ಪದ್ಯ ೧೪: ದ್ರೋಣನು ಸೈಂಧವನನ್ನು ಕಾಪಾಡಲೇಕಾಗಲಿಲ್ಲವೆಂದು ಹೇಳಿದನು?

ಖಾತಿಯೇಕೈ ಸೈಂಧವನ ಕಾ
ವಾತನಾರೈ ತ್ರಿಪುರದಹನದ
ಭೂತನಾಥನ ಬಾಣ ಬಂದುದು ನರನ ಗಾಂಡಿವಕೆ
ಆತನೆಚ್ಚದು ಪಾಶುಪತವದ
ನಾತುಕೊಂಬವರಾರು ಬರಿದೆ ಭ
ಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ (ದ್ರೋಣ ಪರ್ವ, ೧೫ ಸಮ್ಧಿ, ೧೪ ಪದ್ಯ)

ತಾತ್ಪರ್ಯ:
ನೀವೇಕೆ ಇಷ್ಟು ಸಿಟ್ಟಿನಿಂದ ವಾದಿಸುತ್ತಿರುವಿರಿ ಎಂದು ದ್ರೋಣನು ತನ್ನ ವಿಚಾರವನ್ನಿಡಲು ಶುರುಮಾಡಿದರು. ತ್ರಿಪುರಗಳನ್ನು ದಹಿಸಿದ ಶಿವನ ಪಾಶುಪತಾಸ್ತ್ರವು ಅರ್ಜುನನ ಗಾಂಡಿವಕ್ಕೆ ಬಂದಿತು ಎಂದ ಮೇಲೆ ಸೈಂಧವನನ್ನು ಕಾಪಾಡುವವರಾರು? ಅರ್ಜುನನು ಪ್ರಯೋಗಿಸಿದ್ದ ಪಾಶುಪತಾಸ್ತ್ರವನ್ನು ಇದಿರಿಸಬಲ್ಲವರಾರು? ಸುಮ್ಮನೆ ವೀರರನ್ನು ಬೆದರಿಸಿ ಅಲ್ಲಗಳೆಯುತ್ತಿದ್ದೀರಿ ಎಂದು ದ್ರೋಣನು ಹೇಳಿದನು.

ಅರ್ಥ:
ಖಾತಿ: ಕೋಪ, ಸಿಟ್ಟು; ಕಾವು: ರಕ್ಷಿಸು; ದಹನ: ಸುಡು; ಭೂತನಾಥ: ಶಿವ; ಬಾಣ: ಅಂಬು; ಬಂದು: ಆಗಮಿಸು; ನರ: ಅರ್ಜುನ; ಎಚ್ಚು: ಬಾಣ ಪ್ರಯೋಗ ಮಾಡು; ಭಟ: ಸೈನಿಕ, ಪರಾಕ್ರಮಿ; ಅತಿಶಯ: ಹೆಚ್ಚಳ; ಹುರುಳು: ಸತ್ತ್ವ, ಸಾರ; ಕೆಡಿಸು: ಹಾಳುಮಾಡು;

ಪದವಿಂಗಡಣೆ:
ಖಾತಿಯೇಕೈ +ಸೈಂಧವನ +ಕಾವ್
ಆತನಾರೈ +ತ್ರಿಪುರದಹನದ
ಭೂತನಾಥನ +ಬಾಣ +ಬಂದುದು +ನರನ +ಗಾಂಡಿವಕೆ
ಆತನ್+ಎಚ್ಚದು +ಪಾಶುಪತವ್+ಅದನ್
ಆತುಕೊಂಬವರಾರು +ಬರಿದೆ +ಭ
ಟಾತಿಶಯವನು +ಹುರುಳು+ಕೆಡಿಸುವಿರೆಂದನಾ +ದ್ರೋಣ

ಅಚ್ಚರಿ:
(೧) ಪಾಶುಪತಾಸ್ತ್ರ ಎಂದು ಹೇಳುವ ಪರಿ – ತ್ರಿಪುರದಹನದ ಭೂತನಾಥನ ಬಾಣ
(೨) ಹುರುಳಿಲ್ಲದ ಮಾತು ಎಂದು ಹೇಳುವ ಪರಿ – ಬರಿದೆ ಭಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ

ಪದ್ಯ ೪೦: ಸೈಂಧವನ ಅಂತ್ಯ ಹೇಗಾಯಿತು?

ಬಲಿದು ಮಂಡಿಯನೂರಿ ಕೆನ್ನೆಗೆ
ಸೆಳೆದು ಮುಷ್ಟಿಯ ಪಾರ್ಥನಹಿತನ
ತಲೆಯನೆಚ್ಚನು ಗೋಣ ಕಡಿದುದು ಪಾಶುಪತ ಬಾಣ
ಹೊಳೆವ ಮಕುಟದ ವದನ ಗಗನಾಂ
ಗಳಕೆ ಚಿಮ್ಮಿತು ರಕುತಧಾರಾ
ವಳಿಯ ರಿಂಗಣವಾಯ್ತು ಮುಂಡದ ತಲೆಯ ಮಧ್ಯದಲಿ (ದ್ರೋಣ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಮಂಡಿಯನ್ನೂರಿ ಪಾಶುಪತಾಸ್ತ್ರವನ್ನು ಹೂಡಿ ಕೆನ್ನೆಯವರೆಗೆ ಹೆದೆಯನ್ನೆಳೆದು, ಸೈಂಧವನ ಕುತ್ತಿಗೆಗೆ ಗುರಿಯಿಟ್ಟು ಹೊಡೆಯಲು ಸೈಂಧವನ ಕತ್ತು ಕತ್ತರಿಸಿತು. ಥಳಥಳಿಸುವ ಕಿರೀಟವನ್ನಿಟ್ಟ ತಲೆ ಆಕಾಶಕ್ಕೆ ಹಾರಿ ರಕ್ತಧಾರೆಯು ಮುಂಡ ತಲೆಗಳಿಂದ ಚಿಮ್ಮಿ ಹರಿಯಿತು.

