ಪದ್ಯ ೩: ಲೋಮಶನನ್ನು ಹೇಗೆ ಸ್ವಾಗತಿಸಲಾಯಿತು?

ಈತನಿದಿರೆದ್ದರ್ಘ್ಯಪಾದ್ಯವ
ನಾ ತಪೋನಿಧಿಗಿತ್ತು ಬಹಳ
ಪ್ರೀತಿಯಲಿ ಬೆಸಗೊಂಡನವರಾಗಮನ ಸಂಗತಿಯ
ಆತನಮಳ ಸ್ವರ್ಗಸದನ ಸು
ಖಾತಿಶಯವನು ಹೇಳಿದನು ಪುರು
ಹೂತ ಭವನದಲರ್ಜುನನ ವಾರ್ತೆಯನು ವಿವರಿಸಿದ (ಅರಣ್ಯ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮಜನು ಲೋಮಶನನ್ನು ಎದುರುಗೊಂಡು ಅಮರಾವತಿಯ ವಿದ್ಯಮಾನಗಳೇನೆಂದು ಕೇಳಿದನು, ಸ್ವರ್ಗದ ಸಂತೋಷಾತಿಶಯವನ್ನೂ ಅರ್ಜುನನು ದೇವೇಂದ್ರ ಭವನದಲ್ಲಿದ್ದ ವಾರ್ತೆಯನ್ನು ಲೋಮಶನು ತಿಳಿಸಿದನು.

ಅರ್ಥ:
ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಪಾದ್ಯ: ಕಾಲು ತೊಳೆಯುವ ನೀರು; ತಪೋನಿಧಿ: ಮುನಿ; ಬಹಳ: ತುಂಬ; ಪ್ರೀತಿ: ಒಲವು; ಬೆಸಗೊಳ್: ಕೇಳು;
ಆಗಮನ: ಬರುವಿಕೆ; ಸಂಗತಿ: ವಿಚಾರ; ಅಮಳ: ನಿರ್ಮಲ; ಸ್ವರ್ಗ: ನಾಕ; ಸದನ; ಆಲಯ; ಸುಖ: ಸಮಾಧಾನ, ಸಂತಸ; ಅತಿಶಯ: ಹೆಚ್ಚಳ; ಹೇಳು: ತಿಳಿಸು; ಪುರುಹೂತ: ಇಂದ್ರ; ಭವನ: ಆಲಯ; ವಾರ್ತೆ: ವಿಚಾರ, ವಿಷಯ; ವಿವರಿಸು: ತಿಳಿಸು;

ಪದವಿಂಗಡಣೆ:
ಈತನ್+ಇದಿರೆದ್+ಅರ್ಘ್ಯ+ಪಾದ್ಯವನ್
ಆ+ ತಪೋನಿಧಿಗಿತ್ತು +ಬಹಳ
ಪ್ರೀತಿಯಲಿ +ಬೆಸಗೊಂಡನ್+ಅವರ್+ಆಗಮನ +ಸಂಗತಿಯ
ಆತನ್+ಅಮಳ +ಸ್ವರ್ಗ+ಸದನ +ಸುಖ
ಅತಿಶಯವನು +ಹೇಳಿದನು +ಪುರು
ಹೂತ +ಭವನದಲ್+ಅರ್ಜುನನ +ವಾರ್ತೆಯನು +ವಿವರಿಸಿದ

ಅಚ್ಚರಿ:
(೧) ಲೋಮಶ ಮುನಿಗಳನ್ನು ತಪೋನಿಧಿ ಎಂದು ಕರೆದಿರುವುದು
(೨) ಇಂದ್ರನನ್ನು ಕರೆದ ಪರಿ – ಪುರುಹೂತ

ಪದ್ಯ ೧೦: ವ್ಯಾಸರಿಗೆ ಯಾವಪೀಠವನ್ನು ಆಸನವನ್ನಾಗಿ ನೀಡಿದನು?

