ಪದ್ಯ ೨೦: ಧೃತರಾಷ್ಟ್ರನ ಒಳ ಮನಸ್ಸು ಏನನ್ನು ಬಯಸುತ್ತದೆ?

ಮರುಳು ಮಗನೇ ಶಿವ ಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ (ಸಭಾ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಗ ದುರ್ಯೋಧನನೇ, ನಿನಗೆಲ್ಲೋ ಹುಚ್ಚು ಶಿವ ಶಿವಾ, ನಾನು ಬರಡು ಮನಸ್ಸಿನವನಲ್ಲ. ನನಗೆ ನಿಮ್ಮ ಐಶ್ವರ್ಯದ ಮೇಲೆ ದ್ವೇಷ ದಾಯಾದಿಗಳ ಅಭ್ಯುಯದಲ್ಲಿ ಸಂತೋಷವಿದೆಯೆಂದು ತಿಳಿದಿರುವೆಯಾ? ಅವರು ದುಷ್ಟರು, ದೈವ ಸದಾಜಾಗ್ರತವಾಗಿರುತ್ತದೆ, ಅವರು ಕೆಡುವುದಿಲ್ಲ ಎಂದು ಬಾಯಿತುದಿಯ ಮಾತಾಡುತ್ತಾ, ಸ್ನೇಹದ ಲೇಪವನ್ನು ನಾನು ನಟಿಸುತ್ತಿದ್ದೇನೆ ಎಂದನು.

ಅರ್ಥ:
ಮರುಳು: ಹುಚ್ಚು, ತಿಳಿಗೇಡಿ; ಮಗ: ಸುತ; ಮನ: ಮನಸ್ಸು; ಬರಡು: ಒಣಗಿದ್ದು, ನಿರುಪಯುಕ್ತ; ಅಕಟ: ಅಯ್ಯೋ; ಐಶ್ವರ್ಯ: ಸಿರಿ, ಸಂಪತ್ತು; ಹಗೆ: ವೈರ; ದಾಯಾದಿ: ಅಣ್ಣ ತಮ್ಮಂದಿರ ಮಕ್ಕಳು; ಅಭ್ಯುದಯ: ಏಳಿಗೆ; ಸೊಗಸು: ಚೆಲುವು; ದುರುಳ: ದುಷ್ತ; ಅವದಿರು: ಅವರು; ದೈವ: ಭಗವಂತ; ಮುಖ: ಆನನ; ಎಚ್ಚರ: ಜಾಗರೂಕತೆ; ಘನ: ಹಿರಿಯ, ದೊಡ್ಡ; ಕೆಡರು: ಹಾಳು; ಮೇಗರೆ: ವ್ಯರ್ಥವಾಗಿ; ಹೊರ: ಆಚೆ; ಮನ: ಮನಸ್ಸು; ಸೂಸು: ಎರಚು, ಚಲ್ಲು; ನೇಹ: ಗೆಳೆತನ, ಸ್ನೇಹ; ಅರಸು: ಹುಡುಕು;

ಪದವಿಂಗಡಣೆ:
ಮರುಳು +ಮಗನೇ +ಶಿವ+ ಶಿವಾ+ ಮನ
ಬರಡನೇ+ ತಾನ್+ಅಕಟ +ನಿಮ್
ಐಶ್ವರಿಯ +ಹಗೆ +ದಾಯಾದ್ಯರುಗಳ್+ಅಭ್ಯುದಯದಲಿ +ಸೊಗಸೆ
ದುರುಳರ್+ಅವದಿರು +ದೈವ+ಮುಖದೆ
ಚ್ಚರಿಕೆ+ ಘನ+ ಕೆಡರೆಂದು +ಮೇಗರೆ
ಹೊರಮನದ+ ಸೂಸಕದ+ ನೇಹವನ್+ಅರಸುತಿಹೆನೆಂದ

ಅಚ್ಚರಿ:
(೧) ಧೃತರಾಷ್ಟ್ರನ ಇಂಗಿತವನ್ನು ಹೇಳುವ ಪರಿ – ದೈವಮುಖದೆಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ

ಪದ್ಯ ೨೫: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೨?