ಅರ್ಥ:
ಬಲಿ: ಗಟ್ಟಿ, ದೃಢ; ಮಂಡಿ: ಮೊಳಕಾಲು, ಜಾನು; ಊರು: ಭದ್ರವಾಗಿ ನಿಲ್ಲಿಸು; ಕೆನ್ನೆ: ಕದಪು; ಸೆಳೆ: ಥಳಿಸು; ಮುಷ್ಟಿ: ಮುಚ್ಚಿದ ಅಂಗೈ, ಮುಟ್ಟಿಗೆ; ಅಹಿತ: ವೈರಿ; ತಲೆ: ಶಿರ; ಎಚ್ಚು: ಬಾಣ ಪ್ರಯೋಗ ಮಾಡು; ಗೋಣು: ಕೊರಳು; ಕಡಿ: ಸೀಳು, ಕತ್ತರಿಸು; ಬಾಣ: ಸರಳು; ಹೊಳೆ: ಪ್ರಕಾಶ; ಮಕುಟ: ಕಿರೀಟ; ವದನ: ಮುಖ; ಗಗನ: ಆಗಸ; ಅಂಗಳ: ಬಯಲು; ಚಿಮ್ಮು: ಹರಡು, ಬೀಳು; ರಕುತ: ನೆತ್ತರು; ಧಾರಾ: ಮಳೆ; ರಿಂಗಣ: ಸುತ್ತುತ್ತಾ ಮಾಡುವ ಚಲನೆ; ಮುಂಡ: ತಲೆಯಿಲ್ಲದ ದೇಹ; ತಲೆ: ಶಿರ; ಮಧ್ಯ: ನಡುವೆ;

ಪದವಿಂಗಡಣೆ:
ಬಲಿದು +ಮಂಡಿಯನೂರಿ +ಕೆನ್ನೆಗೆ
ಸೆಳೆದು +ಮುಷ್ಟಿಯ +ಪಾರ್ಥನ್+ಅಹಿತನ
ತಲೆಯನ್+ಎಚ್ಚನು +ಗೋಣ +ಕಡಿದುದು +ಪಾಶುಪತ +ಬಾಣ
ಹೊಳೆವ +ಮಕುಟದ +ವದನ +ಗಗನಾಂ
ಗಳಕೆ +ಚಿಮ್ಮಿತು +ರಕುತಧಾರಾ
ವಳಿಯ +ರಿಂಗಣವಾಯ್ತು +ಮುಂಡದ +ತಲೆಯ +ಮಧ್ಯದಲಿ

ಅಚ್ಚರಿ:
(೧) ಸೈಂಧವನ ಅಂತ್ಯವನ್ನು ಚಿತ್ರಿಸುವ ಪರಿ – ಹೊಳೆವ ಮಕುಟದ ವದನ ಗಗನಾಂಗಳಕೆ ಚಿಮ್ಮಿತು
(೨) ಮ ಕಾರದ ಪದಗಳು – ಮಂಡಿ, ಮುಷ್ಟಿ, ಮಕುಟ, ಮುಂಡ

ಪದ್ಯ ೧೦: ಧರ್ಮಜನು ಕೃಷ್ಣನನ್ನು ಹೇಗೆ ಹೊಗಳಿದನು?

ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಲಿರ್ದುದು ಪಾಶುಪತಶರವದರ ಬಳಿವಿಡಿದು
ಈಗಲೊಸಗೆಯೆ ತಮ್ಮ ಪಂಚಕ
ದಾಗು ಹೋಗನು ಹೊತ್ತು ನಡಸಿದೊ
ಡಾಗ ನಮಗಾಯ್ತೊಸಗೆಯೆಂದನು ನೃಪತಿ ವಿನಯದಲಿ (ಅರಣ್ಯ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಸರ್ವವ್ಯಾಪಿಯಾದ ನಿನ್ನ ರಕ್ಷಣೆ ನಮಗೆ ದೊರೆತುದರಿಂದ ಪಾಶುಪತಾಸ್ತ್ರವು ಅದರೊಡನೆಯೇ ನಮಗೆ ಸಿಕ್ಕಿತು. ನಮ್ಮ ಆಗುಹೋಗುಗಳನ್ನು ನೀನು ವಹಿಸಿಕೊಂಡಾಗಲೇ ನಮಗೆ ಶುಭವುಂಟಾದವು. ನಿನಗೆ ಈಗ ಶುಭವಾಗಿದಿಯೇ ಎಂದು ಧರ್ಮಜನು ಕೇಳಿದನು.

