ಪದ್ಯ ೬೩: ಕೌರವನು ಯಾರನ್ನು ಸೇನಾಧಿಪತಿಯನ್ನಾಗಿ ಮಾಡಿದನು?

ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ (ಗದಾ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಕೌರವನು ನುಡಿಯುತ್ತಾ, ಅಶ್ವತ್ಥಾಮ, ನೀನು ಸೇನಾಧಿಪತಿ, ಇವರಿಬ್ಬರೂ ನಿನ್ನ ಸೇನೆ. ನೀವಿನ್ನು ಯುದ್ಧ ಮಾಡಿರಿ ಎಂದು ಅಪ್ಪಣೆ ಕೊಟ್ಟನು. ಅವರು ಮೂವರೂ ಕೌರವನನ್ನು ಬೀಳುಕೊಂಡು ಸೂತರು ತೋರಿಸಿದಂತೆ ರಥವನ್ನೇರಿದರು.

ಅರ್ಥ:
ವರ: ಶ್ರೇಷ್ಠ; ಚಮೂಪತಿ: ಸೇನಾಧಿಪತಿ; ಬಳಿಕ: ನಂತರ; ಚಮು: ಸೇನೆ; ವಿಸ್ತಾರ: ಹರಡು; ರಚಿಸು: ನಿರ್ಮಿಸು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತ್ರಯ: ಮೂರು; ನೇಮಿಸು: ಅಪ್ಪಣೆ ಮಾಡು; ಗುರುಜ: ಗುರುವಿನ ಪುತ್ರ (ಅಶ್ವತ್ಥಾಮ); ನರೇಂದ್ರ: ರಾಜ; ಬೀಳುಕೊಂಡು: ತೆರಳು; ಕರೆದು: ಬರೆಮಾದು; ಸೂತ: ಸಾರಥಿ; ಸನ್ನೆ: ಗುರುತು; ಬಂದು: ಆಗಮಿಸು; ಏರು: ಮೇಲೆ ಹತ್ತು; ರಥ: ಬಂಡಿ;

ಪದವಿಂಗಡಣೆ:
ವರ +ಚಮೂಪತಿ+ ನೀನು +ಬಳಿಕ್
ಇಬ್ಬರು+ ಚಮೂ+ವಿಸ್ತಾರವ್+ಎನೆ +ವಿ
ಸ್ತರಿಸಿ+ ರಚಿಸುವುದೆಂದು +ರಥಿಕ+ತ್ರಯಕೆ+ ನೇಮಿಸಿದ
ಗುರುಜ +ಕೃಪ +ಕೃತವರ್ಮರ್+ಈ+ ಮೂ
ವರು +ನರೇಂದ್ರನ+ ಬೀಳುಕೊಂಡರು
ಕರೆದು +ಸೂತರ+ ಸನ್ನೆಯಲಿ +ಬಂದೇರಿದರು +ರಥವ

ಅಚ್ಚರಿ:
(೧) ಚಮೂಪತಿ, ಚಮೂವಿಸ್ತಾರ – ಪದಗಳ ಬಳಕೆ
(೨) ಇಬ್ಬರು, ಮೂವರು – ೨, ೫ ಸಾಲಿನ ಮೊದಲ ಪದ

ಪದ್ಯ ೨: ಧರ್ಮಜನು ಸಾತ್ಯಕಿಗೆ ಯಾವ ಅಪ್ಪಣೆಯನ್ನು ನೀಡಿದನು?

ತಂದೆ ಸಾತ್ಯಕಿ ಹೋಗು ಫಲುಗುಣ
ನೊಂದನೋ ಜೀವಿಸಿದನೋ ಸುರ
ವೃಂದವನು ಸೇರಿದನೊ ಮೇಣೆಂಬೀ ನಿಧಾನವನು
ತಂದು ನೀನೆನಗರುಹು ಪಾರ್ಥನ
ಹಿಂದೆ ಬದುಕಿಲ್ಲವನಿಯಲಿ ತನ
ಗೆಂದು ದುಗುಡವ ಹಿಡಿದು ಸಾತ್ಯಕಿಗರಸ ನೇಮಿಸಿದ (ದ್ರೋಣ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಧರ್ಮಜನು ಸಾತ್ಯಕಿಯನ್ನು ಕರೆದು, ಅಪ್ಪಾ, ಸಾತ್ಯಕಿ, ಹೋಗು ಯುದ್ಧದಲ್ಲಿ ಅರ್ಜುನನು ನೊಂದಿರುವನೋ, ಬದುಕಿರುವನೋ ಇಲ್ಲ ದೇವತೆಗಳ ಮೇಳಕ್ಕೆ ಸೇರಿದನೋ ಎನ್ನುವುದನ್ನು ನೋಡಿಕೊಂಡು ಬಂದು ನನಗೆ ತಿಳಿಸು, ಅರ್ಜುನನಿಲ್ಲದೆ ನಾನು ಭೂಮಿಯ ಮೇಲೆ ಉಳಿಯಲಾರೆ ಎಂದು ದುಃಖವನ್ನು ಹೊರಹಾಕುತ್ತಾ ಅಪ್ಪಣೆ ನೀಡಿದನು.

