ಪದ್ಯ ೨೫: ರಣವಾದ್ಯಗಳ ಶಬ್ದವು ಹೇಗಿದ್ದವು?

ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ (ಶಲ್ಯ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಿಷ್ಠುರ ಗರ್ಜನೆಗಳು ಹಬ್ಬಿದವು. ಭೇರಿ, ಮೃದಂಗ, ತಮ್ಮಟೆ, ನಗಾರಿ, ರಣಕಹಳೆಯ ರಭಸವು ಕಿವಿಗಳನ್ನು ಕಿವುಡು ಮಾಡಿದವು. ರಥದ ಚೀತ್ಕಾರ, ಕುದುರೆಗಳ ಹೇಷಾರವದ ನಿಷ್ಠುರ ನಾದ ಮೊಳಗಲು ಶಲ್ಯನು ಯುದ್ಧಕ್ಕೆ ಮುಂದಾದನು.

ಅರ್ಥ:
ಬೆರಳು: ಅಂಗುಲಿ; ತುಟಿ: ಅಧರ; ಬೊಬ್ಬೆ: ಆರ್ಭಟ; ಮಿಗಲು: ಹೆಚ್ಚಾಗಲು; ಅಬ್ಬರ: ಜೋರಾದ ಶಬ್ದ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಗುಂಪು; ಜರ್ಝರ: ಭಗ್ನ; ಪಣಹ: ನಗಾರಿ; ಪಟಹ: ತಮಟೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಉರು: ವಿಶೇಷವಾದ; ರಭಸ: ವೇಗ; ಇರಿ: ಚುಚ್ಚು; ರಥ: ಬಂಡಿ; ಚೀತ್ಕರ: ಜೋರಾದ ಶಬ್ದ; ರಥ: ಬಂಡಿ; ಹಯ: ಕುದುರೆ; ಹೇಷಿತ: ಕುದುರೆಯ ಕೂಗು; ನಿಷ್ಠುರ: ಕಠಿಣವಾದುದು; ನಿನಾದ: ಶಬ್ದ; ಔಕು: ಒತ್ತು, ಹಿಚುಕು; ಹೊಕ್ಕು: ಸೇರು; ಆಹವ: ಯುದ್ಧ;

ಪದವಿಂಗಡಣೆ:
ಬೆರಳ +ತುಟಿಗಳ +ಬೊಬ್ಬೆ +ಮಿಗಲ್
ಅಬ್ಬರಿಸಿದವು +ನಿಸ್ಸಾಳ+ತತಿ+ ಜ
ರ್ಝರ +ಮೃದಂಗದ+ ಪಣಹ+ ಪಟಹದ+ ಗೌರು+ಕಹಳೆಗಳ
ಉರು +ರಭಸವಳ್ಳ್+ಇರಿಯೆ +ರಥ+ಚೀ
ತ್ಕರಣೆ+ ರಥಹಯ +ಹೇಷಿತದ +ನಿ
ಷ್ಠುರ +ನಿನಾದದಲ್+ಔಕಿ +ಹೊಕ್ಕನು +ಶಲ್ಯನ್+ಆಹವವ

ಅಚ್ಚರಿ:
(೧) ರಣವಾದ್ಯಗಳು – ನಿಸ್ಸಾಳ, ಮೃದಂಗ, ಪಣಹ, ಪಟಹ, ಕಹಳೆ
(೨) ಶಬ್ದವನ್ನು ವಿವರಿಸುವ ಪದ – ಬೊಬ್ಬೆ, ಅಬ್ಬರಿಸು, ಜರ್ಝರ, ಇರಿ, ಚೀತ್ಕರ, ಹೇಷಿತ, ನಿನಾದ

ಪದ್ಯ ೨೭: ರಣರಂಗದ ಶಬ್ದವು ಹೇಗೆ ಹೊರಹೊಮ್ಮಿತು?