ಅರ್ಥ:
ತಾಗು: ಸಹವಾಸ, ಮುಟ್ತು; ಥಟ್ಟು: ಪಕ್ಕ, ಗುಂಪು; ರಕ್ಷೆ: ಕಾಪು, ರಕ್ಷಣೆ; ತೊಡಚು: ಕಟ್ಟು, ಬಂಧಿಸು; ಶರ: ಬಾಣ; ಬಳಿ: ಹತ್ತಿರ; ಒಸಗೆ: ಶುಭ, ಮಂಗಳಕಾರ್ಯ; ಪಂಚಕ: ಐದು; ಆಗುಹೋಗು: ವ್ಯವಹಾರ; ಹೊತ್ತು: ಧರಿಸು; ನಡಸು: ಮುನ್ನಡೆಸು, ಚಲಿಸು; ನೃಪತಿ: ರಾಜ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಆಗಲೀ +ವೈಷ್ಣವಕೆ +ನಮ್ಮಯ
ತಾಗು +ಥಟ್ಟಿನ +ರಕ್ಷೆ +ತೊಡಚಿದುದ್
ಆಗಲಿರ್ದುದು +ಪಾಶುಪತ+ಶರವ್+ಅದರ +ಬಳಿವಿಡಿದು
ಈಗಲ್+ಒಸಗೆಯೆ +ತಮ್ಮ +ಪಂಚಕದ್
ಆಗು ಹೋಗನು +ಹೊತ್ತು +ನಡಸಿದೊಡ್
ಆಗ +ನಮಗಾಯ್ತ್+ಒಸಗೆ+ಎಂದನು +ನೃಪತಿ +ವಿನಯದಲಿ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸಿದ ಪರಿ – ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದುದಾಗಲಿರ್ದುದು ಪಾಶುಪತಶರವದರ ಬಳಿವಿಡಿದು

ಪದ್ಯ ೩೦: ಪಾಶುಪತದ ಮಹಿಮೆ ಎಂತಹುದು?

ಪಾಶುಪತಶರ ಭುವನದೂರ್ಧ್ವ
ಶ್ವಾಸವತಿ ಕೋವಿದವಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿಂದಲ್ಲಿಂದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ (ಅರಣ್ಯ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವು ಲೋಕವನ್ನೇ ನಾಶ ಮಾಡಬಲ್ಲ ಶಕ್ತಿಯುಳ್ಳದ್ದೆಮ್ದು ನೀವು ಶಾಸ್ತ್ರಗಳಲ್ಲಿ ಕೇಳಿರುವಿರಿ, ಅದು ನನಗೆ ವಶವಾಯಿತು. ಅಲ್ಲಿಂದ ಅಮರಾವತಿಗೆ ಹೋದಾಗ ದೇವೇಂದ್ರನು ನನ್ನನ್ನು ಪ್ರೀತಿಯಿಮ್ದ ಮನ್ನಿಸಿದನು ಎಂದು ಅರ್ಜುನನು ಹೇಳಿದನು.

ಅರ್ಥ:
ಶರ: ಬಾಣ; ಭುವನ: ಭೂಮಿ; ಊರ್ಧ್ವ: ಮೇಲ್ಭಾಗ; ಊರ್ಧ್ವಶ್ವಾಸ: ಮೇಲುಸಿರು; ಅತಿ: ಬಹಳ; ಕೋವಿದ: ತಿಳಿದವ; ಚಿತ್ತೈಸು: ಗಮನವಿಟ್ಟು ಕೇಳು; ಬಲ್ಲಿರಿ: ತಿಳಿದಿರಿ; ಆಮ್ನಾಯ: ವೇದ, ವಂಶ; ವೀಧಿ: ಮಾರ್ಗ; ಸೇರು: ಕೂಡು; ಮಹೇಶ: ಶಿವ; ಬಳಿಕ: ನಂತರ; ಸುರೇಶ: ಇಂದ್ರ; ಮನ್ನಿಸು: ಗೌರವಿಸು; ಅಮರಾವತಿ: ಸ್ವರ್ಗ ಲೋಕ; ಒಲವು: ಪ್ರೀತಿ;

ಪದವಿಂಗಡಣೆ:
ಪಾಶುಪತ+ಶರ+ ಭುವನದ್+ಊರ್ಧ್ವ
ಶ್ವಾಸವತಿ +ಕೋವಿದವಲೇ +ಚಿ
ತ್ತೈಸಿ +ಬಲ್ಲಿರಿ +ನಿಮ್ಮಡಿಗಳ್+ಆಮ್ನಾಯ +ವೀಧಿಯಲಿ
ಆ +ಶರವಲೇ +ಸೇರಿತೆನಗೆ+ ಮ
ಹೇಶನಿಂದ್+ಅಲ್ಲಿಂದ +ಬಳಿಕ +ಸು
ರೇಶನ್+ಅತಿ +ಮನ್ನಿಸಿದನ್+ಅಮರಾವತಿಯೊಳ್+ಒಲವಿನಲಿ

ಅಚ್ಚರಿ:
(೧) ಪಾಶುಪತದ ಹಿರಿಮೆ – ಪಾಶುಪತಶರ ಭುವನದೂರ್ಧ್ವಶ್ವಾಸವತಿ ಕೋವಿದವಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ

ಪದ್ಯ ೪೭: ಅರ್ಜುನನು ಏನೆಂದು ಚಿಂತಿಸಿದನು?

