ಪದ್ಯ ೧೪: ಕೌರವನು ಹೇಗೆ ತನ್ನ ಚೇತೋಭಾವವನ್ನು ತೋರಿದನು?

ನಿಮಿಷದಲಿ ಕಂದೆರೆದನಂತಃ
ಶ್ರಮದ ಝಳವಡಗಿತು ವಿಪಕ್ಷ
ಭ್ರಮಣಚೇತೋಭಾವ ಭವನದ ಮುಖವಿಕಾಸದಲಿ
ತಮದ ತನಿಮಸಕದಲಿ ಭುಜವಿ
ಕ್ರಮ ಛಡಾಳಿಸಲೆದ್ದು ಭೂಪೋ
ತ್ತಮನು ಕೊಂಡನು ಗದೆಯನನುವಾಗೆಂದನನಿಲಜನ (ಗದಾ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಒಂದು ನಿಮಿಷದಲ್ಲಿ ಕೌರವನು ಕಣ್ಣುಬಿಟ್ಟನು. ಆಯಾಸ ಹಾರಿಹೋಯಿತು. ಶತ್ರುವಿನ ಸತ್ವಾತಿಶಯವನ್ನು ಭಾವಿಸಿ ಮುಖವರಳಿತು. ಕೋಪವೇರಿ ಪರಾಕ್ರಮವು ಹೊಮ್ಮಲು ಕೌರವನು ಗದೆಯನ್ನು ತೆಗೆದುಕೊಂಡು ಭೀಮ ಸಿದ್ಧನಾಗು ಎಂದು ಗರ್ಜಿಸಿದನು.

ಅರ್ಥ:
ನಿಮಿಷ: ಕ್ಷಣಮಾತ್ರದಲಿ; ಕಂದೆರೆದು: ಕಣ್ಣನ್ನು ಬಿಚ್ಚು; ಅಂತಃಶ್ರಮ: ಒಳಗಿನ ಆಯಾಸ; ಝಳ: ಕಾಂತಿ; ಅಡಗು: ಮುಚ್ಚಿಕೊಳ್ಳು; ವಿಪಕ್ಷ: ಎದುರಾಳಿ, ವೈರಿ; ಭ್ರಮಣ: ತಿರುಗು; ಚೇತೋಭಾವ: ಸತ್ವಶಕ್ತಿ; ಭವನ: ಆಲಯ; ಮುಖ: ಆನನ; ವಿಕಾಸ: ಅರಳುವಿಕೆ, ವಿಕಸನ; ತಮ: ಅಂಧಕಾರ; ತನಿ: ಚಿಗುರು; ಮಸಕ: ಆಧಿಕ್ಯ, ಹೆಚ್ಚಳ; ಭುಜ: ಬಾಹು; ವಿಕ್ರಮ: ಶೂರ, ಸಾಹಸ; ಕೊಂಡು: ಪಡೆ; ಗದೆ: ಮುದ್ಗರ; ಅನುವಾಗು: ಸಿದ್ಧನಾಗು; ಅನಿಲಜ: ಭೀಮ;

ಪದವಿಂಗಡಣೆ:
ನಿಮಿಷದಲಿ +ಕಂದೆರೆದನ್+ಅಂತಃ
ಶ್ರಮದ +ಝಳವ್+ಅಡಗಿತು +ವಿಪಕ್ಷ
ಭ್ರಮಣ+ಚೇತೋಭಾವ +ಭವನ+ ಮುಖ+ವಿಕಾಸದಲಿ
ತಮದ +ತನಿ+ಮಸಕದಲಿ +ಭುಜ+ವಿ
ಕ್ರಮ+ ಛಡಾಳಿಸಲ್+ಎದ್ದು +ಭೂಪೋ
ತ್ತಮನು+ ಕೊಂಡನು +ಗದೆಯನ್+ಅನುವಾಗೆಂದನ್+ಅನಿಲಜನ

ಅಚ್ಚರಿ:
(೧) ಕೌರವನನ್ನು ಭೂಪೋತ್ತಮ ಎಂದು ಕರೆದಿರುವುದು
(೨) ಕೌರವನ ಅಂತಃಸತ್ವವು ಎಚ್ಚರಗೊಂಡ ಪರಿ – ತಮದ ತನಿಮಸಕದಲಿ ಭುಜವಿಕ್ರಮ ಛಡಾಳಿಸಲೆದ್ದು ಭೂಪೋತ್ತಮನು ಕೊಂಡನು ಗದೆಯನ

ಪದ್ಯ ೩೪: ಕುರುಸೇನೆಯು ಯಾರನ್ನು ಮುತ್ತಿದರು?

