ಪದ್ಯ ೬: ಕೌರವವನನ್ನು ಕಂಡ ಸಂಜಯನ ಸ್ಥಿತಿ ಹೇಗಿತ್ತು?

ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ (ಗದಾ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ನಾನು ರಾಜನ ಕಳವಳವನ್ನು ನೋಡಿದೆ, ಅತಿಶಯ ಶೋಕಜ್ವಾಲೆಯಲ್ಲಿ ಬೆಂದಿದ್ದೆ. ಒಂದು ನಿಮಿಷ ಮೂರ್ಛಿತನಾಗಿ, ನಂತರ ಎಚ್ಚೆತ್ತು, ಕಣ್ಣುತೆರೆದು ನನ್ನ ಶೋಕವನ್ನು ನಿಲ್ಲಿಸಿದನು. ಅವನ ಸತ್ವ ಹುರಿಗೊಂಡಿತು. ಅವನಿಗೆ ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳಲ್ಲಿ ಸಮರಾರಿದ್ದಾರೆ?

ಅರ್ಥ:
ಕಂಡು: ನೋಡು; ಅರಸ: ರಾಜ; ನಿಬ್ಬರ: ಅತಿಶಯ, ಹೆಚ್ಚಳ; ಬಳಿ: ಹತ್ತಿರ; ಅತಿ: ಬಹಳ: ಶೋಕ: ದುಃಖ; ಶಿಖಿ: ಬೆಂಕಿ; ಕೈಗೊಂಡು: ಪಡೆದು; ಅರೆ: ಅರ್ಧ; ಘಳಿಗೆ: ಸಮಯ; ಬಳಿಕ: ನಂತರ; ಎಚ್ಚತ್ತು: ಎಚ್ಚರನಾಗಿ; ಕಂದೆರೆದು: ಕಣ್ಣುಬಿಟ್ಟು; ಖಂಡಿಸು: ಕಡಿ, ಕತ್ತರಿಸು; ಉಬ್ಬೆ: ಸೆಕೆ, ಕಾವು; ಹುರಿ: ಕಾಯಿಸು, ತಪ್ತಗೊಳಿಸು; ಸತ್ವ: ಸಾರ; ದಂಡಿ: ಶಕ್ತಿ, ಸಾಮರ್ಥ್ಯ; ಬಹರು: ಆಗಮಿಸು; ಸುರ: ದೇವತೆ; ನರ: ಮನುಷ್ಯ; ನಾಗಲೋಕ: ಪಾತಾಳ;

ಪದವಿಂಗಡಣೆ:
ಕಂಡೆನ್+ಅರಸನ +ನಿಬ್ಬರವ +ಬಳಿ
ಕಂಡಲೆದುದ್+ಅತಿ+ಶೋಕಶಿಖಿ+ ಕೈ
ಗೊಂಡುದಿಲ್ಲ್+ಅರೆ+ಘಳಿಗೆ +ಬಳಿಕ್+ಎಚ್ಚತ್ತು +ಕಂದೆರೆದು
ಖಂಡಿಸಿದನ್+ಎನ್ನ್+ಉಬ್ಬೆಯನು +ಹುರಿ
ಗೊಂಡುದಾತನ +ಸತ್ವವ್+ಆತನ
ದಂಡಿಯಲಿ +ಬಹರಾರು +ಸುರ+ ನರ+ ನಾಗಲೋಕದಲಿ

ಅಚ್ಚರಿ:
(೧) ದುರ್ಯೋಧನನ ಪರಾಕ್ರಮ – ಆತನ ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ

ಪದ್ಯ ೬೯: ಭೀಮನನ್ನು ಯಾರು ಮುತ್ತಿದರು?

ಗದೆಯ ಘಾತಾಘಾತಿಕಾರನ
ನಿದಿರುಗೊಂಡುದು ದೆಸೆದೆಸೆಗೆ ಹ
ಬ್ಬಿದುದು ಬಲನೆಡಜೋಡು ಬಲುಭಾರಣೆಯ ಪಟುಭಟರು
ಮದಗಜದ ನಿಡುವರಿಯ ತೇರಿನ
ಕುದುರೆಕಾರರ ಕಾಹಿನಲಿ ಕೊ
ಬ್ಬದುದು ನಿಬ್ಬರವಾಗಿ ಬಹುವಿಧ ವಾದ್ಯ ನಿರ್ಘೋಷ (ದ್ರೋಣ ಪರ್ವ, ೨ ಸಂಧಿ, ೬೯ ಪದ್ಯ)

ತಾತ್ಪರ್ಯ:
ಗದೆಯಿಂದ ವೈರಿಗಳನ್ನು ಬಡಿಯುತ್ತಾ ಬಂದ ಭೀಮನನ್ನು ಎಡಕ್ಕೆ, ಬಲಕ್ಕೆ ಎಲ್ಲಾ ದಿಕ್ಕುಗಳಲ್ಲಿ ಕೌರವ ವೀರರು ಮುತ್ತಿದರು. ಆನೆ, ಕುದುರೆ, ರಥಗಳು ಹಿಂಡುಹಿಂಡಾಗಿ ಬಂದವು. ರಣವಾದ್ಯಗಳು ಕರ್ಣಕಠೋರವಾಗಿ ಮೊರೆದವು.

