ಪದ್ಯ ೫: ಜೋಧರು ಆನೆಯನ್ನು ಹೇಗೆ ಏರಿದರು?

ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು (ದ್ರೋಣ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ರೆಂಚೆಯಲ್ಲಿ ಬಾಣಗಳು ಬಿಲ್ಲುಗಳು ಸೂನಿಗೆಗಳು ಸೇರಿಕೊಂಡಿದ್ದವು. ಸರಿಹಗ್ಗಗಳು ಕೈಗುಂಡು, ಕವಣೆಗಲ್ಲು, ಲೌಡಿ, ಖಡ್ಗಗಳನ್ನು ಜೋಡಿಸಿ ಮಾವುತರು ಗರ್ಜಿಸಿ ಆನೆಯನ್ನೇರಿದರು.

ಅರ್ಥ:
ಗಗನ: ಆಗಸ; ತಳ: ಕೆಳಗು, ಪಾತಾಳ, ನೆಲ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ತುಂಬು: ಅತಿಶಯ, ಬಾಹುಳ್ಯ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕಣೆ: ಬಾಣ; ಬಿಗಿ: ಭದ್ರವಾಗಿರುವುದು; ಆಳಿ: ಮೋಸ, ವಂಚನೆ, ಗುಂಪು; ಬಿಲ್ಲು: ಚಾಪ; ತೆತ್ತಿಸು: ಜೋಡಿಸು, ಕೂಡಿಸು; ಸೂನಿಗೆ: ಒಂದು ಬಗೆಯ ಆಯುಧ; ಉಗಿ: ಹೊರಹಾಕು; ನೇಣು: ಹಗ್ಗ, ಹುರಿ; ಗುಂಡು: ತುಪಾಕಿಯ ಗೋಲಿ, ಗುಂಡುಕಲ್ಲು; ಕವಣೆ: ಕಲ್ಲಿನಿಂದ ಬೀಸಿ ಹೊಡೆಯಲು ಮಾಡಿದ ಜಾಳಿಗೆಯ ಸಾಧನ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ಜೋಡಿಸು: ಕೂಡಿಸು; ಜೋಧ: ಆನೆ ಮೇಲೆ ಕೂತು ಯುದ್ಧ ಮಾಡುವವ; ಅಡರು: ಮೇಲಕ್ಕೆ ಹತ್ತು; ಬೊಬ್ಬಿರಿ: ಆರ್ಭಟಿಸು;

ಪದವಿಂಗಡಣೆ:
ಗಗನ+ ತಳವನು +ಬಿಗಿದ+ ಬಲು +ರೆಂ
ಚೆಗಳ +ತುಂಬಿದ +ಹೊದೆಯ +ಕಣೆಗಳ
ಬಿಗಿದನ್ + ಆಳಿಯ +ಬಿಲ್ಲುಗಳ +ತೆತ್ತಿಸಿದ +ಸೂನಿಗೆಯ
ಉಗಿವ+ ಸರಿನೇಣುಗಳ +ಕೈಗುಂ
ಡುಗಳ+ ಕವಣೆಯ +ಲೌಡಿ +ಕರವಾ
ಳುಗಳ+ ಜೋಡಿಸಿ +ಜೋದರ್+ಅಡರಿದರ್+ಅಂದು +ಬೊಬ್ಬಿರಿದು

ಪದ್ಯ ೧೦: ದ್ರೌಪದಿಯ ನೋಟವು ಹೇಗೆ ನೋವನ್ನುಂತುಮಾಡಿತು?

ಅರಿದು ನೆತ್ತರು ಗಾಣದಲಗಿದು
ನೆರೆ ಬಿಗಿಯೆ ಮೈಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದಡೆ ಹೊಗೆ ಮಸಗದೆದೆಗಿಚ್ಚು
ಅರರೆ ಕಂಗಳ ಧಾರೆ ಯಾವನ
ಕೊರಳಕೊಯ್ಯದದಾವ ನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವಶಿವಾಯೆಂದ (ವಿರಾಟ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಇವಳ ಕಣ್ಣೋಟದ ಧಾರೆಯು ಕತ್ತರಿಸಿದರೆ ರಕ್ತ ಸುರಿಯದ ಶಸ್ತ್ರ, ಬಿಗಿದರೆ ಮೈಮೇಲೆ ಬಾಸುಂಡೆ ಏಳದ ಹುರಿಗಳುಳ್ಳ ಚಾಟಿ, ಹೊತ್ತಿಕೊಂಡರೆ ಹೊಗೆ ಬಾರದ ಬೆಂಕಿ, ಇದು ಯಾರ ಕೊರಳನ್ನು ಕೊಯ್ಯದೆ ಬಿಟ್ಟೀತು? ಯಾರ ಮತಿಯನ್ನು ಕೆಡಿಸದಿದ್ದೀತು? ಶಿವ ಶಿವಾ ಈ ಕಣ್ಣೋಟಕ್ಕಿದಿರಾಗಿ ಯಾರು ನಿಂತಾರು? ಎಂದು ಕೀಚಕನು ಚಿಂತಿಸಿದನು.

