ಪದ್ಯ ೫೯: ಕುಂತಿಯು ಮಂತ್ರಶಕ್ತಿಯಿಂದ ಯಾರನ್ನು ಕರೆದಳು?

ಮಿಂದು ಕಡುಶುಚಿಯಾಗಿ ಸುಮನೋ
ವೃಮ್ದದೊಲಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರಶಕ್ತಿಯಲಿ
ಬಂದನಲ್ಲಿಗೆ ಬಯಕೆಯೇನರ
ವಿಂದ ಲೋಚನೆ ಹೇಳೆನಲು ಪೂ
ರ್ಣೇಂದು ಮುಖಿ ತಲೆವಾಗಿದಳು ಲಜ್ಜಾನುಭಾವದಲಿ (ಆದಿ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ಸ್ನಾನವನ್ನು ಮಾಡಿ, ಶುಚಿಯಾಗಿ ಮಂತ್ರವನ್ನು ಜಪಿಸಿ ದೇವತೆಗಳಲ್ಲಿ ದೇವೇಂದ್ರನನ್ನು ಆರಿಸಿಕೊಂಡು ನೆನೆದಳು. ಒಡನೆಯೇ ಇಂದ್ರನು ಬಂದು ಕಮಲಾಕ್ಷಿ, ನಿನ್ನ ಬಯಕೆಯೇನು ಹೇಳು ಎನಲು, ಕುಂತಿಯು ಲಜ್ಜಾಭಾವದಿಂದ ತಲೆಯನ್ನು ತಗ್ಗಿಸಿದಳು.

ಅರ್ಥ:
ಮಿಂದು: ಸ್ನಾನಮಾಡಿ; ಕಡುಶುಚಿ: ತುಂಬ ನಿರ್ಮಲವಾಗಿ; ಸುಮನ: ಒಳ್ಳೆಯ ಮನಸ್ಸು; ವೃಂದ: ಗುಂಪು; ನೋಡು: ವೀಕ್ಷಿಸು; ಪುರಂದರ: ಇಂದ್ರ; ನೆನೆ: ಜ್ಞಾಪಿಸಿಕೊ; ಮುನಿ: ಋಷಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಶಕ್ತಿ: ಬಲ; ಬಂದು: ಆಗಮಿಸು; ಬಯಕೆ: ಆಸೆ; ಅರವಿಂದ: ಕಮಲ; ಲೋಚನೆ: ಕಣ್ಣು; ಹೇಳು: ಆಲಿಸು; ಪೂರ್ಣೇಂದು: ಪೂರ್ಣಚಂದ್ರ; ಮುಖ: ಆನನ; ತಲೆ: ಶಿರ; ತಲೆವಾಗು: ತಲೆಯನ್ನು ತಗ್ಗಿಸು; ಲಜ್ಜೆ: ನಾಚಿಕೆ; ಭಾವ: ಮನೋಧರ್ಮ, ಭಾವನೆ, ಚಿತ್ತವೃತ್ತಿ;

ಪದವಿಂಗಡಣೆ:
ಮಿಂದು +ಕಡುಶುಚಿಯಾಗಿ +ಸುಮನೋ
ವೃಂದದೊಳಗಾರೈದು+ ನೋಡಿ +ಪು
ರಂದರನ +ನೆನೆದಳು +ಮುನೀಂದ್ರನ+ ಮಂತ್ರ+ಶಕ್ತಿಯಲಿ
ಬಂದನಲ್ಲಿಗೆ+ ಬಯಕೆಯೇನ್+ ಅರ
ವಿಂದ +ಲೋಚನೆ +ಹೇಳೆನಲು +ಪೂ
ರ್ಣೇಂದು +ಮುಖಿ +ತಲೆವಾಗಿದಳು +ಲಜ್ಜಾನು+ಭಾವದಲಿ

ಅಚ್ಚರಿ:
(೧) ಕುಂತಿಯನ್ನು ಕರೆದ ಪರಿ – ಅರವಿಂದಲೋಚನೆ, ಪೂರ್ಣೇಂದುಮುಖಿ

ಪದ್ಯ ೯: ಶಪಥಕ್ಕೆ ಯಾರು ಸಾಕ್ಷಿಯಾದರು?

