ಪದ್ಯ ೪: ದುರ್ಯೋಧನನ ಪತನ ಕಾಲದಲ್ಲಿ ಯಾವ ಬದಲಾವಣೆಗಳಾದವು?

ಬೀಸಿದುದು ಬಿರುಗಾಳಿ ಕತ್ತಲೆ
ಸೂಸಿದುದು ದಿಗುವಳಯದಲಿ ಪರಿ
ವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ
ಸೂಸಿದವು ಹಗಲುಳುಕು ಮೃಗಗಣ
ವಾಸುರದಲೊದರಿದವು ಕಂದಿತು
ವಾಸರಪ್ರಭೆ ಕೌರವೇಂದ್ರನ ಪತನ ಕಾಲದಲಿ (ಗದಾ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ಬಿರುಗಾಳಿ ಬೀಸಿತು. ದಿಗ್ವಲಯದಲ್ಲಿ ಕತ್ತಲು ಕವಿಯಿತು. ಸೂರ್ಯನ ಸುತ್ತಲೂ ಐದಾರು ಏಳು ಗ್ರಹಗಳು ಕಾಣಿಸಿಕೊಂಡವು. ಹಗಲು ಆಗಾಗ ಮಾಸಿ ಹೋಯಿತು. ಮೃಗಗಳು ಭಯಮ್ಕರವಾಗಿ ಅರಚಿಕೊಂಡವು. ಬಿಸಿಲು ಕಂದಿಹೋಯಿತು.

ಅರ್ಥ:
ಬೀಸು: ಹರಡು, ಸೂಸು; ಬಿರುಗಾಳಿ: ಜೊರಾದ ಗಾಳಿ (ವಾಯು); ಕತ್ತಲೆ: ಅಂಧಕಾರ; ಸೂಸು: ಹರಡು; ದಿಗು: ದಿಕ್ಕು; ವಳಯ: ಪರಧಿ; ಪರಿವೇಷ: ಸುತ್ತುವರಿದಿರುವುದು, ಬಳಸಿರುವಿಕೆ; ಗ್ರಹ: ಆಕಾಶಚರಗಳು; ನೆರೆ: ಗುಂಪು; ರವಿ: ಸೂರ್ಯ; ಸೂಸು: ಹರಡು; ಉಳುಕು: ಕುಂದು, ಮರೆಯಾಗು, ನೋವುಂಟಾಗು; ಮೃಗಗಣ: ಪ್ರಾಣಿಗಳ ಗುಂಪು; ಆಸುರ: ಭಯಂಕರ; ಒದರು: ಹೊರಹಾಕು; ಕಂದು: ಕಳಾಹೀನ; ವಾಸರ: ದಿನ, ನಿತ್ಯ; ಪ್ರಭೆ: ಪ್ರಕಾಶ; ಪತನ: ಅವಸಾನ; ಕಾಲ: ಸಮಯ;

ಪದವಿಂಗಡಣೆ:
ಬೀಸಿದುದು +ಬಿರುಗಾಳಿ +ಕತ್ತಲೆ
ಸೂಸಿದುದು+ ದಿಗುವಳಯದಲಿ +ಪರಿ
ವೇಷದಲಿ +ಗ್ರಹ+ ನೆರೆದವ್+ಐದಾರೇಳು +ರವಿಯೊಡನೆ
ಸೂಸಿದವು +ಹಗಲ್+ಉಳುಕು +ಮೃಗಗಣವ್
ಆಸುರದಲ್+ಒದರಿದವು +ಕಂದಿತು
ವಾಸರಪ್ರಭೆ +ಕೌರವೇಂದ್ರನ+ ಪತನ +ಕಾಲದಲಿ

ಅಚ್ಚರಿ:
(೧) ಅದ್ಭುತವನ್ನು ಸೂಚಿಸುವ ಪರಿ – ಹಗಲುಳುಕು; ಮೃಗಗಣ ವಾಸುರದಲೊದರಿದವು; ಕಂದಿತು ವಾಸರಪ್ರಭೆ;

ಪದ್ಯ ೩: ದುರ್ಯೋಧನನು ಬಿದ್ದ ಸಮಯದಲ್ಲಿ ಏನೇನಾಯಿತು?