ತಪವನಾಚರಿಸಿದೊಡೆ ವರ ಪಾ
ಶುಪತ ಶರವೆನಗಾಯ್ತು ಧರ್ಮವೆ
ತಪವಲಾಯೆಂದರಿದು ನಡೆದರೆ ಷಂಡತನವಾಯ್ತು
ತಪವೆರಡು ಸರಿಫಲದೊಳಾದುದು
ವಿಪರಿಯಾಸದಗತಿ ಗಹನವೇ
ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ (ಅರಣ್ಯ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ನಾನು ತಪಸ್ಸನ್ನು ಮಾಡಿ ಪಾಶುಪತವನ್ನು ಶಂಕರನಿಂದ ಪಡೆದೆ, ಧರ್ಮ ರಕ್ಷಣೆಯೇ ತಪಸ್ಸು ಎಂದು ನಡೆದರೆ, ನಪುಂಸಕತನ ಬಂದಿತು. ಒಂದಕ್ಕೆ ಸರಿಯಾದ ಫಲ, ಇನ್ನೊಂದಕ್ಕೆ ವಿರೋಧ ಫಲ ದೊರೆಯಿತು, ಕರ್ಮ ಮಾರ್ಗವೆನ್ನುವುದು ಅತಿ ರಹಸ್ಯವಾದುದು ಎಂದು ಅರ್ಜುನನು ತಲೆದೂಗಿದನು.

ಅರ್ಥ:
ತಪ: ತಪಸ್ಸು; ಆಚರಿಸು: ನೆರವೇರಿಸು, ಮಾಡು; ವರ: ಶ್ರೇಷ್ಠ; ಶರ: ಬಾಣ; ಧರ್ಮ: ಧಾರಣೆ ಮಾಡಿದುದು; ಅರಿ: ತಿಳಿ; ನಡೆ: ಚಲಿಸು; ಷಂಡ: ನಪುಂಸಕ; ಫಲ: ಪರಿಣಾಮ, ಫಲಿತಾಂಶ; ವಿಪರಿಯಾಸ: ಅದಲುಬದಲು, ವಿರೋಧ; ಗತಿ: ವೇಗ; ಗಹನ: ಸುಲಭವಲ್ಲದುದು; ವಿಪುಳ: ಹೆಚ್ಚು, ಜಾಸ್ತಿ; ಕರ್ಮ: ಕಾರ್ಯದ ಫಲ; ಸ್ಥಿತಿ: ಅವಸ್ಥೆ; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ತಪವನ್+ಆಚರಿಸಿದೊಡೆ +ವರ +ಪಾ
ಶುಪತ +ಶರವೆನಗಾಯ್ತು +ಧರ್ಮವೆ
ತಪವಲಾಯೆಂದ್+ಅರಿದು+ ನಡೆದರೆ+ ಷಂಡತನವಾಯ್ತು
ತಪವೆರಡು +ಸರಿಫಲದೊಳ್+ಆದುದು
ವಿಪರಿಯಾಸದಗತಿ+ ಗಹನವೇ
ವಿಪುಳ+ ಕರ್ಮಸ್ಥಿತಿ+ಎನುತ +ತೂಗಿದನು +ನಿಜಶಿರವ

ಅಚ್ಚರಿ:
(೧) ಕರ್ಮದ ಫಲದ ಬಗ್ಗೆ ಅರ್ಜುನನು ಹೇಳುವ ಪರಿ – ಗಹನವೇ ವಿಪುಳ ಕರ್ಮಸ್ಥಿತಿ

ಪದ್ಯ ೨೦: ಯಾವ ಬಾಣದಿಂದ ಅರ್ಜುನನು ಕರ್ಣನನ್ನು ಕೊಂದನು?

ಹಿಂದೆ ಪಾಶುಪತಕ್ಕೆ ಬಳುವಳಿ
ಬಂದುದಂಜನ ಬಾಣವದರೆಣೆ
ಯಿಂದ ತೆಗೆದನು ಗಿರಿಜೆಯಂಘ್ರಿಯ ನೆನೆದು ಮಂತ್ರಿಸುತ
ಮಂದರಾಚಲ ನಡುಗೆ ಕಿಡಿಗಳ
ಸಂದಣಿಯ ಸುರಿವಂಬನಾ ರವಿ
ನಂದನನ ಕೊರಳೆಡೆಯೊಳೆಚ್ಚನು ವಾಸವನ ಸೂನು (ಕರ್ಣ ಪರ್ವ, ೨೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಹಿಂದೆ ಶಂಕರನು ಅರ್ಜುನನಿಗೆ ನೀಡಿದ ಪಾಶುಪತಾಸ್ತ್ರವಕ್ಕೆ ಬಳುವಳಿಯಾಗಿ ಪಾರ್ವತಿಯು ಅಂಜಲಿಕಾಸ್ತ್ರವನ್ನು ಕರುಣಿಸಿದ್ದಳು. ಅರ್ಜುನನು ಈಗ ಅಂಜಲಿಕಾಸ್ತ್ರವನ್ನು ಹೊರತೆಗೆದು ಪಾರ್ವತಿಯ ಪಾದಪದ್ಮಗಳಿಗೆ ನಮಸ್ಕರಿಸಿ ಅಭಿಮಂತ್ರಿಸಿ ಕರ್ಣನ ಕೊರಳಿನೆಡೆಗೆ ಬಿಟ್ಟನು. ಮಂದಾರ ಬೆಟ್ಟಕ್ಕಿಂದ ಹಿರಿದಾದ ಕಿಡಿಗಳ ಮೊತ್ತವನ್ನುಗುಳುತ್ತಾ ಆ ಬಾಣವು ಕರ್ಣನ ಕೊರಳನ್ನು ಛೇದಿಸಿತು.

