ಪದ್ಯ ೭: ಬ್ರಾಹ್ಮಣನು ಯಾರ ಕೇರಿಗೆ ಬಂದನು?

ಹೆಸರು ಧರ್ಮವ್ಯಾಧನಾತನ
ದೆಸೆಯಲರಿ ಹೋಗೆನಲು ಬಂದನು
ವಸುಧೆಯಮರನು ನಗರಿಗಾಸತಿ ಕೊಟ್ಟ ಕುರುಹಿನಲಿ
ಹಸಿದು ಬೀದಿಗಳೊಳಗೆ ತೊಳಲುತ
ಘಸಣಿಗೊಳುತ ಪುರಾಂತದಲಿ ಕ
ರ್ಕಶ ಪುಳಿಂದರ ಕೇರಿಯಿರೆ ಕಂಡಲ್ಲಿಗೈ ತಂದ (ಅರಣ್ಯ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಅವನ ಹೆಸರು ಧರ್ಮವ್ಯಾಧ ಅವನಿಂದ ನೀನು ಧರ್ಮದ ಸಾರವನ್ನರಿಯಲು ಹೋಗು, ಎಂದು ಪತಿವ್ರತೆಯು ಹೇಳಲು ಆ ಬ್ರಾಹ್ಮಣನು ಅವಳು ಹೇಳಿದ ಗುರುತನ್ನು ತಿಳಿದು ಆ ಪಟ್ಟಣಕ್ಕೆ ಹೋದನು. ಅಲ್ಲಿ ಬೀದಿ ಬೀದಿಗಳನ್ನು ಹಸಿವಿನ ಬಾಧೆಯನ್ನು ಲೆಕ್ಕಿಸದೆ ಕಷ್ಟದಿಮ್ದ ಅಲೆದು ಊರಿನ ತುದಿಗೆ ಬೇಡರ ಕರ್ಕಶವಾದ ಕೇರಿಯನ್ನು ಕಂಡು ಅಲ್ಲಿಗೆ ಹೋದನು.

ಅರ್ಥ:
ಹೆಸರು: ನಾಮ; ದೆಸೆ: ದಿಕ್ಕು; ಅರಿ: ತಿಳಿ; ಹೋಗು: ತೆರಳು; ವಸುಧೆ: ಭೂಮಿ; ವಸುಧೆಯಮರ: ಬ್ರಾಹ್ಮಣ; ನಗರ: ಊರು; ಸತಿ: ಹೆಣ್ಣು, ಗರತಿ; ಕೊಟ್ಟ: ನೀಡಿದ; ಕುರುಹು: ಗುರುತು; ಹಸಿ: ಆಹಾರವನ್ನು ಬಯಸು; ಬೀದಿ: ರಸ್ತೆ; ತೊಳಲು: ಬವಣೆ, ಸಂಕಟ; ಘಸಣೆ: ತೊಂದರೆ; ಪುರ: ಊರು; ಅಂತ: ಕೊನೆ; ಕರ್ಕಶ: ಗಟ್ಟಿಯಾದ, ಕಠಿಣ; ಪುಳಿಂದರ: ಬೇಡ; ಕಂಡು: ನೋಡಿ; ಐತರು: ಬಂದು ಸೇರು;

ಪದವಿಂಗಡಣೆ:
ಹೆಸರು +ಧರ್ಮವ್ಯಾಧನ್+ಆತನ
ದೆಸೆಯಲ್+ಅರಿ+ ಹೋಗೆನಲು +ಬಂದನು
ವಸುಧೆಯಮರನು +ನಗರಿಗ್+ಆ+ಸತಿ+ ಕೊಟ್ಟ +ಕುರುಹಿನಲಿ
ಹಸಿದು +ಬೀದಿಗಳೊಳಗೆ +ತೊಳಲುತ
ಘಸಣಿಗೊಳುತ +ಪುರಾಂತದಲಿ +ಕ
ರ್ಕಶ +ಪುಳಿಂದರ +ಕೇರಿಯಿರೆ +ಕಂಡಲ್ಲಿಗೈ +ತಂದ

ಅಚ್ಚರಿ:
(೧) ವಸುಧೆಯಮರ – ಬ್ರಾಹ್ಮಣನಿಗೆ ಉಪಯೋಗಿಸಿದ ಪದ

ಪದ್ಯ ೨೨: ಬೇಡರು ಅಡವಿಯಲ್ಲಿ ಹೇಗೆ ಸಾಗಿದರು?

