ಪದ್ಯ ೧೧: ಸಂಜಯನು ಯಾರ ನಡಿಗೆಯನ್ನು ನೋಡಿದನು – ೪?

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ (ಗದಾ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಟ್ಟಿರಕ್ತದಿಂದ ತೋಯಿದ್ದ ಪಾತ್ರೆಯಂತಿದ್ದ ತಲೆಗಳನ್ನು ತಿಂದು ಎಸೆಯುವ ಕೊಬ್ಬನ್ನು ತಿಂದು ಕಾರುವ, ಸತ್ತ ಆನೆಗಳನ್ನು ತಿಂದು ತೆಳ್ಳಗೆ ಮಾಡುವ, ಹೆಣಗಳ ಗಾಯದಲ್ಲಿ ಬಾಯಿಟ್ಟು ಹೀರುವ ಪೂತನಿಗಳನ್ನು ಕಂಡು ಅವನು ಪಕ್ಕಕ್ಕೆ ಸರಿದು ಹೋಗುತ್ತಿದ್ದನು.

ಅರ್ಥ:
ಪಖ್ಖಲೆ: ನೀರಿನ ಚೀಲ, ಕೊಪ್ಪರಿಗೆ; ತೀವು: ತುಂಬು, ಭರ್ತಿಮಾಡು; ಮಂದ: ನಿಧಾನ ಗತಿಯುಳ್ಳದು; ರಕುತ: ನೆತ್ತರು; ತೋದ: ನೆನೆ, ಒದ್ದೆಯಾಗು; ತಲೆ: ಶಿರ; ತಿಂದು: ತಿನ್ನು; ಬಿಸುಡು: ಹೊರಹಾಕು; ನೆಣ: ಕೊಬ್ಬು, ಮೇದಸ್ಸು; ಪೂತನಿ: ರಾಕ್ಷಸಿ; ವೃಂದ: ಗುಂಪು; ಕಂಡು: ನೋಡು; ಓಸರಿಸು: ಓರೆಮಾಡು, ಹಿಂಜರಿ; ದೆಸೆ: ದಿಕ್ಕು; ಬಸೆ: ಕೊಬ್ಬು, ನೆಣ; ಬಾಡಿಸು: ಕಳೆಗುಂದಿಸು; ಸಂದಣಿ: ಗುಂಪು;

ಪದವಿಂಗಡಣೆ:
ಕಂದ +ಪಖ್ಖಲೆಗಳಲಿ +ತೀವಿದ
ಮಂದ +ರಕುತದ+ ತೋದ +ತಲೆಗಳ
ತಿಂದು +ಬಿಸುಡುವ +ನೆಣನ +ಕಾರುವ +ಬಸೆಯ +ಬಾಡಿಸುವ
ಸಂದಣಿಸಿ +ಹರಿದೇರ+ ಬಾಯ್ಗಳೊಳ್
ಒಂದಿ +ಬಾಯ್ಗಳನಿಡುವ +ಪೂತನಿ
ವೃಂದವನು +ಕಂಡ್+ಓಸರಿಸುವನ್+ಅದೊಂದು +ದೆಸೆಗಾಗಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತೋದ ತಲೆಗಳ ತಿಂದು
(೨) ಸಂದಣಿಸು, ವೃಂದ – ಸಮಾನಾರ್ಥಕ ಪದ

ಪದ್ಯ ೩೩: ದ್ರೋಣನನ್ನು ಯಾರು ನಿಲ್ಲಿಸಿದರು?

