ಪದ್ಯ ೧: ದುರ್ಯೋಧನನ ಸ್ಥಿತಿ ಹೇಗಿತ್ತು?

ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ (ಶಲ್ಯ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ನಿನ್ನ ಮಗನ ಸ್ಥಿತಿಯನ್ನು ಕೇಳು, ಮನಸ್ಸಿನಲ್ಲಿ ಕಳವಲ, ಹೊರಗೆ ನಗೆ, ಒಳಗೆ ನಡುಕ, ಹೊರಗೆ ದರ್ಪ. ಒಳಗೆ ಬೇಗೆ ಹೊರಗೆ ಮಹಾಗರ್ವ, ಸೋಲಿನ ಅಳುಕು ಒಳಗೆ ಮಹಾಪರಾಕ್ರಮದ ದರ್ಪ ಹೊರಗೆ ಎಂದು ಸಂಜಯನು ಹೇಳಿದನು.

ಅರ್ಥ:
ಒಳಗೆ: ಅಂತರ್ಯ; ಢಗೆ: ಕಾವು, ದಗೆ; ನಗೆ: ಸಂತಸ; ಹೊರಗೆ: ಆಚೆ; ಕಳವಳ: ಗೊಂದಲ; ನವಾಯಿ: ಠೀವಿ; ಡಿಳ್ಳ: ಅಂಜಿಕೆ; ಸಘಾಡ: ವೇಗ, ರಭಸ; ಮದ: ಅಹಂಕಾರ; ಬೇಗೆ: ಬೆಂಕಿ, ಕಿಚ್ಚು; ಪರಾಭವ: ಸೋಲು; ಕಂದು:ಕಳಾಹೀನ; ಕಡುಹು: ಸಾಹಸ, ಹುರುಪು; ಕಲಿ: ಶೂರ; ಹಳಹಳಿ: ರಭಸ, ತೀವ್ರತೆ; ಮಹೀಶ: ರಾಜ; ಹದ: ಸ್ಥಿತಿ; ನಂದನ: ಮಗ;

ಪದವಿಂಗಡಣೆ:
ಒಳಗೆ +ಢಗೆ +ನಗೆ +ಹೊರಗೆ+ ಕಳವಳವ್
ಒಳಗೆ +ಹೊರಗೆ +ನವಾಯಿ +ಡಿಳ್ಳಸವ್
ಒಳಗೆ +ಹೊರಗೆ +ಸಘಾಡ+ಮದ +ಬಲುಬೇಗೆ+ಒಳಗೊಳಗೆ
ಬಲುಹು +ಹೊರಗೆ +ಪರಾಭವದ+ ಕಂದ್
ಒಳಗೆ +ಕಡುಹಿನ +ಕಲಿತನದ +ಹಳ
ಹಳಿಕೆ +ಹೊರಗೆ +ಮಹೀಶ +ಹದನಿದು +ನಿನ್ನ +ನಂದನನ

ಅಚ್ಚರಿ:
(೧) ಒಳಗೆ ಹೊರಗೆ ಪದಗಳ ಬಳಕೆ
(೨) ಒಳಗೆ – ೧-೩, ೫ ಸಾಲಿನ ಮೊದಲ ಪದ

ಪದ್ಯ ೨೫: ಅರ್ಜುನನಿಗೆ ಯಾರು ಧೈರ್ಯ ತುಂಬಿದರು?

ಇತ್ತ ರವಿರಶ್ಮಿಗಳು ನೆರೆ ಕೆಂ
ಪೊತ್ತಿದವು ಸೈಂಧವನನೀಗೊ
ತ್ತೊತ್ತೆಯಲಿ ನೆಲೆ ಕಾಣಬಾರದು ಸಾಕು ದುಮ್ಮಾನ
ಇತ್ತ ನಿಜ ಭಾಷೆಗೆ ಪರಾಭವ
ಹತ್ತಿರಾಯಿತು ನರ ನಿದಾನಿಸೆ
ನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ (ದ್ರೋಣ ಪರ್ವ, ೧೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನಿಗೆ, ಇತ್ತ ಸೂರ್ಯ ಕಿರಣಗಳು ಕೆಂಪಾದವು. ಈ ಸೈನ್ಯದ ದಟ್ಟಣೆಯಲ್ಲಿ ಸೈಂಧವನೆಲ್ಲಿರುವನೋ ಕಾಣಿಸುತ್ತಿಲ್ಲ. ನೀನು ಮಾಡಿದ ಪ್ರತಿಜ್ಞೆಗೆ ಸೋಲು ಹತ್ತಿರವಾಗುತ್ತಿದೆ, ಅರ್ಜುನ ಸೈರಿಸು ಧೃತಿಗೆಡಬೇಡ ಎನ್ನುತ್ತಾ ರಥವನ್ನು ಸೈಂಧವನಿದ್ದ ಕೊನೆಯ ವ್ಯೂಹಕ್ಕೆ ಅತಿವೇಗದಿಂದ ನಡೆಸಿದನು.