ಬಗೆಯನವ ಶಕುನವ ಮೃಗವ್ಯದ
ಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲುಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ (ಅರಣ್ಯ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬೇಟೆಯ ವ್ಯಸನದಲ್ಲಿ ಸಿಕ್ಕ ಮನೋವೃತ್ತಿಯುಳ್ಳವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವು ವಿವೇಕೆ ಜ್ಞಾನ ಇರುವುದೇ? ಭೀಮನು ಶುಭ ಅಶುಭಗಳನ್ನು ಲೆಕ್ಕಿಸಲಿಲ್ಲ. ಬಂಗಾರದ ಕಾಂತಿಯುಳ್ಳ ರೆಕ್ಕೆಗಳಿಂದ ಅಲಂಕೃತಗೊಂಡು, ಬಿಲ್ಲು ಬಾಣಗಳನ್ನು ಹಿಡಿದ ಬೇಡರು ಅಡವಿಯನ್ನು ಬೆರಗುಗೊಳಿಸುತ್ತಾ ಅಡವಿಯಲ್ಲಿ ಭೀಮನ ಮುಂದೆ ನಡೆದರು.

ಅರ್ಥ:
ಬಗೆ: ಆಲೋಚನೆ, ಯೋಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮೃಗವ್ಯ: ಬೇಟೆ; ಸೊಗಡು: ತೀಕ್ಷ್ಣವಾದ ಗಂಧ; ಸಿಲುಕು: ಬಂಧನ; ಮನ: ಮನಸ್ಸು; ವೃತ್ತಿ: ನಡವಳಿಕೆ, ಸ್ಥಿತಿ; ವಿವೇಕ: ಯುಕ್ತಾಯುಕ್ತ ವಿಚಾರ; ಧರ್ಮ: ಧಾರಣೆ ಮಾಡಿದುದು; ವಿಚಾರ: ಪರ್ಯಾಲೋಚನೆ, ವಿಮರ್ಶೆ; ವಿಸ್ತಾರ: ಹರಹು; ಹೊಗರು: ಪ್ರಕಾಶಿಸು, ಕಾಂತಿ; ಒಗು: ಹೊರಹೊಮ್ಮುವಿಕೆ; ಹೊಂಗರಿ: ಚಿನ್ನದ ರೆಕ್ಕೆ; ಬಿಲು: ಚಾಪ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ನಡೆ: ಚಲಿಸು; ಅಡವಿ: ಕಾಡು; ಬೆಗಡು: ಆಶ್ಚರ್ಯ, ಬೆರಗು; ಮುಂದೆ: ಮುನ್ನ, ಎದುರು; ಪುಳಿಂದ: ಬೇಡ; ಸಂದೋಹ: ಗುಂಪು;

ಪದವಿಂಗಡಣೆ:
ಬಗೆಯನವ+ ಶಕುನವ +ಮೃಗವ್ಯದ
ಸೊಗಡಿನಲಿ +ಸಿಲುಕಿದ+ ಮನೋ +ವೃ
ತ್ತಿಗಳೊಳ್+ಉಂಟೆ +ವಿವೇಕ +ಧರ್ಮ +ವಿಚಾರ+ ವಿಸ್ತಾರ
ಹೊಗರೊಗುವ+ ಹೊಂಗರಿಯ+ ಬಿಲು+ಸರ
ಳುಗಳ +ಹೊದೆಗಳ+ ನಡೆದುದ್+ಅಡವಿಯ
ಬೆಗಡುಗೊಳಿಸುತ +ಮುಂದೆ +ಮುಂದೆ +ಪುಳಿಂದ +ಸಂದೋಹ

ಅಚ್ಚರಿ:
(೧) ವ್ಯಸನಕ್ಕೀಡಾದ ಮನಸ್ಸಿನ ಸ್ಥಿತಿ – ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ

ಪದ್ಯ ೩೯: ಅರ್ಜುನನೇಕೆ ಕುಂತೀಪುತ್ರನಲ್ಲ ಎಂದು ಚಿಂತಿಸಿದ?

