ಪದ್ಯ ೩೬: ಭಾನುಮತಿಗೆ ಯಾವ ಸಂದೇಶವನ್ನು ನೀಡಲು ದುರ್ಯೋಧನನು ಹೇಳಿದನು?

ತೆಗಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ (ಗದಾ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಮ್ಮ ಪಾಳೆಯವನ್ನು ತೆರವು ಮಾಡಿಸಿ ಹಸ್ತಿನಾಪುರಕ್ಕೆ ಕಳುಹಿಸು. ದುಶ್ಯಾಸನ ಕರ್ಣರ ರಾಣೀವಾಸವನ್ನು ಊರಿಗೆ ಕಳಿಸು. ಪಾಂಡವರ ವಿಜಯ ವಾರ್ತೆಯನ್ನು ಹಬಿಸಬೇಡ. ಭಾನುಮತಿಯು ನಂಬುವಂತೆ ಮಾತಾಡಿ ಸಮಾಧಾನ ಪಡಿಸು ಎಂದು ದುರ್ಯೋಧನನು ಹೇಳಿದನು.

ಅರ್ಥ:
ತೆಗಸು: ಹೊರತರು; ಪಾಳೆಯ: ಬೀಡು, ಶಿಬಿರ; ಗಜ: ಆನೆ; ನಗರ: ಊರು; ಐದು: ಹೋಗಿಸೇರು; ರಾಣಿ: ಅರಸಿ; ದಂಡಿಗೆ: ಮೇನಾ, ಪಲ್ಲಕ್ಕಿ; ಕಳುಹಿಸು: ತೆರಳು; ಸೂತಸುತ: ಕರ್ಣ; ಸೂತ: ಸಾರಥಿ; ಸುತ: ಮಗ; ಆದಿ: ಮೊದಲಾದ; ಹಗೆ: ವೈರಿ, ಶತ್ರು; ವಿಜಯ: ಗೆಲುವು; ಹರಹು: ವಿಸ್ತಾರ, ವೈಶಾಲ್ಯ; ನಂಬು: ವಿಶ್ವಾಸವಿಡು; ನುಡಿ: ಮಾತು; ಬಗೆ: ಎಣಿಸು; ಸಂತೈಸು: ಸಾಂತ್ವನಗೊಳಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ತೆಗಸು +ಪಾಳೆಯವೆಲ್ಲವನು +ಗಜ
ನಗರಿಗ್+ಐದಿಸು +ರಾಣಿಯರ +ದಂ
ಡಿಗೆಯ +ಕಳುಹಿಸು +ಸೂತಸುತ +ದುಶ್ಯಾಸನಾದಿಗಳ
ಹಗೆಯ +ವಿಜಯವ +ಹರಹದಿರು +ನಂ
ಬುಗೆಯ +ನುಡಿಯಲಿ +ಭಾನುಮತಿಯರ
ಬಗೆಯ +ಸಂತೈಸೆಂದು+ ಬೋಳೈಸಿದನು +ಸಂಜಯನ

ಅಚ್ಚರಿ:
(೧) ಹಗೆ, ನಂಬುಗೆ, ಬಗೆ, ದಂಡಿಗೆ – ಪ್ರಾಸ ಪದಗಳು
(೨) ಸಂತೈಸು, ಬೋಳೈಸು – ಸಮಾನಾರ್ಥಕ ಪದ

ಪದ್ಯ ೪೪: ಕೌರವ ಪಾಳೆಯ ಸ್ಥಿತಿ ಏನಾಯಿತು?

ಪಾಳೆಯವು ಗಜಬಜಿಸೆ ತೊಳಲಿಕೆ
ಯಾಳು ನೆರೆದುದು ಕೋರಡಿಯ ಮುಳು
ವೇಲಿಗಾಂತರು ದೇಹ ಹರಿಸಿದರಖಿಳ ದೆಸೆದೆಸೆಗೆ
ಮೇಲುಗುದುರೆಗಳೊದಗಿದವು ಭೂ
ಪಾಲಕರು ತಲೆಗೆದರಿ ಹುಯ್ಯಲ
ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಭಾರಿ ಗಲಭೆಯಾಯಿತು, ನೊಮ್ದ ಯೋಧರು ಸೇರಿ, ಮುಳ್ಳು ಬೇಲಿಯ ಬಳಿ ರಕ್ಷಣೆಗೆ ನಿಂತರು. ವಿಷಯವನ್ನು ತಿಳಿಯಲು ಬೇಹುಗಾರರನ್ನು ದಿಕ್ಕು ದಿಕ್ಕಿಗೆ ಅಟ್ಟಿದರು. ಕುದುರೆಗಳು ಮುಂದೆ ಬಂದು ನಿಂತವು. ತಲೆಕೆದರಿದ ರಾಜರು ಈ ಸದ್ದನ್ನು ಕೇಳಿ ಬೀಡಿನಿಂದ ಹೊರಬಂದರು. ಕೌರವ ಪಾಳೆಯು ಅಸ್ತವ್ಯಸ್ತವಾಯಿತು.

