ಪದ್ಯ ೪: ಆನೆಯ ಮೊಗದಲ್ಲಿ ಯಾವುದು ರಂಜಿಸುತ್ತಿತ್ತು?

ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ (ದ್ರೋಣ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಆನೆಯ ಸುತ್ತಲೂ ಬಿಗಿದ ಗುಳದಲ್ಲಿದ್ದ ಬಂಗಾರದ ರೇಖೆಗಳು ಆಗಸದಲ್ಲಿ ಹರಡುವ ಸೂರ್ಯ ರಶ್ಮಿಯಂತಿದ್ದವು. ಆಕಾಶ ಗಂಗೆಯ ಕಾಲುವೆಯಂತೆ ಅಳವಡಿಸಿದ್ದ ಧ್ವಜದಂಡವು ಆನೆಯ ಮೊಗರಂಬದಲ್ಲಿ ರಂಜಿಸುತ್ತಿತ್ತು.

ಅರ್ಥ:
ಮುಗಿಲು: ಆಗಸ; ಹೊದರು: ಗುಂಪು, ಸಮೂಹ; ಎಳೆ: ನೂಲಿನ ಎಳೆ, ಸೂತ್ರ; ರವಿ: ಸೂರ್ಯ; ರಶ್ಮಿ: ಕಿರಣ; ಪಸರಿಸು: ಹರಡು; ಸುತ್ತ: ಎಲ್ಲಾ ಕಡೆ; ಬಿಗಿ: ಬಂಧಿಸು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಹೊಳೆ: ಪ್ರಕಾಶ; ಹೊಂಗೆಲಸ: ಚಿನ್ನದ ಕಾರ್ಯದ; ಸುರೇಖೆ: ಚೆಲುವಾದ ಸಾಲು; ಗಗನ: ಆಗಸ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಠೆಕ್ಕೆಯ: ಬಾವುಟ; ಪಲ್ಲವ:ಚಿಗುರು; ಅಗಿ: ಜಗಿ, ಆವರಿಸು; ಮೆರೆ: ಹೊಳೆ; ಬಿಗಿ: ಭದ್ರವಾಗಿರುವುದು; ಮೊಗ: ಮುಖ; ವಿಳಾಸ: ವಿಹಾರ, ಚೆಲುವು; ಮೊಗರಂಬ: ಮೊಗಮುಟ್ಟು;

ಪದವಿಂಗಡಣೆ:
ಮುಗಿಲ +ಹೊದರಿನೊಳ್+ಎಳೆಯ +ರವಿ +ರ
ಶ್ಮಿಗಳು +ಪಸರಿಸುವಂತೆ +ಸುತ್ತಲು
ಬಿಗಿದ +ಗುಳದಲಿ +ಹೊಳೆಯೆ +ಹೊಂಗೆಲಸದ+ ಸುರೇಖೆಗಳು
ಗಗನ+ ಗಂಗಾನದಿಯ +ಕಾಲುವೆ
ತೆಗೆದರ್+ಎನೆ+ ಠೆಕ್ಕೆಯದ +ಪಲ್ಲವವ್
ಅಗಿಯೆ+ ಮೆರೆದುದು+ ಬಿಗಿದ +ಮೊಗರಂಬದ +ವಿಳಾಸದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಗನ ಗಂಗಾನದಿಯ ಕಾಲುವೆತೆಗೆದರೆನೆ

ಪದ್ಯ ೩: ಅರ್ಜುನನು ಉತ್ತರನಿಗೆ ಏನು ಹೇಳಿದನು?

ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ (ವಿರಾಟ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಬಳಿ ಮಾತನಾಡುತ್ತಾ, ಎಲೈ ಉತ್ತರ ಕುಮಾರ ನೀನು ದೂತರನ್ನು ಕರೆದು ನೀನೇ ಯುದ್ಧಮಾಡಿ ಗೆದ್ದೆನೆಂದು ಹೇಳು, ನಾವು ಇಲ್ಲಿರುವುದನ್ನು ಇಂದು ಯಾರಿಗೂ ಹೇಳಬೇಡ, ಪುರಜನರೂ, ಪರಿಜನರೂ ನಿನ್ನ ವಿಜಯೋತ್ಸವದ ಹರುಷದಲ್ಲಿರಲಿ. ನಿನ್ನ ತಂದೆ ನಿನ್ನನ್ನೇ ಮನ್ನಿಸಲಿ, ನಾನು ಹೇಳಿದಂತೆ ಮಾಡು ಎಂದು ಹೇಳಿದನು.

ಅರ್ಥ:
ಕರೆದು: ಬರೆಮಾಡು; ದೂತ: ಸೇವಕ; ಅರುಹು: ಹೇಳು; ಧುರ: ಯುದ್ಧ; ಜಯಿಸು: ಗೆಲ್ಲು; ಪಸರಿಸು: ಹೇಳು, ಹರದು; ವಿಕ್ರಮ: ಪರಾಕ್ರಮ, ಬಲ; ಅರಸ: ರಾಜ; ಮನ್ನಿಸು: ಗೌರವಿಸು; ಪುರ: ಊರು; ಪರಿಜನ: ಸೇವೆ ಮಾಡುವ ಜನ, ಸೇವಕ ವರ್ಗ; ವಿಜಯ: ಗೆಲುವು; ಹರುಷ: ಸಂತಸ; ಹೆಚ್ಚು: ಅಧಿಕ; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಕರೆದು +ದೂತರಿಗ್+ಅರುಹು +ನೀನೇ
ಧುರವ +ಜಯಿಸಿದೆನ್+ಎನ್ನು+ ನಾವ್
ಇದ್ದಿರವನ್+ಅರುಹದಿರ್+ಇಂದು +ಪಸರಿಸು +ನಿನ್ನ +ವಿಕ್ರಮವ
ಅರಸ +ನಿನ್ನನೆ +ಮನ್ನಿಸಲಿ +ಪುರ
ಪರಿಜನಂಗಳು+ ನಿನ್ನ +ವಿಜಯದ
ಹರುಷದಲಿ +ಹೆಚ್ಚಿರಲಿ +ನೇಮಿಸಿದಂತೆ +ಮಾಡೆಂದ

ಅಚ್ಚರಿ:
(೧) ಜಯ, ವಿಜಯ – ಸಮನಾರ್ಥಕ ಪದಗಳು