ಈತ ದಿಟಕೆ ಪುಳಿಂದನೇ ವಿ
ಖ್ಯಾತ ನರತಾನಲ್ಲಲೇ ದಿಟ
ಜಾತ ಪಾರ್ಥನೆ ತಾ ನಿಧಾನಿಸೆ ಶಬರನಿವನಲ್ಲ
ಈತ ಪಲ್ಲಟವಾದನೋ ಮೇಣ್
ಶ್ವೇತ ತುರಗನ ಪಲ್ಲಟವೊ ಕುಂ
ತೀತನುಜ ತಾನಲ್ಲ ನಿಶ್ಚಯವೆಂದು ಚಿಂತಿಸಿದ (ಅರಣ್ಯ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಇವನು ನಿಜವಾಗಿಯೂ ಬೇಡನೇ? ಅವನೇ ಅರ್ಜುನನಾಗಿರಬೇಕಲ್ಲವೇ? ಅಥವಾ ಅರ್ಜುನನಾಗಿ ಹುಟ್ಟಿದವನು ನಾನು ತಾನೆ? ಒಂದಂತು ಸತ್ಯ, ಇವನು ಬೇಡನಲ್ಲ, ಅರ್ಜುನನು ಸೋತನೋ, ಈ ಬೇಡನು ಸೋತನೋ, ತಿಳಿಯದು ಆದರೆ ನಾನು ಸೋತಿರುವುದರಿಂದ ಖಂಡಿತವಾಗಿಯೂ ನಾನು ಕುಂತೀ ಪುತ್ರ ಅರ್ಜುನನಲ್ಲ ಎಂದು ಚಿಂತಿಸಿದ.

ಅರ್ಥ:
ದಿಟ: ನಿಜ; ಪುಳಿಂದ: ಬೇಡ; ವಿಖ್ಯಾತ: ಪ್ರಸಿದ್ಧ; ನರ: ಅರ್ಜುನ; ಜಾತ: ಹುಟ್ಟಿದ; ಪಾರ್ಥ: ಅರ್ಜುನ; ನಿಧಾನಿಸು: ಪರೀಕ್ಷಿಸು, ವಿಚಾರಮಾಡು; ಪಲ್ಲಟ: ಮಾರ್ಪಾಟು, ಬದಲಾವಣೆ; ಶ್ವೇತ: ಬಿಳಿ; ತುರಗ: ಕುದುರೆ; ಶ್ವೇತ ತುರಗನ: ಅರ್ಜುನನ; ತನುಜ: ಮಗ; ನಿಶ್ಚಯ: ಖಂಡಿತ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಈತ +ದಿಟಕೆ+ ಪುಳಿಂದನೇ +ವಿ
ಖ್ಯಾತ +ನರ+ತಾನಲ್ಲಲೇ +ದಿಟ
ಜಾತ +ಪಾರ್ಥನೆ +ತಾ +ನಿಧಾನಿಸೆ+ ಶಬರನ್+ಇವನಲ್ಲ
ಈತ +ಪಲ್ಲಟವಾದನೋ +ಮೇಣ್
ಶ್ವೇತ ತುರಗನ+ ಪಲ್ಲಟವೊ+ ಕುಂ
ತೀ+ತನುಜ +ತಾನಲ್ಲ +ನಿಶ್ಚಯವೆಂದು +ಚಿಂತಿಸಿದ

ಅಚ್ಚರಿ:
(೧) ಅರ್ಜುನನನ್ನು ಶ್ವೇತ ತುರಗನ, ಕುಂತೀತನುಜ, ನರ, ಪಾರ್ಥ ಎಂದು ಕರೆದಿರುವುದು
(೨) ಅರ್ಜುನನು ಸೋಲಲಾರ ಎಂದು ಹೇಳುವ ಪರಿ – ಕುಂತೀತನುಜ ತಾನಲ್ಲ ನಿಶ್ಚಯವೆಂದು ಚಿಂತಿಸಿದ

ಪದ್ಯ ೪೪: ಮೂಕಾಸುರನು ಶಿವಗಣರ ಯುದ್ಧದಲ್ಲಿ ಹೇಗೆ ಮುಂದುವರೆದನು?