ಇದೆ ಪವಿತ್ರ ಪಲಾಶ ಪತ್ರದ
ಲುದಕವರ್ಘ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ
ಇದನು ಕಾಂಚನ ಪಾತ್ರ ಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾ ಸಂಭವದಲೆಂದನು ಧರ್ಮನಂದನನು (ಅರಣ್ಯ ಪರ್ವ, ೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪವಿತ್ರವಾದ ಮುತ್ತುಗದ ಎಲೆಯಲ್ಲಿ ಅರ್ಘ್ಯ, ಪಾದ್ಯ, ಆಚಮನಗಳಿಗೆ ನೀರಿದೆ, ದರ್ಭೆಯ ಆಸನವಿದೆ, ಇದು ಬಂಗಾರದ ಪಾತ್ರೆಯ ಜಲವೆಂದೂ, ಇದು ಶ್ರೇಷ್ಠವಾದ ಸಿಂಹಾಸನವೆಂದು ಭಾವಿಸಿ ಸ್ವೀಕರಿಸಿರಿ ಎಂದು ಧರ್ಮಜನು ವ್ಯಾಸರಿಗೆ ಬಿನ್ನವಿಸಿದನು.

ಅರ್ಥ:
ಪವಿತ್ರ: ಶುದ್ಧವಾದ, ನಿರ್ಮಲವಾದ; ಪಲಾಶ: ಮುತ್ತುಗದ ಮರ, ಕಿಂಶುಕ; ಪತ್ರ: ಎಲೆ; ಉದಕ: ನೀರು; ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಆಚಮನ: ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಮಂತ್ರಪೂರ‍್ವಕವಾಗಿ ಸೇವಿಸುವುದು; ಪಾದ್ಯ: ಕಾಲು ತೊಳೆಯುವ ನೀರು; ವಿಮಳ: ನಿರ್ಮಲ; ದರ್ಭೆ: ಹುಲ್ಲು; ಆಸನ: ಪೀಠ; ವಿಲಾಸ: ಚೆಲುವು; ಕಾಂಚನ: ಚಿನ್ನ; ಪಾತ್ರೆ: ಕೊಳಗ, ಬಟ್ಟಳು; ವರಾಸನ: ಸಿಂಹಾಸನ, ಶ್ರೇಷ್ಠವಾದ ಪೀಠ; ಕೈಕೊಂಬು: ತಿಳಿದು ಸಂಭವ: ಸಾಧ್ಯತೆ, ಶಕ್ಯತೆ; ನಂದನ: ಮಗ;

ಪದವಿಂಗಡಣೆ:
ಇದೆ +ಪವಿತ್ರ +ಪಲಾಶ +ಪತ್ರದಲ್
ಉದಕವ್+ಅರ್ಘ್ಯ+ಆಚಮನ +ಪಾದ್ಯ
ಕ್ಕಿದೆ+ ವಿಮಳ +ದರ್ಭೋಪರಚಿತ್+ಆಸನ +ವಿಳಾಸದಲಿ
ಇದನು +ಕಾಂಚನ +ಪಾತ್ರ +ಜಲವೆಂದ್
ಇದು +ವರಾಸನವೆಂದು+ ಕೈಕೊಂ
ಬುದು +ಯಥಾ+ ಸಂಭವದಲ್+ಎಂದನು +ಧರ್ಮನಂದನನು

ಅಚ್ಚರಿ:
(೧) ಶುದ್ಧಗೊಳಿಸಲು ನೀಡುವ ನೀರಿನ ಬಗೆ – ಅರ್ಘ್ಯ, ಆಚಮನ, ಪಾದ್ಯ
(೨) ಪರ್ಣಶಾಲೆಯಲ್ಲಿರುವ ಆಸನ – ವಿಮಳ ದರ್ಭೋಪರಚಿತಾಸನ

ಪದ್ಯ ೨೩: ಧರ್ಮರಾಯನು ನಾರದರನ್ನು ಹೇಗೆ ಉಪಚರಿಸಿದನು?