ನಡುಗಿತಿಳೆ ನಿರ್ಘಾತದಲಿ ಬರ
ಸಿಡಿಲು ಸುಳಿದುದು ನೆಣನ ಬಸೆಸಹಿ
ತಡಗು ಸುರಿದವು ಕದಡಿ ಹರಿದುದು ರಕುತದರೆವೊನಲು
ಸಿಡಿದವರೆಗಳು ಕೆರೆಗಳುಕ್ಕಿದ
ವಡಿಗಡಿಗೆ ಹೆಮ್ಮರ ನಿವಾತದ
ಲುಡಿದು ಬಿದ್ದವು ಕೌರವೇಂದ್ರನ ಪತನ ಕಾಲದಲಿ (ಗದಾ ಪರ್ವ, ೮ ಸಂಧಿ, ೩ ಪದ್ಯ)

ತಾತ್ಪರ್ಯ:
ಭೂಮಿಗೆ ಯಾವ ಪೆಟ್ಟೂ ಬೀಳದಿದ್ದರೂ ನಡುಗಿತು. ಬರಸಿಡಿಲು ಹೊಡೆಯಿತು. ನೆಣ ಮಜ್ಜೆಗಳೊಡನೆ ಮಾಂಸ ಖಂಡಗಳ ಮಳೆಯಾಯಿತು. ರಕ್ತದ ತೊರೆ ಹರಿಯಿತು. ಬಂಡೆಗಲ್ಲುಗಳು ಸಿಡಿದವು. ಕೆರೆಗಳು ಉಕ್ಕಿದವು. ಗಾಳಿ ಬೀಸದಿದ್ದರೂ ದೊಡ್ಡಮರಗಳು ಉರುಳಿ ಬಿದ್ದವು.

ಅರ್ಥ:
ನಡುಗು: ಕಂಪನ, ಅದುರು; ಇಳೆ: ಭೂಮಿ; ಘಾತ: ಹೊಡೆತ, ಪೆಟ್ಟು; ಬರಸಿಡಿಲು: ಅಕಾಲದಲ್ಲಿ ಬೀಳುವ ಸಿಡಿಲು; ಸುಳಿ: ತಿರುಗುಣಿ; ನೆಣ: ಕೊಬ್ಬು, ಮೇದಸ್ಸು; ಬಸೆ: ಕೊಬ್ಬು; ಸಹಿತ: ಜೊತೆ; ಅಡಗು: ಮಾಂಸ; ಸುರಿ: ವರ್ಷಿಸು; ಕದಡು: ಕಲಕು; ಹರಿ: ಹರಡು, ಹಬ್ಬು; ರಕುತ: ನೆತ್ತರು; ಸಿಡಿ: ಸ್ಫೋಟ; ಅರೆ: ಬಂಡೆ; ಕೆರೆ: ಜಲಾಶಯ; ಉಕ್ಕು: ಹೆಚ್ಚಾಗು; ಅಡಿಗಡಿ: ಹೆಜ್ಜೆ ಹೆಜ್ಜೆ; ಹೆಮ್ಮರ: ದೊಡ್ಡ ಮರ; ನಿವಾತ: ವಾಯುರಹಿತವಾದ ಸ್ಥಳ; ಉಡಿ: ಮುರಿ; ಬಿದ್ದು: ಬೀಳು; ಪತನ: ಕೆಳಗೆ ಬೀಳುವಿಕೆ; ಕಾಲ: ಸಮಯ;

ಪದವಿಂಗಡಣೆ:
ನಡುಗಿತ್+ಇಳೆ +ನಿರ್ಘಾತದಲಿ +ಬರ
ಸಿಡಿಲು +ಸುಳಿದುದು +ನೆಣನ +ಬಸೆ+ಸಹಿತ್
ಅಡಗು +ಸುರಿದವು +ಕದಡಿ +ಹರಿದುದು +ರಕುತದರೆವೊನಲು
ಸಿಡಿದವ್+ಅರೆಗಳು +ಕೆರೆಗಳ್+ಉಕ್ಕಿದವ್
ಅಡಿಗಡಿಗೆ +ಹೆಮ್ಮರ+ ನಿವಾತದಲ್
ಉಡಿದು +ಬಿದ್ದವು+ ಕೌರವೇಂದ್ರನ+ ಪತನ +ಕಾಲದಲಿ