ಅರ್ಥ:
ತಂದೆ: ಅಪ್ಪ; ಹೋಗು: ತೆರಳು; ನೊಂದು: ನೋವು; ಜೀವಿಸು: ಬದುಕು; ಸುರ: ದೇವತೆ; ವೃಂದ: ಗುಂಪು; ಸೇರು: ಜೊತೆಗೂಡು; ಮೇಣ್: ಅಥವ; ನಿಧಾನ: ವಿಳಂಬ, ಸಾವಕಾಶ; ತಂದು: ಬರೆಮಾಡು; ಅರುಹು: ಹೇಳು; ಬದುಕು: ಜೀವನ; ಅವನಿ: ಭೂಮಿ; ದುಗುಡ: ದುಃಖ; ಹಿಡಿ: ಗ್ರಹಿಸು; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ತಂದೆ +ಸಾತ್ಯಕಿ +ಹೋಗು +ಫಲುಗುಣ
ನೊಂದನೋ +ಜೀವಿಸಿದನೋ+ ಸುರ
ವೃಂದವನು +ಸೇರಿದನೊ+ ಮೇಣ್+ಎಂಬೀ +ನಿಧಾನವನು
ತಂದು +ನೀನೆನಗ್+ಅರುಹು +ಪಾರ್ಥನ
ಹಿಂದೆ +ಬದುಕಿಲ್ಲ್+ಅವನಿಯಲಿ +ತನ
ಗೆಂದು +ದುಗುಡವ +ಹಿಡಿದು +ಸಾತ್ಯಕಿಗ್+ಅರಸ +ನೇಮಿಸಿದ

ಅಚ್ಚರಿ:
(೧) ಸತ್ತನೋ ಎಂದು ಹೇಳಲು – ಸುರವೃಂದವನು ಸೇರಿದನೊ

ಪದ್ಯ ೫೫: ವೇದವ್ಯಾಸರು ಏನೆಂದು ಅಪ್ಪಣೆ ಮಾಡಿದರು?

ಆ ಸಮಯದಲಿ ರಾಯ ವೇದ
ವ್ಯಾಸಮುನಿ ನಡೆತಂದು ಗತ ಪರಿ
ತೋಷನನು ಸಂತೈಸಿ ಕರೆಸಿದನಂದು ಸಂಜಯನ
ಆ ಸಮರವೃತ್ತಾಂತ ನಿನಗೆ ಸ
ಮಾಸ ವಿಸ್ತರವಾಗಿರಲಿ ಭೂ
ಮೀಶತಿಲಂಕಗರುಹುವುದು ನೀನೆಂದು ನೇಮಿಸಿದ (ಭೀಷ್ಮ ಪರ್ವ, ೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ಆ ಸಮಯದಲ್ಲಿ ವೇದವ್ಯಾಸರು ಬಂದು ಸಂತೋಷಹೀನನಾಗಿದ್ದ ಧೃತರಾಷ್ಟ್ರನನ್ನು ಸಂತೈಸಿದರು. ಸಂಜಯನನ್ನು ಕರೆದು, ನಿನಗೆ ಯುದ್ಧ ಭೂಮಿಯಲ್ಲಿ ನಡೆಯುವುದೆಲ್ಲವೂ ತಿಳಿಯುವಂತಾಗಲಿ, ನೀಣು ಧೃತರಾಷ್ಟ್ರನಿಗೆ ಹೇಳು ಎಂದು ಅಪ್ಪಣೆ ಮಾಡಿದರು.

ಅರ್ಥ:
ಸಮಯ: ಕಾಲ; ರಾಯ: ಒಡೆಯ; ಮುನಿ: ಋಷಿ; ನಡೆ: ಚಲಿಸು; ಗತ: ಹಿಂದಿನ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಸಂತೈಸು: ಸಾಂತ್ವನಗೊಳಿಸು; ಸಮರ: ಯುದ್ಧ; ವೃತ್ತಾಂತ: ಘಟನೆ, ಸಂಗತಿ; ಸಮಾಸ: ಒಟ್ಟು, ಮೊತ್ತ; ವಿಸ್ತರ: ವಿವರ; ಭೂಮೀಶ: ರಾಜ; ತಿಲಕ: ಶ್ರೇಷ್ಠ; ಅರುಹು:ತಿಳಿಸು, ಹೇಳು; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಆ +ಸಮಯದಲಿ +ರಾಯ +ವೇದ
ವ್ಯಾಸಮುನಿ +ನಡೆತಂದು+ ಗತ+ ಪರಿ
ತೋಷನನು +ಸಂತೈಸಿ +ಕರೆಸಿದನ್+ಅಂದು +ಸಂಜಯನ
ಆ +ಸಮರ+ವೃತ್ತಾಂತ +ನಿನಗೆ+ ಸ
ಮಾಸ +ವಿಸ್ತರವಾಗಿರಲಿ +ಭೂ
ಮೀಶ+ತಿಲಂಕಗ್+ ಅರುಹುವುದು +ನೀನೆಂದು +ನೇಮಿಸಿದ

