ಪದ್ಯ ೩೫: ಅರ್ಜುನನು ಏನೆಂದು ಪ್ರಮಾಣ ಮಾಡಿದನು?

ಹರನ ದುರ್ಗದಲಿರಲಿ ಮೇಣಾ
ಹರಿಯ ಕಡಲೊಳಗಿರಲಿ ಬ್ರಹ್ಮನ
ಕರಕಮಂಡಲದೊಳಗೆ ಹುದುಗಲಿ ರವಿಯ ಮರೆಹೊಗಲಿ
ಉರಗ ಭುವನದೊಳಿರಲಿ ಮೇಣ್ ಸಾ
ಗರವ ಮುಳುಗಲಿ ನಾಳೆ ಪಡುವಣ
ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ (ದ್ರೋಣ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸೈಂಧವನು ಶಿವನ ಕೋಟೆಯಲ್ಲಿರಲಿ, ವಿಷ್ಣುವಿನ ಕ್ಷೀರಸಾಗರದೊಳಗಿರಲಿ, ಬ್ರಹ್ಮನ ಕೈಯಲ್ಲಿರುವ ಕಮಂಡಲದೊಳಗಿರಲಿ, ಸೂರ್ಯನಿಗೆ ಶರಣಾಗಲಿ, ಪಾತಾಳದಲ್ಲಿರಲಿ, ಸಾಗರದಲ್ಲಿ ಮುಳುಗಿರಲಿ, ನಾಳೆ ಸೂರ್ಯನು ಮುಳುಗುವುದರೊಳಗೆ ನನ್ನ ವೈರಿ ಸೈಂಧವನನ್ನು ಸಾಯಿಸುತ್ತೇನೆ ಎಂದು ಅರ್ಜುನನು ಪ್ರಮಾಣ ಮಾಡಿದನು.

ಅರ್ಥ:
ಹರ: ಈಶ್ವರ; ದುರ್ಗ: ಕೋಟೆ; ಮೇಣ್: ಅಥವ; ಹರಿ: ವಿಷ್ಣು; ಕಡಲು: ಸಾಗರ್; ಬ್ರಹ್ಮ: ಅಜ; ಕರ: ಹಸ್ತ; ಕಮಂಡಲ: ಮುನಿಗಳು ಕೈಯಲ್ಲಿ ಹಿಡಿಯುವ ಪಾತ್ರೆ; ಹುದುಗು: ಅಡಗು, ಮರೆಯಾಗು; ರವಿ: ಸೂರ್ಯ; ಮರೆ: ಮೊರೆ, ಶರಣಾಗತಿ; ಉರಗ: ಹಾವು; ಭವನ: ಜಗತ್ತು; ಸಾಗರ: ಸಮುದ್ರ; ಮುಳೂಗು: ನೀರಿನಲ್ಲಿ ಮೀಯು, ಕಾಣದಾಗು; ಪಡುವಣ: ಪಶ್ಚಿಮ; ತರಣಿ: ಸೂರ್ಯ; ತೊಲಗು: ಹೊರಡು; ಮುನ್ನ: ಮೊದಲು; ಕೊಲು: ಸಾಯಿಸು; ವೈರಿ: ಶತ್ರು;

ಪದವಿಂಗಡಣೆ:
ಹರನ +ದುರ್ಗದಲಿರಲಿ +ಮೇಣ್+ ಆ
ಹರಿಯ +ಕಡಲೊಳಗಿರಲಿ +ಬ್ರಹ್ಮನ
ಕರಕಮಂಡಲದೊಳಗೆ +ಹುದುಗಲಿ +ರವಿಯ +ಮರೆಹೊಗಲಿ
ಉರಗ +ಭುವನದೊಳಿರಲಿ +ಮೇಣ್ +ಸಾ
ಗರವ +ಮುಳುಗಲಿ +ನಾಳೆ +ಪಡುವಣ
ತರಣಿ +ತೊಲಗದ +ಮುನ್ನ +ಕೊಲುವೆನು +ವೈರಿ +ಸೈಂಧವನ

ಅಚ್ಚರಿ:
(೧) ಸೂರ್ಯಾಸ್ತ ಎಂದು ಹೇಳುವ ಪರಿ – ಪಡುವಣ ತರಣಿ ತೊಲಗದ ಮುನ್ನ

ಪದ್ಯ ೭೧: ಅರ್ಜುನನ ಬಾಣಕ್ಕೆ ಯಾರು ಆಯಾಸಗೊಂಡರು?

