ಪದ್ಯ ೫೩: ಅರ್ಜುನನು ಸೈನಿಕರನ್ನು ಹೇಗೆ ಮೂದಲಿಸಿದನು?

ತೀರಿತಡವಿಯ ಕಡಿತ ಗಿರಿಗಳ
ಹೋರಟೆಗೆ ಹೊಗಬೇಕು ಸೇನೆಗೆ
ಪಾರುಖಾಣೆಯ ಕೊಟ್ಟೆವಾಗಳೆ ಗುರುಸುತಾದಿಗಳ
ಭಾರಣೆಗೆ ಕೊಡಬೇಕು ಸಮಯವ
ನಾರುಭಟೆಯಲಿ ಮಲೆವುದೈ ಕೈ
ವಾರವೇಕೀ ಕಾಯದಲಿ ಕಕ್ಕುಲಿತೆ ಬೇಡೆಂದ (ಭೀಷ್ಮ ಪರ್ವ, ೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅರ್ಜುನನು ಸೈನ್ಯದ ಅಡವಿಯ ಕಡಿತವನ್ನು ಮುಗಿಸಿದನು. ಇನ್ನೂ ಬೆಟ್ಟಗಳೊಡನೆ ಹೋರಾಟವಾಗಬೇಕಾಗಿದೆ, ಅಶ್ವತ್ಥಾಮಾದಿಗಳಿಗೆ ಬಹುಮಾನವನ್ನು ಆಗಲೇ ಕೊಟ್ಟಿದ್ದಾಗಿದೆ, ಅವರು ಬರಲು ಸಮಯವನ್ನು ಕೊಡಬೇಕು, ರಿಪುವೀರರೇ ಪರಾಕ್ರಮದಿಮ್ದ ಕಾದಲು ಬನ್ನಿ, ಮನುಷ್ಯ ಶರೀರಕ್ಕೆ ಅಷ್ಟು ಹೆಚ್ಚಿನ ಮಾನ್ಯತೆ ಕೊಡಬೇಡಿ, ಮೈಗೆ ಏನಾಗುವುದೋ ಎಂಬ ಕಕ್ಕುಲಾತಿ ಬೇಡ ಎಂದು ಮೂದಲಿಸಿದನು.

ಅರ್ಥ:
ತೀರು: ಅಂತ್ಯ, ಮುಕ್ತಾಯ; ಅಡವಿ: ಕಾಡು; ಕಡಿತ: ಸೀಳು; ಗಿರಿ: ಬೆಟ್ಟ; ಹೋರಟೆ: ಕಾಳಗ, ಯುದ್ಧ; ಹೊಗು: ಒಳಸೇರು; ಸೇನೆ: ಸೈನ್ಯ; ಪಾರುಖಾಣೆ: ಬಹು ಮಾನ, ಉಡುಗೊರೆ; ಕೊಡು: ನೀಡು; ಸುತ: ಮಗ; ಭಾರಣೆ: ಮಹಿಮೆ, ಗೌರವ; ಕೊಡು: ನೀಡು; ಸಮಯ: ಕಾಲ; ಆರುಭಟೆ: ಗರ್ಜನೆ, ಆರ್ಭಟ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಕಾಯ: ಕೆಲಸ; ಕೈವಾರ: ಕೈಚಳಕ; ಕಕ್ಕುಲಿತೆ: ಚಿಂತೆ;