ಕೌರವನ ಮೇಲಿಲ್ಲದಗ್ಗದ
ವೈರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿನ್ನೆಬರ
ವೈರವುಪಶುಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣೆ ತೋರುವುದಿದೇನೈ ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೇಲಿರುವ ವೈರತ್ವಕ್ಕಿಂತ ಕರ್ಣನ ಮೇಲೆ ಹೆಚ್ಚಿನ ಹಗೆತನವಿತ್ತು, ನಮಗೆ ಅಪಕಾರವನ್ನು ಎಸಗಿದವನನ್ನು ಈ ಕ್ಷಣದವರೆಗೂ ಕೊಲ್ಲಬೇಕೆಂದು ಮನ ತವಕಿಸುತ್ತಿತ್ತು, ಆದರೀಗ ವೈರತ್ವದ ಭಾವವು ಶಾಂತವಾಗಿದೆ, ಧರ್ಮಜನ ಮೇಲಿರುವ ಪ್ರೀತಿಯ ಎರಡರಷ್ಟು ಪ್ರೀತಿ ಇವನ ಮೇಲೆ ಹುಟ್ಟಿದೆ, ಕೃಷ್ಣ ಕರ್ಣನು ಯಾರೆಂದು ದಯವಿಟ್ಟು ಹೇಳು ಎಂದು ಅರ್ಜುನನು ಗೋಗರೆದನು.

ಅರ್ಥ:
ಅಗ್ಗ: ಹೆಚ್ಚು; ವೈರ: ಹಗೆ, ಶತ್ರು; ಅಪಕಾರ: ಕೆಟ್ಟದ್ದು; ಮರಣ: ಸಾವು; ಅನುಸಂಧಾನ: ಪರಿಶೀಲನೆ; ಉಪಶಮನ: ಶಾಂತವಾಗುವುದು; ವೀರ: ಶೂರ; ಇಮ್ಮಡಿ: ಎರಡು ಪಟ್ಟು; ನೇಹ: ಗೆಳೆತನ, ಸ್ನೇಹ; ಭಾರವಣೆ: ಘನತೆ, ಗೌರವ; ತೋರು: ಗೋಚರಿಸು;

ಪದವಿಂಗಡಣೆ:
ಕೌರವನ +ಮೇಲಿಲ್ಲದ್+ಅಗ್ಗದ
ವೈರವ್+ಈತನಮೇಲೆ +ನಮಗ್+ಅಪ
ಕಾರಿ+ಈತನು +ಮರಣದ್+ಅನುಸಂಧಾನವ್+ಇನ್ನೆಬರ
ವೈರವ್+ಉಪಶುಮಿಸಿತು+ ಯುಧಿಷ್ಠಿರ
ವೀರನಿಂದ್+ಇಮ್ಮಡಿಯ +ನೇಹದ
ಭಾರವಣೆ+ ತೋರುವುದ್+ಇದೇನೈ +ಕರ್ಣನಾರೆಂದ

ಅಚ್ಚರಿ:
(೧) ಅರ್ಜುನನಿಗೆ ಕರ್ಣನ ಮೇಲೆ ಪ್ರೀತಿಯುಕ್ಕಿತು ಎಂದು ಹೇಳಲು – ವೈರವುಪಶುಮಿಸಿತು ಯುಧಿಷ್ಠಿರವೀರನಿಂದಿಮ್ಮಡಿಯ ನೇಹದ ಭಾರವಣೆ ತೋರುವುದ್

ಪದ್ಯ ೨೧: ಜಯವಧುವಿನ ಲಕ್ಷಣವೇನು?