ಸೋಲದಲಿ ಕೌರವನ ಸೇನಾ
ಜಾಲ ಚೆಲ್ಲಿತು ವೀರ ಪಾರ್ಥನ
ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ
ಕೋಲು ಧರಿಸಿದವೆರಕೆಗಳನೆನೆ
ಚಾಳಿಸಿತು ಪಡೆ ರವಿಯ ರಶ್ಮಿಯ
ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ (ದ್ರೋಣ ಪರ್ವ, ೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ಸೋತು ಚಲ್ಲಾಪಿಲ್ಲಿಯಾಯಿತು. ಅರ್ಜುನನ ಬಾಣಗಳು ಯಮನನ್ನು ಆಯಾಸಗೊಳಿಸಿದವು. ಚತುರಂಗ ಸೇನೆಯು ಲೆಕ್ಕವಿಲ್ಲದಂತೆ ಹತವಾಯಿತು. ಶತ್ರುಗಳ ಶರಣಾಗತಿಯ ಪ್ರಾರ್ಥನೆಯನ್ನು ಅರ್ಜುನನ ಬಾಣಗಳು ಸ್ವೀಕರಿಸಿದವೋ ಎಂಬಂತೆ ಸೈನ್ಯ ಹಿಮ್ಮೆಟ್ಟಿತು. ಬಿಸಿಲು ಕುಗ್ಗಲು, ಸೂರ್ಯನು ಪಶ್ಚಿಮ ಸಮುದ್ರಕ್ಕಿಳಿದನು.

ಅರ್ಥ:
ಸೋಲು: ಪರಾಭವ; ಜಾಲ: ಬಲೆ; ಸಮೂಹ, ಕಪಟ; ಚೆಲ್ಲು: ಹರಡು; ವೀರ: ಶೂರ; ಕೋಲು: ಬಾಣ; ಕಾಲ: ಯಮ; ದಣಿಸು: ಆಯಾಸಗೊಳ್ಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸೇನೆ: ಸೈನ್ಯ; ಧರಿಸು: ಹಿಡಿ; ಎರಕೆ: ಪ್ರಾರ್ಥನೆ, ಬೇಡಿಕೆ; ಚಾಳಿಸು: ಹೀಯಾಳಿಸು, ಒತ್ತಾಯಿಸು; ಪಡೆ: ದೊರಕು; ರವಿ: ಸೂರ್ಯ; ರಶ್ಮಿ: ಕಿರಣ; ಗೂಳೆ: ಮುಚ್ಚಳ, ಆವರಣ; ತೆಗೆ: ಹೊರತರು; ಪಡುವಣ: ಪಶ್ಚಿಮ; ಕಡಲು: ಸಾಗರ; ಇನ: ಸೂರ್ಯ; ಇಳಿ: ಬಾಗು;

ಪದವಿಂಗಡಣೆ:
ಸೋಲದಲಿ +ಕೌರವನ +ಸೇನಾ
ಜಾಲ +ಚೆಲ್ಲಿತು +ವೀರ +ಪಾರ್ಥನ
ಕೋಲು +ಕಾಲನ +ದಣಿಸಿದವು +ಚತುರಂಗ +ಸೇನೆಯಲಿ
ಕೋಲು +ಧರಿಸಿದವ್+ಎರಕೆಗಳನ್+ಎನೆ
ಚಾಳಿಸಿತು+ ಪಡೆ +ರವಿಯ +ರಶ್ಮಿಯ
ಗೂಳೆಯವು +ತೆಗೆಯಿತ್ತು +ಪಡುವಣ+ ಕಡಲೊಳ್+ಇನನ್+ಇಳಿದ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಪಡುವಣ ಕಡಲೊಳಿನನಿಳಿದ
(೨) ಹೆಚ್ಚು ಜನ ಸತ್ತರು ಎಂದು ಹೇಳಲು – ವೀರ ಪಾರ್ಥನ ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ

ಪದ್ಯ ೪೨: ಕೌರವರು ಯಾವ ಭಾವದಿಂದ ತೆರಳಿದರು?

ಬೀಳುಕೊಂಡರು ರಾಯರಿಬ್ಬರು
ಪಾಳಯಂಗಳಿಗಿತ್ತ ಪಡುವಣ
ಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ
ಮೇಲು ಮುಸುಕಿನ ಮುಖದ ಚಿತ್ತದ
ಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ ಕೌರವರು ಹೊಕ್ಕರು ನಿಜಾಲಯವ (ಭೀಷ್ಮ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೌರವ ಪಾಂಡವರಿಬ್ಬರೂ ಪಾಳೆಯಗಳಿಗೆ ಮರಳಿದರು. ಇತ್ತ ಸೂರ್ಯನು ಪಶ್ಚಿಮಾದ್ರಿ ಸ್ತಂಭದ ದೀಪದಂತೆ ಕಾಣಿಸಿದನು. ಮುಖಕ್ಕೆ ಮುಸುಕು ಹಾಕಿ ದುಃಖಸಮುದ್ರದ ಕಾಲುವೆಗಳು ಹರಿಯುತ್ತಿವೆಯೋ ಎಂಬಂತೆ ಚಿತ್ತದಲ್ಲಿ ದುಃಖವನ್ನು ಹಿಡಿದು ಕೌರವರು ತಮ್ಮ ಮನೆಗಳನ್ನು ಹೊಕ್ಕರು.

