕು +ಭೀಮ +ನೆರೆದೀ
ಬೂತು +ಬಲದಲಿ +ವೀರ +ನೀನಹ
ಏತಕ್+ಇವದಿರು+ ಗಂಡು +ಜೋಹದ+ ಗರುವ +ಸೂಳೆಯರು
ಸೋತಡೆಯು +ಜಯ +ನಿನ್ನದೆನುತ +ವಿ
ಧೂತ+ಧೂಮದಿ +ಕಿಡಿಯ +ಝಾಡಿಗಳ್
ಈತನನು +ಮುಸುಕಿದವು +ಚುಂಬಿಸಿತ್+ಅಂಬು +ಪವನಜನ

ಅಚ್ಚರಿ:
(೧) ಹಂಗಿಸುವ ಪರಿ – ಗಂಡು ಜೋಹದ ಗರುವ ಸೂಳೆಯರು

ಪದ್ಯ ೩೯: ನಾರಾಯಣಾಸ್ತ್ರವು ಯಾರನ್ನು ಹುಡುಕಿಕೊಂಡು ಹೋಯಿತು?

ಭೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ (ದ್ರೋಣ ಪರ್ವ, ೧೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿ ಆಯುಧವನ್ನೆಸೆದು ನಿಮ್ತ ಎಲ್ಲರನ್ನೂ ಬಾಣಾಗ್ನಿ ಆವರಿಸಿ ಭಲೇ ಭಂಡರಿರಾ ಎನ್ನುತ್ತಾ ಅವರನ್ನು ಕೈ ಬಿಟ್ಟಿತು, ಆ ಧರ್ಮಜನೆಲ್ಲಿ, ಅರ್ಜುನನೆಲ್ಲಿ, ಭೀಮನೆಲ್ಲಿ, ಮಾದ್ರಿಯ ಮಕ್ಕಳೆಲ್ಲಿ ಎನ್ನುತ್ತಾ ನಾರಾಯಣಾಸ್ತ್ರವು ಅವರನ್ನು ಹುಡುಕಿಕೊಂಡು ಹೋಯಿತು.

ಅರ್ಥ:
ಭೀತ: ಭಯ; ಕೈದು: ಆಯುಧ; ಅಖಿಳ: ಎಲ್ಲಾ; ದಳ: ಸೈನ್ಯ; ಸಂಘಾತ: ಗುಂಪು, ಸಮೂಹ; ಬಾಣ: ಸರಳು; ಅಗ್ನಿ: ಬೆಂಕಿ; ಬೆರಸು: ಕಲಸು; ಪೂತು: ಭಲೇ; ಭಂಡ: ನಾಚಿಕೆ, ಲಜ್ಜೆ; ಬಿಟ್ಟು: ತೊರೆ; ಬಾಣ: ಸರಳು; ಅರಿ: ವೈರಿ; ಭಟ: ಸೈನ್ಯ; ವಿಖ್ಯಾತ: ಪ್ರಸಿದ್ಧ; ಅನಿಲಸುತ: ಭೀಮ; ಸುತ: ಪುತ್ರ; ತನುಜ: ಮಗ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಭೀತ +ಕೈದುಗಳ್+ಅಖಿಳ+ದಳ +ಸಂ
ಘಾತವನು +ಬಾಣಾಗ್ನಿ +ಬೆರಸಿತು
ಪೂತು+ ಭಂಡರಿರ್+ಎನುತ +ಬಿಟ್ಟುದು +ಬಾಣವ್+ಅರಿ+ಭಟರ
ಆತನಾವೆಡೆ +ಧರ್ಮಜನು +ವಿ
ಖ್ಯಾತನ್+ಅರ್ಜುನನ್+ಅನಿಲಸುತ +ಮಾ
ದ್ರೀತನುಜರ್+ಎಂದೆನುತ +ಹೊಕ್ಕುದು +ರಾಜ +ಮೋಹರವ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಾಣಾಗ್ನಿ ಬೆರಸಿತು ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ

ಪದ್ಯ ೩೧: ದ್ರೋಣನು ತಲೆದೂಗಲು ಕಾರಣವೇನು?

