ಪದ್ಯ ೫: ಜಗತ್ತು ಪಾಂಡುರಾಜನ ಆಳ್ವಿಕೆಯಲ್ಲಿ ಹೇಗೆ ತೋರಿತು?

ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜನ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ (ಆದಿ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಪಾಂಡುರಾಜನ ಶುದ್ಧವಾದ ಕಿರ್ತಿಯು ಹರಡಿ ಜಗತ್ತು ಬಿಳುಪಾಯಿತು. ನಿಷ್ಠುರತೆಯಿಂದ ಅವನು ಝಳಪಿಸುವ ಕತ್ತಿಯ ದೆಸೆಯಿಂದ ಜಗತ್ತು ಕೆಂಪಾಯಿತು. ಶತ್ರುಸೈನ್ಯವನ್ನು ಬಗ್ಗುಬಡಿಯುವ ಅವನ ಕೋಪದಿಂದ ಜಗತ್ತು ಕಪ್ಪಾಗಿ ಕಾಣಿಸುತ್ತಿತ್ತು.

ಅರ್ಥ:
ಪಸರಿಸು: ಹರಡು; ಧೌತ: ಬಿಳಿ, ಶುಭ್ರ; ಕೀರ್ತಿ: ಖ್ಯಾತಿ; ಬಿಳುಪು: ಬಿಳಿಯ ಬಣ್ಣ; ಜನ: ಮನುಷ್ಯರು; ನಿಪ್ಪಸರ: ಅತಿಶಯ, ಹೆಚ್ಚಳ; ಝಳಪಿಸು: ಬೀಸು, ಹೆದರಿಸು; ಖಂಡೆಯ: ಕತ್ತಿ; ಸಿರಿ: ಐಶ್ವರ್ಯ; ಸೊಂಪು: ಸೊಗಸು, ಚೆಲುವು; ಮಸಗು: ಹರಡು; ಅಗ್ಗ: ಶ್ರೇಷ್ಠ; ಪರಬಲ: ವೈರಿ; ವಿಸರ: ವಿಸ್ತಾರ, ವ್ಯಾಪ್ತಿ; ದಳ: ಸೈನ್ಯ; ಕ್ರೋಧ: ಕೋಪ; ತಾಮಸ: ಕತ್ತಲೆ, ಅಂಧಕಾರ, ನಿಧಾನ; ಅಸಿತ: ಕಪ್ಪಾದುದು; ಭಾಸ: ಕಾಣು; ಭುವನ: ಜಗತ್ತು; ವಿಸ್ತಾರ: ಹರಡು; ಆಭಾಸ: ಕಾಂತಿ, ಪ್ರಕಾಶ;

ಪದವಿಂಗಡಣೆ:
ಪಸರಿಸಿದ +ಪರಿಧೌತ+ಕೀರ್ತಿ
ಪ್ರಸರದಲಿ +ಬೆಳುಪಾಯ್ತು +ಜನ +ನಿ
ಪ್ಪಸರದಲಿ +ಝಳಪಿಸುವ +ಖಂಡೆಯ +ಸಿರಿಯ +ಸೊಂಪಿನಲಿ
ಮಸಗಿತ್+ಅಗ್ಗದ+ ಕೆಂಪು +ಪರಬಲ
ವಿಸರ+ ದಳನ +ಕ್ರೋಧಮಯ +ತಾ
ಮಸದಿನ್+ಅಸಿತ್+ಆಭಾಸಮಾದುದು +ಭುವನ+ವಿಸ್ತಾರ

ಅಚ್ಚರಿ:
(೧) ಪಸರಿಸಿ, ಪ್ರಸರ, ನಿಪ್ಪಸರ – ಪದಗಳ ಬಳಕೆ
(೨) ಬೆಳುಪು, ಕೆಂಪು, ಅಸಿತ – ಬಣ್ಣಗಳ ಬಳಕೆ
(೩) ರೂಪಕದ ಪ್ರಯೋಗ – ಪರಬಲ ವಿಸರ ದಳನ ಕ್ರೋಧಮಯ ತಾಮಸದಿನಸಿತಾಭಾಸಮಾದುದು

ಪದ್ಯ ೧೦: ಅರ್ಜುನನ ತಪಸ್ಸಿನ ಪ್ರಭೆ ಹೇಗಿತ್ತು?

ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದು ತಡೆದುದಭ್ರ
ಸ್ಥಾಳಿಯಲಿ ಸೈವರಿವ ಸೂರ್ಯನ ಚಂದ್ರಮಪ್ರಭೆಯ
ಢಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪಧೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆಂದ (ಅರಣ್ಯ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನ ತಪಸ್ಸಿನ ಅಗ್ನಿ ಜ್ವಾಲೆಯು ಆಗಸದಲ್ಲಿ ಚರಿಸುವ ಸೂರ್ಯ ಚಂದ್ರರ ಪ್ರಭೆಯನ್ನು ತಡೆಯಿತು. ಮೇಲೆದ್ದು ಕಾಣುವ ಮೌನದ ಕರಾಳಗರ್ಭದಲ್ಲಿದ್ದ ತೇಜಸ್ಸಿನ ಹೊಗೆಯಿಂದ ಆಕಾಶದ ಮೋಡಗಳೂ ಕಪ್ಪಾದವು ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ಹೇಳಿದರು.

ಅರ್ಥ:
ಮೇಲೆ: ಹೆಚ್ಚು; ತಪ: ತಪಸ್ಸು; ಅಗ್ನಿ: ಬೆಂಕಿ; ಜ್ವಾಲೆ: ಅಗ್ನಿಯ ನಾಲಗೆ; ಜಡಿ: ಹೊಡೆತ; ತಡೆ: ನಿಲ್ಲಿಸು; ಅಭ್ರ: ಆಗಸ; ಸ್ಥಾಳಿ: ಲೋಹದ ದುಂಡನೆಯ ಪಾತ್ರೆ; ಸೈವರಿ: ಮುಂದಕ್ಕೆ ಹೋಗು; ಸೂರ್ಯ: ರವಿ, ಭಾನು; ಚಂದ್ರ: ಶಶಿ; ಪ್ರಭೆ: ಪ್ರಕಾಶ; ಢಾಳಿಸು: ಕಾಂತಿಗೊಳ್ಳು; ಧೌತ: ಬಿಳಿ, ಶುಭ್ರ; ಮೌನ: ನಿಶ್ಯಬ್ದ; ಕರಾಳ: ಭಯಂಕರ; ತೇಜ: ಕಾಂತಿ; ಗರ್ಭ: ಒಳಭಾಗ; ಧೂಮ: ಹೊಗೆ, ಮೋಡ; ಆಳಿ: ಗುಂಪು; ಮೇಘಾಳಿ: ಮೋಡಗಳ ಗುಂಪು; ಮಸಗು: ಹರಡು; ಕೆರಳು; ಅರಸ: ರಾಜ;

ಪದವಿಂಗಡಣೆ:
ಮೇಲೆ +ಮೇಲ್+ಈತನ +ತಪೋಗ್ನಿ
ಜ್ವಾಲೆ+ ಜಡಿದುದು +ತಡೆದುದ್+ಅಭ್ರ
ಸ್ಥಾಳಿಯಲಿ +ಸೈವರಿವ+ ಸೂರ್ಯನ +ಚಂದ್ರಮ+ಪ್ರಭೆಯ
ಢಾಳಿಸುವ +ಪರಿಧೌತ +ಮೌನ +ಕ
ರಾಳ +ತೇಜೋ+ಗರ್ಭ+ ತಪ+ಧೂ
ಮಾಳಿಯಲಿ +ಮೇಘಾಳಿ +ಮಸಗಿದುದ್+ಅರಸ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಗಸವನ್ನು ದುಂಡನೆಯ ಪಾತ್ರೆಗೆ ಹೋಲಿಸಿರುವ ಪರಿ – ಅಭ್ರ
ಸ್ಥಾಳಿಯಲಿ ಸೈವರಿವ ಸೂರ್ಯನ ಚಂದ್ರಮಪ್ರಭೆಯ
(೨) ಅಭ್ರಸ್ಥಾಳಿ, ಡಾಳಿ, ಧೂಮಾಳಿ, ಮೇಘಾಳಿ – ಪ್ರಾಸ ಪದ
(೩) ಮೇಘಾಳಿ ಮಸಗಿದುದು, ಸೈವರಿವ ಸೂರ್ಯನ – ಜೋಡಿ ಅಕ್ಷರದ ಪದಗಳು