ಅರ್ಥ:
ಬೀಳುಕೊಳು: ತೆರಳು; ರಾಯ: ರಾಜ; ಪಾಳಯ: ಸೀಂಎ; ಪಡುವಣ: ಪಶ್ಚಿಮ; ಶೈಲ: ಬೆಟ್ಟ; ವಿಪುಲ: ಹೆಚ್ಚು, ಜಾಸ್ತಿ; ಸ್ತಂಭ: ಕಂಬ; ದೀಪಿಕೆ: ದೀಪ; ರವಿ: ಸೂರ್ಯ; ಮೆರೆ: ಪ್ರಕಾಶಿಸು, ಹೊಳೆ; ಮೇಲು: ಮೇಲ್ಭಾಗ; ಮುಸುಕು: ಹೊದಿಕೆ; ಮುಖ: ಆನನ; ಚಿತ್ತ: ಮನಸ್ಸು; ಕಾಳಿಕೆ: ಕೊಳಕು; ದುಮ್ಮಾನ: ದುಃಖ; ಜಲಧಿ: ಸಾಗರ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಬೀಳುಕೊಂಡರು+ ರಾಯರಿಬ್ಬರು
ಪಾಳಯಂಗಳಿಗ್+ಇತ್ತ +ಪಡುವಣ
ಶೈಲ +ವಿಪುಲ +ಸ್ತಂಭ+ದೀಪಿಕೆಯಂತೆ +ರವಿ +ಮೆರೆದ
ಮೇಲು +ಮುಸುಕಿನ +ಮುಖದ +ಚಿತ್ತದ
ಕಾಳಿಕೆಯ +ದುಮ್ಮಾನ+ಜಲಧಿಯ
ಕಾಲುವೆಗಳೆನೆ +ಕೌರವರು+ ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಕೌರವರ ಮನದ ಸ್ಥಿತಿ – ಮೇಲು ಮುಸುಕಿನ ಮುಖದ ಚಿತ್ತದಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ

ಪದ್ಯ ೭: ಎರಡನೇ ದಿನದ ಯುದ್ಧವನ್ನು ಯಾರು ಗೆದ್ದರು?

ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗವವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ (ಭೀಷ್ಮ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಹೀಗೆ ರಾಜರು ನೆಲಕ್ಕುರುಳಲು, ಸಾತ್ಯಕಿಯು ಕೋಪದಿಂದ ಭೀಷ್ಮನ ಸಾರಥಿಯನ್ನು ಕೊಂದನು. ಆ ದಿನ ಯುದ್ಧದಲ್ಲಿ ಪಾಂಡವರು ಗೆದ್ದರು; ದುರ್ಯೋಧನನಿಗೆ ಸೋಲಾಯಿತು, ಸೂರ್ಯಕಿರಣಗಳು ಪಶ್ಚಿಮ ಸಮುದ್ರಕ್ಕೆ ಗುಳೆ ಹೊರಟವು. ಆ ದಿನದ ಯುದ್ಧ ಮುಗಿಯಿತು.

ಅರ್ಥ:
ಬೀಳು: ಕುಗ್ಗು; ಅವನೀಪತಿ: ರಾಜ; ಹೀಹಾಳಿ: ತೆಗಳಿಕೆ, ಅವಹೇಳನ; ಮುಳಿ: ಸಿಟ್ಟು, ಕೋಪ; ಬಲು: ಬಹಳ; ಕೋಲು: ಬಾಣ; ಕುಮಾರ: ಮಗ; ಸಾರಥಿ: ಸೂತ; ಎಸು: ಬಾಣ ಪ್ರಯೋಗ ಮಾಡು; ಮೇಲು: ಎತ್ತರ; ಕಾಳೆಗ: ಯುದ್ಧ; ಸೇರು: ತಲುಪು, ಮುಟ್ಟು; ಸೋಲು: ಪರಾಭವ; ಕಿರಣ: ರಶ್ಮಿ, ಬೆಳಕಿನ ಕದಿರು;
ಗೂಳೆಯ: ಊರು ಬಿಟ್ಟು ವಲಸೆ ಹೋಗುವುದು; ಪಡುವಣ: ಪಶ್ಚಿಮ; ಸಮುದ್ರ: ಸಾಗರ; ತೆಗೆ: ಈಚೆಗೆ ತರು, ಹೊರತರು; ಇನ: ಸೂರ್ಯ; ಇಳಿ: ಕೆಳಕ್ಕೆ ಬರು;

ಪದವಿಂಗಡಣೆ:
ಬೀಳಲ್+ಅವನೀಪತಿಗಳ್+ಅತಿ+ ಹೀ
ಹಾಳಿಯಲಿ +ಸಾತ್ಯಕಿ +ಮುಳಿದು +ಬಲು
ಗೋಲಿನಲಿ +ಗಂಗಾಕುಮಾರನ+ ಸಾರಥಿಯನ್+ಎಸಲು
ಮೇಲುಗಾಳೆಗವ್+ಅವರ +ಸೇರಿತು
ಸೋಲು +ಕುರುಪತಿಗಾಯ್ತು +ಕಿರಣದ
ಗೂಳಯವು +ಪಡುವಣ+ ಸಮುದ್ರಕೆ +ತೆಗೆಯನ್+ಇನನ್+ಇಳಿದ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಕಿರಣದ ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ

ಪದ್ಯ ೨: ಎರಡು ಸೈನ್ಯಗಳು ಹೇಗೆ ಯುದ್ಧವನ್ನಾರಂಭಿಸಿದರು?

