ಪದ್ಯ ೫೮: ಭೀಷ್ಮಾರ್ಜುನರ ಯುದ್ಧ ಹೇಗೆ ನಡೆಯಿತು?

ಒರೆತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ (ವಿರಾಟ ಪರ್ವ, ೯ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅರ್ಜುನನ ದೇಹದಿಂದ ರಕ್ತವು ರಭಸದಿಂದ ಹರಿಯಿತು. ಅದನ್ನು ತಡೆದುಕೊಂಡು ಅರ್ಜುನನು ಮಹಾಬಾಣವೊಂದನ್ನು ಬಿಡಲು ಭೀಷ್ಮನು ಗರ್ಜಿಸಿ ಆ ಬಾಣವನ್ನು ಮಧ್ಯದಲ್ಲೇ ಕಡಿದು ಹಾಕಿದನು. ಅರ್ಜುನನು ಆಗ್ನೇಯಾಸ್ತ್ರವನ್ನು ಬಿಡಲು ಕೌರವ ಸೇನೆಯು ಗೊಂದಲಕ್ಕೀಡಾಯಿತು.

ಅರ್ಥ:
ಒರೆ: ಗುಣ, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಒಡಲು: ದೇಹ; ದುರುದುರಿಸಿ: ರಭಸ; ಸುರಿ: ಹರಿ; ಅರುಣ: ಕೆಂಪು; ಜಲ: ನೀರು; ನೆರವಣಿಗೆ: ಪರಿಪೂರ್ಣತೆ; ನಿಂದು: ನಿಲ್ಲು; ತೊಟ್ಟು: ತೊಡು; ನರ: ಅರ್ಜುನ; ಮಹಾಶರ: ಶ್ರೇಷ್ಠವಾದ ಬಾಣ; ತರಿ: ಕಡಿ, ಕತ್ತರಿಸು; ಉರೆ: ಹೆಚ್ಚು; ಬೊಬ್ಬಿರಿ: ಕೂಗು, ಗಟ್ಟಿಯಾಗಿ ಹೇಳು, ಉದ್ಘೋಷಿಸು; ಬಳಿಕ: ನಂತರ; ಆಗ್ನಿ: ಬೆಂಕಿ; ಬಾಣ: ಶರ; ಗರಿ: ಪುಕ್ಕ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಹೂಡು: ತೊಡು; ಕಳವಳ: ಗೊಂದಲ;

ಪದವಿಂಗಡಣೆ:
ಒರೆತುದ್+ಅರ್ಜುನನ್+ಒಡಲಿನಲಿ+ ದುರು
ದುರಿಸಿ +ಸುರಿದುದು +ಅರುಣಮಯ +ಜಲ
ನೆರವಣಿಗೆಯಲಿ +ನಿಂದು+ ತೊಟ್ಟನು+ ನರ +ಮಹಾ+ಶರವ
ತರಿದನ್+ಎಡೆಯಲಿ +ಭೀಷ್ಮನ್+ಉರೆ +ಬೊ
ಬ್ಬಿರಿದು +ಬಳಿಕ್+ಆಗ್ನೇಯ +ಬಾಣದ
ಗರಿಯ +ಮಂತ್ರಿಸಿ +ಹೂಡಿದನು +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ರಕ್ತ ಹರಿಯಿತು ಎಂದು ಹೇಳುವ ಪರಿ – ಒರೆತುದರ್ಜುನನೊಡಲಿನಲಿ ದುರುದುರಿಸಿ ಸುರಿದುದು ಅರುಣಮಯ ಜಲ

ಪದ್ಯ ೨೫: ಭೀಮನ ರಭಸದ ಯುದ್ಧಕ್ಕೆ ಯಾವುದು ಮುರಿದವು?