ಪದವಿಂಗಡಣೆ:
ತೀರಿತ್+ಅಡವಿಯ +ಕಡಿತ +ಗಿರಿಗಳ
ಹೋರಟೆಗೆ +ಹೊಗಬೇಕು +ಸೇನೆಗೆ
ಪಾರುಖಾಣೆಯ +ಕೊಟ್ಟೆವಾಗಳೆ +ಗುರುಸುತಾದಿಗಳ
ಭಾರಣೆಗೆ +ಕೊಡಬೇಕು +ಸಮಯವನ್
ಆರುಭಟೆಯಲಿ +ಮಲೆವುದೈ +ಕೈ
ವಾರವೇಕೀ +ಕಾಯದಲಿ +ಕಕ್ಕುಲಿತೆ+ ಬೇಡೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೈವಾರವೇಕೀ ಕಾಯದಲಿ ಕಕ್ಕುಲಿತೆ
(೨) ಹೋಲಿಸುವ ಪರಿ – ತೀರಿತಡವಿಯ ಕಡಿತ ಗಿರಿಗಳ ಹೋರಟೆಗೆ ಹೊಗಬೇಕು

ಪದ್ಯ ೯೬: ಇಂದ್ರನ ಓಲಗವು ಹೇಗೆ ಮುಕ್ತಾಯಗೊಂಡಿತು?

ಪಾರುಖಾಣೆಯನಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ (ಅರಣ್ಯ ಪರ್ವ, ೮ ಸಂಧಿ, ೯೬ ಪದ್ಯ)

ತಾತ್ಪರ್ಯ:
ಇಂದ್ರನು ಊರ್ವಶಿ ರಂಭೆ, ಮೇನಕೆ, ಗೌರಿ ಮೊದಲಾದ ಅಪ್ಸರೆಯರಿಗೆ ಬಹುಮಾನವನ್ನು ಕೊಟ್ಟನು. ಅಪ್ಸರೆಯರೂ, ಸಮಸ್ತ ದೇವತೆಗಳೂ ತಮ್ಮ ತಮ್ಮ ಮನೆಗಳಿಗೆ ಹೋದರು. ಓಲಗ ಮುಗಿಯಿತು. ಸಾಲು ದೀಪಗಳನ್ನು ಹಚ್ಚಿದರು. ಆರತಿಯ ಹರಿವಾಣಗಳ ಸಾಲು ಸುಳಿಯಿತು.

ಅರ್ಥ:
ಪಾರುಖಾಣೆ: ಬಹು ಮಾನ, ಉಡುಗೊರೆ; ಜಂಭ: ತಾರಕಾಸುರನ ಪ್ರಧಾನಿ; ಜಂಭಾರಿ: ಇಂದ್ರ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಪಾತ್ರ: ಅರ್ಹನಾದವನು; ಪರಮ: ಅತೀವ; ಹರುಷ: ಸಂತಸ; ನಾರಿ: ಸ್ತ್ರೀ; ನಿಖಿಳ: ಎಲ್ಲಾ; ಅಮರ: ದೇವತೆ; ಬೀಡಾರ: ತಂಗುವ ಸ್ಥಳ, ವಸತಿ; ಐದು: ಬಂದು ಸೇರು; ಹರೆದು: ತೀರಿತು; ಓಲಗ: ದರ್ಬಾರು; ಆರತಿ: ನೀರಾಜನ; ಹರಿವಣ: ತಟ್ಟೆ; ಸುಳಿ: ಕಾಣಿಸಿಕೊಳ್ಳು; ಸಾಲು: ಆವಳಿ; ಸೊಡರು: ದೀಪ;

ಪದವಿಂಗಡಣೆ:
ಪಾರುಖಾಣೆಯನಿತ್ತನಾ +ಜಂ
ಭಾರಿ+ಊರ್ವಶಿ +ರಂಭೆ +ಮೇನಕೆ
ಗೌರಿ+ಮೊದಲಾದ್+ಅಖಿಳ +ಪಾತ್ರಕೆ +ಪರಮ +ಹರುಷದಲಿ
ನಾರಿಯರು +ನಿಖಿಳ+ಅಮರರು+ ಬೀ
ಡಾರಕ್+ಐದಿತು +ಹರೆದುದ್+ಓಲಗವ್
ಆರತಿಯ +ಹರಿವಾಣ+ ಸುಳಿದುದು +ಸಾಲು +ಸೊಡರುಗಳ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುಳಿದುದು ಸಾಲು ಸೊಡರುಗಳ