ಎರಡು ಬಲ ಕೈ ಲಾಗನೀಕ್ಷಿಸು
ತಿರೆ ಕೃತಾಂತಾಲಯಕೆ ವಾಹಿನಿ
ಸರಿವುದೆಂಬಂದದಲಿ ಕೈವೀಸಿದರು ಭೂಭುಜರು
ಅರರೆ ಮೂಡಣ ಶರಧಿ ಪಡುವಣ
ಶರಧಿಗಾಂತುದೊ ರಣಚಮತ್ಕೃತಿ
ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ (ಭೀಷ್ಮ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಎರಡು ಸೈನ್ಯಗಳೂ ತಮ್ಮ ದೊರೆಗಳ ಕೈಯನ್ನು ನೋಡುತ್ತಿರುವಾಗ, ಯಮಲೋಕಕ್ಕೆ ಹೋಗಿರಿ ಎಂದಪ್ಪಣೆ ಕೊಡುವಂತೆ ರಾಜರು ಕೈಬೀಸಿದರು. ಪೂರ್ವ ಸಮುದ್ರವು ಪಶ್ಚಿಮ ಸಮುದ್ರವನ್ನೆದುರಿಸುವಂತೆ ಸೈನ್ಯಗಳು ಒಂದರ ಮೇಲೊಂದು ಬಿದ್ದವು. ದೇವತೆಗಳು ಅದನ್ನು ಕಂಡು ಕೌತುಕಗೊಂಡರು.

ಅರ್ಥ:
ಬಲ: ಸೈನ್ಯ; ಕೈ: ಹಸ್ತ; ಲಾಗ: ಹಾರುವಿಕೆ; ಈಕ್ಷಿಸು: ನೋಡು; ಕೃತಾಂತ: ಯಮ; ಆಲಯ: ಮನೆ; ವಾಹಿನಿ: ಸೈನ್ಯ; ಸರಿ: ಹೋಗು, ಗಮಿಸು; ಕೈವೀಸು: ಕೈಬೀಸು; ಭೂಭುಜ: ರಾಜ; ಅರರೆ: ಓಹೋ; ಮೂಡಣ: ಪೂರ್ವ; ಶರಧಿ: ಸಮುದ್ರ; ಪಡುವಣ: ಪಶ್ಚಿಮ; ರಣ: ಯುದ್ಧ; ಚಮತ್ಕೃತಿ: ಸೋಜಿಗ, ವಿಸ್ಮಯ; ಸುರ: ದೇವತೆ; ನಯನ: ಕಣ್ಣು; ಅಂಗಣ: ಮನೆಗೆ ಸೇರಿರುವ ಆವರಣದ ಬಯಲು, ಅಂಗಳ; ಕವಿ: ಆವರಿಸು; ಕೌತುಕ: ಆಶ್ಚರ್ಯ; ಅಂಬುಧಿ: ಸಾಗರ;

ಪದವಿಂಗಡಣೆ:
ಎರಡು+ ಬಲ +ಕೈ +ಲಾಗನ್+ಈಕ್ಷಿಸು
ತಿರೆ +ಕೃತಾಂತ+ಆಲಯಕೆ +ವಾಹಿನಿ
ಸರಿವುದೆಂಬಂದದಲಿ+ ಕೈವೀಸಿದರು+ ಭೂಭುಜರು
ಅರರೆ+ ಮೂಡಣ+ ಶರಧಿ+ ಪಡುವಣ
ಶರಧಿಗಾಂತುದೊ+ ರಣ+ಚಮತ್ಕೃತಿ
ಸುರರ+ ನಯನಾಂಗಣಕೆ+ ಕವಿಸಿತು+ ಕೌತುಕ+ಅಂಬುಧಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೃತಾಂತಾಲಯಕೆ ವಾಹಿನಿಸರಿವುದೆಂಬಂದದಲಿ ಕೈವೀಸಿದರು ಭೂಭುಜರು
(೨) ಸೈನ್ಯವು ಎದುರಿಸಿದ ಪರಿ – ಅರರೆ ಮೂಡಣ ಶರಧಿ ಪಡುವಣ ಶರಧಿಗಾಂತುದೊ
(೩) ಶರಧಿ, ಅಂಬುಧಿ – ಸಮನಾರ್ಥಕ ಪದ
(೪) ಸುರರು ನೋಡಿದರು ಎಂದು ಹೇಳಲು – ರಣಚಮತ್ಕೃತಿ ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ

ಪದ್ಯ ೩: ಧರ್ಮಜನ ವಿಶ್ಲೇಷಣೆ ಹೇಗಿತ್ತು?