ಅರ್ಥ:
ಪಾಳೆ: ಬಿಡಾರ; ಗಜಬಜ: ಗೊಂದಲ; ತೊಳಲು: ಬವಣೆ, ಸಂಕಟ; ಆಳು: ಯೋಧ; ನೆರೆ: ಗುಂಪು; ಕೋರಡಿ: ಸಾರವಿಲ್ಲದಿರುವಿಕೆ; ಮುಳುವೇಲಿ: ಮುಳ್ಳಿನ ಬೇಲಿ; ದೇಹ: ತನು; ಹರಿಸು: ಚೆಲ್ಲು; ಅಖಿಳ: ಎಲ್ಲಾ; ದೆಸೆ: ದಿಕ್ಕು; ಮೇಲು: ಮುಂದೆ; ಕುದುರೆ: ಅಶ್ವ; ಒದಗು: ಲಭ್ಯ, ದೊರೆತುದು; ಭೂಪಾಲಕ: ರಾಜ; ತಲೆ: ಶಿರ; ಕೆದರು: ಹರಡು; ಹುಯ್ಯಲು: ಪೆಟ್ಟು, ಹೊಡೆತ; ಆಲಿಸು: ಕೇಳು; ಹೊರವಂಟು: ತೆರಳು; ತಳಕೆಳ: ಮೇಲೆ ಕೆಳಗೆ; ನೃಪ: ರಾಜ; ಕಟಕ: ಸೈನ್ಯ, ಗುಂಪು;

ಪದವಿಂಗಡಣೆ:
ಪಾಳೆಯವು +ಗಜಬಜಿಸೆ +ತೊಳಲಿಕೆ
ಆಳು +ನೆರೆದುದು +ಕೋರಡಿಯ +ಮುಳು
ವೇಲಿಗಾಂತರು +ದೇಹ +ಹರಿಸಿದರ್+ಅಖಿಳ+ ದೆಸೆದೆಸೆಗೆ
ಮೇಲು+ಕುದುರೆಗಳ್+ಒದಗಿದವು +ಭೂ
ಪಾಲಕರು +ತಲೆಗೆದರಿ +ಹುಯ್ಯಲನ್
ಆಲಿಸುತ +ಹೊರವಂಟು +ತಳಕೆಳಕಾಯ್ತು+ ನೃಪ+ಕಟಕ

ಅಚ್ಚರಿ:
(೧) ಗಜಬಜಿಸೆ, ದೆಸೆದೆಸೆಗೆ, ತಳಕೆಳ – ಪದಗಳ ಬಳಕೆ

ಪದ್ಯ ೧೪: ದ್ರೌಪದಿಯನ್ನು ಕಾಣಲು ಯಾರು ಹೊರಟರು?