ಅರಸ ಕೇಳೈ ನಿಮಿಷದಲಿ ನೃಪ
ವರನ ರಥದಿಂ ಮುನ್ನ ಪಾರ್ಥನ
ತಿರುವಿನಬ್ಬರ ಕೇಳಲಾದುದು ಕಳನ ಚೌಕದಲಿ
ಅರರೆ ದೊರೆಯೋ ಕೊಳ್ಳಿವನ ಕೈ
ಮರೆಯದಿರಿ ಕುರುಧರಣಿಪನ ಹಗೆ
ಹರಿಯಲೆಂದುರವಣಿಸಿ ಕವಿದುದು ಕೂಡೆ ಕುರುಸೇನೆ (ಗದಾ ಪರ್ವ, ೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಸ್ವಲ್ಪ ಸಮಯದಲ್ಲೇ ಅರ್ಜುನನ ರಥವು ಧರ್ಮಜನ ರಥದ ಮುಂದೆ ಬಂದಿತು. ಗಾಂಡಿವದ ಹೆದೆಯ ಸದ್ದು ಕೇಳಿಬಂತು. ಅರೇ, ಇವನೇ ಬಂದಿದ್ದಾನೆ, ಇವನನ್ನು ನುಂಗಿರಿ ಮರೆಯದಿರಿ, ಕೌರವನ ವೈರಿ ಇಲ್ಲದಂತಾಗಲಿ ಎಂಬ ಕೂಗುಗಳು ಕೇಳಿಬಂದವು. ಕುರುಸೇನೆಯು ಅರ್ಜುನನನ್ನು ಮುತ್ತಿತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ನಿಮಿಷ: ಕ್ಷಣ, ಸಮಯದ ಪ್ರಮಾಣ; ನೃಪ: ರಾಜ; ವರ: ಶ್ರೇಷ್ಠ; ರಥ: ಬಂಡಿ; ಮುನ್ನ: ಮೊದಲು; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಅಬ್ಬರ: ಜೋರಾದ ಶಬ್ದ; ಕೇಳು: ಆಲಿಸು; ಕಳ: ರಣರಂಗ; ಚೌಕ: ಚತು ಷ್ಕೋಣಾಕೃತಿಯಾದ ಅಂಗಳ; ದೊರೆ: ರಾಜ; ಕೊಳ್ಳು: ತೆಗೆದುಕೋ; ಮರೆ: ನೆನಪಿನಿಂದ ದೂರ ಮಾಡು; ಧರಣಿಪ: ರಾಜ; ಹಗೆ: ವೈರಿ; ಹರಿ: ಕಡಿ, ಕತ್ತರಿಸು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕವಿ: ಆವರಿಸು; ಕೂಡು: ಸೇರು; ಸೇನೆ: ಸೈನ್ಯ;

ಪದವಿಂಗಡಣೆ:
ಅರಸ +ಕೇಳೈ +ನಿಮಿಷದಲಿ +ನೃಪ
ವರನ +ರಥದಿಂ +ಮುನ್ನ +ಪಾರ್ಥನ
ತಿರುವಿನ್+ಅಬ್ಬರ +ಕೇಳಲಾದುದು +ಕಳನ+ ಚೌಕದಲಿ
ಅರರೆ+ ದೊರೆಯೋ +ಕೊಳ್ಳಿವನ+ ಕೈ
ಮರೆಯದಿರಿ +ಕುರು+ಧರಣಿಪನ +ಹಗೆ
ಹರಿಯಲೆಂದ್+ಉರವಣಿಸಿ +ಕವಿದುದು +ಕೂಡೆ +ಕುರುಸೇನೆ

ಅಚ್ಚರಿ:
(೧) ಅರಸ, ನೃಪ, ಧರಣಿಪ, ದೊರೆ – ಸಮಾನಾರ್ಥಕ ಪದಗಳು
(೨) ಕ ಕಾರದ ತ್ರಿವಳಿ ಪದ – ಕವಿದುದು ಕೂಡೆ ಕುರುಸೇನೆ

ಪದ್ಯ ೧೮: ದ್ರೋಣನ ಬಾಣಗಳು ಪಾಂಡವರ ಸೈನ್ಯವನ್ನು ಹೇಗೆ ಸಂಹಾರ ಮಾಡಿತು?

ಮುಟ್ಟಿ ಬಂದುದು ಸೇನೆ ಕವಿದುದು
ಕಟ್ಟಳವಿಯಲಿ ಕಲಿಗಳೆದು ಬಳಿ
ಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ
ಕಟ್ಟೆಯೊಡೆದಂಬುಧಿಯೊ ಮೇಣ್ ಜಗ
ಜಟ್ಟಿ ಸುರಿದಂಬುಗಳೊ ನಿಮಿಷಕೆ
ಕೆಟ್ಟುದಾಚೆಯ ಬಲದ ತರಹರವರಸ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯವು ದ್ರೋಣನ ಹತ್ತಿರಕ್ಕೆ ಬಂದಿತು. ಯಮನಿಗೆ ಔತಣ ಆಹ್ವಾನ ಕೊಡುವಂತೆ ಮುತ್ತಿತು. ದ್ರೋಣನ ಬಾಣಗಳು ಕಟ್ಟೆಯೊಡೆದ ಸಮುದ್ರದಂತೆ ನುಗ್ಗಿ ನಿಮಿಷಮಾತ್ರದಲ್ಲಿ ಆ ಸೈನ್ಯವನ್ನು ಸಂಹರಿಸಿತು.