ಬಡಗಲವರದು ಮೂಡಣರಸುಗ
ಳೆಡೆಗೆಣೆಯರಾತಂಗೆ ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಮಗಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ (ವಿರಾಟ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನ ಯೋಚನಾ ಲಹರಿಯನ್ನು ವಿವರಿಸುತ್ತಾ, ಉತ್ತರ ದಿಕ್ಕಿನ ಭಾರತ ಅವರದು, ಪೂರ್ವ ದಿಕ್ಕಿನ ರಾಜರು ಕೌರವನ ಗೆಳೆಯರು, ದಕ್ಷಿಣದ ರಾಜರು ಕೌರವನ ದರ್ಪದ ಬಲವನ್ನು ಕಂಡು ಸುಮ್ಮನಾಗಿರುವವರು. ಈ ಮೂಲೆ ಆ ಮೂಲೆಗಳ ರಾಜರು ಚಾಡಿಕೋರರು, ಪಶ್ಚಿಮದವರು ಬಲಹೀನರು, ಹೀಗಿರುವಾಗ ನಾವೆಲ್ಲಿ ಅಡಗಿಕೊಳ್ಳಬಹುದು ಎನ್ನಲು, ಅರ್ಜುನನು ಅಣ್ಣನಿಗೆ ವಿನಯದಿಂದ ಹೀಗೆ ಹೇಳಿದನು.

ಅರ್ಥ:
ಬಡಗಲು: ಉತ್ತರ; ಮೂಡಣ: ಪೂರ್ವ; ಎಡೆಗೆಣೆ: ಹತ್ತಿರದವ, ಸ್ನೇಹಿತ; ತೆಂಕಣ: ದಕ್ಷಿಣ; ಕಡೆ: ಪಕ್ಕ; ಕಂಡು: ನೋಡು; ಬಲ: ಸೈನ್ಯ; ಕೊಂಡೆ: ಚಾಡಿಯ ಮಾತು; ಪಡುವಣ: ಪಶ್ಚಿಮ; ಕೃಶ: ಬಲವಿಲ್ಲದ; ಅಡಗು: ಬಚ್ಚಿಟ್ಟುಕೊಳ್ಳು; ತೆರ: ಪದ್ಧತಿ; ನುಡಿ: ಮಾತಾಡು; ಅವನಿಪತಿ: ರಾಜ; ವಿನಯ: ಸೌಜನ್ಯ;

ಪದವಿಂಗಡಣೆ:
ಬಡಗಲ್+ಅವರದು +ಮೂಡಣ್+ಅರಸುಗಳ್
ಎಡೆಗೆಣೆಯರ್+ಆತಂಗೆ +ತೆಂಕಣ
ಕಡೆಯವರು +ಕಂಡಿಹರು +ಕೆಲಬಲದವರು +ಕೊಂಡೆಯರು
ಪಡುವಣವವ್+ಅತಿ+ ಕೃಶರು +ನಮಗಿನ್
ಅಡಗಿರಲು +ತೆರನಾವುದ್+ಎಂದೆನೆ
ನುಡಿದನ್+ಅರ್ಜುನ ದೇವನ್+ಅವನೀಪತಿಗೆ+ ವಿನಯದಲಿ

ಅಚ್ಚರಿ:
(೧) ಬಡಗಲು, ಮೂಡಣ, ತೆಂಕಣ, ಪಡುವಣ – ದಿಕ್ಕುಗಳ ಹೆಸರುಗಳ ಬಳಕೆ
(೨) ಕ ಕಾರದ ಸಾಲು ಪದ – ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು

ಪದ್ಯ ೪೫: ಕೈಲಾಸ ಪರ್ವತವು ಎಲ್ಲಿದೆ?

ದೇವಕೂಟದ ಜಠರವೆಂಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾವಿಧದಿ ಕೈಲಾಸ ಪರ್ವತ ಗಂಧಮಾದನವು
ಭೂವಳಯದಲಿ ಪುಣ್ಯವಂತರು
ಭಾವಿಸುವೊಡಾ ಈಶ ದಿಕ್ಕಿನ
ದೀವಕೂಟಡ ನಿಕರ ಪಡುವಣ ಗಿರಿಯ ಪ್ರಾಂತ್ಯದಲಿ (ಅರಣ್ಯ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಮಾಲ್ಯವಂತ ಪರ್ವತದ ಎರಡು ಕಡೆಯೂ ದೇವ್ಕೂಟದ ಜಠರದಂತಿರುವ ಕೈಲಾಸ ಗಂಧಮಾದನವೆಂಬ ಪರ್ವತಗಳಿವೆ. ದೇವಗಿರಿಯ ಈಶಾನ್ಯ ದಿಕ್ಕಿನಲ್ಲಿ ಪುಣ್ಯವಂತರು ಸೇರುವ ಗಿರಿಗಳ ಪ್ರಾಂತ್ಯವಿದೆ.