ಅರ್ಥ:
ಗದೆ: ಮುದ್ಗರ; ಘಾತಘಾತಿಕಾರ: ಹಿಂಸೆ ಮಾಡುವವನು; ಇದಿರು: ಎದುರು; ದೆಸೆ: ದಿಕ್ಕು; ಹಬ್ಬು: ಹರಡು; ಬಲ: ಸೈನ್ಯ; ಜೋಡು: ಜೊತೆ, ಜೋಡಿ; ಬಲು: ತುಂಬ; ಭಾರಣೆ: ಮಹಿಮೆ, ಗೌರವ; ಪಟುಭಟ: ಪರಾಕ್ರಮಿ; ಮದ: ದರ್ಪ; ಗಜ: ಆನೆ; ನಿಡು: ಉದ್ದವಾದ, ದೀರ್ಘ; ತೇರು: ಬಂಡಿ; ಕುದುರೆ: ಅಶ್ವ; ಕಾಹು: ರಕ್ಷಣೆ; ಕೊಬ್ಬು: ಆಧಿಕ್ಯ, ಸಮೃದ್ಧಿ; ನಿಬ್ಬರ: ಅತಿಶಯ, ಹೆಚ್ಚಳ; ಬಹುವಿಧ: ಬಹಳ; ವಾದ್ಯ: ಸಂಗೀತದ ಸಾಧನ; ನಿರ್ಘೋಷ: ದೊಡ್ಡ ಘೋಷಣೆ;

ಪದವಿಂಗಡಣೆ:
ಗದೆಯ +ಘಾತಾಘಾತಿಕಾರನನ್
ಇದಿರುಗೊಂಡುದು +ದೆಸೆದೆಸೆಗೆ +ಹ
ಬ್ಬಿದುದು +ಬಲನ್+ಎಡಜೋಡು +ಬಲುಭಾರಣೆಯ +ಪಟುಭಟರು
ಮದಗಜದ +ನಿಡುವರಿಯ +ತೇರಿನ
ಕುದುರೆಕಾರರ +ಕಾಹಿನಲಿ +ಕೊ
ಬ್ಬದುದು +ನಿಬ್ಬರವಾಗಿ +ಬಹುವಿಧ +ವಾದ್ಯ +ನಿರ್ಘೋಷ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುದುರೆಕಾರರ ಕಾಹಿನಲಿ ಕೊಬ್ಬದುದು

ಪದ್ಯ ೪೯: ಅರ್ಜುನನನ್ನು ಯಾರು ಮುತ್ತಿದರು?

ಓಡಿದಾಳಲ್ಲಲ್ಲಿ ಧೈರ್ಯವ
ಮಾಡಿತೆಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದೊಳು
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನಗಂಭೀರ ಭೇರಿಯ ಬಹಳ ರಭಸದೊಳು (ವಿರಾಟ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಷ್ಮನು ಬಂದುದನ್ನು ನೋಡಿ ಓಡಿ ಹೋಗುತ್ತಿದ್ದ ಸೈನಿಕರು ಧೈರ್ಯಮಾಡಿ ಕೂಡಿಕೊಂಡರು. ಭಯದ ಆರ್ತನಾದ ನಿಂತುಹೋಯಿತು, ಚತುರಂಗ ಸೈನ್ಯವು ಒಂದಾಗಿ ಕೂಡಿ ಭೇರಿ ನಿನಾದವನ್ನು ಮಾಡುತ್ತಾ ಅರ್ಜುನನನ್ನು ಮುತ್ತಿತು.

ಅರ್ಥ:
ಓಡು: ಧಾವಿಸು; ಆಳು: ಸೈನಿಕ; ಧೈರ್ಯ: ಎದೆಗಾರಿಕೆ, ಕೆಚ್ಚು; ಒಗ್ಗು: ಒಟ್ಟುಗೂಡು, ಗುಂಪಾಗು; ಹುರಿ: ಕೆಚ್ಚು, ಬಲ; ಅಬ್ಬರ: ಜೋರಾದ ಶಬ್ದ; ಮಗುಳೆ: ಮತ್ತೆ; ನಿಬ್ಬರ:ಅತಿಶಯ, ಹೆಚ್ಚಳ; ನಿಮಿಷ: ಕ್ಷಣಮಾತ್ರದೊಳು; ಕೂಡೆ; ಜೊತೆಗೂಡು; ಗರಿಗಟ್ಟು: ಶಕ್ತಿಶಾಲಿಯಾಗು; ಚತುರ್ಬಲ: ಚತುರಂಗ ಸೈನ್ಯ; ಜೋಡು: ಜೊತೆ; ಕವಿ: ಆವರಿಸು; ಕೂಡೆ: ಜೊತೆ; ಘನ: ಶ್ರೇಷ್ಠ, ಗಾಢ; ಗಂಭೀರ: ಆಳವಾದುದು; ಭೇರಿ: ಡಂಗುರ, ನಗಾರಿ; ರಭಸ: ವೇಗ;

