ಪದ್ಯ ೪೩: ಅಭಿಮನ್ಯುವು ತನ್ನ ಸಾಮರ್ಥ್ಯದ ಬಗ್ಗೆ ಏನು ಹೇಳಿದ?

ಧರಣಿಪತಿ ಕೇಳುಳಿದ ಪುಷ್ಪದ
ಪರಿಮಳವು ಪಥಿಸಿದರೆ ಸಂಪಗೆ
ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ
ಅರಿಭಟರು ಭೀಮಾದಿಗಳ ಗೆಲಿ
ದಿರಲಿ ಹೊಲ್ಲಹವೇನು ಘನ ಸಂ
ಗರದೊಳಗೆ ನನ್ನೊಡನೆ ತುಡುಕಿದಡರಿಯಬಹುದೆಂದ (ದ್ರೋಣ ಪರ್ವ್, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾಜ, ದುಂಬಿಗಳ ಹಿಂಡಿಗೆ ಎಲ್ಲಾ ಹೂಗಳ ಮಕರಂದವು ಇಷ್ಟವಾದರೆ, ಸಂಪಗೆಯ ಪರಿಮಳವು ಪಥ್ಯವಾದೀತೇ? ಭೀಮಾದಿಗಳನ್ನು ಶತ್ರುಗಳು ಗೆದ್ದರೇನಂತೆ? ನನ್ನ ಮೇಲೆ ಯುದ್ಧವನ್ನು ಮಾಡಲು ಬಂದರೆ ಅವರು ತಮ್ಮ ಯೋಗ್ಯತೆಯನ್ನು ತಿಳಿದುಕೊಳ್ಳುತ್ತಾರೆ ಎಂದು ಅಭಿಮನ್ಯುವು ನುಡಿದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಉಳಿದ: ಮಿಕ್ಕ; ಪುಷ್ಪ: ಹೂವು; ಪರಿಮಳ: ಸುವಾಸನೆ; ಪಥಿಸು: ಒಗ್ಗು, ಹಿಡಿಸು; ಸಂಪಗೆ: ಚಂಪಕ; ಅರಳು: ಹೂವು; ಪಥ್ಯ:ಯೋಗ್ಯವಾದುದು, ಹಿತವಾದುದು; ತುಂಬಿ: ಭ್ರಮರ; ತಿಂತಿಣಿ: ಗುಂಪು; ಅರಿ: ವೈರಿ; ಭಟ: ಸೈನಿಕ; ಗೆಲಿದು: ಜಯಿಸು; ಹೊಲ್ಲ: ಹೀನವಾದುದು, ಕೆಟ್ಟದ್ದು; ಘನ: ಶ್ರೇಷ್ಠ; ಸಂಗರ: ಯುದ್ಧ; ತುಡುಕು: ಹೋರಾಡು, ಸೆಣಸು; ಅರಿ: ತಿಳಿ;

ಪದವಿಂಗಡಣೆ:
ಧರಣಿಪತಿ +ಕೇಳ್+ಉಳಿದ +ಪುಷ್ಪದ
ಪರಿಮಳವು +ಪಥಿಸಿದರೆ +ಸಂಪಗೆ
ಅರಳ +ಪರಿಮಳ +ಪಥ್ಯವೇ +ತುಂಬಿಗಳ +ತಿಂತಿಣಿಗೆ
ಅರಿಭಟರು +ಭೀಮಾದಿಗಳ +ಗೆಲಿ
ದಿರಲಿ +ಹೊಲ್ಲಹವೇನು+ ಘನ +ಸಂ
ಗರದೊಳಗೆ +ನನ್ನೊಡನೆ +ತುಡುಕಿದಡ್+ಅರಿಯಬಹುದೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪುಷ್ಪದ ಪರಿಮಳವು ಪಥಿಸಿದರೆ ಸಂಪಗೆ ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ

ಪದ್ಯ ೯೫: ಕುಂತಿ ಐರಾವತವನ್ನು ಹೇಗೆ ಪೂಜಿಸಿದಳು?