ಅರ್ಥ:
ದೇವ: ಸುರರು; ಕೂಟ: ಗುಂಪು; ಜಠರ: ಹೊಟ್ಟೆ; ಭಾವಿಸು: ತಿಳಿ; ಇಕ್ಕೆಲ: ಎರಡು ಕಡೆ; ಭೂವಳಯ: ಭೂಪ್ರದೇಶ; ಪುಣ್ಯ: ಸದಾಚಾರ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಈಶನ್ಯ:ಉತ್ತರದಿಕ್ಕಿಗೂ ಪೂರ್ವ ದಿಕ್ಕಿಗೂ ಮಧ್ಯೆ ಇರುವ ದಿಕ್ಕು; ಈಶ: ಒಡೆಯ; ದಿಕ್ಕು: ದಿಶೆ; ದೇವಕೂಟ: ಸುರರ ಗುಂಪು; ನಿಕರ: ಗುಂಪು; ಪಡುವಣ: ಪಶ್ಚಿಮ; ಗಿರಿ: ಬೆಟ್ಟ; ಪ್ರಾಂತ್ಯ: ರಾಜ್ಯ;

ಪದವಿಂಗಡಣೆ:
ದೇವಕೂಟದ +ಜಠರವೆಂಬಿವು
ಭಾವಿಸಲು +ಮಾಲ್ಯವತದ್+ಇಕ್ಕೆಲ
ನಾವಿಧದಿ+ ಕೈಲಾಸ +ಪರ್ವತ +ಗಂಧಮಾದನವು
ಭೂವಳಯದಲಿ+ ಪುಣ್ಯವಂತರು
ಭಾವಿಸುವೊಡ್+ಆ+ ಈಶ+ ದಿಕ್ಕಿನ
ದೇವಕೂಟಡ +ನಿಕರ +ಪಡುವಣ+ ಗಿರಿಯ +ಪ್ರಾಂತ್ಯದಲಿ

ಅಚ್ಚರಿ:
(೧) ದೇವಕೂಟ – ೧, ೬ ಸಾಲಿನ ಮೊದಲ ಪದ
(೨) ಕೈಲಾಸ ಪರ್ವತದ ವಿವರ – ಮಾಲ್ಯವತದಿಕ್ಕೆಲನಾವಿಧದಿ ಕೈಲಾಸ ಪರ್ವತ ಗಂಧಮಾದನವು

ಪದ್ಯ ೪೪: ಗಿರಿಗಳ ವಿಸ್ತಾರವೆಷ್ಟು?

ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾಸಿರ
ವರುಷ ನವನವ ನವಸಹಸ್ರವದಾರು ಮಧ್ಯದಲಿ
ವರುಷವದು ಇಪ್ಪತ್ತ ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ (ಅರಣ್ಯ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಒಂಬತ್ತು ವರ್ಷಗಳ (ಕುರು, ಹಿರಣ್ಮಯ, ರಮ್ಯಕ, ಇಳಾವೃತ, ಹರಿ, ಕಿಂಪುರುಷ, ಭರತ, ಭದ್ರಾಶ್ವ, ಕೇತುಮಾಲ) ನಡುವಿರುವ ಗಿರಿಗಳು ಎರಡೆರಡು ಸಹಸ್ರ ಯೋಜನ ವಿಸ್ತಾರವಾಗಿವೆ. ಮಧ್ಯದಲ್ಲಿ ಆರು ಸಹಸ್ರ ಯೋಜನ ವಿಸ್ತಾರದ ಪರ್ವತಗಳಿವೆ. ಹೀಗೆ ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಇಪ್ಪತ್ನಾಲ್ಕು ಯೋಜನ ವಿಸ್ತಾರದ ಪರ್ವತಗಳಿವೆ. ಇವು ಲವಣ ಸಮುದ್ರದವರೆಗೂ ಹಬ್ಬಿವೆ.

ಅರ್ಥ:
ವರ್ಷ: ಭೂ ಮಂಡಲದ ವಿಭಾಗ; ಮಧ್ಯ: ನಡುವೆ; ಪರ್ವತ: ಗಿರಿ, ಬೆಟ್ಟ; ಹರಹು: ವಿಸ್ತಾರ; ಸಾಸಿರ: ಸಹಸ್ರ, ಸಾವಿರ; ನವ: ಹೊಸ; ಪರಿಗಣನೆ: ಗಮನ, ಲೆಕ್ಕಾಚಾರ; ಮೂಡಣ: ಪೂರ್ವ; ಪಡುವಣ: ಪಶ್ಚಿಮ; ಮೆರೆ: ಹೊಳೆ, ಪ್ರಕಾಶಿಸು; ಹೊರಗೆ: ಆಚೆ; ಲವಣ: ಉಪ್ಪು; ಅಬ್ಧಿ: ಸಾಗರ;