ಅರ್ಥ:
ಮುಟ್ಟು: ತಾಗು; ಸೇನೆ: ಸೈನ್ಯ; ಕವಿ: ಆವರಿಸು; ಅಳವಿ: ಶಕ್ತಿ; ಕಲಿ: ಶೂರ; ಕಳೆ: ಬೀಡು, ತೊರೆ; ಅಟ್ಟು: ಹಿಂಬಾಲಿಸು; ತಿಂಬ: ತಿನ್ನು; ಅಂತಕ: ಯಮ; ಔತಣ: ಊಟ; ಹೇಳು: ತಿಳಿಸು; ಕಟ್ಟೆ: ಜಗಲಿ; ಒಡೆ: ಸೀಳು; ಅಂಬುಧಿ: ಸಾಗರ; ಮೇಣ್: ಅಥವ; ಜಗಜಟ್ಟಿ: ಪರಾಕ್ರಮಿ; ಸುರಿ: ಹರಿಸು; ಅಂಬು: ಬಾಣ; ನಿಮಿಷ: ಕ್ಷಣ; ಕೆಟ್ಟು: ಕೆಡುಕು; ಆಚೆಯ: ಬೇರೆಯ; ಬಲ: ಶಕ್ತಿ, ಸೈನ್ಯ; ತರಹರ: ನಿಲ್ಲುವಿಕೆ, ಸೈರಣೆ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಟ್ಟಿ+ ಬಂದುದು +ಸೇನೆ +ಕವಿದುದು
ಕಟ್ಟಳವಿಯಲಿ +ಕಲಿಗಳೆದು +ಬಳಿಕ್
ಅಟ್ಟಿ+ ತಿಂಬ +ಮಹಾಂತಕಂಗ್+ಔತಣವ +ಹೇಳ್ವಂತೆ
ಕಟ್ಟೆಯೊಡೆದ್+ಅಂಬುಧಿಯೊ +ಮೇಣ್ +ಜಗ
ಜಟ್ಟಿ +ಸುರಿದ್+ಅಂಬುಗಳೊ +ನಿಮಿಷಕೆ
ಕೆಟ್ಟುದ್+ಆಚೆಯ +ಬಲದ +ತರಹರವ್+ಅರಸ +ಕೇಳೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕವಿದುದು ಕಟ್ಟಳವಿಯಲಿ ಕಲಿಗಳೆದು
(೨) ರೂಪಕದ ಪ್ರಯೋಗ – ಬಳಿಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ; ಕಟ್ಟೆಯೊಡೆದಂಬುಧಿಯೊ

ಪದ್ಯ ೪೩: ಕರ್ಣ ಘಟೋತ್ಕಚರ ಯುದ್ಧವು ಹೇಗೆ ನಡೆಯಿತು?

ಸಮರಸಾಧನ ಸವೆಯೆ ಕೋಪದ
ತಿಮಿರ ಗರಿಗಟ್ಟಿತು ಮಹಾವಿ
ಕ್ರಮನ ಚಳಕವನೇನ ಹೇಳುವೆ ರಥದ ಬಳಸಿನಲಿ
ಸಮತಳಿಸಿ ಕೈದುಗಳ ಮಳೆಯನು
ದ್ಯುಮಣಿತನಯನ ಮೇಲೆ ಕರೆದನು
ನಿಮಿಷಕದ ಪರಿಹರಿಸಿ ದೈತ್ಯನನೆಚ್ಚನಾ ಕರ್ಣ (ದ್ರೋಣ ಪರ್ವ, ೧೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಯುದ್ಧಸಾಧನಗಳು ಸವೆದು ಹೋಗಲು ಘಟೋತ್ಕಚನ ಕೋಪವು ಹೆಪ್ಪುಗಟ್ಟಿತು, ರಥದ ಸುತ್ತಲೂ ತಿರುಗಿ ಆಯುಧಗಳ ಮಳೆಯನ್ನು ಕರ್ಣನ ಮೇಲೆ ಸುರಿಸಿದನು. ಕರ್ಣನು ಅವನ್ನು ಕಡಿದು ಘಟೋತ್ಕಚನನ್ನು ಬಾಣಗಳಿಂದ ಹೊಡೆದನು.