ಎಂದು ಸಮಸಪ್ತಕರು ತಮ್ಮೊಳ
ಗಂದು ಶಪಥವ ಮಾಡಿ ವಿಪ್ರರ
ಮಂದಿಗಿತ್ತರು ಗೋ ಹಿರಣ್ಯ ಸಮಸ್ತ ವಸ್ತುಗಳ
ಇಂದು ರವಿ ಜಲ ವಹ್ನಿಯನಿಲ ಪು
ರಂದರಾದಿ ಸುರೌಘ ಸಾಕ್ಷಿಗ
ಳೆಂದು ಸೂಳೈಸಿದರು ಭುಜವನು ಸಿಡಿಲು ತನಿಗೆದರೆ (ದ್ರೋಣ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ಹೀಗೆ ಸಂಶಪ್ತಕರು ಶಪಥವನ್ನು ಮಾದಿ, ಬ್ರಾಹ್ಮಣರಿಗೆ ಗೋವು, ಚಿನ್ನ ಮೊದಲಾದ ದಾನಗಳನ್ನು ಮಾದಿದರು. ತಮ್ಮ ಶಪಥಕ್ಕೆ ಸೂರ್ಯ, ವರುಣ, ಅಗ್ನಿ ವಾಯು, ಇಂದ್ರ ಮೊದಲಾದ ಸಮಸ್ತ ದೇವತೆಗಳೇ ಸಾಕ್ಷಿಯೆಂದು ನುಡಿದು, ಸಿಡಿಲಿನಂತಹ ಶಬ್ದ ಬರಲು, ತಮ್ಮ ತೋಳುಗಳನ್ನು ತಟ್ಟಿದರು.

ಅರ್ಥ:
ಸಪ್ತಕ: ಏಳರ ಗುಂಪು; ಶಪಥ: ಪ್ರಮಾಣ; ವಿಪ್ರ: ಬ್ರಾಹ್ಮಣ; ಮಂದಿ: ಜನ; ಗೋ: ಗೋವು; ಹಿರಣ್ಯ: ಚಿನ್ನ; ಸಮಸ್ತ: ಎಲ್ಲಾ; ವಸ್ತು: ಸಾಮಾನು; ರವಿ: ಸೂರ್ಯ; ಜಲ: ನೀರು; ವಹ್ನಿ: ಅಗ್ನಿ; ಅನಿಲ: ವಾಯು; ಪುರಂದರ: ಇಂದ್ರ; ಆದಿ: ಮುಂತಾದ; ಔಘ: ಗುಂಪು; ಸಾಕ್ಷಿ: ಪುರಾವೆ; ಸೂಳು: ಆರ್ಭಟ; ಭುಜ: ಬಾಹು; ಸಿಡಿಲು: ಅಶನಿ; ತನಿ: ಚಿಗುರು; ಕೆದರು: ಹರಡು;

ಪದವಿಂಗಡಣೆ:
ಎಂದು +ಸಮಸಪ್ತಕರು +ತಮ್ಮೊಳಗ್
ಅಂದು +ಶಪಥವ +ಮಾಡಿ +ವಿಪ್ರರ
ಮಂದಿಗಿತ್ತರು+ ಗೋ +ಹಿರಣ್ಯ +ಸಮಸ್ತ +ವಸ್ತುಗಳ
ಇಂದು +ರವಿ+ ಜಲ +ವಹ್ನಿ+ಅನಿಲ +ಪು
ರಂದರಾದಿ +ಸುರೌಘ +ಸಾಕ್ಷಿಗಳ್
ಎಂದು +ಸೂಳೈಸಿದರು +ಭುಜವನು +ಸಿಡಿಲು +ತನಿಗೆದರೆ

ಅಚ್ಚರಿ:
(೧) ಶಪಥಕ್ಕೆ ಸಾಕ್ಷಿ – ರವಿ ಜಲ ವಹ್ನಿಯನಿಲ ಪುರಂದರಾದಿ ಸುರೌಘ ಸಾಕ್ಷಿಗಳೆಂದು ಸೂಳೈಸಿದರು

ಪದ್ಯ ೫೪: ಅರ್ಜುನನಿಗೆ ಯಾವ ಬಾಣಗಳು ದೊರೆತವು?

ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ ತಂ
ದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ (ಅರಣ್ಯ ಪರ್ವ, ೯ ಸಂಧಿ, ೫೪ ಪದ್ಯ)

ತಾತ್ಪರ್ಯ:
ಇಂದ್ರನು ಹೀಗೆ ಹಲವಾರು ರೀತಿಯಲ್ಲಿ ವಿಷಯವನ್ನು ತಿಳಿಸಿ, ಸಮಾಧಾನಗೊಳಿಸಿ ಅರ್ಜುನನೊಡನೆ ಇಂದ್ರನು ತನ್ನರಮನೆಗೆ ಬಂದನು, ವಿವಿಧ ವೈಭವಯುಕ್ತವಾಗಿ ವಿನೋದದಿಂದ ಮಾತುಗಳನ್ನಾಡಿ ವಿಹರಿಸಿದನು. ಅಗ್ನಿ, ವಾಯು ಮೊದಲಾದ ದೇವತೆಗಳು ಅರ್ಜುನನಿಗೆ ಸಂತೋಷದಿಂದ ಬಾಣಗಳನ್ನು ನೀಡಿದರು, ದೇವತಾಸ್ತ್ರೀಯರು ಸೀಸೆಯನ್ನಿಟ್ಟು ಜಯಕಾರವನ್ನು ಮೊಳಗಿದರು.

ಅರ್ಥ:
ಸಂತ: ಸೌಖ್ಯ, ಕ್ಷೇಮ; ಪುರಂದರ: ಇಂದ್ರ; ಅರಮನೆ: ರಾಜರ ಆಲಯ; ನಡೆ: ಚಲಿಸು; ಸಹಿತ: ಜೊತೆ; ವಿವಿಧ: ಹಲವಾರು; ವಿನೋದ: ವಿಹಾರ, ಸಂತೋಷ; ವಿಭವ: ಸಿರಿ, ಸಂಪತ್ತು; ಶಿಖಿ: ಅಗ್ನಿ; ಪವನ: ವಾಯು; ಆದಿ: ಮುಂತಾದ; ನಲವು: ಸಂತೋಷ; ಕೊಡು: ನೀಡು; ಶರ: ಬಾಣ; ಅಮರ: ದೇವತೆ; ವೃಂದ: ಗುಂಪು; ಸೂಸು: ಕೊಡು, ನೀಡು; ಸೇಸೆ: ಮಂಗಳಾಕ್ಷತೆ, ಮಂತ್ರಾಕ್ಷತೆ; ಜಯ: ಉಘೇ; ರವ: ಶಬ್ದ; ರಭಸ: ವೇಗ;

ಪದವಿಂಗಡಣೆ:
ಎಂದು +ಪಾರ್ಥನ +ಸಂತವಿಟ್ಟು +ಪು
ರಂದರನು +ತನ್ನರಮನೆಗೆ +ನಡೆ +ತಂ
ದನ್+ಅರ್ಜುನ +ಸಹಿತ +ವಿವಿಧ +ವಿನೋದ +ವಿಭವದಲಿ
ಅಂದು +ಶಿಖಿ +ಪವನಾದಿಗಳು +ನಲ
ವಿಂದ+ ಕೊಟ್ಟರು +ಶರವನ್+ಅಮರೀ
ವೃಂದ +ಸೂಸಿತು+ ಸೇಸೆಯನು +ಜಯರವದ+ ರಭಸದಲಿ

ಅಚ್ಚರಿ:
(೧) ಅಪ್ಸರೆಯರು ಎಂದು ಹೇಳಲು – ಅಮರೀವೃಂದ ಪದದ ಬಳಕೆ
(೨) ವಿ ಕಾರದ ತ್ರಿವಳಿ ಪದ – ವಿವಿಧ ವಿನೋದ ವಿಭವದಲಿ

ಪದ್ಯ ೧೦: ಕರ್ಣಾರ್ಜುನರ ಯುದ್ಧದ ವೇಗೆ ಹೇಗಿತ್ತು?