ಮೊಳಗಿದವು ನಿಸ್ಸಾಳ ಕೋಳಾ
ಹಳಿಸಿದವು ಕಹಳೆಗಳು ಪರ್ವತ
ಹಿಳೆಯೆ ಹೆಚ್ಚಿದ ಪಟಹ ಪಣಹ ಮೃದಂಗ ಡಿಂಡಿಮದ
ಉಲಿಯ ತೇಜಿಯ ಹೇಷಿತದ ವೆ
ಗ್ಗಳೆಯ ಕರಿಗಳ ಬೃಂಹಿತದ ಗೊಂ
ದಲದ ಕಳಗರ್ಚಾಯ್ತು ಕೌರವ ಸೈನ್ಯಶರಧಿಯಲಿ (ದ್ರೋಣ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೇರಿ, ಕಹಳೆ, ಪಟಹ, ಪಣಹ, ಮೃದಂಗ, ಡಿಂಡಿಮ, ಮೊದಲಾದ ವಾದ್ಯಗಳ ಕೋಲಾಹಲವು ಕುದುರೆಯ ಹೇಷಿತ ಆನೆಅಯ ಬೃಂಹಿತಗಳ ಗೊಂದಲವೂ, ಕೌರವ ಸೈನ್ಯ ಸಮುದ್ರದಿಂದ ಹೊರಟಾಗ ಪರ್ವತಗಳು ಸೀಳಿದವು, ತಲೆಗಳು ತಿರುಗಿದವು.

ಅರ್ಥ:
ಮೊಳಗು: ಹೊಮ್ಮು; ನಿಸ್ಸಾಳ: ಚರ್ಮವಾದ್ಯ; ಕೋಳಹಳ: ಗೊಂದಲ, ಗದ್ದಲ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಪರ್ವತ: ಬೆಟ್ಟ; ಹಿಳಿ: ಬಿರಿ; ಹೆಚ್ಚು: ಅಧಿಕ; ಪಟಹ: ನಗಾರಿ; ಪಣಹ: ತಮ್ಮಟೆ; ಡಿಂಡಿಮ: ಶಬ್ದದ ವರ್ಣನೆ; ಉಲಿ: ಶಬ್ದ; ತೇಜಿ: ಕುದುರೆ; ಹೇಷರವ: ಕುದುರೆಯ ಕೂಗು; ವೆಗ್ಗಳೆ: ಅಧಿಕ, ಶ್ರೇಷ್ಠ; ಕರಿ: ಆನೆ; ಬೃಂಹಿತ: ಕೂಗು, ಘೀಂಕಾರ; ಗೊಂದಳ: ಗಲಾಟೆ, ಗದ್ದಲ; ಕಳ: ರಣರಂಗ; ಸೈನ್ಯ: ಸೇನೆ; ಶರಧಿ: ಸಾಗರ;

ಪದವಿಂಗಡಣೆ:
ಮೊಳಗಿದವು +ನಿಸ್ಸಾಳ +ಕೋಳಾ
ಹಳಿಸಿದವು +ಕಹಳೆಗಳು +ಪರ್ವತ
ಹಿಳೆಯೆ +ಹೆಚ್ಚಿದ +ಪಟಹ +ಪಣಹ +ಮೃದಂಗ +ಡಿಂಡಿಮದ
ಉಲಿಯ +ತೇಜಿಯ +ಹೇಷಿತದ +ವೆ
ಗ್ಗಳೆಯ +ಕರಿಗಳ +ಬೃಂಹಿತದ +ಗೊಂ
ದಲದ +ಕಳಗರ್ಚಾಯ್ತು +ಕೌರವ +ಸೈನ್ಯ+ಶರಧಿಯಲಿ

ಅಚ್ಚರಿ:
(೧) ನಿಸ್ಸಾಳ, ಕಹಳೆ, ಪಟಹ, ಪಣಹ, ಮೃದಂಗ – ರಣ ವಾದ್ಯಗಳು
(೨) ಹೇಷಿ, ಬೃಂಹಿತ, ಮೊಳಗು, ಉಲಿ – ಶಬ್ದವನ್ನು ವಿವರಿಸುವ ಪದ