ಅರಿಬಲದ ಥಟ್ಟಣೆಯ ಬಿರುಬಿನ
ಬರವನೀಕ್ಷಿಸಿ ಪೂತು ಪಾಂಚಾ
ಲರ ಸಘಾಡಿಕೆ ಸಾಹಸಿಕರೈ ಹಾ ಮಹಾದೇವ
ದೊರೆಯಲೇ ಬಳಿಕೇನು ಪಾಂಡವ
ರರಸಿಯಯ್ಯನು ದ್ರುಪದನಲ್ಲಾ
ಹರಯೆನುತ ಗಹಗಹಿಸಿ ತಲೆದೂಗಿದನು ಕಲಿದ್ರೋಣ (ದ್ರೋಣ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯದ ಆಗಮನದ ಬಿರುಸನ್ನು ನೋಡಿ, ದ್ರೋನನು ತಲೆದೂಗಿ ಗಹಗಹಿಸಿ ನಕ್ಕು, ಭಲೇ ಪಾಂಚಾಲರ ಜೋರನ್ನು ನೋಡು, ಶಿವ ಶಿವಾ ಇವರು ಮಹಾಸಾಹಸಿಗರು. ದ್ರುಪದನು ಎಷ್ಟೇ ಆಗಲಿ ದೊರೆ, ಮೇಲಾಗಿ ಪಾಂಡವರ ಮಾವ ಎಂದು ತಲೆದೂಗಿದನು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಥಟ್ಟಣೆ: ಗುಂಪು; ಬಿರುಬು: ಆವೇಶ; ಬರವು: ಆಗಮನ; ಈಕ್ಷಿಸು: ನೋಡು; ಪೂತು: ಭಲೇ; ಸಘಾಡ: ರಭಸ; ಸಾಹಸ: ಪರಾಕ್ರಮ; ದೊರೆ: ರಾಜ; ಬಳಿಕ: ನಂತರ; ಅರಸಿ: ರಾಣಿ; ಅಯ್ಯ: ತಂದೆ; ಗಹಗಹಿಸು: ನಗು; ತೂಗು: ಅಲ್ಲಾಡಿಸು; ತಲೆದೂಗು: ಒಪ್ಪಿಗೆ ಸೂಚಿಸು; ಕಲಿ: ಶೂರ;

ಪದವಿಂಗಡಣೆ:
ಅರಿಬಲದ+ ಥಟ್ಟಣೆಯ +ಬಿರುಬಿನ
ಬರವನ್+ಈಕ್ಷಿಸಿ +ಪೂತು +ಪಾಂಚಾ
ಲರ +ಸಘಾಡಿಕೆ+ ಸಾಹಸಿಕರೈ +ಹಾ +ಮಹಾದೇವ
ದೊರೆ+ಅಲೇ +ಬಳಿಕೇನು+ ಪಾಂಡವರ್
ಅರಸಿ+ಅಯ್ಯನು +ದ್ರುಪದನಲ್ಲಾ
ಹರಯೆನುತ +ಗಹಗಹಿಸಿ+ ತಲೆದೂಗಿದನು +ಕಲಿದ್ರೋಣ

ಅಚ್ಚರಿ:
(೧) ಜೋಡಿ ಪದಗಳು – ಬಿರುಬಿನಬರವನೀಕ್ಷಿಸಿ; ಪೂತು ಪಾಂಚಾಲರ; ಸಘಾಡಿಕೆ ಸಾಹಸಿಕರೈ
(೨) ದ್ರುಪದನನ್ನು ಕರೆದ ಪರಿ – ಪಾಂಡವರರಸಿಯಯ್ಯನು

ಪದ್ಯ ೧೧: ರಥಿಕರು ನಿದ್ರೆಯಲ್ಲಿ ಏನನ್ನು ಕನವರಿಸುತ್ತಿದ್ದರು?

