ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ (ಭೀಷ್ಮ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರಲ್ಲಿ ಬಂದು, ಜೀಯಾ ಎಲ್ಲಾ ಸೇನಾನಾಯಕರು ಮೋರೆಗಳಿಗೆ ಮುಸುಕು ಹಾಕಿಕೊಂಡುದನ್ನು ನೋಡಿದಿರಾ? ಯುದ್ಧಕ್ಕೆ ಹೊರಡುವ ಮೊದಲು ಅವರು ಹೊಗಳಿಸಿಕೊಂಡ ಬಿರುದುಗಳ ಆರ್ಭಟವನ್ನು ಕೇಳಿದ್ದಿರಲ್ಲವೇ? ಜಠರ ಪರಾಯಣ ಪರಿಣತರಾದ ಇವರ ಪಲಾಯನದ ಹೆಬ್ಬೆಳಸನ್ನು ನೋಡಿರಿ ಇಂಥವರನ್ನು ಕಳಿಸಿ ನೀವು ಕ್ಷತ್ರಿಯ ಧರ್ಮವನ್ನು ಕಾಪಾಡಿದಿರಲ್ಲವೇ ಎಂದು ಭೀಷ್ಮನಿಗೆ ಹೇಳಲು, ಭೀಷ್ಮನು ಹೀಗೆ ಉತ್ತರಿಸಿದನು.

ಅರ್ಥ:
ಜೀಯ: ಒಡೆಯ; ಚಿತ್ತೈಸು: ಆಲಿಸು; ನಾಯಕ: ಒಡೆಯ; ಮೋರೆ: ಮುಖ, ಆನನ; ಮುಸುಕು: ಹೊದಿಕೆ; ಆಯತ: ವಿಶಾಲವಾದ; ಹೊತ್ತು: ಸಮಯ; ಮುನ್ನ: ಮೊದಲು; ಬಿರು: ಬಿರುಸು, ಕಠೋರ; ಉಬ್ಬಟೆ: ಅತಿಶಯ, ಹಿರಿಮೆ; ಕಾಯಿ: ರಕ್ಷಿಸು; ಜಠರ: ಹೊಟ್ಟೆ; ಪರಾಯಣ: ಪೂರ್ಣವಾದುದು, ತಲ್ಲೀನವಾದ; ಪರಿಣತೆ: ಚಾತುರ್ಯ; ಪಲಾಯನ: ಓಡುವಿಕೆ, ಪರಾರಿ; ಹೆಬ್ಬೆಳಸು: ಸಮೃದ್ಧ ಫಸಲು; ನೋಡು: ವೀಕ್ಷಿಸು;

ಪದವಿಂಗಡಣೆ:
ಜೀಯ +ಚಿತ್ತೈಸಿದರೆ+ ಸೇನಾ
ನಾಯಕರ +ಮೋರೆಗಳ +ಮುಸುಕುಗಳ್
ಆಯತವನ್+ಈ+ ಹೊತ್ತು +ಮುನ್ನಿನ +ಬಿರುದಿನ್+ಉಬ್ಬಟೆಯ
ಕಾಯಿದಿರೆ +ಧರ್ಮವನು +ಜಠರ+ ಪ
ರಾಯಣರ+ ಪರಿಣತೆಯಲಾದ +ಪ
ಲಾಯನದ +ಹೆಬ್ಬೆಳಸ+ ನೋಡ್+ಎನೆ+ ಭೀಷ್ಮನ್+ಇಂತೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪರಾಯಣರ ಪರಿಣತೆಯಲಾದ ಪಲಾಯನದ