ಮುರಿದು ನೆಗ್ಗಿದ ರಥವ ಬರಿಕೈ
ಹರಿದು ಬೀಳುವ ಗಜವ ಘಾಯದ
ನೆರವಣಿಗೆಯಲಿ ನೆಗ್ಗಿ ಮುಗ್ಗಿದ ಕುದುರೆ ಕಾಲಾಳ
ಅರಿಯೆನಭಿವರ್ಣಿಸಲು ಬಲ ಮು
ಕ್ಕುರಿಕಿಕೊಂಡುದು ಮೇಲೆ ಮೇಲ
ಳ್ಳಿರಿವ ಕಹಳೆಯ ಬಹಳ ಬಹುವಿಧ ವಾದ್ಯರಭಸದಲಿ (ಕರ್ಣ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ರಥಗಳು ಮುರಿದು ನೆಗ್ಗಿ ಹೋದವು. ಬರಿಕೈಯಿಂದ ಆನೆಗಳ ಸಂಡಿಲುಗಳು ಕತ್ತರಿಸಿ ಬಿದ್ದವು. ಕುದುರೆಗಳು ಕಾಲಾಳುಗಳು ಮುರಿದು ಬಿದ್ದವು. ಅದನ್ನು ನಾನು ಹೇಗೆ ಹೇಳಲಿ? ಇಷ್ಟಾದರೂ ಮತ್ತೆ ವಾದ್ಯರಭಸದೊಂದಿಗೆ ಕುರುಸೇನೆಯು ದಾಳಿಯಿಟ್ಟಿತು.

ಅರ್ಥ:
ಮುರಿ: ಸೀಳು; ನೆಗ್ಗು:ಕುಗ್ಗು, ಕುಸಿ; ರಥ: ಬಂಡಿ; ಬರಿಕೈ: ಕೇವಲ ಕರದಿಂದ; ಹರಿ: ಚೂರು; ಬೀಳು: ನೆಲಕಚ್ಚು; ಗಜ: ಆನೆ; ಘಾಯ: ಪೆಟ್ಟು; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಮುಗ್ಗು: ಕುಗ್ಗು, ನಾಶವಾಗು; ಕುದುರೆ: ಅಶ್ವ; ಕಾಲಾಳು: ಪದಸೈನಿಕ; ಅರಿ: ತಿಳಿ; ವರ್ಣಿಸು: ವಿವರಿಸು; ಬಲ: ಶಕ್ತಿ, ಸೈನ್ಯ; ಮುಕ್ಕುರು: ಆವರಿಸು; ಅಳ್ಳಿರಿ: ನಡುಗಿಸು, ಚುಚ್ಚು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಬಹಳ: ತುಂಬ; ಬಹುವಿಧ: ಹಲವಾರು ಬಗೆ; ವಾದ್ಯ: ಸಂಗೀತದ ಸಾಧನ; ರಭಸ: ವೇಗ;

ಪದವಿಂಗಡಣೆ:
ಮುರಿದು +ನೆಗ್ಗಿದ +ರಥವ +ಬರಿಕೈ
ಹರಿದು +ಬೀಳುವ +ಗಜವ +ಘಾಯದ
ನೆರವಣಿಗೆಯಲಿ +ನೆಗ್ಗಿ +ಮುಗ್ಗಿದ +ಕುದುರೆ +ಕಾಲಾಳ
ಅರಿಯೆನ್+ಅಭಿವರ್ಣಿಸಲು +ಬಲ+ ಮು
ಕ್ಕುರಿಕಿಕೊಂಡುದು+ ಮೇಲೆ +ಮೇಲ್
ಅಳ್ಳಿರಿವ +ಕಹಳೆಯ +ಬಹಳ +ಬಹುವಿಧ +ವಾದ್ಯ+ರಭಸದಲಿ

ಅಚ್ಚರಿ:
(೧) ಕಹಳೆಯ ಬಹಳ ಬಹುವಿಧ – ‘ಹ’ಕಾರ ಹೊಂದಿದ ಪದಗಳ ರಚನೆ

ಪದ್ಯ ೧೬: ದುರ್ಯೋಧನನು ಶಲ್ಯನ ಬಳಿ ಏಕೆ ನೆರವನ್ನು ಕೇಳಿದನು?

