ಪದ್ಯ ೮: ಭೀಮ ದುರ್ಯೋಧನರ ಯುದ್ಧದ ಗತಿ ಹೇಗಿತ್ತು?

ಶ್ವಾಸದಲಿ ಕಿಡಿಸಹಿತ ಕರ್ಬೊಗೆ
ಸೂಸಿದವು ಕಣ್ಣಾಲಿಗಳು ಕ
ಟ್ಟಾಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು
ರೋಷ ಮಿಗಲೌಡೊತ್ತಿ ಬಹಳಾ
ಭ್ಯಾಸಿಗಳು ಡಾವರಿಸಿದರು ಡೊ
ಳ್ಳಾಸವೋ ರಿಪುಸೇನೆ ಕಾಣದು ಚಿತ್ರಪಯಗತಿಯ (ಗದಾ ಪರ್ವ, ೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಉಸಿರಿನಲ್ಲಿ ಕಪ್ಪುಹೊಗೆಯೊಡನೆ ಕಿಡಿಗಳು ಹೊರಬರುತ್ತಿದ್ದವು. ಹುಬ್ಬುಗಳು ಬಿಇದು ಕಣ್ಣುಗಳು ಕಡುಗೆಂಪೇರಿದ್ದವು. ರೋಷವೇರಿ ತುಟಿಕಚ್ಚಿ, ಮಹಾ ಚತುರರಾದ ಗದಾಯುದ್ಧದಲ್ಲಿ ಅತ್ಯಂತ ಶ್ರೇಷ್ಠರಾದ ಇಬ್ಬರ ಗದೆಗಳ ಹೊಡೆತವನ್ನು ಕಂಡರೂ, ಪಾದಗತಿ ಕಾಣಿಸುತ್ತಿರಲಿಲ್ಲ.

ಅರ್ಥ:
ಶ್ವಾಸ: ಉಸಿರು; ಕಿಡಿ: ಬೆಂಕಿ; ಸಹಿತ: ಜೊತೆ; ಕರ್ಬೊಗೆ: ಕಪ್ಪಾದ ಹೊಗೆ; ಸೂಸು: ಹೊರಹೊಮ್ಮು; ಕಣ್ಣಾಲಿ: ಕಣ್ಣಿನ ಅಂಉ; ಕಟ್ಟಾಸುರ: ಅತ್ಯಂತ ಭಯಂಕರ; ಏರು: ಹೆಚ್ಚಾಗು; ಬಿಗುಹೇರು: ಬಿಗಿಹೆಚ್ಚು; ಹುಬ್ಬು: ಕಣ್ಣಿನ ಮೇಲಿನ ರೋಮ; ರೋಷ: ಕೋಪ; ಮಿಗಲು: ಹೆಚ್ಚಾಗು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಬಹಳ: ತುಂಬ; ಅಭ್ಯಾಸಿ: ವಿದ್ಯಾರ್ಥಿ; ಡಾವರಿಸು: ತಿವಿ, ನೋಯಿಸು; ಡೊಳ್ಳಾಸ: ಮೋಸ, ಕಪಟ; ರಿಪುಸೇನೆ: ವೈರಿ ಸೈನ್ಯ; ಕಾಣು: ತೋರು; ಪಯಗತಿ: ಪಾದದ ವೇಗ;

ಪದವಿಂಗಡಣೆ:
ಶ್ವಾಸದಲಿ+ ಕಿಡಿಸಹಿತ +ಕರ್ಬೊಗೆ
ಸೂಸಿದವು +ಕಣ್ಣಾಲಿಗಳು +ಕ
ಟ್ಟಾಸುರದಿ+ ಕೆಂಪೇರಿದವು +ಬಿಗುಹೇರಿ +ಹುಬ್ಬುಗಳು
ರೋಷ +ಮಿಗಲ್+ಔಡೊತ್ತಿ+ ಬಹಳ
ಅಭ್ಯಾಸಿಗಳು +ಡಾವರಿಸಿದರು +ಡೊ
ಳ್ಳಾಸವೋ +ರಿಪುಸೇನೆ +ಕಾಣದು +ಚಿತ್ರ+ಪಯಗತಿಯ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕಿಡಿಸಹಿತ ಕರ್ಬೊಗೆಸೂಸಿದವು ಕಣ್ಣಾಲಿಗಳು ಕಟ್ಟಾಸುರದಿ ಕೆಂಪೇರಿದವು

ಪದ್ಯ ೩೦: ಭೀಮ ದುರ್ಯೋಧನರ ಯುದ್ಧ ಕೌಶಲ್ಯ ಹೇಗಿತ್ತು?