ಇಂದುಮುಖಿ ಹರುಷದಲಿ ತಾ ಹೊ
ನ್ನಂದಣದೆ ಬಳಿಕಿಳಿದು ನಲವಿನೊ
ಳಂದು ಮೈಯಿಕ್ಕಿದಳು ಕಾಣಿಕೆಯಿಕ್ಕಿ ಚರಣದಲಿ
ಚಂದನಸುಗಂಧಾಕ್ಷತೆಗಳರ
ವಿಂದಪುಷ್ಪದಿ ಧೂಪದೀಪಗ
ಳಿಂದ ನೈವೇದ್ಯಂಗಳಿಂ ಪೂಜಿಸಿದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೯೫ ಪದ್ಯ)

ತಾತ್ಪರ್ಯ:
ಕುಂತಿಯು ಅತ್ಯಂತ ಸಂತೋಷದಿಂದ ಐರಾವತವಿದ್ದೆಡೆಗೆ ಬಂದು ತನ್ನ ಚಿನ್ನದ ಪಲ್ಲಕ್ಕಿಯಿಂದ ಕೆಳಗಿಳಿದು, ಆನಂದದಿಂದ ಐರಾವತಕ್ಕೆ ನಮಸ್ಕರಿಸಿದಳು, ತಾನು ತಂದ ಕಾಣಿಕೆಯನ್ನು ಅದರ ಚರಣಗಳಲ್ಲಿ ಅರ್ಪಿಸಿ, ಗಂಧ, ಅಕ್ಷತೆ, ಧೂಪ, ದೀಪ, ಪುಷ್ಪಗಳಿಂದ ಪೂಜಿಸಿ, ನೈವೇದ್ಯವನ್ನು ಅರ್ಪಿಸಿದಳು.

ಅರ್ಥ:
ಇಂದುಮುಖಿ: ಸುಂದರಿ, ಚಂದ್ರನಂತ ಮುಖವುಳ್ಳವಳು; ಹರುಷ: ಸಂತೋಷ; ಹೊನ್ನಂದಣ: ಚಿನ್ನದ ಪಲ್ಲಕ್ಕಿ; ಇಳಿ: ಕೆಳಕ್ಕಿ ಬರು; ನಲಿವು:ಸಂತೋಷ, ಆನಂದ; ಮೈಯಿಕ್ಕು: ನಮಸ್ಕರಿಸು; ಕಾಣಿಕೆ: ಉಡುಗೊರೆ; ಚರಣ: ಪಾದ; ಚಂದನ: ಗಂಧ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರವಿಂದ: ಕಮಲ; ಪುಷ್ಪ: ಹೂವು; ಧೂಪ:ಸುವಾಸನೆಯ ಪುಡಿ; ದೀಪ: ದೀವಿಗೆ; ನೈವೇದ್ಯ: ದೇವರಿಗೆ ಸಮರ್ಪಿಸುವ ಆಹಾರ; ಪೂಜಿಸು: ಆರಾಧಿಸು;

ಪದವಿಂಗಡಣೆ:
ಇಂದುಮುಖಿ +ಹರುಷದಲಿ+ ತಾ +ಹೊನ್ನ
ಅಂದಣದೆ+ ಬಳಿಕಿಳಿದು+ ನಲವಿನೊಳ್
ಅಂದು +ಮೈಯಿಕ್ಕಿದಳು +ಕಾಣಿಕೆಯಿಕ್ಕಿ +ಚರಣದಲಿ
ಚಂದನ+ಸುಗಂಧ+ಅಕ್ಷತೆಗಳ್+ಅರ
ವಿಂದ+ಪುಷ್ಪದಿ +ಧೂಪ+ದೀಪಗ
ಳಿಂದ +ನೈವೇದ್ಯಂಗಳಿಂ+ ಪೂಜಿಸಿದಳಾ+ ಕುಂತಿ

ಅಚ್ಚರಿ:
(೧) ಪೂಜಾಸಾಮಗ್ರಿಗಳ ಪದಗಳು – ಚಂದನಸುಗಂಧಾಕ್ಷತೆಗಳರವಿಂದಪುಷ್ಪದಿ ಧೂಪದೀಪ, ನೈವೇದ್ಯ
(೨) ಹರುಷ, ನಲಿವು – ಸಮನಾರ್ಥಕ ಪದ