ಕಲಹವೆನು ಕನಸಿನಲಿ ಕಂಡ
ವ್ವಳಿಸಿ ಹಳುಹಳು ಪೂತು ಸಾರಥಿ
ಭಲರೆ ಸಾರಥಿ ಜಾಗುರೆನುತಿರ್ದುದು ಮಹಾರಥರು
ತೊಲಗದಿರಿ ತಿನ್ನಡಗನಹಿತನ
ತಿಳಿರಕುತವನು ಸುರಿಯೆನುತ ಕಳ
ವಳಿಸುತಿರ್ದರು ವೀರರೆರಡೊಡ್ಡಿನಲಿ ರಭಸದಲಿ (ದ್ರೋಣ ಪರ್ವ, ೧೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳ ರಥಿಕರು ಮಲಗಿ ಕನಸಿನಲ್ಲಿ ಯುದ್ಧಮಾಡುತ್ತಾ, ಬೇಗ, ಬೇಗ ಭಲೇ ಸಾರಥಿ ಜಾಗು ಎನ್ನುತ್ತಿದ್ದರು. ಓಡದಿರಿ, ವಿಅರಿಯು ಮಾಂಸವನ್ನು ತಿನ್ನು ರಕ್ತವನ್ನು ಸುರಿದುಕೋ ಎನ್ನುತ್ತಾ ಜೋರಾಗಿ ಕನವರಿಸುತ್ತಿದ್ದರು.

ಅರ್ಥ:
ಕಲಹ: ಯುದ್ಧ; ಕನಸು: ಸ್ವಪ್ನ; ಕಂಡು: ನೋಡು; ಅವ್ವಳಿಸು: ಆರ್ಭಟಿಸು; ಹಳು:ಹಗುರವಾದುದು; ಪೂತು: ಭಲೆ; ಸಾರಥಿ: ಸೂತ; ಜಾಗು: ಎಚ್ಚರ; ತಡಮಾಡು; ಮಹಾರಥ: ಪರಾಕ್ರಮಿ; ತೊಲಗು: ದೂರ ಸರಿ; ಅಹಿ: ವೈರಿ; ತಿಳಿ: ಸ್ವಚ್ಛತೆ, ನೈರ್ಮಲ್ಯ; ರಕುತ: ನೆತ್ತರು; ಸುರಿ: ಮೇಲಿನಿಂದ ಬೀಳು; ಕಳವಳ: ಗೊಂದಲ; ವೀರ: ಶೂರ; ಒಡ್ಡು: ರಾಶಿ, ಸಮೂಹ; ರಭಸ: ವೇಗ;

ಪದವಿಂಗಡಣೆ:
ಕಲಹವೆನು +ಕನಸಿನಲಿ +ಕಂಡ್
ಅವ್ವಳಿಸಿ +ಹಳುಹಳು +ಪೂತು +ಸಾರಥಿ
ಭಲರೆ+ ಸಾರಥಿ+ ಜಾಗುರೆನುತಿರ್ದುದು +ಮಹಾರಥರು
ತೊಲಗದಿರಿ+ ತಿನ್ನಡಗನ್+ಅಹಿತನ
ತಿಳಿ+ರಕುತವನು +ಸುರಿಯೆನುತ +ಕಳ
ವಳಿಸುತಿರ್ದರು +ವೀರರ್+ಎರಡ್+ಒಡ್ಡಿನಲಿ +ರಭಸದಲಿ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಲಹವೆನು ಕನಸಿನಲಿ ಕಂಡವ್ವಳಿಸಿ
(೨) ತ ಕಾರದ ತ್ರಿವಳಿ ಪದ – ತೊಲಗದಿರಿ ತಿನ್ನಡಗನಹಿತನ ತಿಳಿರಕುತವನು

ಪದ್ಯ ೨೨: ಕರ್ಣನು ಘಟೋತ್ಕಚನನ್ನು ಹೇಗೆ ಹೊಗಳಿದನು?

