ಪದ್ಯ ೪೨: ಅರ್ಜುನನು ಕೃಷ್ಣನಿಗೆ ಭೀಮನ ಬಗ್ಗೆ ಏನು ಹೇಳಿದ?

ಅರಸ ಕೇಳೈ ಬಿದ್ದ ಭೀಮನ
ಹೊರಗೆ ಬಂದರ್ಜುನನು ಮೋರೆಗೆ
ಬೆರಳನೊಡ್ಡಿ ಸಮೀರನಂದನನುಸಾರನಾರೈದು
ಮರಳಿದನು ಮುರಹರನನೆಕ್ಕಟಿ
ಗರೆದು ಸಪ್ರಾಣನು ಗದಾನಿ
ರ್ಭರಪರಿಶ್ರಮ ಭೀಮ ಬಳಲಿದನೆಂದನಾ ಪಾರ್ಥ (ಗದಾ ಪರ್ವ, ೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ರಾಜ ಕೇಳು, ನೆಲದ ಮೇಲೆ ಬಿದ್ದಿದ್ದ ಭೀಮನ ಬಳಿಗೆ ಅರ್ಜುನನು ಬಂದು, ಮೂಗಿಗೆ ಬೆರಳನ್ನಿಟ್ತುನೋಡಿ, ಕೃಷ್ಣನನ್ನು ಪಕ್ಕಕ್ಕೆ ಕರೆದು ಭೀಮನಿಗೆ ಪ್ರಾಣವಿದೆ, ಯುದ್ಧದ ಬಳಲಿಕೆಯಿಂದ ಮೂರ್ಛಿತನಾಗಿದ್ದಾನೆ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಿದ್ದ: ಎರಗು; ಹೊರಗೆ: ಆಚೆಗೆ; ಮೋರೆ: ಮುಖ; ಬೆರಳು: ಅಂಗುಲಿ; ಒಡ್ಡು: ನೀಡು; ಸಮೀರ: ವಾಯು; ನಂದನ: ಮಗ; ಉಸುರು: ಜೀವ; ಮರಳು: ಹಿಂದಿರುಗು; ಮುರಹರ: ಕೃಷ್ಣ; ಎಕ್ಕಟಿ: ಏಕಾಕಿ, ಗುಟ್ಟಾಗಿ; ಕರೆದು: ಬರೆಮಾಡು; ಪ್ರಾಣ: ಜೀವ; ನಿರ್ಭರ: ವೇಗ, ರಭಸ; ಪರಿಶ್ರಮ: ಬಳಲಿಕೆ, ಆಯಾಸ; ಬಳಲು: ಆಯಾಸಗೊಳ್ಳು;

ಪದವಿಂಗಡಣೆ:
ಅರಸ+ ಕೇಳೈ +ಬಿದ್ದ+ ಭೀಮನ
ಹೊರಗೆ +ಬಂದ್+ಅರ್ಜುನನು +ಮೋರೆಗೆ
ಬೆರಳನೊಡ್ಡಿ+ ಸಮೀರನಂದನನ್+ಉಸಾರನಾರೈದು
ಮರಳಿದನು +ಮುರಹರನನ್+ಎಕ್ಕಟಿ
ಕರೆದು +ಸಪ್ರಾಣನು +ಗದಾ+ನಿ
ರ್ಭರ+ಪರಿಶ್ರಮ+ ಭೀಮ +ಬಳಲಿದನೆಂದನಾ +ಪಾರ್ಥ

ಅಚ್ಚರಿ:
(೧) ಹೊರೆಗೆ, ಮೋರೆಗೆ – ಪ್ರಾಸ ಪದಗಳು, ೨ ಸಾಲು
(೨) ಭೀಮನನ್ನು ಸಮೀರನಂದನ ಎಂದು ಕರೆದ ಪರಿ

ಪದ್ಯ ೩೧: ಕೌರವನೇಕೆ ಮಂತ್ರಾಕ್ಷರವನ್ನು ಮರೆತನು?

ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ (ಗದಾ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ಈ ಘೋಷವನ್ನು ಕೇಳಿ ನಿನ್ನ ಮಗನಿಗೆ ಅತಿಶಯ ಕೋಪಾಗ್ನಿ ಉಕ್ಕಿತು. ರೋಮಾಂಚನಗೊಂಡ ಅವನ ಇಂದ್ರಿಯಗಳು ಮನಸ್ಸು ಉರಿದೆದ್ದವು. ಅಂತರಂಗದಲ್ಲಿ ದುಃಖವುಂಟಾಗಿ, ಜಲಸ್ತಂಭ ಮಂತ್ರದ ಬೀಜಾಕ್ಷರಗಳು ಮರೆತುಹೋದವು. ವೀರಾವೇಶದಿಂದ ನಿನ್ನ ಮಗನು ಕುದಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಗ: ಸುತ; ಉಬ್ಬರ: ಅತಿಶಯ, ಹೆಚ್ಚಳ; ರೋಮಾಂಚನ: ಆಶ್ಚರ್ಯ; ಗಬ್ಬ: ಅಹಂಕಾರ, ಸೊಕ್ಕು; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಕರಣ: ಜ್ಞಾನೇಂದ್ರಿಯ; ಆದಿ: ಮುಂತಾದ; ತುರುಗು: ಸಂದಣಿಸು; ಅಂತಃಖೇದ: ಒಳ ದುಃಖ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಕ್ಷರ: ಅಕಾರ ಮೊದಲಾದ ವರ್ಣ; ಜವನಿಕೆ: ತೆರೆ, ಪರದೆ; ನಿರ್ಭರ: ವೇಗ, ರಭಸ; ವೀರ: ಶೂರ; ಆವೇಶ: ರೋಷ, ಆಗ್ರಹ; ಪಲ್ಲಟ: ಮಾರ್ಪಾಟು; ಭೂಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ನಿನ್ನ +ಮಗನ್
ಉಬ್ಬರಿಸಿದನು +ರೋಮಾಂಚದಲಿಗ್
ಅಬ್ಬರಿಸುತ್+ಅಧಿಕ+ಕ್ರೋಧ+ಶಿಖಿ +ಕರಣೇಂದ್ರಿ+ಆದಿಗಳ
ತುರುಗಿದ್+ಅಂತಃ+ಖೇದ +ಮಂತ್ರಾ
ಕ್ಷರಕೆ +ಜವನಿಕೆಯಾದುದೈ +ನಿ
ರ್ಭರದ +ವೀರಾವೇಶದಲಿ +ಪಲ್ಲಟಿಸಿದನು +ಭೂಪ