ಮುಸುಳಿತವದಿರ ಮೋರೆ ಕಾರ್ಯದ
ಬೆಸುಗೆ ಹತ್ತದೆ ಸತಿಯ ನುಡಿಯಲಿ
ರಸವ ಕಾಣದೆ ಭೀತಿಯಲಿ ಮರಳಿದರು ಪಾಳೆಯಕೆ
ಉಸುರಲಮ್ಮೆವು ಜೀಯ ಸೋಲಳು
ಶಶಿವದನೆಗುಣಸಾಮದಲಿ ಸಾ
ಧಿಸುವುದರಿದೆನೆ ತಾನೆ ನೋಡುವೆನೆನುತ ಹೊರವಂಟ (ಅರಣ್ಯ ಪರ್ವ, ೨೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ದೂತರ ಮೋರೆಯು ಬಾಡಿತು, ದ್ರೌಪದಿಯ ಮಾತಿನಲ್ಲಿ ತಿರಸ್ಕಾರವನ್ನು ಬಿಟ್ಟು ಬೇರೇನು ತೋರದಿರಲು ತಮ್ಮ ಕೆಲಸ ಆಗುವುದಿಲ್ಲವೆಂದು ಮನದಟ್ಟಾಗಿ ಭಯದಿಂದ ಪಾಳೆಯಕ್ಕಿ ತಿರುಗಿ ಹೋಗಿ, ಜೀಯಾ ದ್ರೌಪದಿ ಸೋಲಲಿಲ್ಲ, ಸಾಮದಿಂದ ಈ ಕೆಲಸವನ್ನು ಸಾಧಿಸಲಾಗುವುದಿಲ್ಲ. ಇದನ್ನು ನಾವು ಹೇಗೆ ಹೇಳೋಣ ಎಂದು ಜಯದ್ರಥನಿಗೆ ಹೇಳಿದರು, ಆಗ ಜಯದ್ರಥನು ತಾನೆ ದ್ರೌಪದಿಯನ್ನು ಕಾಣಲು ಹೊರಟನು.

ಅರ್ಥ:
ಮುಸುಳು: ಬಾಡು; ಮೋರೆ: ಮುಖ; ಕಾರ್ಯ: ಕೆಲಸ; ಬೆಸುಗೆ: ಒಂದಾಗು; ಹತ್ತು: ಸೇರು; ಸತಿ: ಹೆಣ್ಣು; ನುಡಿ: ಮಾತು; ರಾ: ಸಾರ; ಕಾಣು: ತೋರು; ಭೀತಿ: ಭಯ; ಮರಳು: ಹಿಂದಿರುಗು; ಪಾಳೆ: ಬಿಡಾರ; ಉಸುರು: ಹೇಳು; ಜೀಯ: ಒಡೆಯ; ಸೋಲು: ಪರಾಜಯ; ಶಶಿವದನೆ: ಚಂದ್ರನಂತ ಮುಖವುಳ್ಳವಳು; ಗುಣ: ನಡತೆ; ಸಾಮ: ಶಾಂತಗೊಳಿಸುವಿಕೆ; ಸಾಧಿಸು: ಪಡೆ; ಅರಿ: ತಿಳಿ; ಹೊರವಂಟ: ತೆರಳು;

ಪದವಿಂಗಡಣೆ:
ಮುಸುಳಿತ್+ಅವದಿರ+ ಮೋರೆ +ಕಾರ್ಯದ
ಬೆಸುಗೆ +ಹತ್ತದೆ +ಸತಿಯ +ನುಡಿಯಲಿ
ರಸವ+ ಕಾಣದೆ +ಭೀತಿಯಲಿ +ಮರಳಿದರು+ ಪಾಳೆಯಕೆ
ಉಸುರಲಮ್ಮೆವು+ ಜೀಯ +ಸೋಲಳು
ಶಶಿವದನೆ+ಗುಣ+ಸಾಮದಲಿ+ ಸಾ
ಧಿಸುವುದ್+ಅರಿದ್+ಎನೆ+ ತಾನೆ +ನೋಡುವೆನ್+ಎನುತ +ಹೊರವಂಟ

ಅಚ್ಚರಿ:
(೧) ಕೆಲಸವಾಗಲಿಲ್ಲ ಎಂದು ಹೇಳಲು – ಕಾರ್ಯದಬೆಸುಗೆ ಹತ್ತದೆ

ಪದ್ಯ ೧೫: ದುರ್ಯೋಧನ ನಿಟ್ಟುಸಿರು ಬಿಡಲು ಕಾರಣವೇನು?