ಶಿವಶಿವಾ ಕೌರವನ ಸುಭಟರು
ದಿವಿಜರಿಗೆ ವೆಗ್ಗಳರು ನಿನಗಿಂ
ದಿವರು ಸೋತರು ಪೂತು ದಾನವ ನೀ ಕೃತಾರ್ಥನಲ
ಇವನ ಪಾಡಿನ ಸುಭಟರೇ ನ
ಮ್ಮವರು ಗೆಲವೇನಿವನದೇ ಮಾ
ಧವನ ಸೂತ್ರದ ಯಂತ್ರವಿದು ಲಯಕಾಲ ನಮಗೆಂದ (ದ್ರೋಣ ಪರ್ವ, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಿವ ಶಿವಾ, ದೇವತೆಗಳಿಗೂ ಮಿಗಿಲಾದ ಕೌರವನ ವೀರರು ಇಂದು ನಿನಗೆ ಸೋತರು. ಭಲೇ ರಾಕ್ಷಸ ನೀನೇ ಧನ್ಯ! ನಮ್ಮ ಪರಾಕ್ರಮಿಗಳು ಇವನಿಗೆ ಸೋಲುವಂಥವರೇ! ಗೆಲುವು ಇವನದೇ? ಇದು ಶ್ರೀಕೃಷ್ಣನ ಸೂತ್ರದ ಯಂತ್ರ. ನಮ್ಮ ನಾಶದ ಕಾಲ ಸಮೀಪಿಸಿದೆ ಎಂದು ಕರ್ಣನು ಉದ್ಗರಿಸಿದನು.

ಅರ್ಥ:
ಸುಭಟ: ಪರಾಕ್ರಮಿ, ಸೈನಿಕ; ದಿವಿಜ: ದೇವತೆ; ವೆಗ್ಗಳ: ಶ್ರೇಷ್ಠ; ಸೋಲು: ಪರಾಭವ; ಪೂತು: ಭಲೇ; ದಾನವ: ರಾಕ್ಷಸ; ಕೃತಾರ್ಥ: ಧನ್ಯ; ಪಾಡು: ರೀತಿ; ಗೆಲುವು: ಜಯ; ಮಾಧವ: ಕೃಷ್ಣ; ಸೂತ್ರ: ವಿಧಿ, ನಿಯಮ, ಕಟ್ಟಳೆ; ಯಂತ್ರ: ಉಪಕರಣ; ಲಯ: ನಾಶ; ಕಾಲ: ಸಮಯ;

ಪದವಿಂಗಡಣೆ:
ಶಿವಶಿವಾ +ಕೌರವನ +ಸುಭಟರು
ದಿವಿಜರಿಗೆ +ವೆಗ್ಗಳರು +ನಿನಗಿಂದ್
ಇವರು +ಸೋತರು +ಪೂತು +ದಾನವ +ನೀ +ಕೃತಾರ್ಥನಲ
ಇವನ +ಪಾಡಿನ +ಸುಭಟರೇ +ನ
ಮ್ಮವರು +ಗೆಲವೇನ್+ಇವನದೇ+ ಮಾ
ಧವನ +ಸೂತ್ರದ +ಯಂತ್ರವಿದು +ಲಯಕಾಲ +ನಮಗೆಂದ

ಅಚ್ಚರಿ:
(೧) ಘಟೋತ್ಕಚನನ್ನು ಹೊಗಳಿದ ಪರಿ – ಪೂತು ದಾನವ ನೀ ಕೃತಾರ್ಥನಲ

ಪದ್ಯ ೫೭: ಕರ್ಣನು ಎಲ್ಲಿ ಅವಿತುಕೊಂಡನು?