ಅರ್ಥ:
ಸಮರ: ಯುದ್ಧ; ಸಾಧನ: ಗುರಿಮುಟ್ಟುವ ಪ್ರಯತ್ನ; ಸವೆ: ತೀರು, ಅಳಿ; ಕೋಪ: ಖತಿ; ತಿಮಿರ: ಅಂಧಕಾರ; ಗರಿಗಟ್ಟು: ಹೆಚ್ಚಾಗು; ವಿಕ್ರಮ: ಪರಾಕ್ರಮಿ; ಚಳಕ: ವೇಗ, ಶೀಘ್ರತೆ; ಹೇಳು: ತಿಳಿಸು; ರಥ: ಬಂಡಿ; ಬಳಸು: ಆವರಿಸುವಿಕೆ; ಸಮತಳಿಸು: ತೊಲಗಿಸು, ಅಣಿಗೊಳಿಸು; ಕೈದು: ಆಯುಧ; ಮಳೆ: ವರ್ಷ; ದ್ಯುಮಣಿ: ಸೂರ್ಯ; ತನಯ: ಮಗ; ಕರೆ: ಬೀಳು, ಆವರಿಸು; ನಿಮಿಷ: ಕ್ಷಣ; ಪರಿಹರಿಸು: ನಿವಾರಿಸು; ದೈತ್ಯ: ರಾಕ್ಷಸ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಸಮರ+ಸಾಧನ +ಸವೆಯೆ +ಕೋಪದ
ತಿಮಿರ +ಗರಿಗಟ್ಟಿತು+ ಮಹಾವಿ
ಕ್ರಮನ +ಚಳಕವನ್+ಏನ +ಹೇಳುವೆ +ರಥದ +ಬಳಸಿನಲಿ
ಸಮತಳಿಸಿ +ಕೈದುಗಳ +ಮಳೆಯನು
ದ್ಯುಮಣಿತನಯನ +ಮೇಲೆ +ಕರೆದನು
ನಿಮಿಷಕದ +ಪರಿಹರಿಸಿ+ ದೈತ್ಯನನ್+ಎಚ್ಚನಾ +ಕರ್ಣ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಕೋಪದ ತಿಮಿರ ಗರಿಗಟ್ಟಿತು
(೨) ಕರ್ಣನನ್ನು ದ್ಯುಮಣಿತನಯ ಎಂದು ಕರೆದಿರುವುದು
(೩) ಬಾಣಗಳನ್ನು ಬಿಟ್ಟನೆಂದು ಹೇಳುವ ಪರಿ – ಕೈದುಗಳ ಮಳೆಯನು ದ್ಯುಮಣಿತನಯನ ಮೇಲೆ ಕರೆದನು

ಪದ್ಯ ೮: ಘಟೋತ್ಕಚನು ಸೈನ್ಯವನ್ನು ಹೇಗೆ ನಾಶ ಮಾಡಿದನು?

ಮಾಯದಲಿ ಹುಲಿಯಾಗಿ ಗರ್ಜಿಸಿ
ಹಾಯಿದನು ಕಲಿಸಿಂಹವಾಗಿ ಗ
ದಾಯುಧದಲಪ್ಪಳಿಸಿದನು ಭೈರವನ ರೂಪಾಗಿ
ಬಾಯಲಡಸಿದನಹಿತರನು ದಂ
ಡಾಯುಧದ ನಿಲವಿನಲಿ ಸುಭಟರ
ದಾಯಗೆಡಿಸಿದನೊಂದು ನಿಮಿಷದೊಳೊರಸಿದನು ಬಲವ (ದ್ರೋಣ ಪರ್ವ, ೧೬ ಸಂಧಿ, ೮ ಪದ್ಯ)

ತಾತ್ಪರ್ಯ:
ಘಟೋತ್ಕಚನು ಮಾಯೆಯಿಂದ ಹುಲಿಯಾಗಿ ಗರ್ಜಿಸಿ, ಸಿಂಹನಾಗಿ ಸೈನ್ಯದ ಮೇಲೆ ಬಿದ್ದು, ಭೈರವರೂಪದಿಂದ ಗದೆಯಿಂದಪ್ಪಳಿಸಿ, ಬಾಯಲ್ಲಿ ಕೆಲವರನ್ನು ನುಂಗಿ, ದಂಡಾಯುಧದಂತೆ ನಿಂತು ಒಂದು ನಿಮಿಷ ಮಾತ್ರದಲ್ಲಿ ಶತ್ರುಗಳನ್ನು ಕೊಂದನು.

ಅರ್ಥ:
ಮಾಯ: ಇಂದ್ರಜಾಲ; ಹುಲಿ: ವ್ಯಾಘ್ರ; ಗರ್ಜಿಸು: ಆರ್ಭಟಿಸು; ಹಾಯಿ: ಹೊಡೆ; ಕಲಿ: ಶೂರ; ಸಿಂಹ: ಕೇಸರಿ; ಗದೆ: ಮುದ್ಗರ; ಅಪ್ಪಳಿಸು: ತಟ್ಟು, ತಾಗು; ಭೈರವ: ಶಿವನ ರೂಪ; ರೂಪ: ಆಕಾರ; ಅಡಸು: ಬಿಗಿಯಾಗಿ ಒತ್ತು; ಅಹಿತ: ವೈರಿ; ದಂಡ: ಕೋಲು, ದಡಿ; ಆಯುಧ; ಶಸ್ತ್ರ; ನಿಲವು: ನಿಲ್ಲು; ಸುಭಟ: ಸೈನಿಕ; ಕೆಡಿಸು: ಹಾಳುಮಾಡು; ಆಯ: ಉದ್ದೇಶ; ನಿಮಿಷ: ಕಾಲದ ಪ್ರಮಾಣ; ಒರಸು: ನಾಶ; ಬಲ: ಸೈನ್ಯ;