ಅರ್ಥ:
ಅರಿ: ತಿಳಿ, ಕತ್ತರಿಸು; ನೆತ್ತರು: ರಕ್ತ; ಗಾಣ: ಣ್ಣೆಕಾಳು ಅರೆಯುವ ಯಂತ್ರ; ಅಲಗು: ಆಯುಧಗಳ ಹರಿತವಾದ ಅಂಚು; ನೆರೆ: ಗುಂಪು, ಸೇರು; ಬಿಗಿ: ಬಂಧಿಸು; ಮೈ: ತನು; ಬಾಸುಳು: ಹೊಡೆತದಿಂದ ಮೈಮೇಲೆ ಏಳುವ ಬಾವು, ಊತ, ಬಾಸುಂಡೆ; ಏಳು: ಹೊರಹೊಮ್ಮು; ಹುರಿ: ಹಗ್ಗ, ರಜ್ಜು; ಬಲಿ: ಗಟ್ಟಿ, ದೃಢ; ನೇಣು: ಹಗ್ಗ, ಹುರಿ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಹೊಗೆ: ಧೂಮ; ಮಸಗು: ಹರಡು; ಕೆರಳು; ತಿಕ್ಕು; ಎದೆ: ಹೃದಯ; ಕಿಚ್ಚು: ಬೆಂಕಿ, ಅಗ್ನಿ; ಕಂಗಳು: ಕಣ್ಣು; ಧಾರೆ: ಪ್ರವಾಹ; ಕೊರಳು: ಕಂಠ; ಕೊಯ್ಯು: ಸೀಳು; ಅರಿಕೆ: ವಿಜ್ಞಾಪನೆ; ಅರಿ: ತಿಳಿ; ಹುರುಳು: ವಸ್ತು, ಪದಾರ್ಥ; ಕೆಡಿಸು: ಹಾಳುಮಾಡು; ನಿಲುವು: ಸ್ಥಿತಿ;

ಪದವಿಂಗಡಣೆ:
ಅರಿದು+ ನೆತ್ತರು +ಗಾಣದ್+ಅಲಗಿದು
ನೆರೆ+ ಬಿಗಿಯೆ +ಮೈಬಾಸುಳೇಳದ
ಹುರಿ +ಬಲಿದ +ನೇಣ್+ಸೋಂಕಿದಡೆ +ಹೊಗೆ +ಮಸಗದ್+ಎದೆ+ಕಿಚ್ಚು
ಅರರೆ +ಕಂಗಳ+ ಧಾರೆ +ಯಾವನ
ಕೊರಳ+ಕೊಯ್ಯದ್+ಅದಾವನ್ + ಅರಿಕೆಯ
ಹುರುಳು+ಕೆಡಿಸದ್+ಇದಾವ +ನಿಲುವನು +ಶಿವಶಿವಾಯೆಂದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಅರಿದು ನೆತ್ತರು ಗಾಣದಲಗಿದು, ನೆರೆ ಬಿಗಿಯೆ ಮೈಬಾಸುಳೇಳದ
ಹುರಿ, ಬಲಿದ ನೇಣ್ಸೋಂಕಿದಡೆ ಹೊಗೆ ಮಸಗದೆದೆಗಿಚ್ಚು

ಪದ್ಯ ೩೬: ದುರ್ಯೋಧನನು ತನ್ನ ಸ್ಥಿತಿಯನ್ನು ಹೇಗೆ ವಿವರಿಸಿದ?