ಅರ್ಥ:
ಹಿಂದೆ: ಮುಂಚೆ; ಬಳುವಳಿ:ಉಡುಗೊರೆ; ಬಂದುದ: ಪಡೆದ; ಬಾಣ: ಶರ; ಎಣೆ: ಜೋಡಿ; ತೆಗೆ: ಹೊರತರು; ಗಿರಿಜೆ: ಪಾರ್ವತಿ; ಅಂಘ್ರಿ: ಚರಣ; ನೆನೆ: ಸ್ಮರಿಸು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಚಲ: ಬೆಟ್ಟ; ನಡುಗು: ಅಲ್ಲಾಡು; ಕಿಡಿ: ಬೆಂಕಿಯ ಚೂರು; ಸಂದಣಿ: ಗುಂಪು; ಸುರಿ: ವರ್ಷಿಸು; ಅಂಬು: ಬಾಣ; ರವಿ: ಸೂರ್ಯ; ನಂದನ: ಮಗ; ಕೊರಳು: ಕುತ್ತಿಗೆ, ಗಂಟಲು; ಎಚ್ಚು: ಬಾಣ ಬಿಡು; ವಾಸವ: ಇಂದ್ರ; ಸೂನು: ಮಗ;

ಪದವಿಂಗಡಣೆ:
ಹಿಂದೆ +ಪಾಶುಪತಕ್ಕೆ+ ಬಳುವಳಿ
ಬಂದುದ್+ಅಂಜನ ಬಾಣವದರೆಣೆ
ಯಿಂದ +ತೆಗೆದನು +ಗಿರಿಜೆ+ಅಂಘ್ರಿಯ +ನೆನೆದು +ಮಂತ್ರಿಸುತ
ಮಂದರ+ಅಚಲ +ನಡುಗೆ +ಕಿಡಿಗಳ
ಸಂದಣಿಯ +ಸುರಿವ್+ಅಂಬನ್+ಆ+ರವಿ
ನಂದನನ+ ಕೊರಳ್+ಎಡೆಯೊಳ್+ಎಚ್ಚನು+ ವಾಸವನ+ ಸೂನು

ಅಚ್ಚರಿ:
(೧) ಅರ್ಜುನನನ್ನು ವಾಸವನ ಸೂನು, ಕರ್ಣನನ್ನು ರವಿ ನಂದನ ಎಂದು ಕರೆದಿರುವುದು
(೨) ಅಂಜನ ಬಾಣದ ಉಲ್ಲೇಖ
(೩) ಅಂಜನ ಬಾಣದ ಬಲ – ಮಂದರಾಚಲ ನಡುಗೆ ಕಿಡಿಗಳ ಸಂದಣಿಯ ಸುರಿವಂಬು

ಪದ್ಯ ೪೦: ಶಿವನ ಕಣ್ಣಿನ ಅಗ್ನಿಯು ಹೇಗೆ ಪುರವನ್ನು ಆವರಿಸಿತು?

ಕೂಡಿದವು ಪುರ ಮೂರು ನಿಮಿಷದೊ
ಳೀಡಿರಿದುದುರಿ ನಯನ ವಹ್ನಿಯ
ಕೂಡಿ ಹುರಿಗೊಂಡೌಕಿ ಹರಿದುದು ಪಾಶುಪತ ಬಾಣ
ಝಾಡಿ ಹೊರಳಿಯ ಹೊಗೆಯ ಜೋಡಿಯ
ನೀಡು ನಾಲಗೆ ಪುರದ ಸುತ್ತಲು
ಕೂಡೆ ವೇಢಯವಾಯ್ತು ಹರಹಿನ ಕಿಡಿಯ ಗಡಣದಲಿ (ಕರ್ಣ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಸಹಸ್ರ ದೇವವರುಷಗಳ ನಂತರ ಮೂರು ಊರುಗಳು ಕೂಡಿದವು. ಆಗ ಶಿವನು ಹಣೆಗಣ್ಣನ್ನು ತೆರೆಯಲು ಉರಿಯು ಹೊಗೆಯ ಹೊರಳಿಯೊಂದಿಗೆ ತ್ರಿಪುರಗಳತ್ತ ಹರಿದಿತು. ಅದರ ಜೊತೆ ಜೊತೆಗೇ ಶಿವನು ಪಾಶುಪತಾಸ್ತ್ರವನ್ನು ಪ್ರಯೋಗಿಸಿದನು. ಉರಿಯು ತನ್ನ ನಾಲಗೆಗಳನ್ನು ಚಾಚಿ ತ್ರಿಪುರಗಳ ಸುತ್ತಲು ಆವರಿಸಿತು. ಕಿಡಿಗಳು ಸುತ್ತೆತ್ತಲೂ ಹಬ್ಬಿದವು.