ಪದವಿಂಗಡಣೆ:
ಮಾಯದಲಿ +ಹುಲಿಯಾಗಿ +ಗರ್ಜಿಸಿ
ಹಾಯಿದನು +ಕಲಿ+ಸಿಂಹವಾಗಿ +ಗ
ದಾಯುಧದಲ್+ಅಪ್ಪಳಿಸಿದನು +ಭೈರವನ +ರೂಪಾಗಿ
ಬಾಯಲ್+ಅಡಸಿದನ್+ಅಹಿತರನು +ದಂ
ಡಾಯುಧದ +ನಿಲವಿನಲಿ +ಸುಭಟರದ್
ಆಯಗೆಡಿಸಿದನ್+ಒಂದು+ನಿಮಿಷದೊಳ್+ಒರಸಿದನು +ಬಲವ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಬಾಯಲಡಸಿದನಹಿತರನು, ಸುಭಟರದಾಯಗೆಡಿಸಿದನೊಂದು

ಪದ್ಯ ೩೯: ಅರ್ಜುನನು ದುಶ್ಯಾಸನನನ್ನು ಹೇಗೆ ಸೋಲಿಸಿದನು?

ಇವನ ಕೊಂದರೆ ಮುನ್ನ ಮಾಡಿದ
ಪವನತನಯನ ಭಾಷೆಗೊಣೆಯ
ವಿವನ ಕೊಲ್ಲದೆ ಗೆಲುವ ಹದನೇನೆನುತ ನಿಮಿಷದಲಿ
ಕವಲುಗೋಲಿನಲರಿಭಟನ ಚಾ
ಪವನು ಸೂತನ ರಥವ ರಥವಾ
ಹವನು ಖಂಡಿಸಿ ಬಿಸುಡಲವ ಜಾರಿದನು ದುಗುಡದಲಿ (ದ್ರೋಣ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಇವನನ್ನು ಕೊಂದರೆ ಭೀಮನ ಪ್ರತಿಜ್ಞೆಗೆ ಭಂಗ ಬರುತ್ತದೆ. ಇವನನ್ನು ಕೊಲ್ಲದೆ ಗೆಲ್ಲುವಾದಾದರೂ ಹೇಗೆ ಎಂದು ಯೋಚಿಸಿ, ಅರ್ಜುನನು ಅರ್ಧಚಂದ್ರಬಾಣದಿಂದ ದುಶ್ಯಾಸನನ ಬಿಲ್ಲು ಸಾರಥಿ ರಥ ಕುದುರೆಗಳನ್ನು ಕತ್ತರಿಸಲು, ದುಶ್ಯಾಸನನು ದುಃಖದಿಮ್ದ ಜಾರಿಕೊಂಡು ಹೋದನು.

ಅರ್ಥ:
ಕೊಂದು: ಸಾಯಿಸು; ಮುನ್ನ: ಮೊದಲು; ಪವನತನಯ: ವಾಯುಪುತ್ರ; ಭಾಷೆ: ನುಡಿ, ಪ್ರತಿಜ್ಞೆ; ಕೊಲ್ಲು: ಸಾಯಿಸು; ಗೆಲು: ಜಯಿಸು; ಊನ: ಕುಂದು ಕೊರತೆ; ಹದ: ಸ್ಥಿತಿ; ನಿಮಿಷ: ಕ್ಷಣ; ಕವಲು: ಆಸರೆ; ಕೋಲು: ಬಾಣ; ಅರಿ: ವೈರಿ; ಭಟ: ಸೈನಿಕ; ಚಾಪ: ಬಿಲ್ಲು; ಸೂತ: ರಥವನ್ನು ನಡೆಸುವವನು, ಸಾರ; ರಥ: ಬಂಡಿ; ಖಂಡಿಸು: ಕಡಿ, ಕತ್ತರಿಸು; ಬಿಸುಟು: ತ್ಯಜಿಸು; ಜಾರು: ನುಣುಚಿಕೊಳ್ಳು, ಕಳಚಿಕೊಳ್ಳು; ದುಗುಡ: ದುಃಖ;

ಪದವಿಂಗಡಣೆ:
ಇವನ +ಕೊಂದರೆ +ಮುನ್ನ +ಮಾಡಿದ
ಪವನತನಯನ +ಭಾಷೆಗ್+ಊಣೆ+ಅವ್
ಇವನ +ಕೊಲ್ಲದೆ +ಗೆಲುವ +ಹದನೇನ್+ಎನುತ +ನಿಮಿಷದಲಿ
ಕವಲು+ಕೋಲಿನಲ್+ಅರಿಭಟನ +ಚಾ
ಪವನು +ಸೂತನ +ರಥವ +ರಥ+
ವಾಹವನು +ಖಂಡಿಸಿ+ ಬಿಸುಡಲ್+ಅವ +ಜಾರಿದನು +ದುಗುಡದಲಿ

ಅಚ್ಚರಿ:
(೧) ರಥವ ರಥವಾಹವನು – ರಥ ಪದದ ಬಳಕೆ

ಪದ್ಯ ೭೨: ಮಹಾಂಕುಶವು ಯಾರಿಗೆ ಮಣಿಯುತ್ತದೆ?