ಫಡ ಫಡಾನಿರುತಿರಲು ರಾಯನ
ಹಿಡಿವವನ ಹೆಸರೇನು ರಿಪು ಭಟ
ನೊಡಲ ಹೊಳ್ಳಿಸಿ ನೆಣನನುಣಲಿಕ್ಕುವೆನು ದೈತ್ಯರಿಗೆ
ಬಿಡು ರಥವನಾ ದ್ರೋಣನಿದಿರಲಿ
ತಡೆಯೆನುತ ಸಾರಥಿಗೆ ಸೂಚಿಸಿ
ತುಡುಕಿದನು ಬಲುಬಿಲ್ಲ ಧೃಷ್ಟದ್ಯುಮ್ನನಿದಿರಾದ (ದ್ರೋಣ ಪರ್ವ, ೨ ಸಂಧಿ, ೩೩ ಪದ್ಯ
)

ತಾತ್ಪರ್ಯ:
ಈ ಆರ್ತನಾದವನ್ನು ಕೇಳಿ ಧೃಷ್ಟದ್ಯುಮ್ನನು, ತೆಗೆ ಏತರ ಮಾತು! ನಾನಿರುವಾಗ ದೊರೆಯನ್ನು ಹಿಡಿಯುವವನ ಹೆಸರೇನು? ಶತ್ರುವನ್ನು ಹೊಡೆದು ಕೆಡವಿ ರಣರಕ್ಕಸರಿಗೆ ಊಟಕ್ಕಿಡುತ್ತೇನೆ ಎಂದು ಸಾರಥಿಗೆ ದ್ರೋಣನಿದಿರಿಗೆ ರಥವನ್ನು ಬಿಡು ಎಂದು ಸೂಚಿಸಿ ಬಿಲ್ಲನ್ನು ಹಿಡಿದು ದ್ರೋಣನನ್ನು ತಡೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ರಾಯ: ರಾಜ; ಹಿಡಿ: ಬಂಧಿಸು; ಹೆಸರು: ನಾಮ; ರಿಪು: ವೈರಿ; ಭಟ: ಸೈನಿಕ; ಒಡಲು: ದೇಹ; ಹೊಳ್ಳಿಸು: ಪೊಳ್ಳಾಗಿಸು, ಬರಿದು ಮಾಡು; ನೆಣ: ಶಕ್ತಿ, ಬಲ; ಉಣು: ತಿನ್ನು; ದೈತ್ಯ: ರಾಕ್ಷಸ; ಬಿಡು: ತೊರೆ; ರಥ: ಬಂಡಿ; ಇದಿರು: ಎದುರಿಸು; ತಡೆ: ನಿಲ್ಲಿಸು; ಸಾರಥಿ: ಸೂತ; ಸೂಚಿಸು: ತೋರಿಸು; ತುಡುಕು: ಹೋರಾಡು, ಸೆಣಸು; ಬಿಲ್ಲು: ಚಾಪ;

ಪದವಿಂಗಡಣೆ:
ಫಡ +ಫಡಾನ್+ಇರುತಿರಲು+ ರಾಯನ
ಹಿಡಿವವನ +ಹೆಸರೇನು +ರಿಪು +ಭಟನ್
ಒಡಲ +ಹೊಳ್ಳಿಸಿ +ನೆಣನನ್+ಉಣಲಿಕ್ಕುವೆನು +ದೈತ್ಯರಿಗೆ
ಬಿಡು +ರಥವನ್+ಆ+ ದ್ರೋಣನ್+ಇದಿರಲಿ
ತಡೆಯೆನುತ +ಸಾರಥಿಗೆ+ ಸೂಚಿಸಿ
ತುಡುಕಿದನು+ ಬಲುಬಿಲ್ಲ+ ಧೃಷ್ಟದ್ಯುಮ್ನನ್+ಇದಿರಾದ

ಅಚ್ಚರಿ:
(೧) ಧೃಷ್ಟದ್ಯುಮ್ನನ ರೋಷ – ಫಡ ಫಡಾನಿರುತಿರಲು ರಾಯನ ಹಿಡಿವವನ ಹೆಸರೇನು ರಿಪು ಭಟ
ನೊಡಲ ಹೊಳ್ಳಿಸಿ ನೆಣನನುಣಲಿಕ್ಕುವೆನು ದೈತ್ಯರಿಗೆ

ಪದ್ಯ ೩೪: ದುಷ್ಟರನ್ನು ಏನು ಮಾಡುವೆನೆಂದು ಭೀಮನು ಹೇಳಿದನು?