ಹರಸಿದನು ಮುನಿಯರ್ಘ್ಯಪಾದ್ಯೋ
ತ್ಕರವ ಮಧುಪರ್ಕಾಸನಾದಿಯ
ನರಸಮಾಡಿದನಮರಮುನಿ ಕೈಕೊಂಡು ಹರುಷದಲಿ
ಪರಿಮಿತದ ಸಮಯದ ವಚೋವಿ
ಸ್ತರಣವುಂಟೆನೆ ರಾಯನೋಲಗ
ಹರಿದುದವನೀಪಾಲ ಬಿನ್ನಹ ಮಾಡಿದನು ಮುನಿಗೆ (ಆದಿ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಾರದನ ಆಗಮನವನ್ನು ಕಂಡ ಧರ್ಮರಾಯನು ಆತನಿಗೆ ಅರ್ಘ್ಯ, ಪಾದ್ಯ, ಆಸನ, ಮಧುಪರ್ಕ ಮೊದಲಾದುವುಗಳನ್ನು ನೀಡಿ ಸತ್ಕರಿಸಿದನು. ನಾರದರು ಉಪಚಾರವನ್ನು ಸಂತೋಷವಾಗಿ ಸ್ವೀಕರಿಸಿ, ಏಕಾಂತದಲ್ಲಿ ಮಾತಾಡುವ ಇಚ್ಛೆವ್ಯಕ್ತಪಡಿಸಿದಾಗ ಧರ್ಮರಾಯನು ಆಸ್ಥಾನವನ್ನು ವಿಸರ್ಜಿಸಿ ನಾರದರಲ್ಲಿ ಬಿನ್ನವಿಸಿದನು.

ಅರ್ಥ:
ಹರಸು: ಆಶೀರ್ವಾದ ಮಾಡು,ಕೊಂಡಾಡು; ಮುನಿ: ಋಷಿ; ಅರ್ಘ್ಯ: ಪೂಜ್ಯರಿಗೆ ಕೈತೊಳೆಯಲು ಕೊಡುವ ನೀರು; ಪಾದ್ಯ:ಕಾಲು ತೊಳೆಯುವ ನೀರು; ಉತ್ಕರ: ಸಮೂಹ; ಮಧು: ಜೇನು; ಮಧುಪರ್ಕ: ಮೊಸರು, ತುಪ್ಪ, ಹಾಲು, ಜೇನು ತುಪ್ಪ, ಸಕ್ಕರೆ – ಈ ಐದರ ಮಿಶ್ರಣ; ಆಸನ: ಕುಳಿತುಕೊಳ್ಳುವ ಪೀಠ; ಆದಿ: ಮುಂತಾದ; ಅರಸ: ರಾಜ; ಅಮರ: ದೇವತೆ; ಹರುಷ: ಸಂತೋಷ; ಪರಿಮಿತ:ಸ್ವಲ್ಪ; ಸಮಯ: ಕಾಲ; ವಚೋವಿಸ್ತರಣ: ಸುದೀರ್ಘ ಮಾತು; ರಾಯ: ರಾಜ; ಓಲಗ: ದರಬಾರು; ಹರಿ: ಮುಗಿಸು; ಅವನಿ: ಭೂಮಿ; ಅವನಿಪಾಲ: ರಾಜ; ಬಿನ್ನಹ: ಬೇಡಿಕೆ;

ಪದವಿಂಗಡಣೆ:
ಹರಸಿದನು +ಮುನಿ+ಅರ್ಘ್ಯ+ಪಾದ್ಯ+
ಉತ್ಕರವ+ ಮಧುಪರ್ಕ+ಆಸನ+ಆದಿಯನ್
ಅರಸ+ಮಾಡಿದನ್+ಅಮರಮುನಿ +ಕೈಕೊಂಡು +ಹರುಷದಲಿ
ಪರಿಮಿತದ+ ಸಮಯದ+ ವಚೋವಿ
ಸ್ತರಣ+ವುಂಟ್+ಎನೆ+ ರಾಯನ್+ಓಲಗ
ಹರಿದುದ್+ಅವನೀಪಾಲ +ಬಿನ್ನಹ+ ಮಾಡಿದನು +ಮುನಿಗೆ

ಅಚ್ಚರಿ:
(೧) ಅರಸ, ರಾಯ, ಅವನೀಪಾಲ – ರಾಜ ಅರ್ಥದ ಸಮಾನಾರ್ಥಕ ಪದಗಳು
(೨) ಪೂಜ್ಯರಿಗೆ ಆತಿಥ್ಯ ನೀಡುವಾಗ ಬಳಸುವ ಸಾಮಗ್ರಿ: ಅರ್ಘ್ಯ, ಪಾದ್ಯ, ಮಧುಪರ್ಕ, ಆಸನ;
(೩) ವಚೋವಿಸ್ತರಣ: ವಿಸ್ತಾರವಾದ ಮಾತಿದೆ ಎಂದು ಹೇಳಲು