ಪದ್ಯ ೮೩: ಸುಗಂಧದ ಓಕುಳಿಯ ಪ್ರಭಾವ ಹೇಗಿತ್ತು?

ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನವ
ಪರಮಸೌರಭಕಲಸಿಕೊಂಡುದು ಸಕಲ ಸುರಕುಲವ (ವಿರಾಟ ಪರ್ವ, ೧೧ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಂಧ, ಕಸ್ತೂರಿ, ಪನ್ನೀರುಗಳ ಪ್ರವಾಹದಿಂದ ಭೂಮಿಯು ನೆನೆಯಿತು. ದಿಕ್ಕುಗಳು ಪರಿಮಳಭರಿತವಾದವು. ತುಂತುರಿನಿಂದ ಸಮುದ್ರವೂ ಕಂಪಾಯಿತು. ಸೂರ್ಯನೂ ಸುಗಂಧ ಭರಿತವಾದನೆಂದ ಮೇಲೆ ಗಾಳಿಯಲ್ಲಿ ಸುಗಂಧ ತುಂಬಿದುದು ಆಶ್ಚರ್ಯವೇನಲ್ಲ. ಓಕುಳಿಯ ಸುಗಂಧದಿಂದ ದೇವತೆಗಳೂ ತೃಪ್ತರಾದರು.

ಅರ್ಥ:
ಧರಣಿ: ಭೂಮಿ; ನೆನೆ: ಒದ್ದೆಯಾಗು; ಗಂಧ: ಚಂದನ; ರಸ: ಸಾರ; ಕತ್ತುರಿ: ಕಸ್ತೂರಿ; ಪನ್ನೀರು: ಸುಗಂಧಯುಕ್ತವಾದ ನೀರು; ಹೊನಲು: ಪ್ರವಾಹ; ಒಡೆ: ಸೀಳು, ಬಿರಿ; ಎರಚು: ಚಿಮುಕಿಸು, ಚೆಲ್ಲು; ದೆಸೆ: ದಿಕ್ಕು; ಕಂಪು: ಸುಗಂಧ; ಅಂಬುಧಿ: ಸಾಗರ; ನವ: ಹೊಸ; ತುಷಾರ: ಹಿಮ, ಮಂಜು; ತರಣಿ: ಸೂರ್ಯ, ನೇಸರು; ಪರಿಮಳ: ಸುಗಂಧ; ಪವನ: ವಾಯು; ಸುರಭಿ: ಸುಗಂಧ; ಅಚ್ಚರಿ: ಆಶ್ಚರ್ಯ; ಗಗನ: ಆಗಸ; ಪರಮ: ಶ್ರೇಷ್ಠ; ಸೌರಭ: ಸುವಾಸನೆ; ಕಲಸು: ಬೆರಸು; ಸಕಲ: ಎಲ್ಲಾ; ಸುರಕುಲ: ದೇವತೆಗಳ ವಂಶ;

ಪದವಿಂಗಡಣೆ:
ಧರಣಿ +ನೆನೆದುದು +ಗಂಧ+ರಸ+ ಕ
ತ್ತುರಿಯ +ಪನ್ನೀರುಗಳ +ಹೊನಲ್+ಒಡೆವ್
ಎರಸಿ+ ದೆಸೆ +ಕಂಪಿಟ್ಟುದ್+ಅಂಬುಧಿ +ನವ +ತುಷಾರದಲಿ
ತರಣಿ +ಪರಿಮಳಿಸಿದನು +ಪವನನ
ಸುರಭಿತನವ್+ಅಚ್ಚರಿಯೆ +ಗಗನವ
ಪರಮ+ಸೌರಭ+ಕಲಸಿಕೊಂಡುದು +ಸಕಲ+ ಸುರಕುಲವ

ಅಚ್ಚರಿ:
(೧) ಉತ್ಪ್ರೇಕ್ಷೆ – ಪರಿಮಳದಿಂದ ಸೂರ್ಯನು ಕಂಪಿಸಿದನು – ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ
(೨) ಸಾಗರವೂ ಸುಗಂಧಮಯವಾಯಿತು ಎಂದು ಹೇಳುವ ಪರಿ – ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ

ಪದ್ಯ ೧೦: ಬಿರುಗಾಳಿ ಕುಸಿಯಲು ಕಾರಣವೇನು?