ಅರ್ಥ:
ಕೂಡು: ಸೇರು; ಪುರ: ಊರು; ಮೂರು: ತ್ರಿ; ನಿಮಿಷ: ಕ್ಷಣ; ಈಡಿ: ಹೊಡೆ; ಉರಿ: ಜ್ವಾಲೆ; ನಯನ: ಕಣ್ಣು; ವಹ್ನಿ: ಬೆಂಕಿ; ಕೂಡಿ: ಜೊತೆ; ಹುರಿ: ಸೀದು ಹೋಗು, ನಾಶವಾಗು; ಔಕು: ಒತ್ತು, ಹಿಚುಕು; ಹರಿ: ಕೀಳು, ಕಿತ್ತುಹಾಕು; ಬಾಣ: ಅಂಬು, ಶರ; ಝಾಡಿ: ಕಾಂತಿ; ಹೊರಳಿ: ಗುಂಪು, ಸಮೂಹ; ಹೊಗೆ: ಧೂಮ; ಜೋಡಿ: ಜೊತೆ; ನೀಡು: ಕೊಡು; ನಾಲಗೆ: ಜಿಹ್ವೆ; ಪುರ: ಊರು; ಸುತ್ತಲು: ಎಲ್ಲಾಕಡೆ; ಕೂಡು: ಜೊತೆಯಾಗು; ವೇಢಯ: ಹಯಮಂಡಲ; ಹರ: ಶಿವ; ಕಿಡಿ: ಬೆಂಕಿ, ಜ್ವಾಲೆ; ಗಡಣ:ಕೂಡಿಸುವಿಕೆ, ಸೇರಿಸುವಿಕೆ;

ಪದವಿಂಗಡಣೆ:
ಕೂಡಿದವು +ಪುರ +ಮೂರು +ನಿಮಿಷದೊಳ್
ಈಡಿರಿದುದ್+ಉರಿ +ನಯನ +ವಹ್ನಿಯ
ಕೂಡಿ +ಹುರಿಗೊಂಡ್+ಔಕಿ +ಹರಿದುದು +ಪಾಶುಪತ +ಬಾಣ
ಝಾಡಿ +ಹೊರಳಿಯ +ಹೊಗೆಯ +ಜೋಡಿಯ
ನೀಡು+ ನಾಲಗೆ +ಪುರದ+ ಸುತ್ತಲು
ಕೂಡೆ +ವೇಢಯವಾಯ್ತು +ಹರಹಿನ +ಕಿಡಿಯ +ಗಡಣದಲಿ

ಅಚ್ಚರಿ:
(೧) ಕೂಡಿ, ಈಡಿ, ಝಾಡಿ – ಪ್ರಾಸ ಪದಗಳು
(೨) ಉರಿ, ಕಿಡಿ, ವಹ್ನಿ – ಬೆಂಕಿಗೆ ಸಂಬಂಧಿಸಿದ ಪದ
(೩) ಹುರಿ, ಹರಿ, ಹರಹಿನ, ಹೊರಳಿ, ಹೊಗೆ – ಹ ಕಾರದ ಪದಗಳ ಬಳಕೆ

ಪದ್ಯ ೩೮: ಶಿವನು ಯಾವ ಬಾಣವನ್ನು ಹೂಡಿದನು?

ಒದಗಿತೀ ಹೇಳಿದ ಸಮಸ್ತ
ತ್ರಿದಶಸಚರಾಚರವು ತಮ್ಮೆಂ
ಗದಲಿ ರಚಿಸಿದ ವಿಶ್ವಕರ್ಮನ ಕೃತ ನಿಯೋಗದಲಿ
ಅದು ಬಳಿಕ ನಿರ್ಜರ ಸಮೂಹಾ
ಭ್ಯುದಯವೈಸಲೆ ಧನುವಕೊಂಡನು
ಮದನರಿಪು ತಿರುಹಿದನು ಬೆರಳಲಿ ಪಾಶುಪತ ಶರವ (ಕರ್ಣ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸಮಸ್ತ ದೇವತೆಗಳೂ ವಿಶ್ವಕರ್ಮನ ಮುಖಾಂತರ ಮಾಡಿಸಿದ ಎಲ್ಲಾ ಸಾಧನಗಳೂ ಶಿವನಿಗೆ ಒಪ್ಪಿಗೆಯಾದವು. ದೇವತೆಗಳ ಅಭ್ಯುದಯ ಕಾಲವು ಒದಗಿ ಬಂದುದರಿಂದ ಶಿವನು ಧನುಸ್ಸನ್ನು ಹಿಡಿದು ಅದರಲ್ಲಿ ಪಾಶುಪತಾಸ್ತ್ರವನ್ನು ಹೂಡಿದನು.

ಅರ್ಥ:
ಒದಗು: ಲಭ್ಯ, ದೊರೆತುದು; ಹೇಳು: ತಿಳಿಸು; ಸಮಸ್ತ: ಎಲ್ಲಾ; ತ್ರಿದಶ: ಮೂವತ್ತು; ದೇವತೆ; ಸಚರಾಚರ: ಎಲ್ಲಾ ಚಲಿಸದ, ಚಲಿಸುವ ವಸ್ತುಗಳು; ರಚಿಸು: ನಿರ್ಮಿಸು; ಕೃತ: ನಿರ್ಮಿಸಿದ; ನಿಯೋಗ: ಕೆಲಸ, ಉದ್ಯೋಗ; ಬಳಿಕ: ನಂತರ; ನಿರ್ಜರ: ದೇವತೆ; ಸಮೂಹ: ಗುಂಪು; ಅಭ್ಯುದಯ: ಅಭಿವೃದ್ಧಿ; ಐಸಲೆ: ಅಲ್ಲವೇ; ಧನು: ಧನುಸ್ಸು; ಕೊಂಡು: ತೆಗೆದು; ಮದನರಿಪು: ಕಾಮನ ವೈರಿ (ಶಿವ); ತಿರುಹು: ತಿರುಗಿಸು; ಬೆರಳು: ಅಂಗುಲಿ; ಶರ: ಬಾಣ;