ಇಡುವ ಸೆಲ್ಲೆಹ ಬಲ್ಲೆಹದ ಹೆ
ಗ್ಗಿಡಿಯನುಗುಳವ ಬಾಯಧಾರೆಯ
ನುಡಿದು ಹರಹಿ ಮಹೋಗ್ರತರ ಜಾಯಿಲನ ಜಂಗುಳಿಯ
ಕಡಿದು ಕೆಡಹಿ ಪುಳಿಂದ ಶಬರಿ
ರೆಡೆಗೆಡೆಯಲಡಹಾಯ್ದು ಮಿಗೆ ಘುಡಿ
ಘುಡಿಸಿ ಕವಿದೈತರಲು ಧೃತಿಗೆಟ್ಟುದು ಗಣಸ್ತೋಮ (ಅರಣ್ಯ ಪರ್ವ, ೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಬೇಟೆಗಾರರು ಎಸೆಯುವ ತಿವಿಯುವ ಈಟಿಗಳ ಬಾಯಿಧಾರೆಗಳನ್ನು ಮುರಿದು, ಕೆಡವಿ, ಅತ್ಯಂತ ಉಗ್ರವಾದ ಬೇಟೆಯ ನಾಯಿಗಳನ್ನು ಕಡಿದು, ಕೆಡವಿ, ಬೇಡ ಬೇಡತಿಯರು ಬಂದು ತಡೆವಾದ, ಅವರನ್ನು ಹಾದು ಮೂಕಾಸುರನೆಂಬ ಹಂದಿಯು ಘುಡಿಘುಡಿಸುತ್ತಾ ಬರಲು ಶಿವನ ಗಣಗಳು ಹೆದರಿದವು.

ಅರ್ಥ:
ಇಡು: ಅಣಿಗೊಳಿಸು, ಇರಿಸು; ಸೆಲ್ಲೆಹ: ಈಟಿ, ಭರ್ಜಿ; ಬಲ್ಲೆ: ಈಟಿ; ಹೆಗ್ಗಿಡಿ: ದೊಡ್ಡ ಕಿಡಿ; ಉಗುಳು: ಹೊರಹಾಕು; ಧಾರೆ: ಮೇಲಿನಿಂದ ಹರಿದುಬರುವ ನೀರು; ನುಡಿ: ಮಾತು; ಹರಹು: ವಿಸ್ತಾರ, ವೈಶಾಲ್ಯ; ಮಹಾ: ದೊಡ್ಡ; ಉಗ್ರ: ಭಯಂಕರ; ಜಾಯಿಲು: ನಾಯಿ; ಜಂಗುಳಿ: ಗುಂಪು; ಕಡಿ: ಸೀಳು; ಕೆಡಹು: ಕೆಡವಿ; ಪುಳಿಂದ: ಬೇಡ; ಶವರಿ: ಬೇಡತಿ; ಎಡೆಗೆಡೆ: ಕೆಳಕ್ಕೆ ಬೀಳು; ಅಡಹಾಯ್ದು: ಮಧ್ಯ ಹೊಕ್ಕು; ಮಿಗೆ: ಅಧಿಕ; ಘುಡಿಘುಡಿ: ಶಬ್ದವನ್ನು ವಿವರಿಸುವ ಪದ; ಕವಿದು: ಆವರಿಸು; ಐದು: ಬಂದು ಸೇರು; ಧೃತಿ: ಧೈರ್ಯ; ಗಣ: ಶಿವಗಣ; ಸ್ತೋಮ: ಗುಂಫು;

ಪದವಿಂಗಡಣೆ:
ಇಡುವ +ಸೆಲ್ಲೆಹ +ಬಲ್ಲೆಹದ +ಹೆ
ಗ್ಗಿಡಿಯನ್+ಉಗುಳವ +ಬಾಯಧಾರೆಯ
ನುಡಿದು +ಹರಹಿ +ಮಹ+ಉಗ್ರತರ+ ಜಾಯಿಲನ+ ಜಂಗುಳಿಯ
ಕಡಿದು +ಕೆಡಹಿ+ ಪುಳಿಂದ +ಶಬರಿಯ
ಏಡೆಗೆಡೆಯಳ್+ಆಡಹಾಯ್ದು +ಮಿಗೆ +ಘುಡಿ
ಘುಡಿಸಿ +ಕವಿದ್+ ಐತರಲು+ ಧೃತಿಗೆಟ್ಟುದು +ಗಣಸ್ತೋಮ