ವಾಯುಸುತ ಖಾತಿಯಲಿ ಹಲಗೆಯ
ಡಾಯುಧವ ಕೊಂಡರಿಭಟನ ಮೇ
ಲ್ವಾಯಿದಡೆ ಸಮ್ಮುಖವ ಬಿಟ್ಟನು ಧ್ವಜದ ಕಂಭದಲಿ
ಆಯುಧವ ಕೊಂಡೈದಿದಡೆ ಹಗೆ
ಮಾಯವಾದನು ಪೂತುರೆನುತ ಗ
ದಾಯುಧನು ಮರಳಿದರೆ ಕೈಯೊಡನೆದ್ದನಾ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ಭೀಮನು ಕೋಪದಿಂದ ಖಡ್ಗ ಗುರಾಣಿಗಳಿಂದ ಹಿಡಿದು ಕರ್ಣನ ಮೇಲೆ ನುಗ್ಗಲು, ಕರ್ಣನು ಧ್ವಜ ದಂಡದ ಮರೆಗೆ ಸರಿದು ನಿಂತನು. ಆಯುಧವನ್ನು ಹಿಡಿದು ಹೋದರೆ ಶತ್ರುವು ಮಾಯವಾಗಿ ಬಿಟ್ಟ ಭಲೇ! ಎಂದು ಭೀಮನು ಹಿಂದಿರುಗಿ ಬಂದೊಡನೆ ಕರ್ಣನು ಎದ್ದು ನಿಂತನು.

ಅರ್ಥ:
ವಾಯುಸುತ: ಅನಿಲಪುತ್ರ (ಭೀಮ); ಖಾತಿ: ಕೋಪ; ಹಲಗೆ: ಒಂದು ಬಗೆಯ ಗುರಾಣಿ; ಆಯುಧ: ಶಸ್ತ್ರ; ಅರಿ: ವೈರಿ; ಭಟ: ಸೈನಿಕ; ಸಮ್ಮುಖ: ಎದುರು; ಬಿಟ್ಟು: ತೊರೆ; ಧ್ವಜ: ಪತಾಕೆ; ಕಂಭ: ನಿಲ್ಲಿಸುವ ಮರ ಕಲ್ಲು; ಆಯುಧ: ಶಸ್ತ್ರ; ಕೊಂಡು: ಪಡೆ; ಐದು: ಬಂದು ಸೇರು; ಹಗೆ: ವೈರಿ; ಮಾಯ: ಇಂದ್ರಜಾಲ; ಪುತು: ಭಲೇ; ಗದೆ: ಮುದ್ಗರ; ಮರಳಿ: ಪುನಃ; ಕೈ: ಹಸ್ತ; ಎದ್ದು: ಮೇಲೇಳು;

ಪದವಿಂಗಡಣೆ:
ವಾಯುಸುತ+ ಖಾತಿಯಲಿ +ಹಲಗೆಯಡ್
ಆಯುಧವ +ಕೊಂಡ್+ಅರಿ+ಭಟನ+ ಮೇಲ್
ವಾಯಿದಡೆ+ ಸಮ್ಮುಖವ +ಬಿಟ್ಟನು +ಧ್ವಜದ +ಕಂಭದಲಿ
ಆಯುಧವ +ಕೊಂಡ್+ಐದಿದಡೆ +ಹಗೆ
ಮಾಯವಾದನು+ ಪೂತುರೆನುತ +ಗ
ದಾಯುಧನು +ಮರಳಿದರೆ +ಕೈಯೊಡನ್+ಎದ್ದನಾ +ಕರ್ಣ

ಅಚ್ಚರಿ:
(೧) ಗದಾಯುಧ, ಹಲಗೆಯಡಾಯುಧ, ಆಯುಧ – ಆಯುಧ ಪದದ ಬಳಕೆ

ಪದ್ಯ ೨೪: ದುರ್ಯೋಧನನು ತನ್ನವರನ್ನು ಹೇಗೆ ಮೂದಲಿಸಿದನು?

