ಪದ್ಯ ೫೨: ಯುದ್ಧದಲ್ಲಿ ಹೇಗೆ ಶಬ್ದವು ಮೊಳಗಿತು?

ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳತತಿ ಸಿಡಿಲೆರಗಿತೆನಲು
ಬ್ಬಾಳು ಮಿಗೆ ಕೈನೆಗಹಿ ಕೈವಾರಿಸುವ ಗಮಕಿಗಳು
ಸಾಲ ಹೆಗ್ಗಹಳೆಗಳು ರಿಪು ಭೂ
ಪಾಲಕರ ಬೈಬೈದು ಗಜರಿದ
ವಾಳುತನದಾಳಾಪ ಬೀರಿತು ಬೆರಗನಹಿತರಿಗೆ (ದ್ರೋಣ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಆಕ್ರಮಣ ಪೂರ್ವದಲ್ಲಿ ಭೇರಿಗಳು ಸಿಡಿಲೆರಗಿದಂತೆ ಸದ್ದುಮಾದಿದವು. ಮುಂದೆ ನುಗ್ಗಿಬರುವ ಸೈನಿಕರು ಕೈಯೆತ್ತಿ ಕೇಕೆ ಹಾಕುತ್ತಿದ್ದರು. ಹೆಗ್ಗಹಳೆಗಳು ಶತ್ರುರಾಜರನ್ನು ಬೈದು ಗದರಿಸುವಂತೆ ಮೊಳಗಿದವು. ಈ ಎಲ್ಲಾ ಸದ್ದು ಪಾಂಡವ ಸೈನ್ಯದ ಪರಾಕ್ರಮವನ್ನು ವ್ಯಕ್ತಪಡಿಸಿ, ಕೌರವ ಸೈನ್ಯವನ್ನು ಬೆರಗುಗೊಳಿಸಿದವು.

ಅರ್ಥ:
ಸೂಳು: ಯುದ್ಧ; ಸೂಳೈಸು: ಧ್ವನಿ ಮಾಡು; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ತತಿ: ಗುಂಪು; ಸಿಡಿಲು: ಅಶನಿ; ಎರಗು: ಬೀಳು; ಉಬ್ಬು: ಹಿಗ್ಗು, ಗರ್ವಿಸು; ಆಳು: ಸೈನಿಕ; ಮಿಗೆ: ಹೆಚ್ಚು; ನೆಗಹು: ಮೇಲೆತ್ತು; ಗಮಕಿ: ವಾಚನ ಮಾಡುವವನು; ಸಾಲ: ಕಡ, ಪ್ರಾಕಾರ; ರಿಪು: ವೈರಿ; ಭೂಪಾಲಕ: ರಾಜ; ಬೈದು: ಜರಿದು; ಗಜರು: ಗರ್ಜನೆ, ಜೋರಾಗಿ ಕೂಗು; ಆಳುತನ: ಪರಾಕ್ರಮ; ಆಳಾಪ: ಕೂಗು; ಬೀರು: ಜೋರು; ಬೆರಗು: ವಿಸ್ಮಯ, ಸೋಜಿಗ; ಅಹಿತ: ವೈರಿ;

ಪದವಿಂಗಡಣೆ:
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳತತಿ+ ಸಿಡಿಲೆರಗಿತೆನಲ್
ಉಬ್ಬ್+ಆಳು +ಮಿಗೆ +ಕೈನೆಗಹಿ+ ಕೈವಾರಿಸುವ +ಗಮಕಿಗಳು
ಸಾಲ +ಹೆಗ್ಗಹಳೆಗಳು +ರಿಪು +ಭೂ
ಪಾಲಕರ +ಬೈಬೈದು +ಗಜರಿದವ್
ಆಳುತನದ್+ಆಳಾಪ +ಬೀರಿತು+ ಬೆರಗನ್+ಅಹಿತರಿಗೆ

ಅಚ್ಚರಿ:
(೧) ರಿಪು, ಅಹಿತ – ಸಮಾನಾರ್ಥಕ ಪದ
(೨) ಗಜರು, ಬೈದು, ಗಮಕಿ, ಸಿಡಿಲು – ಶಬ್ದವನ್ನು ವಿವರಿಸುವ ಪದಗಳ ಬಳಕೆ

ಪದ್ಯ ೧೪: ಮುಂಜಾನೆ ಯುದ್ಧಕ್ಕೆ ಹೇಗೆ ತಯಾರಾದರು?