ಅಚ್ಚರಿ:
(೧) ಸೆಲ್ಲೆಹ, ಬಲ್ಲೆಹ – ಸಮನಾರ್ಥಕ, ಪ್ರಾಸ ಪದ
(೨) ನಾಯಿಗೆ ಜಾಯಿಲು ಪದದ ಬಳಕೆ
(೩) ಜ ಕಾರದ ೨ ಪದಗಳ ಬಳಕೆ – ಜಾಯಿಲನ ಜಂಗುಳಿಯ
(೪) ಬೇಡ ಬೇಡತಿ ಎಂದು ಹೇಳಲು, ಪುಳಿಂದ, ಶಬರಿ ಪದಗಳ ಬಳಕೆ

ಪದ್ಯ ೭: ಕರ್ಣನನ್ನು ಯಾವ ರಾಜರು ಮೂದಲಿಸಿದರು?

ಮುಂದುಗೆಟ್ಟುದು ದೊರೆಗಳೆನೆ ರವಿ
ನಂದನನ ರಥಕಾಗಿ ಸೇನಾ
ವೃಂದ ಕವಿದುದು ಚೈದ್ಯ ಸೃಂಜಯ ಮತ್ಸ್ಯ ಕೈಕೆಯರು
ಸಂದಣಿಸಿ ಪಾಂಚಾಲ ಕೇರಳ
ವಿಂದ ಮಗಧ ದ್ರವಿಡ ವಂಗ ಪು
ಳಿಂದ ಬಲ ಬಹಳಾಬ್ಧಿ ಮುತ್ತಿತು ಮತ್ತೆ ಮೂದಲಿಸಿ (ಕರ್ಣ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ದೊರೆಗಳು ಮುಂದುಗೆಟ್ಟರೂ, ಚೈದ್ಯ, ಸೃಂಜಯ, ಮತ್ಸ್ಯ, ಕೈಕೆಯರ ಸೇನೆಗಳು ಕವಿದವು. ಪಾಂಚಾಲ, ಕೇರಳ, ವಿಂದ, ಮಗಧ, ದ್ರವಿಡ, ವಂಗ, ಪುಳಿಂದರ ಸೇನಾ ಸಮುದ್ರಗಳು ಕರ್ಣನನ್ನು ಮುತ್ತಿ ಮೂದಲಿಸಿದವು.

ಅರ್ಥ:
ಮುಂದು: ಮುಂಚೂಣಿ; ದೊರೆ: ರಾಜ; ರವಿನಂದನ: ಸೂರ್ಯಪುತ್ರ (ಕರ್ಣ); ರಥ: ತೇರು; ಸೇನಾವೃಂದ: ಸೈನ್ಯದ ಗುಂಪು; ಕವಿದು: ಆವರಿಸು, ತೊಡು, ಧರಿಸು; ಸಂದಣಿ: ಗುಂಪು, ಸಮೂಹ; ಬಲ: ಸೈನ್ಯ; ಅಬ್ಧಿ: ಸಾಗರ; ಮುತ್ತು: ಆವರಿಸು, ಕವಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಮುಂದುಗೆಟ್ಟುದು+ ದೊರೆಗಳೆನೆ+ ರವಿ
ನಂದನನ +ರಥಕಾಗಿ +ಸೇನಾ
ವೃಂದ +ಕವಿದುದು +ಚೈದ್ಯ +ಸೃಂಜಯ +ಮತ್ಸ್ಯ +ಕೈಕೆಯರು
ಸಂದಣಿಸಿ +ಪಾಂಚಾಲ +ಕೇರಳ
ವಿಂದ +ಮಗಧ +ದ್ರವಿಡ +ವಂಗ +ಪು
ಳಿಂದ +ಬಲ +ಬಹಳಾಬ್ಧಿ +ಮುತ್ತಿತು +ಮತ್ತೆ +ಮೂದಲಿಸಿ

ಅಚ್ಚರಿ:
(೧) ಚೈದ್ಯ, ಸೃಂಜಯ, ಮತ್ಸ್ಯ, ಕೈಕೆಯ, ಪಾಂಚಾಲ, ಕೇರಳ, ವಿಂಗ, ಮಗಧ, ದ್ರವಿಡ, ವಂಗ, ಪುಳಿಂದ – ಕರ್ಣನನ್ನು ಮುತ್ತಿದ ಸೈನ್ಯ