ಹೊಗಲಿ ಪಾಳೆಯ ಪುರವನೆಂದು
ಬ್ಬೆಗದ ಬೆಳೆ ಸಿರಿವಂತನೆತ್ತಿದ
ದುಗುಡದಲಿ ಕುಳ್ಳೀರ್ದನಾ ಸುರನದಿಯ ತೀರದಲಿ
ಹೊಗೆವ ಮೋರೆಯ ನೆಲಕೆ ನೆಟ್ಟಾ
ಲಿಗಳ ನಿಖಿಳೇಂದ್ರಿಯದ ರೋಚಕ
ಬಿಗಿದ ಬೇಗೆಯ ಬೇಸರಿನ ಬಿಸುಗುದಿಯ ಸುಯ್ಲಿನಲಿ (ಅರಣ್ಯ ಪರ್ವ, ೨೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪಾಳೆಯವು ನಗರವನ್ನು ಪ್ರವೇಶಿಸಲಿ ಎಂದು ಕೌರವನು ಆಜ್ಞೆಮಾಡಿದನು. ಹೇರಳವಾದ ಉದ್ವೇಗದ ಬೆಳೆಯನ್ನು ಬೆಳೆದ ಸಿರಿವಂತನಾದ ಕೌರವನ ಮುಖವು ಕಪ್ಪೇರಿತು, ಕಣ್ಣುಗಳು ನೆಲವನ್ನೇ ನೋಡಿತು, ಸಮಸ್ತ ಇಂದ್ರಿಯಗಳ ಸುಖವನ್ನು ಬೇಸರದ ಬೇಗೆಯು ಬಿಗಿದಿತ್ತು, ನಿಟ್ಟುಸಿರನ್ನು ಬಿಡುತ್ತಾ ಗಂಗಾನದಿಯ ತೀರದಲ್ಲಿ ಕುಳಿತನು.

ಅರ್ಥ:
ಹೊಗು: ಪ್ರವೇಶಿಸು; ಪಾಳೆಯ: ಬೀಡು, ಶಿಬಿರ; ಪುರ: ಊರು; ಉಬ್ಬೆಗ: ದುಃಖ; ಬೆಳೆ: ಪೈರು; ಸಿರಿವಂತ: ಶ್ರೀಮಂತ; ದುಗುಡ: ದುಃಖ; ಕುಳ್ಳಿರ್ದ: ಆಸೀನನಾಗು; ಸುರನದಿ: ಗಂಗೆ; ತೀರ: ದಡ; ಮೋರೆ: ಮುಖ; ನೆಲ: ಭೂಮಿ; ನೆಟ್ಟು: ಒಂದೇ ಕಡೆ ನೋಡುತ್ತಾ; ಆಲಿ: ಕಣ್ಣು; ನಿಖಿಳ: ಎಲ್ಲಾ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ರೋಚಕ: ಹಸಿವು; ಬಿಗಿ: ಗಟ್ಟಿ, ಕಟ್ಟು; ಬೇಗೆ: ಬೆಂಕಿ, ಕಿಚ್ಚು; ಬೇಸರ: ನೋವು, ದುಃಖ; ಬಿಸುಗುದಿ: ಉದ್ವೇಗ, ಕುದಿ; ಸುಯ್ಲು: ನಿಟ್ಟುಸಿರು;

ಪದವಿಂಗಡಣೆ:
ಹೊಗಲಿ +ಪಾಳೆಯ +ಪುರವನೆಂದ್+
ಉಬ್ಬೆಗದ +ಬೆಳೆ +ಸಿರಿವಂತನ್+ಎತ್ತಿದ
ದುಗುಡದಲಿ +ಕುಳ್ಳೀರ್ದನಾ +ಸುರನದಿಯ+ ತೀರದಲಿ
ಹೊಗೆವ+ ಮೋರೆಯ +ನೆಲಕೆ +ನೆಟ್ಟ
ಆಲಿಗಳ +ನಿಖಿಳ+ ಇಂದ್ರಿಯದ +ರೋಚಕ
ಬಿಗಿದ +ಬೇಗೆಯ +ಬೇಸರಿನ +ಬಿಸುಗುದಿಯ +ಸುಯ್ಲಿನಲಿ

ಅಚ್ಚರಿ:
(೧) ದುರ್ಯೋಧನನ ದುಃಖದ ಚಿತ್ರಣ – ಉಬ್ಬೆಗದ ಬೆಳೆ ಸಿರಿವಂತನೆತ್ತಿದದುಗುಡದಲಿ ಕುಳ್ಳೀರ್ದನಾ ಸುರನದಿಯ ತೀರದಲಿ;
(೨) ಬ ಕಾರದ ಸಾಲು ಪದ – ಬಿಗಿದ ಬೇಗೆಯ ಬೇಸರಿನ ಬಿಸುಗುದಿಯ