ಪದ್ಯ ೩೬: ಕೌರವನ ಹೊಡೆತದಿಂದ ಭೀಮನ ಸ್ಥಿತಿ ಹೇಗಿತ್ತು?

ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ (ಗದಾ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವನು ಮತ್ತೆ ಭೀಮನ ನೆತ್ತಿಯನ್ನು ಸರ್ವಶಕ್ತಿಯಿಂದಲೂ ಹೊಡೆಯಲು, ಭೀಮನು ಓಲಿ ಮೂರ್ಛೆಯಿಮ್ದ ಕೆಳಬಿದ್ದನು. ಕಣ್ಣುಗಳು ನೆಟ್ಟವು. ಉಸಿರಾಡುವಾಗ ರಕ್ತದ ಹನಿಗಳು ಒಸರಿಸಿದವು. ಗದೆ ಪಕ್ಕಕ್ಕೆ ಹಾರಿತು, ಭೀಮನು ನೆಲದ ಮೇಲೊರಗಿದನು.

ಅರ್ಥ:
ಮತ್ತೆ: ಪುನಃ; ಹೊಯ್ದು: ಹೊಡೆ; ನೆತ್ತಿ: ಶಿರ; ನಿಪ್ಪಸರ: ಅತಿಶಯ, ಹೆಚ್ಚಳ; ಕಳೆ: ಬೀಡು, ತೊರೆ, ಹೋಗಲಾಡಿಸು; ಝೋಂಪು: ಮೂರ್ಛೆ; ತಿರುಗು: ಹೊರಲಾಡು; ಬಿದ್ದು: ಎರಗು, ಬೀಳು; ಬಿಗಿ: ಕಟ್ಟು, ಬಂಧಿಸು; ಮೂರ್ಛೆ: ಎಚ್ಚರವಿಲ್ಲದ ಸ್ಥಿತಿ; ಕೆತ್ತು: ನಡುಕ, ಸ್ಪಂದನ; ಕಂಗಳು: ಕಣ್ಣು; ಸುಯ್ಲು: ನಿಟ್ಟುಸಿರು; ಲಹರಿ: ರಭಸ, ಆವೇಗ; ಸುತ್ತಲು: ಎಲ್ಲಾಕಡೆ; ಅರುಣಾಂಬು: ರಕ್ತ; ಸಿಡಿ: ಹಾರು; ಗದೆ: ಮುದ್ಗರ; ಭಟ: ಸೈನಿಕ; ಒರಗು: ಕೆಳಕ್ಕೆ ಬಾಗು; ಮರವೆ: ಮರವು, ಜ್ಞಾಪಕವಿಲ್ಲದಿರುವುದು;

ಪದವಿಂಗಡಣೆ:
ಮತ್ತೆ +ಹೊಯ್ದನು +ಭೀಮಸೇನನ
ನೆತ್ತಿಯನು +ನಿಪ್ಪಸರದಲಿ +ಕಳೆ
ಹತ್ತಿ+ ಝೋಂಪಿಸಿ +ತಿರುಗಿ +ಬಿದ್ದನು +ಬಿಗಿದ +ಮೂರ್ಛೆಯಲಿ
ಕೆತ್ತ+ ಕಂಗಳ +ಸುಯ್ಲ+ ಲಹರಿಯ
ಸುತ್ತಲೊಗುವ್+ಅರುಣಾಂಬುಗಳ +ಕೆಲ
ದತ್ತ +ಸಿಡಿದಿಹ +ಗದೆಯ +ಭಟನ್+ಒರಗಿದನು+ಮರವೆಯಲಿ

ಅಚ್ಚರಿ:
(೧) ಮೂರ್ಛೆ, ಮರವೆ – ಸಾಮ್ಯಾರ್ಥ ಪದ
(೨) ಭೀಮನನ್ನು ಗದೆಯ ಭಟ ಎಂದು ಕರೆದಿರುವುದು

ಪದ್ಯ ೨: ಭೀಷ್ಮನ ನೆತ್ತಿಗೆ ಯಾರು ಬಾಣವನ್ನು ಹೂಡಿದರು?

ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ಕೋದವಂಬುಗಳರಿಯ ನೆತ್ತಿಯಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ (ಭೀಷ್ಮ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನನು ಗರ್ಜಿಸಿ ಹೆದೆಯನ್ನು ಒದರಿಸಿ ಬಾಣಗಳನ್ನು ಬಿಡಲು, ಅವು ಬಿಲ್ಲನ್ನೊದೆದು ಹೋಗಿ ಭೀಷ್ಮನ ನೆತ್ತಿಯಲ್ಲಿ ನೆಟ್ಟಿದವು. ಶಿಖಂಡಿಯು ಭೀಷ್ಮನೆದುರಿನಲ್ಲೇ ನಿಂತು, ಕೂಗಿ, ಬಾಣಗಳನ್ನು ಭೀಷ್ಮನ ಮೈಯಲ್ಲಿ ಹೊಗಿಸಿದನು. ಭೀಷ್ಮನ ಮನಸ್ಸಿನಲ್ಲಿ ವೈರಾಗ್ಯವುದಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು; ಜೇವಡೆ: ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಬಾಣ: ಸರಳು; ಕೆದರು: ಹರಡು; ಥಟ್ಟು: ಪಕ್ಕ, ಕಡೆ, ಗುಂಪು; ಚಾಪ: ಬಿಲ್ಲು; ಒದೆ: ತುಳಿ, ಮೆಟ್ಟು; ಹಾಯ್ದು: ಹೊಡೆ; ಕೋದು: ಸೇರಿಸು; ಅಂಬು: ಬಾಣ; ಅರಿ: ವೈರಿ; ನೆತ್ತಿ: ತಲೆಯ ಮಧ್ಯಭಾಗ, ನಡುದಲೆ; ಉಲಿ: ಧ್ವನಿ; ಶಿಖಂಡಿ: ನಪುಂಸಕ; ಶರ: ಬಾಣ; ಸಂಘ: ಜೊತೆ; ಹೂಳು: ಹೂತು ಹಾಕು, ಮುಚ್ಚು; ಹೃದಯ: ಎದೆ; ವೈರಾಗ್ಯ: ಪಂಚದ ವಿಷಯಗಳಲ್ಲಿ ಅನಾಸಕ್ತಿ, ವಿರಕ್ತಿ; ಮನೆ: ಆಲಯ; ಕಟ್ಟು: ನಿರ್ಮಿಸು; ನಿಮಿಷ: ಕ್ಷಣಮಾತ್ರ, ಕಾಲದ ಪ್ರಮಾಣ;