ಉರಿವ ಕೋಪಾಗ್ನಿಯಲಿ ಕರ್ಣನ
ಶಿರದ ಭಾಂಡದಲಿವನ ನೊರೆ ನೆ
ತ್ತರಿನಲಿವನಗ್ರಜನಕೊಬ್ಬಿದ ನೆಣನ ಕೊಯ್ಕೊಯ್ದು
ದುರುಳ ಶಕುನಿಯ ಕಾಳಿಜದೊಳೊಡೆ
ವೆರಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳೆಂದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ನನ್ನಲ್ಲಿ ಹೊಮ್ಮುತ್ತಿರುವ ಕೋಪಾಗ್ನಿಯಲ್ಲಿ ಕರ್ಣನ ತಲೆಯ ಪಾತ್ರೆಯನ್ನಿಟ್ಟು, ದುಶ್ಯಾಸನ ರಕ್ತದಲ್ಲಿ ಕೊಬ್ಬಿದ ದುರ್ಯೋಧನನ ಮಾಂಸವನ್ನು ಕಡಿದು ಕಡಿದು ಹಾಕಿ, ಶಕುನಿಯ ಪಿತ್ತಕೋಶವನ್ನು ಸೇರಿಸಿ ಹದವಾಗಿ ಕುಇಸಿ ಮಹೋಗ್ರವಾದ ಭೂತಗಳ ಹಿಂಡಿಗೆ ಊಟಕ್ಕೆ ಹಾಕುತ್ತೇನೆ ಕೇಳು ಎಂದು ಭೀಮನು ದ್ರೌಪದಿಗೆ ಹೇಳಿದನು.

ಅರ್ಥ:
ಉರಿ: ಜ್ವಾಲೆ; ಕೋಪ: ರೋಷ; ಅಗ್ನಿ: ಬೆಂಕಿ; ಶಿರ: ತಲೆ; ಭಾಂಡ: ಬಾಣಲಿ, ಮಡಿಕೆ; ನೊರೆ: ಬುರುಗು, ಫೇನ; ನೆತ್ತರು: ರಕ್ತ; ಅಗ್ರಜ: ಅಣ್ಣ; ಕೊಬ್ಬು: ಸೊಕ್ಕು; ನೆಣ: ಕೊಬ್ಬು; ಕೊಯ್ದು: ಸೀಳು; ದುರುಳ: ದುಷ್ಟ; ಕಾಳಿಜ: ಪಿತ್ತಾಶಯ; ವೆರಸಿ: ಸೇರಿಸು; ಕುದಿ: ಬೇಯಿಸು; ಮಹ: ದೊಡ್ಡ; ಉಗ್ರ: ಭಯಂಕರ; ಭೂತ: ದೆವ್ವ, ಪಿಶಾಚ; ನೆರವು: ಸಹಾಯ; ಉಣಲು: ತಿನ್ನಲು; ಸತಿ: ಹೆಂಡತಿ; ಕೇಳು: ಆಲಿಸು;

ಪದವಿಂಗಡಣೆ:
ಉರಿವ+ ಕೋಪಾಗ್ನಿಯಲಿ +ಕರ್ಣನ
ಶಿರದ +ಭಾಂಡದಲ್+ಇವನ +ನೊರೆ +ನೆ
ತ್ತರಿನಲ್+ಇವನ್+ಅಗ್ರಜನ+ಕೊಬ್ಬಿದ +ನೆಣನ +ಕೊಯ್ಕೊಯ್ದು
ದುರುಳ+ ಶಕುನಿಯ+ ಕಾಳಿಜದೊಳ್+ಒಡೆ
ವೆರಸಿ+ ಕುದಿಸಿ+ ಮಹೋಗ್ರ+ಭೂತದ
ನೆರವಿಗ್+ಉಣಲಿಕ್ಕುವೆನು +ಸತಿ+ ಕೇಳೆಂದನಾ+ ಭೀಮ

ಅಚ್ಚರಿ:
(೧) ಭೀಮನ ಕೋಪವನ್ನು ಪಾಕಶಾಲ ಪ್ರವೀಣತೆಯಲ್ಲಿ ತೋರುವ ಪದ್ಯ