ಪದ್ಯ ೪: ಭೀಷ್ಮರು ಕೌರವನಿಗೆ ಯಾವ ಭರವಸೆಯನ್ನಿಟ್ಟರು?

ಖತಿಯ ಮಾಡಿತೆ ನಮ್ಮ ನುಡಿಯನು
ಚಿತಪರಾಯಣರೆಂದು ನಿನ್ನಯ
ಮತಿಗೆ ತೋರಿತೆ ಮಾಣಲದು ನೋಡಾದಡಾಹವವ
ಕ್ಷತಿಯ ಹೊರೆಕಾರರಿಗೆ ಸೌಖ್ಯ
ಸ್ಥಿತಿಯ ಮಾಡುವೆನಿನ್ನು ಕುರುಭೂ
ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ (ಭೀಷ್ಮ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಮ್ಮ ಮಾತು ನಿನಗ ಕೋಪ, ದುಃಖವನ್ನುಂಟು ಮಾಡಿತೇ? ನಾವು ಅನುಚಿತವನ್ನು ಮಾದುವುದರಲ್ಲೇ ತೊಡಗಿದ್ದೇವೆ ಎನ್ನಿಸಿತೇ? ಅದು ಹಾಗಿರಲಿ, ನಮ್ಮ ಯುದ್ಧವನ್ನು ನೋಡು, ರಾಜನಾದ ನಿನಗೆ ಇನ್ನು ಸುಖವನ್ನುಂಟು ಮಾಡುತ್ತೇನೆ, ನಿನ್ನ ವಿರೋಧಿಗಲ ವಿಧಿಯೇನು ಎನ್ನುವುದನ್ನು ಈಗಲೇ ತೋರಿಸುತ್ತೇನೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಖತಿ: ಕೋಪ; ನುಡಿ: ಮಾತು; ಅನುಚಿತ: ಸರಿಯಲ್ಲದ; ಪರಾಯಣ: ಪರಮಗುರಿ; ಮತಿ: ಬುದ್ಧಿ; ತೋರು: ಗೋಚರಿಸು; ಮಾಣು: ನಿಲ್ಲಿಸು; ನೋಡು: ವೀಕ್ಷಿಸು; ಆಹವ: ಯುದ್ಧ; ಕ್ಷತಿ: ಕೇಡು, ನಷ್ಟ; ಹೊರೆ; ಭಾರ; ಸೌಖ್ಯ: ನೆಮ್ಮದಿ; ಸ್ಥಿತಿ: ಅಸ್ತಿತ್ವ, ಅವಸ್ಥೆ; ಭೂಪತಿ: ರಾಜ; ವಿರೋಧಿ: ಶತ್ರು; ವಿಧಿ:ಆಜ್ಞೆ, ಆದೇಶ, ನಿಯಮ; ತೋರು: ಗೋಚರಿಸು;

ಪದವಿಂಗಡಣೆ:
ಖತಿಯ +ಮಾಡಿತೆ +ನಮ್ಮ +ನುಡಿ+ಅನು
ಚಿತ+ಪರಾಯಣರೆಂದು +ನಿನ್ನಯ
ಮತಿಗೆ+ ತೋರಿತೆ+ ಮಾಣಲದು +ನೋಡಾದಡ್+ಆಹವವ
ಕ್ಷತಿಯ +ಹೊರೆಕಾರರಿಗೆ +ಸೌಖ್ಯ
ಸ್ಥಿತಿಯ +ಮಾಡುವೆನ್+ಇನ್ನು +ಕುರುಭೂ
ಪತಿ+ ವಿರೋಧಿಯ +ವಿಧಿಯನ್+ಈಗಳೆ+ ತೋರಿಸುವೆನೆಂದ

ಅಚ್ಚರಿ:
(೧) ಖತಿ, ಮತಿ, ಕ್ಷತಿ, ಸ್ಥಿತಿ, ಭೂಪತಿ – ಪ್ರಾಸ ಪದಗಳು
(೨) ಭರವಸೆಯನ್ನು ನೀಡುವ ಪರಿ – ಕ್ಷತಿಯ ಹೊರೆಕಾರರಿಗೆ ಸೌಖ್ಯಸ್ಥಿತಿಯ ಮಾಡುವೆನ್

ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ (ಭೀಷ್ಮ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರಲ್ಲಿ ಬಂದು, ಜೀಯಾ ಎಲ್ಲಾ ಸೇನಾನಾಯಕರು ಮೋರೆಗಳಿಗೆ ಮುಸುಕು ಹಾಕಿಕೊಂಡುದನ್ನು ನೋಡಿದಿರಾ? ಯುದ್ಧಕ್ಕೆ ಹೊರಡುವ ಮೊದಲು ಅವರು ಹೊಗಳಿಸಿಕೊಂಡ ಬಿರುದುಗಳ ಆರ್ಭಟವನ್ನು ಕೇಳಿದ್ದಿರಲ್ಲವೇ? ಜಠರ ಪರಾಯಣ ಪರಿಣತರಾದ ಇವರ ಪಲಾಯನದ ಹೆಬ್ಬೆಳಸನ್ನು ನೋಡಿರಿ ಇಂಥವರನ್ನು ಕಳಿಸಿ ನೀವು ಕ್ಷತ್ರಿಯ ಧರ್ಮವನ್ನು ಕಾಪಾಡಿದಿರಲ್ಲವೇ ಎಂದು ಭೀಷ್ಮನಿಗೆ ಹೇಳಲು, ಭೀಷ್ಮನು ಹೀಗೆ ಉತ್ತರಿಸಿದನು.

ಅರ್ಥ:
ಜೀಯ: ಒಡೆಯ; ಚಿತ್ತೈಸು: ಆಲಿಸು; ನಾಯಕ: ಒಡೆಯ; ಮೋರೆ: ಮುಖ, ಆನನ; ಮುಸುಕು: ಹೊದಿಕೆ; ಆಯತ: ವಿಶಾಲವಾದ; ಹೊತ್ತು: ಸಮಯ; ಮುನ್ನ: ಮೊದಲು; ಬಿರು: ಬಿರುಸು, ಕಠೋರ; ಉಬ್ಬಟೆ: ಅತಿಶಯ, ಹಿರಿಮೆ; ಕಾಯಿ: ರಕ್ಷಿಸು; ಜಠರ: ಹೊಟ್ಟೆ; ಪರಾಯಣ: ಪೂರ್ಣವಾದುದು, ತಲ್ಲೀನವಾದ; ಪರಿಣತೆ: ಚಾತುರ್ಯ; ಪಲಾಯನ: ಓಡುವಿಕೆ, ಪರಾರಿ; ಹೆಬ್ಬೆಳಸು: ಸಮೃದ್ಧ ಫಸಲು; ನೋಡು: ವೀಕ್ಷಿಸು;

ಪದವಿಂಗಡಣೆ:
ಜೀಯ +ಚಿತ್ತೈಸಿದರೆ+ ಸೇನಾ
ನಾಯಕರ +ಮೋರೆಗಳ +ಮುಸುಕುಗಳ್
ಆಯತವನ್+ಈ+ ಹೊತ್ತು +ಮುನ್ನಿನ +ಬಿರುದಿನ್+ಉಬ್ಬಟೆಯ
ಕಾಯಿದಿರೆ +ಧರ್ಮವನು +ಜಠರ+ ಪ
ರಾಯಣರ+ ಪರಿಣತೆಯಲಾದ +ಪ
ಲಾಯನದ +ಹೆಬ್ಬೆಳಸ+ ನೋಡ್+ಎನೆ+ ಭೀಷ್ಮನ್+ಇಂತೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪರಾಯಣರ ಪರಿಣತೆಯಲಾದ ಪಲಾಯನದ

ಪದ್ಯ ೬೩: ಕೃಷ್ಣನ ಗುಣವೆಂತಹುದು?

ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ
ಹರಿ ಪರಾಯಣರೆಂದೊಡವರಿಗೆ
ಹರಹಿ ಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ (ವಿರಾಟ ಪರ್ವ, ೧೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ವಸುದೇವನು ಧರ್ಮರಾಯನಿಗೆ ಶ್ರೀಕೃಷ್ಣನ ಸ್ವಭಾವವನ್ನು ಹೀಗೆ ಹೇಳಿದನು, ಹೆಂಡಿರು ಮಕ್ಕಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ, ತನ್ನ ರಾಜ್ಯ ಸಂಪತ್ತುಗಳನ್ನು ಕುರಿತು ಚಿಂತಿಸುವುದಿಲ್ಲ, ಎಲ್ಲ ಸಂಪತ್ತನ್ನು ಬಗೆಯುವುದೇ ಇಲ್ಲ, ಹರಿಯನ್ನೇ ಹೆಚ್ಚಿನವನೆಂದು ನಂಬಿದವರಿಗೆ ತನ್ನನ್ನೇ ಕೊಟ್ಟುಕೊಂಡು ಬಿಡುವ ಭಕ್ತ ಕುಟುಂಬಿ ಈ ಕೃಷ್ಣ, ನನ್ನ ಮಗನ ನಡತೆಯು ಮನುಷ್ಯರ ನಡತೆಯಂತಿಲ್ಲ ಎಂದು ವಸುದೇವನು ಧರ್ಮಜನಿಗೆ ಹೇಳಿದನು.

ಅರ್ಥ:
ಅರಸಿ: ರಾಣಿ; ಬಗೆ: ರೀತಿ; ಮಕ್ಕಳು: ಸುತರು; ಸರಕು: ಗಮನ, ಲಕ್ಷ್ಯ; ದೇಶ: ರಾಷ್ಟ್ರ; ಕೋಶ: ಖಜಾನೆ, ಭಂಡಾರ; ಸಿರಿ: ಐಶ್ವರ್ಯ; ಗಣಿಸು: ಲೆಕ್ಕಹಾಕು; ಖಡ್ಡ: ತಿಳಿಗೇಡಿ, ಹೆಡ್ಡ; ಗಾಢ: ಹೆಚ್ಚಳ, ಅತಿಶಯ; ಗರ್ವ: ಸೊಕ್ಕು, ಹೆಮ್ಮೆ; ಹರಿ: ವಿಷ್ಣು; ಪರಾಯಣ: ಅತ್ಯಂತ ಆಸಕ್ತಿ ಹೊಂದಿದ, ತಲ್ಲೀನವಾದ; ಹರಹು: ವಿಸ್ತಾರ, ವೈಶಾಲ್ಯ; ಮಗ: ಸುತ; ಶೀಲ: ಗುಣ; ನರ: ಮನುಷ್ಯ; ಪರಿ: ರೀತಿ; ಅಳಿಯ: ಮಗಳ ಗಂಡ;

ಪದವಿಂಗಡಣೆ:
ಅರಸಿಯರ +ಬಗೆಗೊಳ್ಳ +ಮಕ್ಕಳ
ಸರಕು +ಮಾಡನು +ದೇಶ+ಕೋಶದ
ಸಿರಿಯ +ಗಣಿಸನು +ಖಡ್ಡಿಗೊಳ್ಳನು +ಗಾಢ+ಗರ್ವಿತರ
ಹರಿ+ ಪರಾಯಣರೆಂದೊಡ್+ಅವರಿಗೆ
ಹರಹಿ+ ಕೊಂಬನು +ಮಗನ +ಶೀಲವು
ನರರ+ ಪರಿಯಲ್ಲೆಂದನಾ+ ವಸುದೇವನ್+ಅಳಿಯಂಗೆ

ಅಚ್ಚರಿ:
(೧) ಕೃಷ್ಣನ ಗುಣ – ಹರಿ ಪರಾಯಣರೆಂದೊಡವರಿಗೆಹರಹಿ ಕೊಂಬನು

ಪದ್ಯ ೨೨: ದ್ವಾರಕೆಯನ್ನು ಅರ್ಜುನನು ಹೇಗೆ ಹೊಗಳಿದ?