ಪದವಿಂಗಡಣೆ:
ವರುಷ +ಮಧ್ಯದ +ಪರ್ವತಂಗಳ
ಹರಹು+ ತಾನ್+ಎರಡೆರಡು +ಸಾಸಿರ
ವರುಷ +ನವನವ +ನವ+ಸಹಸ್ರವದ್+ಆರು+ ಮಧ್ಯದಲಿ
ವರುಷವದು +ಇಪ್ಪತ್ತ +ನಾಲ್ಕರ
ಪರಿಗಣಿತ+ ಮೂಡಣದು +ಪಡುವಣದ್
ಎರಡು+ ತಾನದರಂತೆ +ಮೆರೆವುದು+ ಹೊರಗೆ +ಲವಣಾಬ್ಧಿ

ಅಚ್ಚರಿ:
(೧) ಎರಡೆರಡು , ನವನವ – ಜೋಡಿ ಪದಗಳ ಬಳಕೆ

ಪದ್ಯ ೧೩: ಧರ್ಮರಾಯನ ರಾಜ್ಯದ ಸರಹದ್ದುಗಳಾವುವು?

ಬಡಗಲುತ್ತರ ಕುರುಗಳಿತ್ತಲು
ಪಡುವಲುದಧಿ ವಿಭೀಷಣನ ಪುರ
ಗಡಿ ಕೃತಾಂತನ ದೆಸೆಗೆ ಮೂಡಲು ದಿನಪನುದಯಾದ್ರಿ
ಪೊಡವಿಯದರಲಿ ಯಮಜನಾಣೆಗೆ
ನಡುಗುವುದು ರಾಯಂಗೆ ತೆತ್ತುದು
ಗಡ ಸುವಸ್ತುವನೇನಸಾಧ್ಯವು ಕೃಷ್ಣನೊಲಿದರಿಗೆ (ಸಭಾ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಉತ್ತರಕ್ಕೆ ಉತ್ತರ ಕುರುವರ್ಷ, ಪಶ್ಚಿಮಕ್ಕೆ ಪಶ್ಚಿಮ ಸಮುದ್ರ, ದಕ್ಷಿಣಕ್ಕೆ (ಯಮನ ದಿಕ್ಕು) ವಿಭೀಷಣನ ಲಂಕಾನಗರ, ಪೂರ್ವಕ್ಕೆ ಉದಯಪರ್ವತ, ಇವುಗಳ ನಡುವಿನ ಭೂಮಿಯು ಧರ್ಮರಾಯನ ಆಜ್ಞೆಗೆ ಬೆದರುತ್ತಿತ್ತು. ಅವನಿಗೆ ಉತ್ತಮ ವಸ್ತುಗಳನ್ನು ಕೊಟ್ಟಿತು, ಎಂದ ಮೇಲೆ ಕೃಷ್ಣನು ಒಲಿದವರಿಗೆ ಅಸಾಧ್ಯವು ಯಾವುದು?

ಅರ್ಥ:
ಬಡಗಲು: ಉತ್ತರ; ಕುರು: ಸಣ್ನದಾದ; ಪಡುವಲ:ಪಶ್ಚಿಮ; ಉದಧಿ: ಸಮುದ್ರ; ಗಡಿ: ಸರಹದ್ದು; ಕೃತಾಂತ: ಯಮ; ದೆಸೆ: ದಿಕ್ಕು; ಮೂಡಲ: ಪೂರ್ವ; ದಿನಪ: ಸೂರ್ಯ; ಉದಯ: ಹುಟ್ಟು; ಅದ್ರಿ: ಬೆಟ್ಟ; ಪೊಡವಿ: ಭೂಮಿ, ಪೃಥ್ವಿ; ಯಮಜ: ಯುಧಿಷ್ಠಿರ; ಆಣೆ: ಪ್ರತಿಜ್ಞೆ; ನಡುಗು: ಹೆದರು; ರಾಯ: ರಾಜ; ತೆತ್ತು: ಕೊಡು; ಗಡ: ಬೇಗನೆ; ಸುವಸ್ತು: ಒಳ್ಳೆಯ ಸಾಮಗ್ರಿ; ಒಲಿ: ಒಪ್ಪು, ಸಮ್ಮತಿಸು;

ಪದವಿಂಗಡಣೆ:
ಬಡಗಲ್+ಉತ್ತರ +ಕುರುಗಳ್+ಇತ್ತಲು
ಪಡುವಲ್+ಉದಧಿ +ವಿಭೀಷಣನ+ ಪುರ
ಗಡಿ +ಕೃತಾಂತನ +ದೆಸೆಗೆ +ಮೂಡಲು +ದಿನಪನ್+ಉದಯಾದ್ರಿ
ಪೊಡವಿಯದರಲಿ+ ಯಮಜನ್+ಆಣೆಗೆ
ನಡುಗುವುದು +ರಾಯಂಗೆ +ತೆತ್ತುದು
ಗಡ +ಸುವಸ್ತುವನ್+ಏನ್+ಅಸಾಧ್ಯವು +ಕೃಷ್ಣನ್+ಒಲಿದರಿಗೆ