ಮುರಿವಡೆದು ಕಲಿ ಭೀಷ್ಮನೇ ಕು
ಕ್ಕರಿಸಿದನು ದ್ರೋಣಂಗೆ ಬಂದುದ
ನರುಹಲೇತಕೆ ಬಳಿಕ ಕರ್ಣನ ವೀರಪಟ್ಟದಲಿ
ನೆರವಣಿಗೆಯುಂಟಾದಡೊಂದೇ
ಕೊರತೆಯಿದು ನಿಮ್ಮಿಂದ ಕಡೆಯಲಿ
ನೆರತೆಯಹುದಿನ್ನುತ್ತರೋತ್ತರ ಸಿದ್ಧಿ ಬಳಿಕೆಂದ (ಕರ್ಣ ಪರ್ವ, ೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಮಹಾಪರಾಕ್ರಮಿಶಾಲಿಯಾದ ಭೀಷ್ಮನೇ ಶರಮಂಚದಲ್ಲಿ ಬಿದ್ದನು, ದ್ರೋಣನಿಗೆ ಬಂದ ದುರ್ಗತಿಯನ್ನು ನಾನು ಹೇಳಬೇಕೆ? ಈಗ ಕರ್ಣನು ಸೇನಾಧಿಪತಿಯಾಗಿದ್ದಾನೆ, ಇದರಲ್ಲಿ ಒಂದು ಕೊರತೆಯಿದೆ, ನೀವು ನೆರವಾದರೆ ಉತ್ತರೋತ್ತರ ವಿಜಯ ಸಿದ್ಧಿಸುತ್ತದೆ ಎಂದು ದುರ್ಯೋಧನನು ಶಲ್ಯನಿಗೆ ತಿಳಿಸಿದನು.

ಅರ್ಥ:
ಮುರಿ: ಸೀಳು; ಕಲಿ: ಪರಾಕ್ರಮಿ; ಕುಕ್ಕರಿಸು: ಕೆಳಕ್ಕೆ ಬೀಳು; ಅರುಹ: ಹೇಳು; ಬಳಿಕ: ನಂತರ; ವೀರ: ಶೌರ್ಯ; ಪಟ್ಟ: ಸ್ಥಾನ; ನೆರವಣಿಗೆ: ಪರಿಪೂರ್ಣತೆ; ಕೊರತೆ: ನ್ಯೂನತೆ; ಕಡೆ: ಕೊನೆ, ಪಕ್ಕ; ನೆರತೆ: ಪೂರೈಕೆ, ಸಮಾನ; ಉತ್ತರೋತ್ತರ: ಅಭಿವೃದ್ಧಿ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಬಳಿಕ: ನಂತರ;

ಪದವಿಂಗಡಣೆ:
ಮುರಿವಡೆದು +ಕಲಿ +ಭೀಷ್ಮನೇ +ಕು
ಕ್ಕರಿಸಿದನು +ದ್ರೋಣಂಗೆ +ಬಂದುದನ್
ಅರುಹಲೇತಕೆ +ಬಳಿಕ +ಕರ್ಣನ +ವೀರ+ಪಟ್ಟದಲಿ
ನೆರವಣಿಗೆ+ ಉಂಟಾದಡ್+ಒಂದೇ
ಕೊರತೆಯಿದು +ನಿಮ್ಮಿಂದ +ಕಡೆಯಲಿ
ನೆರತೆಯಹುದ್+ಇನ್+ಉತ್ತರೋತ್ತರ+ ಸಿದ್ಧಿ+ ಬಳಿಕೆಂದ

ಅಚ್ಚರಿ:
(೧) ಕುಕ್ಕರಿಸಿದನು – ಆಡು ಭಾಷೆಯ ಪ್ರಯೋಗ

ಪದ್ಯ ೮: ಕೃಷ್ಣನು ಧರ್ಮರಾಯನಿಗೆ ಯಾವ ಉಪದೇಶ ನೀಡಿದನು?