ಕಾಲ ವಹಿಲವ ಕಲಿಸಲೋಸುಗ
ಕೋಲಗುರು ಜಾರಿದನು ಶಲ್ಯನ
ಮೇಲು ಮುಸುಕನುವಾಯ್ತು ಬಿರುದೇನಾಯ್ತು ಗುರುಸುತನ
ಆಳುವಾಸಿಯ ಕಡುಹು ಕರ್ಣನ
ಬೀಳುಕೊಂಡುದು ಪೂತು ಮಝರೇ
ಬಾಲ ಎಂದವನೀಶ ಮೂದಲಿಸಿದನು ತನ್ನವರ (ದ್ರೋಣ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಓಡುವುದು ಹೇಗೆಂದು ತೋರಿಸಲು ದ್ರೋಣನು ಓಡಿಬಂದ, ಶಲ್ಯನು ತನ್ನಲ್ಲಿದ್ದ ಉತ್ತರೀಯದ ಮುಸುಕನ್ನು ಹಾಕಿಕೊಂಡ, ಅಶ್ವತ್ಥಾಮನ ಬಿರುದು ಏನಾಯಿತು? ಹೋಗಲಿ, ತಾನು ವೀರ ಛಲಗಾರ ಎಂಬ ಪರಾಕ್ರಮ ಕರ್ಣನಿಂದ ಜಾರಿ ಹೋಯಿತು, ಭಲೇ ಬಾಲಕ ಎಂದು ದುರ್ಯೋಧನನು ನುಡಿದನು.

ಅರ್ಥ:
ಕಾಲ: ಸಮಯ; ವಹಿಲ: ಬೇಗ, ತ್ವರೆ; ಕಲಿಸು: ತಿಳಿಸು; ಓಸುಗ: ಓಸ್ಕರ; ಕೋಲಗುರು: ಬಾಣವನ್ನು ಉಪಯೋಗಿಸಲು ಕಲಿಸುವ ಆಚಾರ್ಯ (ದ್ರೋಣ); ಜಾರು: ಕೆಳಗೆ ಬೀಳು; ಮುಸುಕು: ಹೊದಿಕೆ; ಅನುವು:ಸೊಗಸು; ಬಿರುದು: ಗೌರವಸೂಚಕ ಪದ; ಗುರು: ಆಚಾರ್ಯ; ಸುತ: ಮಗ; ಆಳು: ಸೈನಿಕ, ದೂತ; ಕಡು: ವಿಶೇಷ, ಅಧಿಕ; ಬೀಳುಕೊಂಡು: ತೆರಳು; ಪೂತು: ಭಲೇ; ಮಝರೇ: ಭೇಷ; ಬಾಲ: ಚಿಕ್ಕವ; ಅವನೀಶ: ರಾಜ; ಮೂದಲಿಸು: ಹಂಗಿಸು; ತನ್ನವ: ಜೊತೆಯವರು; ಶಲ್ಯ: ಉತ್ತರೀಯ, ಮದ್ರ ದೇಶದ ರಾಜ;

ಪದವಿಂಗಡಣೆ:
ಕಾಲ +ವಹಿಲವ +ಕಲಿಸಲೋಸುಗ
ಕೋಲಗುರು +ಜಾರಿದನು+ ಶಲ್ಯನ
ಮೇಲು +ಮುಸುಕ್+ಅನುವಾಯ್ತು +ಬಿರುದೇನಾಯ್ತು +ಗುರುಸುತನ
ಆಳುವಾಸಿಯ +ಕಡುಹು +ಕರ್ಣನ
ಬೀಳುಕೊಂಡುದು +ಪೂತು +ಮಝರೇ
ಬಾಲ +ಎಂದ್+ಅವನೀಶ +ಮೂದಲಿಸಿದನು +ತನ್ನವರ

ಅಚ್ಚರಿ:
(೧) ಮೂದಲಿಸುವ ಪರಿ – ಆಳುವಾಸಿಯ ಕಡುಹು ಕರ್ಣನ ಬೀಳುಕೊಂಡುದು; ಕಾಲ ವಹಿಲವ ಕಲಿಸಲೋಸುಗ ಕೋಲಗುರು ಜಾರಿದನು

ಪದ್ಯ ೧೪: ದ್ರೋಣನು ಅಭಿಮನ್ಯುವಿಗೆ ಏನು ಹೇಳಿದನು?