ಅಚ್ಚರಿ:
(೧) ಸಮಯ, ಸಮರ, ಸಮಾಸ – ಸ ಕಾರದ ಪದಗಳು
(೨) ರಾಯ, ಭೂಮೀಶ – ಸಮನಾರ್ಥಕ ಪದಗಳು

ಪದ್ಯ ೩೨: ಅರ್ಜುನನ ಆರೈಕೆಗೆ ಯಾರನ್ನು ನೇಮಿಸಿದನು?

ಇವರನರಮನೆಯೊಳಗೆ ಕನ್ಯಾ
ಭವನ ಮಧ್ಯದೊಳಿರಿಸಿ ಬಳಿಕಿನೊ
ಳಿವರ ಶುಶ್ರೂಷೆಗೆ ಸುಭದ್ರಾದೇವಿಯನು ಕರೆಸಿ
ಇವರಪೂರ್ವ ಮಹಾತ್ಮಕರು ನೀ
ನಿವರ ದೇವಾರ್ಚನೆ ಸಮಾಧಿ
ಪ್ರವರದಲಿ ಬೆಸಸಿದನು ಮಾಡುವುದೆಂದು ನೇಮಿಸಿದ (ಆದಿ ಪರ್ವ, ೧೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸನ್ಯಾಸಿ ವೇಷದಲ್ಲಿದ್ದ ಅರ್ಜುನನನ್ನು ಅರಮನೆಯ ಕನ್ಯಾಭವನದ ಮಧ್ಯಭಾಗದಲ್ಲಿರಿಸಿ, ತನ್ನ ತಂಗಿಯಾದ ಸುಭದ್ರೆಯನ್ನು ಇವರ ಶುಶ್ರೂಷೆಗೆ ನೇಮಿಸಿ, ಇವರು ಅಪೂರ್ವ ಮಹಾತ್ಮರು, ಇವರು ಮಾಡುವ ದೇವತಾರ್ಚನೆ ಇವರು ಸಮಾಧಿಸ್ಥಿತಿಯಲ್ಲಿರಲು ಅನುಕೂಲಗಳನ್ನು ಇವರು ಹೇಳಿದಂತೆ ಮಾಡು ಎಂದು ಆಜ್ಞಾಪಿಸಿದನು.

ಅರ್ಥ:
ಅರಮನೆ: ರಾಜರ ವಾಸಸ್ಥಾನ; ಕನ್ಯ: ಹುಡುಗಿ; ಭವನ: ಮನೆ; ಮಧ್ಯ: ನಡು; ಶುಶ್ರೂಷೆ: ಆರೈಕೆ; ಕರೆಸಿ: ಬರೆಮಾಡು; ಅಪೂರ್ವ: ಅಪರೂಪವಾದ; ಮಹಾತ್ಮ: ಘನವಂತ;ಅರ್ಚನೆ: ಪೂಜೆ; ಸಮಾಧಿ: ಒಂದು ಸ್ಥಿತಿ, ತನ್ಮಯತೆ; ಪ್ರವರ: ಶ್ರೇಷ್ಠ; ಬೆಸಸು:ಹೇಳು; ನೇಮಿಸು: ಮನಸ್ಸನ್ನು ನಿಯಂತ್ರಿಸು;

ಪದವಿಂಗಡಣೆ:
ಇವರನ್+ ಅರಮನೆಯೊಳಗೆ +ಕನ್ಯಾ
ಭವನ +ಮಧ್ಯದೊಳ್+ಇರಿಸಿ+ ಬಳಿಕಿನೊಳ್
ಇವರ +ಶುಶ್ರೂಷೆಗೆ +ಸುಭದ್ರಾದೇವಿಯನು +ಕರೆಸಿ
ಇವರ್+ ಅಪೂರ್ವ +ಮಹಾತ್ಮಕರು+ ನೀನ್
ಇವರ+ ದೇವಾರ್ಚನೆ+ ಸಮಾಧಿ
ಪ್ರವರದಲಿ+ ಬೆಸಸಿದನು +ಮಾಡುವುದೆಂದು +ನೇಮಿಸಿದ

ಅಚ್ಚರಿ:
(೧) ಇವರ – ೪ ಸಾಲುಗಳಲ್ಲಿ ಮೊದಲ ಪದ
(೨) ಇರಿಸಿ, ಕರೆಸಿ, ಬೆಸಸಿ, ನೇಮಿಸಿ – ಪ್ರಾಸ ಪದಗಳು