ಇದು ವರಾಹನ ದಾಡೆಯಿದನಾ
ತ್ರಿದಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದುದು ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ (ದ್ರೋಣ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ಭಗದತ್ತನು ಪ್ರಯೋಗಿಸಿದ ಮಹಾಂಕುಶವು ಯಜ್ಞವರಾಹದ ದಾಡೆ, ಅದನ್ನು ನರಕಾಸುರನಿಗೆ ಕೊಟ್ಟೆನು. ಅವನಿಮ್ದ ಇದು ಭಗದತ್ತನಿಗೆ ಬಂದಿತು. ಇದು ನಿಮಿಷಮಾತ್ರದಲ್ಲಿ ಹರ, ಬ್ರಹ್ಮಾದಿಗಳನ್ನು ಗೆಲ್ಲುತ್ತದೆ, ನನಗಲ್ಲದೆ ಇದು ಬೇರಾರಿಗೂ ಬಗ್ಗುವುದಿಲ್ಲ ಎಂದು ಕೃಷ್ಣನು ವಿವರಿಸಿದನು.

ಅರ್ಥ:
ವರಾಹ: ಹಂದಿ; ದಾಡೆ: ಹಲ್ಲು; ತ್ರಿದಶ: ದೇವತೆ; ವೈರಿ: ರಿಪು; ಕೊಟ್ಟೆ:ನೀಡು; ಅಸ್ತ್ರ: ಶಸ್ತ್ರ, ಆಯುಧ; ಹರ: ಈಶ್ವರ; ಬ್ರಹ್ಮ: ಅಜ; ಗೆಲುವು: ಜಯ; ನಿಮಿಷ: ಕ್ಷಣ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಉಳಿದ: ಮಿಕ್ಕ; ಭಟರು: ಸೈನಿಕರು; ಮಣಿ: ಬಾಗು, ಬಗ್ಗು;

ಪದವಿಂಗಡಣೆ:
ಇದು +ವರಾಹನ +ದಾಡೆ+ಇದನ್+ಆ
ತ್ರಿದಶವೈರಿಗೆ+ ಕೊಟ್ಟೆನ್+ಅವನಿಂದ್
ಇದುವೆ +ಭಗದತ್ತಂಗೆ +ಬಂದುದು +ವೈಷ್ಣವಾಸ್ತ್ರವಿದು
ಇದು +ಹರ+ಬ್ರಹ್ಮಾದಿಗಳ+ ಗೆಲು
ವುದು +ಕಣಾ +ನಿಮಿಷದಲಿ +ತನಗ
ಲ್ಲದೆ +ಮಹಾಂಕುಶವ್+ಉಳಿದ +ಭಟರಿಗೆ +ಮಣಿವುದಲ್ಲೆಂದ

ಅಚ್ಚರಿ:
(೧) ನರಕಾಸುರ ಎಂದು ಕರೆಯಲು – ತ್ರಿದಶವೈರಿ ಪದದ ಬಳಕೆ
(೨) ಮಹಾಂಕುಶದ ಅಸ್ತ್ರ – ವೈಷ್ಣವಾಸ್ತ್ರ

ಪದ್ಯ ೬೫: ದ್ರೋಣನೇಕೆ ರಥವನ್ನು ಹಿಂದಿರುಗಿಸಿದನು?

ಮಂದಭಾಗ್ಯನು ಕೌರವನು ನಾ
ವೆಂದು ಮಾಡುವುದೇನು ನಿಮಿಷವು
ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ
ಬಂದು ಫಲಗುಣನಡ್ದವಿಸಲಿ
ನ್ನಿಂದುಧರ ಮುಳಿದೇನ ಮಾಡುವ
ನೆಂದು ಖಾತಿಯ ಹಿಡಿದು ರಥವನು ತಿರುಹಿದನು ದ್ರೋಣ (ದ್ರೋಣ ಪರ್ವ, ೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ಅಯ್ಯೋ ಕೌರವನ ಮಂದಭಾಗ್ಯನು, ಅದೃಷ್ಟಹೀನನು, ಇನ್ನೊಂದು ನಿಮಿಷ ಅರ್ಜುನನು ಬರುವುದು ತಡವಾಗಿದ್ದರೆ ಧರ್ಮರಾಯನನ್ನು ಹಿಡಿದು ಬಿಡುತ್ತಿದ್ದೆ, ಈಗ ಅರ್ಜುನನು ಬಂದು ತಡೆದ, ಈಗ ಶಿವನು ಬಂದು ಎದುರಿಸಿದರೂ ಏನೂ ಮಾಡಲು ಸಾಧ್ಯವಿಲ್ಲವೆಂದು ಸಿಟ್ಟಿನಿಂದ ರಥವನ್ನು ಹಿಂದಿರುಗಿಸಿದನು.