ಪದವಿಂಗಡಣೆ:
ಒದರಿ +ಜೇವಡೆಗ್+ಐದು +ಬಾಣವ
ಕೆದರಿದನು +ಥಟ್ಟೈಸಿ +ಚಾಪವನ್
ಒದೆದು +ಹಾಯ್ದವು +ಕೋದವ್+ಅಂಬುಗಳ್+ಅರಿಯ+ ನೆತ್ತಿಯಲಿ
ಇದಿರೊಳ್+ಉಲಿದು +ಶಿಖಂಡಿ+ ಶರ+ ಸಂ
ಘದಲಿ +ಹೂಳಿದನಾಗ+ ಭೀಷ್ಮನ
ಹೃದಯದಲಿ +ವೈರಾಗ್ಯ +ಮನೆಗಟ್ಟಿತ್ತು +ನಿಮಿಷದಲಿ

ಅಚ್ಚರಿ:
(೧) ಬಾಣ, ಶರ – ಸಮಾನಾರ್ಥಕ ಪದ

ಪದ್ಯ ೬೦: ಭೀಮನು ಉಲೂಕನಿಗೆ ಹೇಗೆ ಉತ್ತರಿಸಿದನು?

ಸೀಳು ಕುನ್ನಿಯ ಬಾಯನೆಲವೋ
ತೋಳ ತೀಟೆಯನವನ ನೆತ್ತಿಯ
ಮೇಲೆ ಕಳೆವೆನು ಕಲಕುವೆನು ಕೌರವ ಬಲಾಂಬುಧಿಯ
ಹೇಳು ಹೋಗೀ ನಾಯನಾಡಿಸಿ
ಕೇಳುತಿರಲೇಕಹಿತ ಕುರುಕುಲ
ಕಾಲಭೈರವನೆಂದು ನಿನ್ನೊಡೆಯಂಗೆ ಹೇಳೆಂದ (ಭೀಷ್ಮ ಪರ್ವ, ೧ ಸಂಧಿ ೬೦ ಪದ್ಯ)

ತಾತ್ಪರ್ಯ:
ಭೀಮನು ಉಲೂಕನಿಗೆ ಉತ್ತರಿಸುತ್ತಾ, ಈ ನಾಯಿಯ ಬಾಯನ್ನು ಸೀಳು, ಎಲವೋ ನನ್ನ ತೋಳಿನ ಚಪಲವನ್ನು ಇವನ ನೆತ್ತಿಯ ಮೇಲೆ ಗುದ್ದಿ ಕಳೆದುಕೊಳ್ಳುತ್ತೇನೆ, ಬೊಗಳುತ್ತಿರಲು ಕೇಳುವುದೇಕೆ? ನಿನ್ನ ಒಡೆಯನ ಬಳಿಗೆ ಹೋಗಿ, ಭೀಮನು ಕುರುಕುಲಕ್ಕೆ ಕಾಲಭೈರವನೆಂದು ಹೇಳು ಎಂದು ಗುಡುಗಿದನು.

ಅರ್ಥ:
ಸೀಳು: ಚೂರು, ತುಂಡು; ಕುನ್ನಿ: ನಾಯಿ; ತೋಳ: ವೃಕ; ತೀಟೆ: ಚಪಲ; ನವೆ; ನೆತ್ತಿ: ಶಿರ; ಕಳೆ: ಬೀಡು, ತೊರೆ; ಕಲಕು: ಅಲ್ಲಾಡಿಸು; ಬಲ: ಶಕ್ತಿ; ಅಂಬುಧಿ: ಸಾಗರ; ಅಹಿತ: ವೈರಿ; ಒಡೆಯ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಸೀಳು+ ಕುನ್ನಿಯ +ಬಾಯನ್+ಎಲವೋ
ತೋಳ +ತೀಟೆಯನ್+ಅವನ +ನೆತ್ತಿಯ
ಮೇಲೆ +ಕಳೆವೆನು+ ಕಲಕುವೆನು+ ಕೌರವ+ ಬಲಾಂಬುಧಿಯ
ಹೇಳು +ಹೋಗೀ +ನಾಯನಾಡಿಸಿ
ಕೇಳುತಿರಲೇಕ್+ಅಹಿತ +ಕುರುಕುಲ
ಕಾಲಭೈರವನೆಂದು+ ನಿನ್ನೊಡೆಯಂಗೆ +ಹೇಳೆಂದ

ಅಚ್ಚರಿ:
(೧) ಭೀಮನು ತನ್ನನ್ನು ಕಾಲಭೈರವನಿಗೆ ಹೋಲಿಸುವ ಪರಿ – ಕುರುಕುಲ ಕಾಲಭೈರವನೆಂದು ನಿನ್ನೊಡೆಯಂಗೆ ಹೇಳೆಂದ