ಅಚ್ಚರಿ:
(೧) ಮಂತ್ರವನ್ನು ಮರೆತ ಎಂದು ಹೇಳುವ ಪರಿ – ಮಂತ್ರಾಕ್ಷರಕೆ ಜವನಿಕೆಯಾದುದೈ
(೨) ದುರ್ಯೋಧನನ ಸ್ಥಿತಿ – ನಿರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ
(೩) ಅರಸ, ಭೂಪ – ಸಮಾನಾರ್ಥಕ ಪದ, ಮೊದಲ ಮತ್ತು ಕೊನೆಯ ಪದ

ಪದ್ಯ ೮: ಪಾಂಡವರ ಬಿಡಾರವು ಹೇಗೆ ತೋರಿತು?

ತರಣಿ ತೊಲಗಿದ ಗಗನವೋ ಪಂ
ಕರುಹವಿಲ್ಲದ ಸರಸಿಯೋ ಕೇ
ಸರಿಯ ಲೀಲಾಳಾಪವಿಲ್ಲದ ಬಹಳ ಕಾನನವೊ
ಪರಮತತ್ತ್ವ ನಿಧಾನವರಿಯದ
ನರನ ವಿದ್ಯಾರಚನೆಯೋ ನಿ
ರ್ಭರಭಯಂಕರವಾಯ್ತು ಪಾಳಯವನೆನುತ ಬರುತ್ತಿರ್ದ (ದ್ರೋಣ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಕಳೆಗುಂದಿದ ಪಾಂಡವರ ಪಾಳೆಯವಉ, ಸೂರ್ಯ ಮುಳುಗಿದ ಆಕಾಶದಂತೆ, ಕಮಲವಿಲ್ಲದ ಸರೋವರದಮ್ತೆ, ಸಿಂಹಗರ್ಜನೆಯಿಲ್ಲದ ಕಾಡಿನಂತೆ, ಪರತತ್ತ್ವವನ್ನರಿಯದವನ ವಿದ್ಯೆಯಂತೆ ಅತಿ ಭಯಂಕರವಾಗಿ ಕಾಣುತ್ತಿದೆಯೆಲ್ಲಾ ಎಂದುಕೊಂಡು ಅರ್ಜುನನು ಬರುತ್ತಿದ್ದನು.

ಅರ್ಥ:
ತರಣಿ: ಸೂರ್ಯ; ತೊಲಗು: ದೂರ ಸರಿ; ಗಗನ: ಆಗಸ; ಪಂಕರುಹ: ಕಮಲ; ಸರಸಿ: ಸರೋವರ; ಕೇಸರಿ: ಸಿಂಹ; ಲೀಲೆ: ಆಟ, ಕ್ರೀಡೆ, ಸಂತೋಷ; ಆಳಾಪ: ಮಾತು; ಬಹಳ: ದೊಡ್ಡ; ಕಾನನ: ಕಾಡು; ಪರಮ: ಶ್ರೇಷ್ಠ; ತತ್ತ್ವ: ವಿಚಾರ, ತಿರುಳು; ನಿಧಾನ: ವಿಳಂಬ; ಅರಿ: ತಿಳಿ; ನರ: ಅರ್ಜುನ; ವಿದ್ಯೆ: ಜ್ಞಾನ; ರಚನೆ: ನಿರ್ಮಾಣ; ನಿರ್ಭರ: ವೇಗ, ರಭಸ; ಭಯಂಕರ: ಹೆದರಿಕೆಯನ್ನುಂಟು ಮಾಡುವಂತಹುದು; ಪಾಳಯ: ಬಿಡಾರ; ಬರುತ: ಆಗಮನ;

ಪದವಿಂಗಡಣೆ:
ತರಣಿ +ತೊಲಗಿದ +ಗಗನವೋ +ಪಂ
ಕರುಹವಿಲ್ಲದ +ಸರಸಿಯೋ +ಕೇ
ಸರಿಯ +ಲೀಲಾಳಾಪವಿಲ್ಲದ +ಬಹಳ +ಕಾನನವೊ
ಪರಮತತ್ತ್ವ +ನಿಧಾನವರಿಯದ
ನರನ +ವಿದ್ಯಾರಚನೆಯೋ +ನಿ
ರ್ಭರ+ಭಯಂಕರವಾಯ್ತು +ಪಾಳಯವನೆನುತ ಬರುತ್ತಿರ್ದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತರಣಿ ತೊಲಗಿದ ಗಗನವೋ ಪಂಕರುಹವಿಲ್ಲದ ಸರಸಿಯೋ ಕೇ
ಸರಿಯ ಲೀಲಾಳಾಪವಿಲ್ಲದ ಬಹಳ ಕಾನನವೊ