ಬರಿದೆ ಕಾಡದಿರೇಳು ಮನದಲಿ
ಮರೆದೆವಾಗಳೆ ಕೌರವನು ಮುಂ
ದರಿಯದವಗಡಿಸಿದನು ಹೋಗಲಿ ನಿಮ್ಮ ದೂರೇಕೆ
ನೆರವಣಿಗೆಯುಂಟಾದಡಿಂದಿನ
ಮರುದಿವಸ ಸಂಗ್ರಾಮ ಸೈರಿಸ
ಲರಿಯರವದಿರು ನಡೆ ಕುರುಕ್ಷೇತ್ರಕ್ಕೆ ಬೇಗದಲಿ (ಉದ್ಯೋಗ ಪರ್ವ, ೧೨ ಸಂಧಿ, ೮ ಪದ್ಯ)

ತಾತ್ಪರ್ಯ:
ಧರ್ಮರಾಯನು ದುರ್ಯೋಧನನು ಮಾಡಿದ ಅವಮಾನವನ್ನು ಮರೆತುಬಿಡು ಎಂದು ಕೃಷ್ಣನಿಗೆ ಹೇಳಲು, ಕೃಷ್ಣನು ಧರ್ಮರಾಯ ನಾನು ಅದನ್ನು ಆಗಲೇ ಮರೆತುಬಿಟ್ಟಿದ್ದೇನೆ, ಅದಕ್ಕೆ ನೀನು ದೈನ್ಯದಿಂದ ನನ್ನನ್ನು ಬೇಡುವ ಅವಶ್ಯಕತೆಯಿಲ್ಲ. ಕೌರವನು ಮುಂದನರಿಯದೆ ನನ್ನನ್ನು ವಿರೋಧಿಸಿದನು. ಎಲ್ಲವೂ ಸಿದ್ಧವಾಗಿದ್ದರೆ ನಾಳೆಯೇ ಯುದ್ಧ, ಅವರು ತಡಮಾಡುವವರಲ್ಲ, ನೀವು ಬೇಗ ಕುರುಕ್ಷೇತ್ರಕ್ಕೆ ಹೋಗಲು ಸಿದ್ಧರಾಗಿರಿ ಎಂದು ಕೃಷ್ಣನು ತಿಳಿಸಿದನು.

ಅರ್ಥ:
ಬರಿ:ಸುಮ್ಮನೆ, ಕೇವಲ; ಕಾಡು: ಪೀಡಿಸು; ಏಳು: ಮೇಲೇಳು; ಮನ: ಮನಸ್ಸು; ಮರೆ:ನೆನಪಿನಿಂದ ದೂರ ಮಾಡು; ಮುಂದೆ: ನಾಳೆ, ಭವಿಷ್ಯ; ಅರಿ: ತಿಳಿ; ಅವಗಡ: ಅಸಡ್ಡೆ, ತೊಂದರೆ; ದೂರು: ಮೊರೆ, ಅಹವಾಲು; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಇಂದಿನ: ಇವತ್ತು; ಮರುದಿವಸ: ನಾಳೆ; ಸಂಗ್ರಾಮ: ಯುದ್ಧ; ಸೈರಿಸು: ತಾಳು, ಸಹಿಸು; ಅವದಿರು: ಅವರು; ನಡೆ: ಹೋಗು; ಬೇಗ:ಶೀಘ್ರ;

ಪದವಿಂಗಡಣೆ:
ಬರಿದೆ +ಕಾಡದಿರ್+ಏಳು+ ಮನದಲಿ
ಮರೆದೆವ್+ಆಗಳೆ +ಕೌರವನು +ಮುಂದ್
ಅರಿಯದ್+ಅವಗಡಿಸಿದನು +ಹೋಗಲಿ +ನಿಮ್ಮ +ದೂರೇಕೆ
ನೆರವಣಿಗೆ+ಯುಂಟಾದಡ್+ಇಂದಿನ
ಮರುದಿವಸ +ಸಂಗ್ರಾಮ +ಸೈರಿಸಲ್
ಅರಿಯರ್+ಅವದಿರು +ನಡೆ +ಕುರುಕ್ಷೇತ್ರಕ್ಕೆ +ಬೇಗದಲಿ

ಅಚ್ಚರಿ:
(೧) ಅರಿಯದ್, ಅರಿಯರ್ – ಪದದ ಬಳಕೆ
(೨) ಅರಿ, ಬರಿ – ಪ್ರಾಸ ಪದ