ಅಚ್ಚರಿ:
(೧) ದಿಕ್ಕುಗಳನ್ನು ಕರೆದಿರುವ ಬಗೆ: ಬಡಗಲು (ಉತ್ತರ), ಪಡುವಣ (ಪಶ್ಚಿಮ), ಕೃತಾಂತನ ದೆಸೆ (ದಕ್ಷಿಣ), ಮೂಡಲು
(ಪೂರ್ವ)

ಪದ್ಯ ೩೩: ಘಟೋತ್ಕಚನು ತನ್ನ ಪರಿಚಯವನ್ನು ಹೇಗೆ ಮಾಡಿದನು?

ಬಡಗಲರ್ಜುನನುತ್ತರಾಬ್ಛಿಯ
ತಡಿಯನೆಲ ಪರಿಯಂತ ವಸ್ತುವ
ಜದಿದು ತಂದನು ಮೂಡಲಾವರಿಸಿದನು ಕಲಿಭೀಮ
ಪಡುವಲರ್ಜುನನನುಜ ತೆಂಕಣ
ಕಡೆಗೆ ಸಹದೇವಾಖ್ಯಾನೀ ಪರಿ
ನಡೆವುತಿದ್ದುದು ತಾ ಘಟೋತ್ಕಚ ಭೀಮಸುತನೆಂದ (ಸಭಾ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ರಾಜಸೂಯ ಯಾಗದ ಪರಿಯಾಗಿ ದಿಗ್ವಿಜಯ ಯಾತ್ರೆಯನ್ನು ಆತನ ಸಹೋದರರು ಪ್ರಾರಂಭಿಸಿದರು. ಅರ್ಜುನನು ಉತ್ತರ ಸಮುದ್ರದವರೆಗಿನ ಭೂಮಿಯ ರಾಜರನ್ನು ಗೆದ್ದು ಅಪಾರಧನವನ್ನು ತಂದನು. ಪೂರ್ವಕ್ಕೆ ಹೋಗಿ ಭೀಮನು ದಿಗ್ವಿಜಯ ಮಾಡಿದನು, ಪಶ್ಚಿಮಕ್ಕೆ ನಕುಲನೂ ದಕ್ಷಿಣಕ್ಕೆ ಸಹದೇವನೂ ದಿಗ್ವಿಜಯಕ್ಕೆ ಬಂದರು. ನಾನು ಭೀಮನ ಪುತ್ರ ಘಟೋತ್ಕಚ ಎಂದು ಪರಿಚಯಿಸಿದನು.

ಅರ್ಥ:
ಬಡಗಲು: ಉತ್ತರ; ಅಬ್ಛಿ: ಸಮುದ್ರ; ತಡಿ: ದಡ; ನೆಲ: ಭೂಮಿ; ಪರಿ: ಸೀಮೆ; ವಸ್ತು: ಸಾಮಗ್ರಿ; ಜಡಿ: ಹೊಡೆತ; ಮೂಡಲು: ಪೂರ್ವ; ಆವರಿಸು: ಸುತ್ತುವರೆ; ಕಲಿ: ಶೂರ; ಪಡುವಣ: ಪಶ್ಚಿಮ; ಅನುಜ: ತಮ್ಮ; ತೆಂಕಣ: ದಕ್ಷಿಣ; ಆಖ್ಯ: ಹೆಸರು; ಪರಿ: ರೀತಿ; ಸುತ: ಮಗ;

ಪದವಿಂಗಡಣೆ:
ಬಡಗಲ್+ಅರ್ಜುನನ್+ಉತ್ತರ+ಅಬ್ಛಿಯ
ತಡಿಯ+ನೆಲ+ ಪರಿಯಂತ +ವಸ್ತುವ
ಜದಿದು +ತಂದನು +ಮೂಡಲ್+ಆವರಿಸಿದನು+ ಕಲಿಭೀಮ
ಪಡುವಲ್+ಅರ್ಜುನನ್+ಅನುಜ +ತೆಂಕಣ
ಕಡೆಗೆ +ಸಹದೇವ+ಆಖ್ಯಾನೀ+ ಪರಿ
ನಡೆವುತಿದ್ದುದು+ ತಾ +ಘಟೋತ್ಕಚ +ಭೀಮ+ಸುತನೆಂದ

ಅಚ್ಚರಿ:
(೧) ಬಡಗಲು, ಮೂಡಲ, ಪಡುವಣ, ತೆಂಕಣ – ದಿಕ್ಕುಗಳ ಪದಗಳ ಬಳಕೆ
(೨) ಭೀಮ – ೩, ೬ ಸಾಲಿನ ಕೊನೆ ಪದ
(೩) ಅರ್ಜುನ – ೧, ೪ ಸಾಲಿನ ಮೊದಲ ಪದ