ಪದ್ಯ ೧೮: ಸುಪ್ರತೀಕ ಗಜವು ಹೇಗೆ ಶತ್ರುಸೈನ್ಯವನ್ನು ನಾಶಮಾಡಿತು?

ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಂದರ ಗಿರಿಯು ಸಮುದ್ರದ ತೆರೆಗಳನ್ನು ನಿಗ್ರಹಿಸಿದಂತೆ ಶತ್ರುಸೈನ್ಯವನ್ನು ಆ ಗಜವು ಅರೆದು ಹಾಕಿತು. ಸೈನ್ಯವು ನುಗ್ಗು ನುಸಿಯಾಯಿತು ಚತುರಂಗ ಸೈನಯ್ವು ಚದುರಿ ಓಡಿತು, ರಾಜ, ಎಷ್ಟು ಶತ್ರುಸೈನ್ಯವು ನಾಶವಾಯಿತೋ ಯಾರು ಬಲ್ಲರು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮುರಿ: ಸೀಳು; ಗಿರಿ: ಬೆಟ್ಟ; ಪಯೋಧಿ: ಸಮುದ್ರ; ತೆರೆ: ಅಲೆ; ತುಳಿ: ಮೆಟ್ಟು; ರಿಪು: ವೈರಿ; ಮೋಹರ: ಯುದ್ಧ; ಅರೆ: ನುಣ್ಣಗೆ ಮಾಡು; ನುಗ್ಗು: ತಳ್ಳು; ನುಸಿ: ಹುಡಿ, ಧೂಳು; ಅಖಿಳ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ತೆರಳು: ಹೊರದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಹೊರಳು:ತಿರುವು, ಬಾಗು; ಒಡೆ: ಸೀಳು, ಬಿರಿ; ಗಜ: ಆನೆ; ಆವಳಿ: ಸಾಲು; ಜರಿ: ಓಡಿಹೋಗು, ಪಲಾಯನ ಮಾಡು, ಅಳುಕು; ಅಳಿ: ನಾಶ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುರಿದು +ಮಂದರ+ಗಿರಿ +ಪಯೋಧಿಯ
ತೆರೆಗಳನು +ತುಳಿವಂತೆ +ರಿಪು +ಮೋ
ಹರವನ್+ಅರೆದುದು +ನುಗ್ಗು+ನುಸಿಯಾಯ್ತ್+ಅಖಿಳ +ತಳತಂತ್ರ
ತೆರಳಿದರು +ರಾವುತರು +ರಥಿಕರು
ಹೊರಳಿ+ಒಡೆದುದು +ಗಜದಗ್ + ಆವಳಿ
ಜರಿದುದ್+ಅಳಿದುದನ್+ಆರು +ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುರಿದು ಮಂದರಗಿರಿ ಪಯೋಧಿಯ ತೆರೆಗಳನು ತುಳಿವಂತೆ
(೨) ನುಗ್ಗುನುಸಿ, ತುಳಿ, ಒಡೆ, ಜರಿ, ಅಳಿ – ನಾಶವನ್ನು ಸೂಚಿಸುವ ಪದಗಳ ಬಳಕೆ

ಪದ್ಯ ೭೩: ಮಾತಲಿಯು ಅರ್ಜುನನಿಗೆ ಏನು ವಿವರಿಸಿದನು?

ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೩ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ, ಇಂದ್ರನ ಸಾರಥಿಯಾದ ಮಾತಲಿಯು ಅರ್ಜುನನಿಗೆ ಭೂಮಿ, ವಿಶ್ವಕೋಶ, ಪರ್ವತಗಳು, ಸಮುದ್ರಗಳು ಎಲ್ಲವನ್ನೂ ವಿವರಿಸಿದನು. ಇವು ಕುಲಪರ್ವತಗಳು, ಇವು ಸಮುದ್ರಗಳು, ಇವು ಮಹಾದ್ವೀಪಗಳು, ಇದು ಮಾನವರ ಭೂಮಿ, ಇನ್ನು ಇತ್ತ ಸ್ವರ್ಗವನ್ನು ನೋಡು ಎಂದು ತೋರಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಇಂದ್ರ: ಶಕ್ರ; ಸಾರಥಿ: ರಥವನ್ನು ಓಡಿಸುವವ; ವಿವರಿಸು: ಹೇಳು; ಭೂಮಿ: ಧರಿತ್ರಿ; ಭುವನ: ಜಗತ್ತು, ಪ್ರಪಂಚ; ಸನ್ನಿವೇಶ: ಪರಿಸರ, ಸುತ್ತುಮುತ್ತ; ಅದ್ರಿ: ಬೆಟ್ಟ; ಜಲಧಿ: ಸಾಗರ; ಕುಲಾದ್ರಿ: ಬೆಟ್ಟ; ಪಯೋಧಿ: ಸಾಗರ; ಮಹಾ: ದೊಡ್ಡ; ದ್ವೀಪ: ನೀರಿನಿಂದ ಆವರಿಸಿರುವ ಭೂಮಿ; ಮಾನವ: ಮನುಷ್ಯ; ಧರಣಿ: ಭೂಮಿ; ಸ್ವರ್ಗ: ನಾಕ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನಿಪತಿ +ಕೇಳ್+ಇಂದ್ರ +ಸಾರಥಿ
ವಿವರಿಸಿದನ್+ಅರ್ಜುನಗೆ +ಭೂಮಿಯ
ಭುವನಕೋಶದ +ಸನ್ನಿವೇಶವನ್+ಅದ್ರಿ +ಜಲಧಿಗಳ
ಇವು +ಕುಲಾದ್ರಿಗಳ್+ಇವು +ಪಯೋಧಿಗಳ್
ಇವು +ಮಹಾ+ದ್ವೀಪಂಗಳ್+ಇವು+ ಮಾ
ನವರ +ಧರಣೀ +ಸ್ವರ್ಗ +ಮೇಲಿನ್ನಿತ್ತ +ನೋಡೆಂದ