ಅಚ್ಚರಿ:
(೧) ಅದ್ಭುತಗಳನ್ನು ವಿವರಿಸುವ ಪರಿ – ನಡುಗಿತಿಳೆ ನಿರ್ಘಾತದಲಿ, ಹೆಮ್ಮರ ನಿವಾತದಲುಡಿದು ಬಿದ್ದವು

ಪದ್ಯ ೩೮: ರಣರಂಗದ ಚಿತ್ರಣ ಹೇಗಾಗಿತ್ತು?

ಉಡಿಯೆ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡಿಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ (ಗದಾ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮುಖದ ಕವಚವು ಮುರಿಯಲು, ಆನೆಗಳು ಜೋದರನ್ನು ಕೆಳಕ್ಕೆ ಕೆಡವಿ ಓಡಿದವು. ಗೊರಸುಗಳು ಕತ್ತರಿಸಿದಾಗ ಕುದುರೆಗಳು ರಾವುತರನ್ನು ಕೆಡವಿ ಹೋದವು. ಸಾರಥಿಯು ಸಾಯಲು, ರಥಗಳು ನಿಂತವು. ಮಹಾರಥರು ಸತ್ತು ಮೆದೆಯಂತೆ ಬಿದ್ದರು. ಪದಾತಿಗಳೆಷ್ಟು ಮಂದಿ ಬಿದ್ದರೆಂದು ನಾನರಿಯೆ.

ಅರ್ಥ:
ಉಡಿ:ಸೊಂಟ; ಮೋರೆ: ಮುಖ; ಜೋಡು: ಜೊತೆ, ಜೋಡಿ; ಜೋದ: ಆನೆಮೇಲೆ ಕೂತು ಯುದ್ಧಮಾಡುವವ; ಕೊಡಹಿ: ಕೆಡವಿ; ಹಾಯ್ದು: ಹೊಡೆ; ದಂತಿಘಟೆ: ಆನೆಗಳ ಗುಂಪು; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಕದಿ: ಸೀಳು; ಕುದುರೆ: ಅಶ್ವ; ಹಾಯ್ದು: ಮೇಲೆಬೀಳು; ಹಾಯಿಕು: ಹಾಕು; ರಾವುತ: ಕುದುರೆಸವಾರ; ಮಡಿ: ಸಾವು; ಸಾರಥಿ: ಸೂತ; ಮಗ್ಗು: ಕುಂದು, ಕುಗ್ಗು; ರಥ: ಬಂಡಿ; ನಡೆ: ಚಲಿಸು; ಕಾದು: ಹೋರಾಡು; ಮಹಾರಥ: ಪರಾಕ್ರಮಿ; ಮೆದೆ: ಒಡ್ಡು, ಗುಂಪು; ಕೆಡೆ: ಬೀಳು, ಕುಸಿ; ಉಳಿದ: ಮಿಕ್ಕ; ಪದಾತಿ: ಕಾಲಾಳು; ಪತನ: ಬೀಳು; ಅರಿ: ತಿಳಿ;

ಪದವಿಂಗಡಣೆ:
ಉಡಿಯೆ+ ಮೋರೆಯ +ಜೋಡು +ಜೋದರ
ಕೊಡಹಿ +ಹಾಯ್ದವು +ದಂತಿಘಟೆ +ಖುರ
ಕಡಿವಡಿಯೆ +ಕುದುರೆಗಳು +ಹಾಯ್ದವು +ಹಾಯ್ಕಿ +ರಾವುತರ
ಮಡಿಯೆ +ಸಾರಥಿ +ಮಗ್ಗಿದವು +ರಥ
ನಡೆದು +ಕಾದಿ +ಮಹಾರಥರು +ಮೆದೆ
ಕೆಡೆದುದ್+ಉಳಿದ +ಪದಾತಿ+ಪತನವನ್+ಅರಿಯೆ +ನಾನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ನಡೆದು ಕಾದಿ ಮಹಾರಥರು ಮೆದೆಗೆಡೆದುದುಳಿದ ಪದಾತಿ