ಜೋಡು ಮಾಡಿತು ನೃಪರು ನಿಮಿಷಕೆ
ಹೂಡಿದವು ತೇರುಗಳು ಹಯತತಿ
ಕೂಡೆ ಹಲ್ಲಣಿಸಿದವು ಗುಳದಲಿ ಜಡಿದವಾನೆಗಳು
ಕೂಡೆ ಘುಮ್ಮಿಡೆ ದೆಸೆ ದೆಸೆಗಳ
ಲ್ಲಾಡಿದವು ಗಿರಿನಿಕರ ಬಿರುದನಿ
ಮಾಡಿದವು ನಿಸ್ಸಾಳತತಿ ಸೇನಾಸಮುದ್ರದಲಿ (ದ್ರೋಣ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬೆಳಗಾಗುವ ಮುನ್ನ ರಾಜರು ಯುದ್ಧಸನ್ನದ್ಧರಾದರು. ತೇರುಗಳನ್ನು ಹೂಡಿದರು. ಕುದುರೆಗಳಿಗೆ ತಡಿಯನ್ನು ಹಾಕಿದರು. ಆನೆಗಳಿಗೆ ಗುಳಗಳನ್ನು ಹಾಕಲು ಅವು ಮೊರೆದವು. ಪರ್ವತಗಳಲ್ಲಿ ಪ್ರತಿಧ್ವನಿಯನ್ನುಂಟುಮಾಡಿ ನಿಸ್ಸಾಳಗಳು ಬಡಿದವು.

ಅರ್ಥ:
ಜೋಡು: ಜೊತೆ, ಜೋಡಿ; ನೃಪ: ರಾಜ; ನಿಮಿಷ: ಕ್ಷಣಮಾತ್ರ; ಹೂಡು: ಅಣಿಗೊಳಿಸು; ತೇರು: ಬಂಡಿ; ಹಯ: ಕುದುರೆ; ತತಿ: ಸಮೂಹ, ಗುಂಪು; ಕೂಡೆ: ಸೇರು; ಹಲ್ಲಣಿಸು: ತಡಿಹಾಕು, ಧರಿಸು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಜಡಿ: ಬೆದರಿಕೆ, ಗದರಿಸು; ಆನೆ: ಗಜ; ಕೂಡು: ಜೊತೆ; ಘುಮ್ಮಿಡು: ಕೂಗು; ದೆಸೆ: ದಿಕ್ಕು; ಅಲ್ಲಾಡು: ತೂಗಾಡು; ಗಿರಿ: ಬೆಟ್ಟ; ನಿಕರ: ಗುಂಪು; ಬಿರುದನಿ: ಜೋರಾದ ಧ್ವನಿ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೇನೆ: ಸೈನ್ಯ; ಸಮುದ್ರ: ಸಾಗರ;

ಪದವಿಂಗಡಣೆ:
ಜೋಡು +ಮಾಡಿತು +ನೃಪರು +ನಿಮಿಷಕೆ
ಹೂಡಿದವು +ತೇರುಗಳು+ ಹಯತತಿ
ಕೂಡೆ +ಹಲ್ಲಣಿಸಿದವು +ಗುಳದಲಿ +ಜಡಿದವ್+ಆನೆಗಳು
ಕೂಡೆ +ಘುಮ್ಮಿಡೆ +ದೆಸೆ +ದೆಸೆಗಳ
ಲ್ಲಾಡಿದವು +ಗಿರಿನಿಕರ+ ಬಿರುದನಿ
ಮಾಡಿದವು +ನಿಸ್ಸಾಳತತಿ+ ಸೇನಾ+ಸಮುದ್ರದಲಿ

ಅಚ್ಚರಿ:
(೧) ಹಯತತಿ, ನಿಸ್ಸಾಳತತಿ – ತತಿ ಪದದ ಬಳಕೆ