ಮುಂಚುವುದು ಕೈಮನವ ಕೈಮೆಯ
ಸಂಚವನು ಮನ ಮುಂಚುವುದು ಮಿಗೆ
ವಂಚಿಸುವುದಂಬುಗಳ ಗತಿ ಕೈಮನದ ಕಲುಹೆಗಳ
ಮುಂಚಿದಂಬುಗಳಾರನೇಳನು
ಹಿಂಚಿದವು ಹೊಂಬರಹದಂಬಿನ
ಮಿಂಚುಗಳಲೆವೆ ಹಳಚಿದವು ಹರಿಹರ ಪುರಂದರರ (ಕರ್ಣ ಪರ್ವ, ೨೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಇಬ್ಬರೂ ವೀರರ ಮನಸ್ಸನ್ನು ಒಮ್ಮೆ ಕೈಯೆಸೆತ ಮೀರುವುದು, ಕೈಚಳಕವನ್ನು ಮನಸ್ಸು ಮೀರಿ ಮುಂದುವರಿಯುವುದು, ಕೈಮನಸ್ಸುಗಳ ವೇಗವನ್ನು ಬಾಣಗಳ ವೇಗ ಮೀರಿಸುತ್ತಿತ್ತು. ಮುಂದು ಹೋಗುವ ಆರೇಳು ಬಾಣಗಳನ್ನು ಹಿಂದಿನಿಂದ ಬಿಟ್ಟ ಬಂಗಾರದ ರೇಖೆಯ ಅಂಬುಗಳು ಮೀರಿ ಹೋದವು. ಈ ಅಂಬುಗಳ ಗಮನವನ್ನು ತ್ರಿಮೂರ್ತಿಗಳೇ ಕಷ್ಟಪಟ್ಟು ಗುರುತಿಸಿದರು.

ಅರ್ಥ:
ಮುಂಚು: ಮುಂದೆ; ಕೈ: ಕರ; ಮನ: ಮನಸ್ಸು; ಸಂಚ: ಹಿಡಿತ, ವಶ; ಮಿಗೆ: ಮತ್ತು, ಅಧಿಕವಾದ; ವಂಚಿಸು: ಮೋಸಮಾಡು; ಅಂಬು: ಬಾಣ; ಗತಿ: ವೇಗ; ಕಲುಹೆ: ಜ್ಞಾನ; ಅಂಬು: ಬಾಣ; ಹಿಂಚೆ: ಹಿಂಬದಿ; ಹೊಂಬರ: ಚಿನ್ನದ; ಮಿಂಚು: ಹೊಳಪು, ಕಾಂತಿ; ಹಳಚು: ತಾಗು, ಬಡಿ; ಹರಿ: ವಿಷ್ಣು; ಹರ: ಶಿವ; ಪುರಂದರ: ಇಂದ್ರ;

ಪದವಿಂಗಡಣೆ:
ಮುಂಚುವುದು+ ಕೈ+ಮನವ+ ಕೈ+ಮೆಯ
ಸಂಚವನು +ಮನ +ಮುಂಚುವುದು +ಮಿಗೆ
ವಂಚಿಸುವುದ್+ಅಂಬುಗಳ +ಗತಿ +ಕೈ+ಮನದ+ ಕಲುಹೆಗಳ
ಮುಂಚಿದ್+ಅಂಬುಗಳ್+ಆರನ್+ಏಳನು
ಹಿಂಚಿದವು +ಹೊಂಬರಹದ್+ಅಂಬಿನ
ಮಿಂಚುಗಳಲೆವೆ+ ಹಳಚಿದವು +ಹರಿಹರ+ ಪುರಂದರರ

ಅಚ್ಚರಿ:
(೧) ಯುದ್ಧದ ಗತಿಯನ್ನು ವಿವರಿಸುವ ಕವಿಯ ಕಲ್ಪನೆ

ಪದ್ಯ ೩೧: ಯಾರು ಯುದ್ಧರಂಗವನ್ನು ಪ್ರವೇಶಿಸಿ ಎಂದು ಕರ್ಣನು ಹೇಳಿದನು?