ಪರಮ ನಾರಾಯಣ ಪರಾಯಣ
ರಿರಲು ಪರತರವೆಂದು ಮುರಹರ
ಬರೆದ ಠಾವಿದು ಮುಕ್ತಿಯಿಲ್ಲಿಯೆ ಕರತಳಾಮಲಕ
ಭರಿತ ಬೊಮ್ಮದ ಸುತ್ತು ಗೊಣಸನು
ಸರಿದ ಠಾವಿದು ತರ್ಕತಂತ್ರದ
ತರದ ಯುಕುತಿಯ ತೊಳಸುಗೊಳ್ಳದ ಠಾವಲಾಯೆಂದ (ಉದ್ಯೋಗ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ನಾರಾಯಣನೇ ಶ್ರೇಷ್ಠನೆಂದು ತಿಳಿದವರು ನಾರಾಯಣನು ಇರುವ ಜಾಗವೇ ಅತಿ ಶ್ರೇಷ್ಠವಾದುದು ಎಂದು ವಿಷ್ಣು ಬರೆದ ಜಾಗವಿದು ಎಂದು ಕೆಲರು ಹೇಳುತ್ತಾರೆ. ಇಲ್ಲಿ ಮುಕ್ತಿಯು ಅಂಗೈಯಲ್ಲಿರುವ ನಲ್ಲಿಕಾಯಿಯ ಹಾಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಎಲ್ಲೆಲ್ಲಿಯೂ ತುಂಬಿರುವ ಬ್ರಹ್ಮದ ಸುತ್ತ ಕೊಂಡಿಯನ್ನು ಮುರಿದ ಕ್ಷೇತ್ರವಿದು. ತರ್ಕ, ತಂತ್ರಗಳ ಸಂಕೀರ್ಣವಾದಕ್ಕೆ ಸಿಕ್ಕದ ಮಹಾಪುಣ್ಯ ಕ್ಷೇತ್ರವಿದು ಎಂದು ಅರ್ಜುನನು ದ್ವಾರಕೆಯನ್ನು ಹೊಗಳಿದನು.

ಅರ್ಥ:
ಪರಮ: ಶ್ರೇಷ್ಠ; ಪರಾಯಣ:ಪ್ರಮುಖವಾದ ಉದ್ದೇಶ, ಪರಮಗುರಿ; ಪರತರ: ಶ್ರೇಷ್ಠ; ಮುರಹರ: ಕೃಷ್ಣ; ಬರೆದ: ಲಿಖಿಸು; ಠಾವು: ನಾಡು; ಮುಕ್ತಿ:ಬಿಡುಗಡೆ; ಕರ: ಕೈ, ಹಸ್ತ; ಆಮಲಕ: ನಲ್ಲಿಕಾಯಿ; ಭರಿತ: ತುಂಬಿದ; ಬೊಮ್ಮ: ಬ್ರಹ್ಮ; ಸುತ್ತು: ಆವರಿಸು; ಗೊಣಸು: ಕೊಂಡಿ; ಸರಿದ: ಹೋಗು, ಗಮಿಸು; ತರ್ಕ: ಊಹೆ, ಅನುಮಾನ; ತಂತ್ರ:ರಹಸ್ಯಮಯ ವಿದ್ಯೆ; ಯುಕುತಿ: ತರ್ಕಬದ್ಧವಾದ ವಾದಸರಣಿ; ತೊಳಸು:ಸುತ್ತಿ ತಿರುಗಿಸು;

ಪದವಿಂಗಡಣೆ:
ಪರಮ +ನಾರಾಯಣ +ಪರಾಯಣರ್
ಇರಲು +ಪರತರವೆಂದು +ಮುರಹರ
ಬರೆದ +ಠಾವಿದು +ಮುಕ್ತಿ+ಯಿಲ್ಲಿಯೆ +ಕರತಳಾಮಲಕ
ಭರಿತ +ಬೊಮ್ಮದ +ಸುತ್ತು +ಗೊಣಸನು
ಸರಿದ +ಠಾವಿದು +ತರ್ಕ +ತಂತ್ರದ
ತರದ+ ಯುಕುತಿಯ +ತೊಳಸುಗೊಳ್ಳದ+ ಠಾವಲಾಯೆಂದ

ಅಚ್ಚರಿ:
(೧) ಪರಮ, ಪರಾಯಣ, ಪರತರ – ‘ಪ’ ಕಾರದ ಪದ ಬಳಕೆ
(೨) ಠಾವು – ೩, ೫,೬ ಸಾಲಿನಲ್ಲಿ ಬಳಕೆ