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಲವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ (ಗದಾ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವರ ಜಾಣತನ ಕೆಲಸಕ್ಕೆ ಬಾರದೆ ಹೋಯಿತು. ಹೊಡೆತದ ತೀಕ್ಷ್ಣತೆಯು ನೋಡುತ್ತಿದ್ದಂತೆ ವ್ಯರ್ಥವಾಯಿತು. ಕಾಲಿನ ಗತಿಯ ವಿನ್ಯಾಸ ಕಣದಲ್ಲಿ ಧೂಳನ್ನೆಬ್ಬಿಸಿತೇ ಹೊರತು ವಿರೋಧಿಯನ್ನು ಬಾಗಿಸಲಿಲ್ಲ. ಶಕ್ತಿಯು ಕುಂದಿತು. ಆಯಾಸ ಹೆಚ್ಚಾಯಿತು. ಗದೆಗಳು ತಾಕಿ ಕಿಡಿಯೆದ್ದವು. ಅವರ ಕೌಶಲ್ಯ ಅತ್ಯುತ್ತತವಾಗಿತ್ತು.

ಅರ್ಥ:
ಜಾಣು: ಜಾಣತನ, ಬುದ್ಧಿವಂತ; ಜಗುಳು: ಜಾರು; ಹೊಯ್ಲು: ಹೊಡೆ; ಮೊನೆ: ಮುಖ; ಮುಂಗಾಣಿಕೆ: ಮುಂದಿನ ನೋಟ; ಲಟಕಟ: ಉದ್ರೇಕಗೊಳ್ಳು; ಬರಿ: ಕೇವಲ; ರೇಣು: ಧೂಳು, ಹುಡಿ; ಜಾಡ್ಯ: ಚಳಿ, ಸೋಮಾರಿತನ; ಪಡಪು: ಹೊಂದು, ಪಡೆ; ಪಯ: ಪಾದ; ಗತಿ: ಚಲನೆ, ವೇಗ; ತ್ರಾಣ: ಕಾಪು, ರಕ್ಷಣೆ, ಶಕ್ತಿ, ಬಲ; ತಳವೆಳ: ಬೆರಗು, ಆಶ್ಚರ್ಯ; ಶ್ರವ: ಧ್ವನಿ; ಬಿನ್ನಾಣ: ಕೌಶಲ್ಯ; ಮೇಲೆ: ಹೆಚ್ಚು; ಕುಶಲ: ಚಾತುರ್ಯ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾದು; ಗದೆ: ಮುದ್ಗರ; ಕಿಡಿ: ಬೆಂಕಿ; ತಿವಿ: ಚುಚ್ಚು;

ಪದವಿಂಗಡಣೆ:
ಜಾಣು +ಜಗುಳಿತು +ಹೊಯ್ಲ +ಮೊನೆ +ಮುಂ
ಗಾಣಿಕೆಗೆ+ ಲಟಕಟಿಸಿದುದು +ಬರಿ
ರೇಣುಜನನದ +ಜಾಡ್ಯವೇ+ ಪಡಪಾಯ್ತು+ ಪಯಗತಿಗೆ
ತ್ರಾಣ+ ತಲವೆಳಗಾಯ್ತು+ ಶ್ರವ+ ಬಿ
ನ್ನಾಣ +ಮೇಲಾಯಿತ್ತು+ ಕುಶಲದ
ಕೇಣದಲಿ +ಕಾದಿದರು +ಗದೆಗಳ +ಕಿಡಿಯ +ಕಿಡಿ +ತಿವಿಯೆ

ಅಚ್ಚರಿ:
(೧) ಧೂಳೇ ಹೆಚ್ಚಿತ್ತು ಎಂದು ಹೇಳಲು – ಬರಿ ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
(೨) ಕ ವರ್ಗದ ಪದಗಳ ಸಾಲು – ಕುಶಲದ ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ

ಪದ್ಯ ೧೫: ಭೀಮನು ದುರ್ಯೋಧನನ್ನು ಹೇಗೆ ಹಂಗಿಸಿದನು?

ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಹುದೆಂದನಾ ಭೀಮ (ಗದಾ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಓಡಿ ಹೋಗಿ ನಿರಿನಲ್ಲಿ ಮುಳುಗಿದವರಿಗೆ ನಾಚಿಕೆಯುಂಟೇ? ರಥವನ್ನಿಳಿದ ಹೇಡಿ ಕಾಲಾಳಿಗೆ ಪಾದ ಚಲನೆಯ ಓರೆಪೋರೆಗಳೇ? ಪರಿವಾರ ನೋಡುತ್ತಲೇ ಇದೆ, ನೀನು ಯುದ್ಧಚಾತುರ್ಯವನ್ನು ತೋರಿಸು, ಇಲ್ಲದಿದ್ದರೆ ಬರಿಯ ಕಂಠವೇ ಬತ್ತಳಿಕೆ, ಮಾತೇ ಯುದ್ಧವಾಗುತ್ತದೆ ಎಂದು ಭೀಮನು ನುಡಿದನು.

ಅರ್ಥ:
ಓಡು: ಧಾವಿಸು; ಜಲ: ನೀರು; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಖೋಡಿ: ದುರುಳತನ, ನೀಚತನ; ರಥ: ಬಂಡಿ; ರಣ: ಯುದ್ಧರಂಗ; ಖೇಡ: ಹೆದರಿದವನು; ಕಾಲಾಳು: ಸೈನಿಕ; ಪಯಗತಿ: ಓಡುವ ವೇಗ; ಓರೆಪೋರೆ: ವಕ್ರ; ನೋಡು: ವೀಕ್ಷಿಸು; ಪರಿವಾರ: ಬಂಧುಜನ; ಕೈಮಾಡು: ಹೋರಾಡು, ಹೊಡಿ; ತೋರು: ಪ್ರದರ್ಶಿಸು; ಬರಿಯ: ಕೇವಲ; ಕಂಠ: ಗಂಟಲು; ಮೂಡಿಗೆ: ಬಾಣಗಳನ್ನಿಡುವ ಚೀಲ, ಬತ್ತಳಿಕೆ; ಡಾವರ: ಬರಗಾಲ; ಲೇಹ: ನೆಕ್ಕುವುದು;

ಪದವಿಂಗಡಣೆ:
ಓಡಿ+ ಜಲದಲಿ +ಮುಳುಗಿದವರಿಗೆ
ಖೋಡಿಯುಂಟೇ +ರಥವಿಳಿದ +ರಣ
ಖೇಡ +ಕಾಲಾಳಿಂಗೆ +ಪಯಗತಿ+ಓರೆಪೋರೆಗಳೆ
ನೋಡುತಿದೆ +ಪರಿವಾರ +ನೀ +ಕೈ
ಮಾಡಿ +ತೋರಾ +ಬರಿಯ +ಕಂಠದ
ಮೂಡಿಗೆಯ +ಡಾವರದ +ಲೇಹುದೆಂದನಾ +ಭೀಮ

ಅಚ್ಚರಿ:
(೧) ಖೋಡಿ, ಖೇಡ – ಖ ಕಾರದ ಪದಗಲ ಬಳಕೆ
(೨) ಹಂಗಿಸುವ ಪರಿ – ನೀ ಕೈಮಾಡಿ ತೋರಾ ಬರಿಯ ಕಂಠದ ಮೂಡಿಗೆಯ ಡಾವರದ ಲೇಹುದೆಂದನಾ ಭೀಮ