ಕಾರಣೆಯ ಕುಂಕುಮದ ಸಾದಿನ
ಸಾರಣೆಯ ನೆಲೆಗಟ್ಟುಗಳ ಕ
ರ್ಪೂರ ಧೂಳಿಯ ಹೊಳಹುಗಳ ಪನ್ನೀರ ಪಕ್ಕಲೆಯ
ಚಾರು ಚಳೆಯದ ಕೆಸರಿಡುವ ಕ
ಸ್ತೂರಿಗಳ ಪೂರಾಯ ಪರಿಮಳ
ಭಾರದಲಿ ಬಿರುಗಾಳಿ ಕುಸಿದುದು ಹೇಳಲೇನೆಂದ (ಆದಿ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಮನೆಗಳ ಹೊರಾಂಗಣ ಅಲಂಕಾರವನ್ನು ವರ್ಣಿಸಿದ ಮೇಲೆ, ಮನೆಯ ಒಳಭಾಗವನ್ನು ಹೇಗೆ ಸಿಂಗರಿಸಿದ್ದಾರೆ ಎಂದು ಇಲ್ಲಿ ವಿವರಿಸಿದೆ. ಸುಗಂಧಮಯವಾಗಿಸಲು, ಪರಿಮಳದ ಲೇಪನವನ್ನು ಗೋಡೆಯ ಕೆಳಭಾಗದಲ್ಲಿ ಬಳೆದು, ನೆಲವನ್ನು ಕರ್ಪೂರದ ಧೂಳಿನಿಂದ ಸಮವಾಗಿ ಹರಡಿ, ದೊಡ್ಡಪಾತ್ರೆಗಳಲ್ಲಿ (ಪಕ್ಕಲೆ) ಪನ್ನೀರನ್ನಿಟ್ಟು, ನೆಲನೆನೆಯುವಂತೆ ಈ ನೀರನ್ನು ಚುಮುಕಿಸಿದರು, ಈ ಸುಗಂಧಮಯವಾದ ಆ ಕೆಸರಿನ ಪರಿಮಳದ ಭಾರಕ್ಕೆ ಬಿರುಗಾಳಿಯು ಸಹ ಕುಸಿಯಿತು.

ಅರ್ಥ:
ಕಾರಣೆ: ಮೇಜುಕಟ್ಟು, ಗೋಡೆಯ ಕೆಳಭಾಗದಲ್ಲಿ ಬಳಿಯುವ ಬಣ್ಣದ ಗೆರೆ; ಕುಂಕುಮ: ಕೆಂಪು ಬಣ್ಣ ಸೂಚಿಸುವ ಪದ; ಸಾದು: ಪರಿಮಳದ ಲೇಪನ; ಸಾರಣೆ: ಸಾರುವಿಕೆ, ಗೋಮಯ ಅಥವ ಸುಗಂದದ್ರವ್ಯದಿಂದ ನೆಲವನ್ನು ಸಾರಿಸುವುದು; ನೆಲೆಗಟ್ಟು: ಸಮಮಾಡಿದ ನೆಲ; ಕರ್ಪೂರ: ಕಪ್ಪುರ, ಒಂದು ಸುಗಂಧ ದ್ರವ್ಯ; ಧೂಳಿ: ಮಣ್ಣಿನಪುಡಿ, ಧೂಳು; ಹೊಳಹು: ಕಾಂತಿ; ಪನ್ನೀರ: ಸುಗಂಧ ದ್ರವ್ಯ; ಪಕ್ಕಲೆ: ಒಂದು ಬಗೆಯ ಪಾತ್ರೆ, ಕೊಪ್ಪರಿಗೆ; ಚಾರು: ಸುಂದರ; ಚಳೆ: ಸಿಂಪಡಿಸು, ಚಿಮುಕಿಸು; ಕೆಸರು: ಪಂಕ, ರಾಡಿ; ಕಸ್ತೂರಿ: ಸುಗಂಧ ದ್ರವ್ಯ; ಪೂರಾಯ: ಅತ್ಯಧಿಕವಾದ, ಸಮಗ್ರತೆ; ಪರಿಮಳ: ಸುವಾಸನೆ; ಭಾರ: ಘನ; ಬಿರುಗಾಳಿ: ಜೋರಾದ ಗಾಳಿ, ಸುಂಟರಗಾಳಿ; ಕುಸಿ: ಕೆಳಗೆ ಬೀಳು; ಹೇಳು: ಉಚ್ಚರಿಸು, ತಿಳಿಸು;

ಪದವಿಂಗಡನೆ:
ಕಾರಣೆಯ +ಕುಂಕುಮದ +ಸಾದಿನ
ಸಾರಣೆಯ +ನೆಲೆಗಟ್ಟುಗಳ+ ಕ
ರ್ಪೂರ +ಧೂಳಿಯ +ಹೊಳಹುಗಳ+ ಪನ್ನೀರ +ಪಕ್ಕಲೆಯ
ಚಾರು +ಚಳೆಯದ +ಕೆಸರಿಡುವ+ ಕ
ಸ್ತೂರಿಗಳ+ ಪೂರಾಯ +ಪರಿಮಳ
ಭಾರದಲಿ+ ಬಿರುಗಾಳಿ+ ಕುಸಿದುದು+ ಹೇಳಲೇನೆಂದ

ಅಚ್ಚರಿ:
(೧) ಜೋಡಿ ಪದಗಳ ಬಳಕೆ: ಕಾರಣೆಯ ಕುಂಕುಮದ, ಸಾದಿನ ಸಾರಣೆಯ, ಪನ್ನೀರ ಪಕ್ಕಲೆಯ, ಚಾರು ಚಳೆಯದ ಕೆಸರಿಡುವ ಕಸ್ತೂರಿಗಳ, ಪೂರಾಯ ಪರಿಮಳ, ಭಾರದಲಿ ಬಿರುಗಾಳಿ
(೨) ಪರಿಮಳ, ಸುಗಂಧ ದ ಅರ್ಥವನ್ನು ನೀಡುವ ಪದಗಳ ಬಳಕೆ: ಸಾದಿನ, ಕರ್ಪೂರ, ಪನ್ನೀರು, ಕಸ್ತೂರಿ, ಪರಿಮಳ
(೩) ಕಾರಣೆ, ಸಾರಣೆ – ಪ್ರಾಸ ಪದ