ಕಲಹ ಬೀದಿಯೊಳಾಯ್ತು ಕಟ್ಟಿದ
ರಳಿವಿನೋದದಲಹಿತರದ ಹೊ
ಯ್ದೆಳೆದು ತಂದನು ಪಾರ್ಥನೆಮ್ಮಯ ತೋಳ ನೇಣುಗಳ
ನಳಿನ ಮುಖಿ ಕಡುಮೌಳಿಯಲಿ ಮೂ
ದಲಿಸಿ ಕೊಯ್ದಳು ತನಗೆ ಭಂಗದ
ಲುಳಿವುದೆತ್ತಣ ಮಾತು ಕರುಣಿಸಿ ಬೊಪ್ಪನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನು ಹೌದು ಬೀದಿಯಲ್ಲಿ ಜಗಳವಾಯಿತು. ಶತ್ರುಗಳು ನಮ್ಮನ್ನು ನಿರ್ದಯದಿಂದ ಅಪಹಾಸ್ಯಮಾಡುತ್ತಾ ಕಟ್ಟಿಹಾಕಿದರು. ಅರ್ಜುನನು ಅವರನ್ನು ಬಡಿದು ನಮ್ಮನ್ನು ಬಿಡಿಸಿಕೊಂಡು ಬಂದನು. ದ್ರೌಪದಿಯು ಅತಿಶಯವಾಗಿ ಮೂದಲಿಸಿ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿದಳು. ಅಂತಹ ಸೋಲು ಅಪಮಾನಗಳನ್ನು ಸಹಿಸಿ ನಾನು ಬದುಕಬೇಕೆ? ಯಾವ ಮಾತು, ಅಪ್ಪ ನೀನೇ ಆಲೋಚಿಸಿ ನನಗೆ ಅಪ್ಪಣೆಕೊಡು.

ಅರ್ಥ:
ಕಲಹ: ಜಗಳ; ಬೀದಿ: ಮಾರ್ಗ; ಕಟ್ಟು: ಬಂಧಿಸು; ಅಳಿ: ಹಾಳು ಮಾಡು; ವಿನೋದ: ಸಂತಸ; ಅಹಿತರು: ಶತ್ರು; ಹೊಯ್ದೆಳೆ: ಹೊಡೆದು, ತಳ್ಳು; ತಂದು: ಆಗಮಿಸು; ತೋಳು: ಬಾಹು; ನೇಣು: ಹಗ್ಗ, ಹುರಿ; ನಳಿನಮುಖಿ: ಕಮಲದಂತ ಮುಖವುಳ್ಳವಳು; ಕಡು:ವಿಶೇಷ; ಮೌಳಿ: ಶಿರ, ಮಕುಟ; ಮೂದಲಿಸು: ಹಂಗಿಸು; ಕೊಯ್ದಳು: ಬಿಚ್ಚು, ಸಡಲಿಸು; ಭಂಗ: ಸೋಲು; ಉಳಿವುದು: ಜೀವಿಸುವುದು; ಮಾತು: ನುಡಿ; ಕರುಣಿಸು: ದಯೆತೋರು; ಬೊಪ್ಪ: ತಂದೆ;

ಪದವಿಂಗಡಣೆ:
ಕಲಹ +ಬೀದಿಯೊಳಾಯ್ತು +ಕಟ್ಟಿದರ್
ಅಳಿ+ವಿನೋದದಲ್+ಅಹಿತರದ +ಹೊ
ಯ್ದೆಳೆದು +ತಂದನು +ಪಾರ್ಥನ್+ಎಮ್ಮಯ +ತೋಳ +ನೇಣುಗಳ
ನಳಿನಮುಖಿ +ಕಡುಮೌಳಿಯಲಿ +ಮೂ
ದಲಿಸಿ +ಕೊಯ್ದಳು +ತನಗೆ +ಭಂಗದಲ್
ಉಳಿವುದೆತ್ತಣ +ಮಾತು +ಕರುಣಿಸಿ +ಬೊಪ್ಪನೀವೆಂದ

ಅಚ್ಚರಿ:
(೧) ದ್ರೌಪದಿಯನ್ನು ದುರ್ಯೋಧನ ಕಂಡ ಬಗೆ – ನಳಿನ ಮುಖಿ ಕಡುಮೌಳಿಯಲಿ ಮೂದಲಿಸಿ ಕೊಯ್ದಳು

ಪದ್ಯ ೨೨: ಕೃಷ್ಣನನ್ನು ಕಟ್ಟಿಹಾಕುವುದು ಹೇಗೆ ಹಾಸ್ಯಾಸ್ಪದದ ಸಂಗತಿ?