ಪೂತು ಮಝ ಬಿಲ್ಲಾಳುತನವಿದು
ಭೂತನಾಥಂಗಿಲ್ಲ ಸುಭಟ
ವ್ರಾತವೀಕ್ಷಿಸಲರಿದೆನುತ ಕಣೆಗೆದರಿದನು ದ್ರೋಣ
ಏತಕಿದು ಹಿಮ್ಮೆಟ್ಟು ದಿಟ ನೀ
ಸೋತಡೆಯು ಜಯವಿಲ್ಲೆಮಗೆ ಮೃಗ
ಪೋತನನು ಹರಿಹೊಯ್ವದುಚಿತವೆ ಮಗನೆ ಕೇಳೆಂದ (ದ್ರೋಣ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭಲೇ, ಭೇಷ್ ಮಗನೇ, ಇಂತಹ ಬಿಲ್ಲುಗಾರಿಕೆಯೂ ಶಿವನಿಗೂ ಸಾಧ್ಯವಿಲ್ಲ. ಇವನ ಯುದ್ಧವನ್ನು ಸಹಿಸುವುದಿರಲಿ, ಅದನ್ನು ನೋಡುವುದಕ್ಕೂ ಸಾಧ್ಯವಿಲ್ಲ. ಈ ಯುದ್ಧವೇಕೆ? ನಿಜ, ಒಮ್ಮೆ ನೀನು ಸೋತರೂ ಅದು ನಮ್ಮ ವಿಜಯವಾಗುವುದಿಲ್ಲ. ಜಿಂಕೆಯ ಮರಿಯನ್ನು ಹೊಡೆದು ಹಾಕುವುದು ಉಚಿತವೇ? ಮಗನೇ ನೀನು ಹಿಂದಕ್ಕೆ ಹೋಗು ಎನ್ನುತ್ತಾ ದ್ರೋಣನು ಬಾಣಗಳನ್ನು ಬಿಟ್ಟನು

ಅರ್ಥ:
ಪೂತು: ಭಲೇ; ಮಝ: ಭೇಷ್; ಬಿಲ್ಲಾಳು: ಅಪ್ರತಿಮ ಬಿಲ್ಲುಗಾರ; ಭೂತನಾಥ: ಶಿವ; ಸುಭಟ: ಪರಾಕ್ರಮಿ; ವ್ರಾತ: ಗುಂಪು; ವೀಕ್ಷಿಸು: ನೋಡು; ಅರಿ: ತಿಳಿ; ಕಣೆ: ಬಾಣ; ಕೆದರು: ಹರಡು; ಹಿಮ್ಮೆಟ್ಟು: ಹಿಂದಿರುಗು; ದಿಟ: ನಿಜ; ಸೋತು: ಪರಾಭವ; ಜಯ: ಗೆಲುವು; ಮೃಗ: ಜಿಂಕೆ; ಪೋತ: ಮರಿ; ಹರಿ: ಸೀಳು; ಹೊಯ್ದು: ಹೊಡೆ; ಉಚಿತ: ಸರಿಯಾದ; ಮಗ: ಪುತ್ರ; ಕೇಳು: ಆಲಿಸು;

ಪದವಿಂಗಡಣೆ:
ಪೂತು +ಮಝ +ಬಿಲ್ಲಾಳುತನವಿದು
ಭೂತನಾಥಂಗಿಲ್ಲ+ ಸುಭಟ
ವ್ರಾತ+ವೀಕ್ಷಿಸಲ್+ಅರಿದ್+ಎನುತ+ ಕಣೆ+ಕೆದರಿದನು +ದ್ರೋಣ
ಏತಕಿದು +ಹಿಮ್ಮೆಟ್ಟು +ದಿಟ +ನೀ
ಸೋತಡೆಯು +ಜಯವಿಲ್ಲೆಮಗೆ +ಮೃಗ
ಪೋತನನು+ ಹರಿಹೊಯ್ವದ್+ಉಚಿತವೆ +ಮಗನೆ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೃಗಪೋತನನು ಹರಿಹೊಯ್ವದುಚಿತವೆ