ಅರ್ಥ:
ಮಂದ: ಜಡವಾದ, ಚುರುಕಿಲ್ಲದ; ಭಾಗ್ಯ: ವಿಧಿ, ಹಣೆಬರಹ, ಅದೃಷ್ಟ; ನಿಮಿಷ: ಕಾಲದ ಪ್ರಮಾಣ; ನಿಂದು: ನಿಲ್ಲು; ಹಿಡಿ: ಬಂಧಿಸು; ನಂದನ: ಮಗ; ಬಂದು: ಆಗಮಿಸು; ಅಡ್ಡ: ನಡುವೆ; ಇಂದುಧರ: ಶಿವ; ಮುಳಿ: ಸಿಟ್ಟು, ಕೋಪ; ಖಾತಿ: ಕೋಪ, ಕ್ರೋಧ; ಹಿಡಿ: ಗ್ರಹಿಸು; ರಥ: ಬಂಡಿ; ತಿರುಹು: ತಿರುಗಿಸು;

ಪದವಿಂಗಡಣೆ:
ಮಂದಭಾಗ್ಯನು +ಕೌರವನು +ನಾ
ವೆಂದು +ಮಾಡುವುದ್+ಏನು +ನಿಮಿಷವು
ನಿಂದನಾದರೆ +ಹಿಡಿವೆನ್+ಆಗಳೆ +ಧರ್ಮನಂದನನ
ಬಂದು +ಫಲಗುಣನ್+ಅಡ್ದವಿಸಲಿನ್
ಇಂದುಧರ +ಮುಳಿದ್+ಏನ +ಮಾಡುವ
ನೆಂದು+ ಖಾತಿಯ+ ಹಿಡಿದು +ರಥವನು +ತಿರುಹಿದನು +ದ್ರೋಣ

ಅಚ್ಚರಿ:
(೧) ದ್ರೋಣನು ಹಿಂದಿರುಗಿದ ಕಾರಣ – ಬಂದು ಫಲಗುಣನಡ್ದವಿಸಲಿನ್ನಿಂದುಧರ ಮುಳಿದೇನ ಮಾಡುವ

ಪದ್ಯ ೧೪: ಭೀಷ್ಮನ ಬಾಣದ ಕೈಚಳಕ ಹೇಗಿತ್ತು?

ಆಗ ಹೂಡಿದನಾಗ ಬಾಣವ
ತೂಗಿ ಬರೆಸೆಳೆದೆಚ್ಚನಹಿತರ
ನಾಗ ತಾಗಿದವಂಬು ಬಲ್ಲವರಾರು ಕೈಲುಳಿಯ
ಬಾಗಿಹುದು ಬಲು ಬಿಲ್ಲು ಕಿವಿವರೆ
ಗಾಗಿ ರಿಪುಬಲ ನಿಮಿಷ ನಿಮಿಷಕೆ
ನೀಗಿಹುದು ನಿಟ್ಟುಸಿರನೆಲೆ ಭೂಪಾಲ ಕೇಳೆಂದ (ಭೀಷ್ಮ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರಣೆಯನ್ನು ನೀಡುತ್ತಾ, ಆಗಲೇ ಬಾಣವನ್ನು ಹೂಡಿ, ಕಿವಿವರೆಗೆ ಹೆದೆಯನ್ನು ಆ ಕ್ಷಣದಲ್ಲೆಳೆದು ಅದೇ ಕಾಲದಲ್ಲೇ ಭೀಷ್ಮನು ಬಾಣವನ್ನು ಬಿಡುತ್ತಿದ್ದನು. ಬಿಲ್ಲು ಯಾವಾಗಲೂ ಕಿವಿವರೆಗೆ ಬಾಗಿಯೇ ಇತ್ತು. ನಿಮಿಷ ನಿಮಿಷಕ್ಕೆ ಶತ್ರು ಸೈನ್ಯವು ನಿಟ್ಟುಸಿರು ಬಿಟ್ಟು ಪ್ರಾಣತ್ಯಾಗ ಮಾದುತ್ತಿತ್ತು. ಭೀಷ್ಮನ ಕೈಯ ವೇಗವನ್ನು ಊಹಿಸಲು ಯಾರಿಗೆ ಸಾಧ್ಯ!

ಅರ್ಥ:
ಹೂಡು: ರಚಿಸು, ನಿರ್ಮಿಸು; ಬಾಣ: ಅಂಬು; ತೂಗು: ಅಲ್ಲಾಡಿಸು; ಬರೆಸೆಳೆ: ಹತ್ತಿರಕ್ಕೆ ಬರುವಂತೆ ಎಳೆ; ಎಚ್ಚು: ಬಾಣ ಪ್ರಯೋಗ ಮಾಡು; ಅಹಿತ: ಶತ್ರು; ತಾಗು: ಮುಟ್ಟು; ಬಲ್ಲವ: ತಿಳಿದವ; ಲುಳಿ: ರಭಸ, ವೇಗ; ಬಾಗು: ಬಗ್ಗು, ಮಣಿ; ಬಲು: ಬಹಳ; ಬಿಲ್ಲು: ಚಾಪ; ಕಿವಿ: ಕರ್ಣ; ರಿಪು: ವೈರಿ; ಬಲ: ಸೈನ್ಯ; ನಿಮಿಷ: ಕ್ಷಣ, ಕಾಲದ ಪ್ರಮಾಣ; ನೀಗು: ನಿವಾರಿಸಿಕೊಳ್ಳು; ನಿಟ್ಟುಸಿರು: ಬಿಸುಸುಯ್; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಗ +ಹೂಡಿದನಾಗ +ಬಾಣವ
ತೂಗಿ +ಬರೆಸೆಳೆದ್+ಎಚ್ಚನ್+ಅಹಿತರನ್
ಆಗ+ ತಾಗಿದವ್+ಅಂಬು +ಬಲ್ಲವರಾರು +ಕೈಲುಳಿಯ
ಬಾಗಿಹುದು +ಬಲು +ಬಿಲ್ಲು +ಕಿವಿವರೆಗ್
ಆಗಿ+ ರಿಪುಬಲ +ನಿಮಿಷ +ನಿಮಿಷಕೆ
ನೀಗಿಹುದು +ನಿಟ್ಟುಸಿರನ್+ಎಲೆ+ ಭೂಪಾಲ +ಕೇಳೆಂದ