ಪದವಿಂಗಡಣೆ:
ಒದಗಿತೀ+ ಹೇಳಿದ +ಸಮಸ್ತ
ತ್ರಿದಶ+ಸಚರಾಚರವು +ತಮ್ಮೆಂ
ಗದಲಿ +ರಚಿಸಿದ +ವಿಶ್ವಕರ್ಮನ +ಕೃತ +ನಿಯೋಗದಲಿ
ಅದು +ಬಳಿಕ +ನಿರ್ಜರ +ಸಮೂಹ
ಅಭ್ಯುದಯವ್+ಐಸಲೆ +ಧನುವಕೊಂಡನು
ಮದನರಿಪು+ ತಿರುಹಿದನು +ಬೆರಳಲಿ +ಪಾಶುಪತ+ ಶರವ

ಅಚ್ಚರಿ:
(೧) ಶಿವನು ಪಾಶುಪತವ ಹೂಡಿದ ಪರಿ – ಧನುವಕೊಂಡನು ಮದನರಿಪುಸ್ ತಿರುಹಿದನು ಬೆರಳಲಿ ಪಾಶುಪತ ಶರವ

ಪದ್ಯ ೧: ದೇವತೆಗಳಿಗೆ ಶಿವನು ನೀಡಿದ ಅಭಯವೇನು?

ರಚಿಸಿ ರಥವನು ಭೀತಿ ಬೇಡಿ
ನ್ನುಚಿತವೇನದ ಮಾಡಿ ದೈತ್ಯ
ಪ್ರಚಯವನು ಪರಿಹರಿಸಿ ಕೊಡುವುದು ಪಾಶುಪತ ಬಾಣ
ಕುಚಿತರಿನ್ನೇಗುವರು ಖಳರಿ
ನ್ನಚಳಿತವಲೇ ನಿಮ್ಮ ಪದವೆನೆ
ನಿಚಿತಹರುಷರು ವಿಶ್ವಕರ್ಮಂಗರುಹಿದರು ಹದನ (ಕರ್ಣ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ತಾರಕಾಸುರನ ಮಕ್ಕಳನ್ನು ಸಂಹರಿಸಲು ಶಿವನು ರಥವನ್ನು ರಚಿಸಿ ಉಚಿತವಾದುದೆಲ್ಲವನ್ನೂ ಮಾಡಿರಿ, ಭಯವನ್ನು ಬಿಡಿ, ಪಾಶುಪತಾಸ್ತ್ರವು ರಾಕ್ಷಸರನ್ನು ಪರಿಹರಿಸುತ್ತದೆ, ಅಲ್ಪರಾದ ರಾಕ್ಷಸರು ಏನು ಮಾಡಿಯಾರು, ನಿಮ್ಮ ಪದವಿಗಳಿನ್ನ ಅಚಲವಾಗಿರುತ್ತದೆೆ ಎಂದು ಅಭಯವನ್ನು ನೀಡಲು, ದೇವತೆಗಳೆಲ್ಲರು ಸಂತೋಷಪಟ್ಟು ರಥವನ್ನು ತಯಾರಿಸಲು ವಿಶ್ವಕರ್ಮರನ್ನು ಕರೆದು ನಿರ್ಮಾಣ ಮಾಡಲು ಸೂಚಿಸಿದರು.

ಅರ್ಥ:
ರಚಿಸು: ನಿರ್ಮಿಸು; ರಥ: ಬಂಡಿ; ಭೀತಿ: ಭಯ; ಬೇಡಿ:ಬೇಕಾಗಿಲ್ಲ; ಉಚಿತ: ಸರಿಯಾದ; ಮಾಡಿ: ರಚಿಸಿ; ದೈತ್ಯ: ರಾಕ್ಷಸ; ಪ್ರಚಯ: ಒಟ್ಟು ಗೂಡಿಸುವುದು; ಪರಿಹರ: ನಿವಾರಣೆ, ಪರಿಹಾರ; ಕೊಡು: ನೀಡು; ಪಾಶುಪತ: ಈಶ್ವರದತ್ತವಾದ ಬಾಣ; ಬಾಣ: ಅಂಬು, ಶರ; ಕುಚಿತ: ಅಲ್ಪ; ಏಗು: ಸಾಗಿಸು, ನಿಭಾಯಿಸು; ಖಳ: ದುಷ್ಟ; ಅಚಲ: ಚಲಿಸದ; ಪಪದವೆ: ಪದವಿ, ಪಟ್ಟ; ನಿಚಿತ: ವ್ಯಾಪ್ತವಾದುದು, ಗುಂಪು; ಹರುಷ: ಸಂತೋಷ; ಅರುಹು:ತಿಳಿಸು; ಹದ: ಸರಿಯಾದ ಸ್ಥಿತಿ;

ಪದವಿಂಗಡಣೆ:
ರಚಿಸಿ +ರಥವನು +ಭೀತಿ +ಬೇಡ್
ಇನ್ನುಚಿತವೇನ್+ಅದ +ಮಾಡಿ +ದೈತ್ಯ
ಪ್ರಚಯವನು +ಪರಿಹರಿಸಿ+ ಕೊಡುವುದು +ಪಾಶುಪತ+ ಬಾಣ
ಕುಚಿತರಿನ್ನೇಗುವರು +ಖಳರಿನ್
ಅಚಳಿತವಲೇ +ನಿಮ್ಮ +ಪದವೆನೆ
ನಿಚಿತ+ಹರುಷರು +ವಿಶ್ವಕರ್ಮಂಗ್+ಅರುಹಿದರು +ಹದನ