ಸಂದ ಸುಭಟರು ಬನ್ನಿ ಸ್ವರ್ಗದ
ಬಂದಿಕಾರರು ಬನ್ನಿ ಮನದಿಂ
ಮುಂದೆ ಹೆಜ್ಜೆಯ ತವಕಿಗರು ಬಹುದೆನ್ನ ಸಂಗಾತ
ನೋಂದಡುಬ್ಬುವರಿತ್ತು ಬನ್ನಿ ಪು
ರಂದರನ ಸರಿಗದ್ದುಗೆಗೆ ಮನ
ಸಂದವರು ಹೊಗಿರಣವನೆಂದನು ಕರ್ಣ ನಿಜಬಲಕೆ (ಕರ್ಣ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸುಭಟರೆಂದು ಹೆಸರಾದವರು ಬನ್ನಿ, ಸ್ವರ್ಗವನ್ನು ಸೆರೆಹಿಡಿಯುವವರು ಬನ್ನಿ, ಸಂತೋಷದಿಂದ ಹೆಜ್ಜೆಯನ್ನು ಮುಂದಿಡುವವರು ನನ್ನ ಜೊತೆಗೆ ಬನ್ನಿ. ಯುದ್ಧದಲ್ಲಿ ನೋವನ್ನುಂಡು ಮತ್ತೆ ಹಿಗ್ಗುತ್ತ ಮೇಲೇಳುವವರು ನನ್ನ ಜೊತೆಗೆ ಬನ್ನಿ, ಇಂದ್ರನ ಸಿಂಹಾಸನದಲ್ಲಿ ಅವನಿಗೆ ಸರಿಸಮಾನನಾಗಿ ಕೂರಲು ಮನಸ್ಸಿರುವವರು ಯುದ್ಧರಂಗವನ್ನು ಪ್ರವೇಶಿಸಿ ಎಂದು ಹೇಳುತ್ತಾ ತನ್ನ ಸೈನಿಕರನ್ನು ಹುರಿದುಂಬಿಸಿದನು.

ಅರ್ಥ:
ಸಂದ: ಹಿಂದಿನ; ಸುಭಟರು: ಒಳ್ಳೆಯ ಸೈನಿಕರು; ಬನ್ನಿ: ಆಗಮಿಸಿ; ಸ್ವರ್ಗ: ನಾಕ; ಬಂದಿಕಾರ: ಬಂಧನ, ಸೆರೆ; ಮನ: ಮನಸ್ಸು; ಮುಂದೆ: ಎದುರು; ಹೆಜ್ಜೆ: ಪದ; ತವಕ: ಬಯಕೆ, ಆತುರ; ಬಹುದು: ಬರಬಹುದು; ಸಂಗಾತ: ಜೊತೆ; ನೊಂದು: ನೋವನ್ನು ಉಂಡು; ಉಬ್ಬುವ: ಹಿಗ್ಗು, ಮೇಲೇಳು; ಪುರಂದರ: ಇಂದ್ರನ; ಸರಿ: ಸಮಾನವಾದ; ಗದ್ದುಗೆ: ಆಸನ; ಮನಸಂದ: ಮನಸ್ಸಿಟ್ಟಿರುವವರು; ಹೊಗು: ಪ್ರವೇಶಿಸು; ರಣ: ಯುದ್ಧರಂಗ; ನಿಜಬಲ: ಸೈನ್ಯ;

ಪದವಿಂಗಡಣೆ:
ಸಂದ+ ಸುಭಟರು +ಬನ್ನಿ +ಸ್ವರ್ಗದ
ಬಂದಿಕಾರರು +ಬನ್ನಿ +ಮನದಿಂ
ಮುಂದೆ +ಹೆಜ್ಜೆಯ +ತವಕಿಗರು +ಬಹುದೆನ್ನ +ಸಂಗಾತ
ನೋಂದಡ್+ಉಬ್ಬುವರ್+ಇತ್ತು +ಬನ್ನಿ +ಪು
ರಂದರನ +ಸರಿಗದ್ದುಗೆಗೆ +ಮನ
ಸಂದವರು +ಹೊಗಿ +ರಣವನೆಂದನು +ಕರ್ಣ +ನಿಜಬಲಕೆ

ಅಚ್ಚರಿ:
(೧) ಸಂದ – ೧, ೬ ಸಾಲಿನ ಮೊದಲ ಪದ
(೨) ೫ ರೀತಿಯ ಜನರನ್ನು ಯುದ್ಧಕ್ಕೆ ಬನ್ನಿ ಎಂದು ಕರೆಯುವ ಪದ್ಯ