ಅರ್ಥ:
ರವಿ: ಸೂರ್ಯ; ರಶ್ಮಿ: ಕಿರಣ, ಕಾಂತಿ; ನೆರೆ: ಗುಂಪು; ಕೆಂಪು: ಅರುಣ ಬಣ್ಣ; ಒತ್ತು: ಲೇಪಿಸು, ಮುತ್ತು, ದಟ್ಟಣೆ; ನೆಲೆ: ಸ್ಥಾನ; ಕಾಣು: ತೋರು; ಸಾಕು: ನಿಲ್ಲು; ದುಮ್ಮಾನ: ದುಃಖ; ನಿಜ: ತನ್ನ; ಭಾಷೆ: ನುಡಿ; ಪರಾಭವ: ಸೋಲು; ಹತ್ತಿರ: ಸಮೀಪ; ನರ: ಅರ್ಜುನ; ನಿದಾನಿಸು: ಸೈರಿಸು; ಮುರರಿಪು: ಕೃಷ್ಣ; ರಥ: ಬಂಡಿ; ಬಿಡು: ತೊರೆ; ಕಡೆ: ಕೊನೆ; ಮೋಹರ: ಯುದ್ಧ;

ಪದವಿಂಗಡಣೆ:
ಇತ್ತ+ ರವಿರಶ್ಮಿಗಳು +ನೆರೆ +ಕೆಂಪ್
ಒತ್ತಿದವು +ಸೈಂಧವನನೀಗ್
ಒತ್ತೊತ್ತೆಯಲಿ +ನೆಲೆ +ಕಾಣಬಾರದು +ಸಾಕು +ದುಮ್ಮಾನ
ಇತ್ತ +ನಿಜ +ಭಾಷೆಗೆ +ಪರಾಭವ
ಹತ್ತಿರಾಯಿತು +ನರ+ ನಿದಾನಿಸ್
ಎನುತ್ತ +ಮುರರಿಪು +ರಥವ +ಬಿಟ್ಟನು +ಕಡೆಯ +ಮೋಹರಕೆ

ಅಚ್ಚರಿ:
(೧) ಸಂಜೆಯಾಯಿತೆಂದು ವಿವರಿಸುವ ಪರಿ – ರವಿರಶ್ಮಿಗಳು ನೆರೆ ಕೆಂಪೊತ್ತಿದವು

ಪದ್ಯ ೩: ಕೃಷ್ಣ ನಾಮದ ಮಹಿಮೆ ಎಂತಹುದು?

ಆ ಮಹಾಸತಿ ಶಿವ ಶಿವಾ ಲ
ಜ್ಜಾಮಹೋದಧಿ ಬತ್ತುವುದೆ ನಿ
ರ್ನಾಮರೇ ಕುಂತೀಸುತರು ಪಥ್ಯರೆ ಪರಾಭವಕೆ
ಆ ಮುಕುಂದನ ದಿವ್ಯ ನಾಮ
ಪ್ರೇಮ ರಸಕಿದು ಸಿದ್ಧಿಯೆಂದೆನ
ಲಾಮಹಾಸ್ಥಾನದಲಿ ಬೆಳೆದುದು ಬೆರಗು ಬಿಂಕದಲಿ (ಸಭಾ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಶಿವ ಶಿವಾ ಮಹಾದೇವ, ಆ ಮಹಾ ಪತಿವ್ರತೆಯಾದ ದ್ರೌಪದಿಯ ಮಾನವು ಬತ್ತಿಹೋದೀತೆ? ಪಾಂಡವರು ಸೋಲನ್ನೊಪ್ಪಿ ನಿರ್ನಾಮರಾದರೇ? ಆ ಕೃಷ್ಣನ ದಿವ್ಯನಾಮದ ಮೇಲಿರುವ ಭಕ್ತಿಗೆ ಇದು ಸಿದ್ಧಿಯೆಂದುಕೊಂಡು ಆಸ್ಥಾನದಲ್ಲಿದ್ದವರ ಆಶ್ಚರ್ಯವು ಹೆಚ್ಚಿತು.

ಅರ್ಥ:
ಸತಿ: ಹೆಂಡತಿ; ಮಹಾಸತಿ: ಪತಿವ್ರತೆ; ಲಜ್ವ: ಮಾನ; ಮಹೋದಧಿ: ಮಹಾಸಾಗರ; ಬತ್ತು: ಬರಡಾಗು; ನಿರ್ನಾಮ: ನಾಶ, ಅಳಿವು; ಸುತ: ಮಗ; ಪಥ್ಯ: ಯೋಗ್ಯ, ಹಿತ; ಪರಾಭವ: ಸೋಲು; ದಿವ್ಯ: ಶ್ರೇಷ್ಠ; ನಾಮ: ಹೆಸರು; ಪ್ರೇಮ: ಒಲವು; ರಸ: ಸಾರ; ಸಿದ್ಧಿ: ಮೋಕ್ಷ, ಮುಕ್ತಿ; ಆಸ್ಥಾನ; ಓಲಗ; ಬೆಳೆ: ಅಭಿವೃದ್ಧಿ, ಜರಗು; ಬೆರಗು: ಆಶ್ಚರ್ಯ; ಬಿಂಕ: ಗರ್ವ, ಜಂಬ;

ಪದವಿಂಗಡಣೆ:
ಆ+ ಮಹಾಸತಿ +ಶಿವ+ ಶಿವಾ +ಲ
ಜ್ಜಾ+ಮಹ+ಉದಧಿ+ ಬತ್ತುವುದೆ +ನಿ
ರ್ನಾಮರೇ +ಕುಂತೀಸುತರು+ ಪಥ್ಯರೆ +ಪರಾಭವಕೆ
ಆ +ಮುಕುಂದನ +ದಿವ್ಯ +ನಾಮ
ಪ್ರೇಮ +ರಸಕಿದು +ಸಿದ್ಧಿಯೆಂದೆನಲ್
ಆ+ಮಹ+ಆಸ್ಥಾನದಲಿ +ಬೆಳೆದುದು +ಬೆರಗು +ಬಿಂಕದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೆಳೆದುದು ಬೆರಗು ಬಿಂಕದಲಿ
(೨) ಆ – ಮಹಾಸತಿ, ಮುಕುಂದ, ಮಹಾಸ್ಥಾನ – ಪದಗಳ ಮುಂದೆ ಬಳಸಿದ ಸ್ವರಾಕ್ಷರ