ಅಚ್ಚರಿ:
(೧) ಪಾಶುಪತದ ಮಹಿಮೆ – ದೈತ್ಯ ಪ್ರಚಯವನು ಪರಿಹರಿಸಿ ಕೊಡುವುದು ಪಾಶುಪತ ಬಾಣ
(೨) ಅಭಯವನ್ನು ನೀಡುವ ಬಗೆ – ಅಚಳಿತವಲೇ ನಿಮ್ಮ ಪದವ್

ಪದ್ಯ ೨೪: ಶಿವನು ದೇವತೆಗಳಿಗೆ ಏನು ಹೇಳಿದ?

ಪಶುಪತಿತ್ವವ ನಮಗೆ ಕೊಡಿ ನೀವ್
ಪಶುಗಳಾಗಿರಿ ಪಾಶುಪತ ವರ
ನಿಶಿತಶರದಲಿ ದೈತ್ಯ ದುರ್ಗವನುರುಹಿ ತೋರುವೆವು
ದೆಸೆದೆಸೆಗೆ ಹರೆದಖಿಳದೇವ
ಪ್ರಸರವನು ನೀವ್ ನೆರಹಿ ಮೇಲಿ
ನ್ನಸಮಸೆಗೆ ಹೆದರದಿರಿ ಎಂದನು ನಗುತ ಮದನಾರಿ (ಕರ್ಣ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಅಲ್ಲಿ ನೆರೆದಿದ್ದ ದೇವತೆಗಳೆಲ್ಲರನ್ನು ಶಿವನು ಸಂಭೋದಿಸುತ್ತಾ, ನೀವು ನನಗೆ ಪಶುಪತಿತ್ವವನ್ನು ನೀಡಿರಿ, ನೀವೆಲ್ಲರು ಪಶುಗಳಾಗಿ, ಪಾಶುಪತಾಸ್ತ್ರದಿಂದ ರಾಕ್ಷಸರ ಭದ್ರಕೋಟೆಯನ್ನು ಸುಟ್ಟು ಹಾಕುತ್ತೇವೆ. ಎಲ್ಲಾ ದಿಕ್ಕುಗಳಲ್ಲಿ ಹರಡಿದ್ದ ದೇವತೆಗಳೆಲ್ಲರನ್ನು ಒಟ್ಟುಗೂಡಿಸಿ ನೀವು ಚಿಕ್ಕಪುಟ್ಟ ಗಾಯಗಳಿಗೆ ಹೆದರದಿರಿ ಎಂದು ನಗುತ್ತಾ ಅಭಯವನ್ನು ನೀಡಿದನು.

ಅರ್ಥ:
ಪಶುಪತಿ: ಪಶುಗಳ ಒಡೆಯ; ಪಶು: ಮೃಗ; ಪಾಶುಪತ: ಅಸ್ತ್ರದ ಹೆಸರು; ವರ: ಶ್ರೇಷ್ಠ; ನಿಶಿತ: ಹರಿತವಾದ; ಶರ: ಬಾಣ; ದೈತ್ಯ: ರಾಕ್ಷಸ; ದುರ್ಗ: ಕೋಟೆ; ಅರುಹು: ತಿಳಿಸು; ತೋರು: ಗೋಚರಿಸು; ದೆಸೆ: ದಿಕ್ಕು; ಹರೆದು: ಪಸರಿಸು; ಅಖಿಳ: ಸರ್ವ; ದೇವ: ಸುರ; ಪ್ರಸರ: ಹರಡು; ನೆರಹು: ಒಟ್ಟುಗೂಡು, ನೆರವು; ಅಸಮಸೆ: ಸಣ್ಣ ಗಾಯ; ಹೆದರದಿರಿ: ಭಯಪಡಬೇಡಿ; ನಗುತ: ಸಂತಸ; ಮದನಾರಿ: ಮದನ (ಕಾಮ)ನನ್ನು ಕೊಂದವ (ಶಂಕರ);

ಪದವಿಂಗಡಣೆ:
ಪಶುಪತಿತ್ವವ+ ನಮಗೆ +ಕೊಡಿ +ನೀವ್
ಪಶುಗಳಾಗಿರಿ+ ಪಾಶುಪತ+ ವರ
ನಿಶಿತ+ಶರದಲಿ +ದೈತ್ಯ +ದುರ್ಗವನ್+ಅರುಹಿ +ತೋರುವೆವು
ದೆಸೆದೆಸೆಗೆ +ಹರೆದ್+ಅಖಿಳ+ದೇವ
ಪ್ರಸರವನು +ನೀವ್ +ನೆರಹಿ +ಮೇಲಿನ್
ಅಸಮಸೆಗೆ+ ಹೆದರದಿರಿ +ಎಂದನು +ನಗುತ +ಮದನಾರಿ

ಅಚ್ಚರಿ:
(೧) ಪಶುಪತಿತ್ವ, ಪಶು, ಪಾಶುಪತ – ಪದಗಳ ಬಳಕೆ
(೨) ಪಶುಪತಿ, ಮದನಾರಿ – ಪದ್ಯದ ಮೊದಲ ಮತ್ತು ಕೊನೆ ಪದ