ಅಚ್ಚರಿ:
(೧) ನಿ ಕಾರದ ಸಾಲು ಪದ – ನಿಮಿಷ ನಿಮಿಷಕೆ ನೀಗಿಹುದು ನಿಟ್ಟುಸಿರನೆಲೆ
(೨) ಅಹಿತ, ರಿಪು – ಸಮಾನಾರ್ಥಕ ಪದ

ಪದ್ಯ ೪೮: ಅರ್ಜುನನ ಬಾಣದ ಹೊಡೆತವು ಹೇಗಿತ್ತು?

ತಾರು ಥಟ್ಟಿಗೆ ಕೆಡೆದವಾನೆಗ
ಳಾರು ಸಾವಿರ ತುರಗದಳದಸು
ಸೂರೆ ಹೋದುದು ಸಮರದಲಿ ಹದಿನೆಂಟು ಸಾವಿರವು
ಕಾರಿದರು ಕರುಳನು ಪದಾತಿಗ
ಳಾರು ಲಕ್ಷವು ಮೊದಲ ಲಗ್ಗೆಗೆ
ಮೂರು ಸಾವಿರ ತೇರು ನೆಗ್ಗಿದವೊಂದು ನಿಮಿಷದಲಿ (ಭೀಷ್ಮ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅರ್ಜುನನ ಹೊಡೆತಕ್ಕೆ ಒಂದೇ ನಿಮಿಷಕ್ಕೆ ಆರು ಸಾವಿರ ಆನೆಗಳ ಗುಂಪುಗಳೇ ಸತ್ತು ಬಿದ್ದವು. ಹದಿನೆಂಟು ಸಾವಿರ ರಾವುತರು ಮಡಿದರು. ಆರು ಲಕ್ಷ ಕಾಲಾಳುಗಳ ಕರುಳು ಕಾರಿ ಬಿದ್ದವು. ಮೂರು ಸಾವಿರ ರಥಗಳು ಪುಡಿ ಪುಡಿಯಾದವು.

ಅರ್ಥ:
ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು; ಕೆಡೆ:ಬೀಳು, ಕುಸಿ; ಆನೆ: ಕರಿ; ಸಾವಿರ: ಸಹಸ್ರ; ತುರಗ: ಅಶ್ವ; ದಳ: ಸೈನ್ಯ; ಸೂರೆ: ಕೊಳ್ಳೆ, ಲೂಟಿ; ಹೋದು: ಹೋಗು; ಸಮರ: ಯುದ್ಧ; ಸಾವಿರ: ಸಹಸ್ರ; ಕಾರಿ: ಚೌಳು ನೆಲ; ಕರುಳು: ಪಚನಾಂಗ; ಪದಾತಿ: ಸೈನಿಕ; ಮೊದಲು: ಆದಿ; ಲಗ್ಗೆ: ಆಕ್ರಮಣ; ತೇರು: ಬಂಡಿ; ನೆಗ್ಗು: ಕುಗ್ಗು, ಕುಸಿ; ನಿಮಿಷ: ಕ್ಷಣಮಾತ್ರದಲಿ; ಅಸು: ಪ್ರಾಣ;

ಪದವಿಂಗಡಣೆ:
ತಾರು +ಥಟ್ಟಿಗೆ +ಕೆಡೆದವ್+ಆನೆಗಳ್
ಆರು +ಸಾವಿರ +ತುರಗದಳದ್ +ಅಸು
ಸೂರೆ +ಹೋದುದು +ಸಮರದಲಿ +ಹದಿನೆಂಟು +ಸಾವಿರವು
ಕಾರಿದರು +ಕರುಳನು +ಪದಾತಿಗಳ್
ಆರು +ಲಕ್ಷವು+ ಮೊದಲ +ಲಗ್ಗೆಗೆ
ಮೂರು +ಸಾವಿರ +ತೇರು +ನೆಗ್ಗಿದವ್+ಒಂದು +ನಿಮಿಷದಲಿ

ಅಚ್ಚರಿ:
(೧) ಕೆಡೆದವು, ಸೂರೆ ಹೋದುದು, ಕಾರಿದರು, ನೆಗ್ಗಿದವು – ನಾಶವಾದುದನ್ನು ವಿವರಿಸುವ ಪದಗಳು
(೨) ಒಟ್ಟು ನಾಶವಾದವರ ಸಂಖ್ಯೆ – ೬,೨೭,೦೦೦