ಅಚ್ಚರಿ:
(೧) ಭೂಮಿ, ಧರಣೀ, ಅವನಿ; ಜಲಧಿ, ಪಯೋಧಿ – ಸಮನಾರ್ಥಕ ಪದಗಳು

ಪದ್ಯ ೪೨: ಇಬ್ಬರ ಮಲ್ಲಯುದ್ಧದ ರೀತಿ ಹೇಗಿತ್ತು?

ಸೂಳವಿಸಿದರು ಭುಜಶಿಖರ ನಿ
ಸ್ಸಾಳವನು ನೆಲಕುಣಿಯೆ ದಿಕ್ಕಿನ
ಮೂಲೆ ಬಿರಿಯೆ ಪಯೋಧಿಗಳಲಿ ಪಯೋಧಿ ಪಲ್ಲಟಿಸೆ
ಘೀಳಿಡಲು ಕಿವಿಗಳಲಿ ಸೇನಾ
ಜಾಳವೆರಡರೊಳುಭಯದಿಗು ಶುಂ
ಡಾಲ ಕೈಯಿಕ್ಕುವವೊಲಿವರೊತ್ತಿದರು ತೋಳ್ಗಳಲಿ (ಕರ್ಣ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭುಜವನ್ನು ತಟ್ಟಿದಾಗ ಭೇರಿಯ ಬಡಿತದ ಸದ್ದುಂಟಾಗಿ ದಿಕ್ಕುಗಳು ಬಿರಿದವು. ನೆಲ ಕುಣಿಯಿತು, ಸಮುದ್ರ ಸಮುದ್ರಗಳು ಡಿಕ್ಕಿ ಹೊಡೆದವು, ಕಿವಿಗಳು ಘೀಳಿಟ್ಟವು. ದಿಗ್ಗಜಗಳು ಸೊಂಡಿಲಿನಿಂದ ಒಂದನ್ನೊಂದು ದಬ್ಬುವಂತೆ ತೋಳುಗಳಿಂದ ಒತ್ತಿದರು.

ಅರ್ಥ:
ಸೂಳೈಸು: ಧ್ವನಿಮಾಡು, ಹೊಡೆ; ಭುಜ: ಬಾಹು; ಶಿಖರ: ತುದಿ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ನೆಲ: ಭೂಮಿ; ಕುಣಿ: ಕುಣಿತ, ನೃತ್ಯ; ದಿಕ್ಕು: ದಿಶೆ; ಮೂಲೆ:ಕೊನೆ; ಬಿರಿ: ಒಡೆ, ಬಿರುಕುಂಟಾಗು; ಪಯೋಧಿ: ಸಮುದ್ರ; ಪಲ್ಲಟಿಸು: ಅಲ್ಲಾಡು; ಘೀಳಿಡು: ಕಿರುಚು, ಗಟ್ಟಿಯಾಗಿ ಕೂಗು; ಕಿವಿ: ಕರಣ; ಸೇನಾಜಾಳ: ಸೈನ್ಯ; ಉಭಯ: ಎರಡೂ ಕಡೆ; ದಿಗು: ದಿಕ್ಕು; ಶುಂಡಾಲ: ಸೊಂಡಿಲುಳ್ಳದ್ದು, ಆನೆ; ಕೈಯಿಕ್ಕು: ಹೋರಾಡು; ಒತ್ತು: ತಳ್ಳು; ತೋಳು: ಬಾಹು, ಭುಜ;

ಪದವಿಂಗಡಣೆ:
ಸೂಳವಿಸಿದರು+ ಭುಜ+ಶಿಖರ+ ನಿ
ಸ್ಸಾಳವನು +ನೆಲಕುಣಿಯೆ +ದಿಕ್ಕಿನ
ಮೂಲೆ +ಬಿರಿಯೆ+ ಪಯೋಧಿಗಳಲಿ+ ಪಯೋಧಿ +ಪಲ್ಲಟಿಸೆ
ಘೀಳಿಡಲು+ ಕಿವಿಗಳಲಿ+ ಸೇನಾ
ಜಾಳವ್+ಎರಡರೊಳ್+ಉಭಯ+ದಿಗು +ಶುಂ
ಡಾಲ +ಕೈಯಿಕ್ಕುವವೊಲ್+ಇವರ್+ಒತ್ತಿದರು +ತೋಳ್ಗಳಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೇನಾಜಾಳವೆರಡರೊಳುಭಯದಿಗು ಶುಂ
ಡಾಲ ಕೈಯಿಕ್ಕುವವೊಲಿವರೊತ್ತಿದರು ತೋಳ್ಗಳಲಿ