ಮುಗುಳುನಗೆಯೊಬ್ಬರಲಿ ಸವಿವಾ
ತುಗಳ ರಸವೊಬ್ಬರಲಿ ಕಡೆಗ
ಣ್ಣುಗಳ ಮಿಂಚೊಬ್ಬರಲಿ ನೇವುರದೆಳೆಮೊಳಗು ಸಹಿತ
ಸೊಸಗು ಬೇರೊಬ್ಬರಲಿ ನೇಹದ
ತಗಹು ಬೇರೊಬ್ಬರಲಿ ಸತಿಯರ
ವಿಗಡತನವಿದು ಸಹಜ ಜಯವಧು ಜಾರೆ ನೋಡೆಂದ (ಕರ್ಣ ಪರ್ವ, ೨೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಜಯವಧುವು ಒಬ್ಬರನ್ನು ಕಂಡು ಮುಗುಳ್ನಗುತ್ತಾಳೆ. ಇನ್ನೊಬ್ಬರೊಡನೆ ಸವಿಮಾತುಗಳನ್ನಾಡುತ್ತಾಳೆ. ಕಡೆಗಣ್ಣಿನ ನೋಟವನ್ನು ಒಬ್ಬರತ್ತ ಬೀರುತ್ತಾಳೆ. ಕಾಲ್ಗೆಜ್ಜೆಯ ಸದ್ದಿನಿಂದ ಇನ್ನೊಬ್ಬರೊಡನೆ ಹೋಗಿ ಸೇರುತ್ತಾಳೆ. ಮತ್ತೊಬ್ಬರನ್ನು ಪ್ರೀತಿಯಿಂದ ಸೇರುತ್ತಾಳೆ. ಇದು ಸ್ತ್ರೀಸ್ವಭಾವ, ಹೇಳಿ ಕೇಳಿ ಜಯವಧುವು ಜಾರೆ.

ಅರ್ಥ:
ಮುಗುಳು: ಮೊಗ್ಗು, ಚಿಗುರು; ಸವಿ: ಪ್ರೀತಿ, ಒಲವು; ವಾತು: ಮಾತು; ರಸ: ಸಾರ; ಕಡೆಗಣ್ಣು: ಕಣ್ಣಿನ ತುದಿ; ಮಿಂಚು: ಹೊಳಪು, ಕಾಂತಿ; ನೇವುರ: ಅಂದುಗೆ, ನೂಪುರ; ಮೊಳಗು: ಧ್ವನಿ, ಸದ್ದು; ಎಳೆ: ಚಿಕ್ಕ; ಸೆಳೆ, ಆಕರ್ಷಿಸು; ಸಹಿತ: ಜೊತೆ; ಸೊಗಸು: ಅಂದ; ನೇಹ: ಪ್ರೀತಿ, ಒಲುಮೆ; ತಗಹು: ಅಡ್ಡಿ, ತಡೆ; ಸತಿ: ಹೆಂಡತಿ; ವಿಗಡ: ಅತಿಶಯ, ಆಧಿಕ್ಯ; ಸಹಜ: ನೈಜವಾದ, ಸ್ವಭಾವ ಸಿದ್ಧವಾದ; ಜಯ: ಗೆಲುವು; ವಧು:ಹೆಂಗಸು, ಸ್ತ್ರೀ; ಜಾರೆ: ಹಾದರಗಿತ್ತಿ, ವ್ಯಭಿಚಾರಿಣಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಮುಗುಳುನಗೆ+ಒಬ್ಬರಲಿ +ಸವಿವಾ
ತುಗಳ+ ರಸವ್+ಒಬ್ಬರಲಿ +ಕಡೆಗ
ಣ್ಣುಗಳ +ಮಿಂಚ್+ಒಬ್ಬರಲಿ +ನೇವುರದ್+ಎಳೆಮೊಳಗು+ ಸಹಿತ
ಸೊಗಸು+ ಬೇರೊಬ್ಬರಲಿ +ನೇಹದ
ತಗಹು +ಬೇರೊಬ್ಬರಲಿ+ ಸತಿಯರ
ವಿಗಡತನವಿದು +ಸಹಜ +ಜಯವಧು +ಜಾರೆ +ನೋಡೆಂದ

ಅಚ್ಚರಿ:
(೧) ಗೆಲುವನ್ನು ಜಾರೆಗೆ ಹೋಲಿಸಿ ಬರೆದ ಪದ್ಯ
(೨) ಒಬ್ಬರಲಿ – ಪ್ರತಿ ಸಾಲಿನಲ್ಲಿ ಬರುವ ಪದ
(೩) ಜಯವಧುವಿನ ಲಕ್ಷಣಗಳು – ಮುಗುಳುನಗೆ, ಸವಿವಾತು, ಕಡೆಗಣ್ಣು, ಮಿಂಚು, ಎಳೆಮೊಳಗು, ಸೊಗಸು, ನೇಹ