ಪೊಸತಲಾ ಶ್ರುತಿಕೋಟಿಗಳು ಉಪ
ನಿಷದ ರಾಶಿಗಳರಸಿ ಕಾಣವು
ಬಸಿರೊಳಗೆ ಬ್ರಹ್ಮಾಂಡಕೋಟಿಯ ಧರಿಸಿಕೊಂಡಿಹನು
ನುಸಿಗಳೀ ಕರ್ಣಾದಿ ದುಷ್ಟ
ಪ್ರಸರ ಮಂತ್ರಿಗಳಿವನ ನೇಮದೊ
ಳಸುರರಿಪುವನು ಬಿಗಿಯಲಳವಡಿಸಿದರು ನೇಣುಗಳ (ಉದ್ಯೋಗ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೃಷ್ಣನನ್ನು ವೇದಗಳು, ಅವುಗಳಲ್ಲಿರುವ ಉಪನಿಷತ್ತುಗಳು ಹುಡುಕಿದರು ಇವನನ್ನು ಕಾಣಲಾಗಲಿಲ್ಲ. ಇವನ ಹೊಟ್ಟೆಯಲ್ಲಿ ಅಸಂಖ್ಯಾತ ಬ್ರಹ್ಮಾಂಡಗಳಿವೆ. ಇಂತಹವನನ್ನು ಅಲ್ಪರಾದ ಕರ್ಣ ಮೊದಲಾದ ನೊರಜಿನಂತಿರುವ ದುರ್ಯೋಧನನ ಸಚಿವರು ಕಟ್ಟಿಹಾಕಲು ಹಗ್ಗವನ್ನು ಜೋಡಿಸುತ್ತಿದ್ದಾರೆ, ಇದು ಒಂದು ರೀತಿ ಹೊಸದಾಗಿ ತೋರುತ್ತಿದೆ, ಇದು ಹಾಸ್ಯಾಸ್ಪದವಲ್ಲವೇ ಎಂದು ವಿದುರ ಹೇಳಿದನು.

ಅರ್ಥ:
ಪೊಸ: ಹೊಸ; ಶ್ರುತಿ: ವೇದ; ಕೋಟಿ: ಅಸಂಖ್ಯಾತ; ಉಪನಿಷದ್: ವೇದಗಳ ಸಾರವನ್ನು ತಿಳಿಸುವ ಜ್ಞಾನದ ಆಗರ; ರಾಶಿ: ಗುಂಫು; ಅರಸು: ಹುಡುಕು; ಕಾಣು: ತೋರು; ಬಸಿರು: ಹೊಟ್ಟೆ; ಬ್ರಹ್ಮಾಂಡ: ಜಗತ್ತು; ಧರಿಸು: ಹೊರು; ನುಸಿ:ಧೂಳು, ನೊರಜು; ದುಷ್ಟ: ಕೆಟ್ಟ; ಪ್ರಸರ: ಹರಡು; ಮಂತ್ರಿ: ಸಚಿವ; ನೇಮ: ಕ್ರಮ, ರೀತಿ; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಬಿಗಿ: ಹಿಡಿ, ಬಂಧಿಸು; ಅಳವಡಿಸು: ರೂಪಿಸು, ಹೊಂದಿಸು; ನೇಣು: ಹಗ್ಗ;

ಪದವಿಂಗಡಣೆ:
ಪೊಸತಲಾ+ ಶ್ರುತಿ+ಕೋಟಿಗಳು +ಉಪ
ನಿಷದ +ರಾಶಿಗಳ್+ಅರಸಿ +ಕಾಣವು
ಬಸಿರೊಳಗೆ +ಬ್ರಹ್ಮಾಂಡ+ಕೋಟಿಯ +ಧರಿಸಿ+ಕೊಂಡಿಹನು
ನುಸಿಗಳೀ+ ಕರ್ಣಾದಿ +ದುಷ್ಟ
ಪ್ರಸರ+ ಮಂತ್ರಿಗಳ್+ಇವನ +ನೇಮದೊಳ್
ಅಸುರರಿಪುವನು +ಬಿಗಿಯಲ್+ಅಳವಡಿಸಿದರು +ನೇಣುಗಳ