ಪದವಿಂಗಡಣೆ:
ಓಡಿದ್+ಆಳ್+ಅಲ್ಲಲ್ಲಿ +ಧೈರ್ಯವ
ಮಾಡಿತೆಚ್ಚಾಳ್+ಒಗ್ಗಿನಲಿ +ಹುರಿ
ಗೂಡಿತ್+ಅಬ್ಬರ +ಮಗುಳೆ +ನಿಬ್ಬರವಾಯ್ತು +ನಿಮಿಷದೊಳು
ಕೂಡೆ +ಗರಿಗಟ್ಟಿತು +ಚತುರ್ಬಲ
ಜೋಡು +ಮಾಡಿತು +ಕವಿದುದ್+ಈತನ
ಕೂಡೆ +ಘನಗಂಭೀರ +ಭೇರಿಯ +ಬಹಳ +ರಭಸದೊಳು

ಅಚ್ಚರಿ:
(೧) ಗರಿಗಟ್ಟು, ಹುರಿಗೂದು, ದೈರ್ಯವಮಾಡು – ಸಾಮ್ಯಾರ್ಥ ಪದಗಳು

ಪದ್ಯ ೩೯: ದ್ರೌಪದಿಯು ಏನು ಯೋಚಿಸುತ್ತಾ ಭೀಮನ ಬಳಿ ಬಂದಳು?

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ
ತಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ (ವಿರಾಟ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಯೋಚಿಸುತ್ತಾ ಮುಂದೆ ನಡೆದಳು, ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೇ? ಅಥವಾ ಒಬ್ಬಳೇ ಏಕೆ ಬಂದೆ? ಮುಖವೇಕೆ ಕುಂದಿದೆ? ಸಮಾಧಾನ ಮಾಡುವನೇ? ನಾನು ಬಂದದ್ದು ಯಾರಿಗಾದರೂ ತಿಳಿದರೆ? ಎಂದು ಯೋಚಿಸಿದ ದ್ರೌಪದಿಯು ಎಬ್ಬಿಸಿ ನೋಡುವ ಎಂದು ನಿಶ್ಚಯಿಸಿ ಭೀಮನ ಬಳಿ ಬಂದಳು.

ಅರ್ಥ:
ಎಬ್ಬಿಸು: ಎಚ್ಚರಗೊಳಿಸು; ಭುಗಿಲ್: ಕೂಡಲೆ, ಒಂದು ಅನುಕರಣ ಶಬ್ದ; ಮೇಣ್: ಅಥವ; ಬಂದೆ: ಆಗಮಿಸು; ಮೋರೆ: ಮುಖ; ಮಬ್ಬು: ನಸುಗತ್ತಲೆ, ಮಸುಕು; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ; ತಬ್ಬು: ಅಪ್ಪುಗೆ, ಆಲಿಂಗನ; ನಿಬ್ಬರ: ಅತಿಶಯ, ಹೆಚ್ಚಳ; ಜನ: ಮನುಷ್ಯ; ಮನ: ಮನಸ್ಸು; ನೋಡು: ವೀಕ್ಷಿಸು; ಸಾರು: ಹತ್ತಿರಕ್ಕೆ ಬರು, ಸಮೀಪಿಸು; ವಲ್ಲಭ: ಗಂಡ, ಪತಿ;

ಪದವಿಂಗಡಣೆ:
ಎಬ್ಬಿಸಲು+ ಭುಗಿಲ್+ಎಂಬನೋ +ಮೇಣ್
ಒಬ್ಬಳೇತಕೆ +ಬಂದೆ +ಮೋರೆಯ
ಮಬ್ಬಿದೇನ್+ಎಂದೆನ್ನ+ ಸಂತೈಸುವನೊ +ಸಾಮದಲಿ
ತಬ್ಬುವುದೊ+ ತಾ +ಬಂದ +ಬರವಿದು
ನಿಬ್ಬರವಲಾ+ ಜನದ+ ಮನಕಿನ್
ಎಬ್ಬಿಸಿಯೆ +ನೋಡುವೆನ್+ಎನುತ +ಸಾರಿದಳು +ವಲ್ಲಭನ

ಅಚ್ಚರಿ:
(೧) ಎಬ್ಬಿಸು – ೧, ೬ ಸಾಲಿನ ಮೊದಲ ಪದ
(೨) ದ್ರೌಪದಿಯ ಪ್ರಶ್ನೆಗಳು – ಎಬ್ಬಿಸಲು ಭುಗಿಲೆಂಬನೋ, ಒಬ್ಬಳೇತಕೆ ಬಂದೆ, ಮೋರೆಯ ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ

ಪದ್ಯ ೩೭: ಅರ್ಜುನನೇಕೆ ಬೆಂಡಾಗಿ ಬಿದ್ದನು?

ಬಿರಿದುದೀತನ ಗರ್ವ ಗಿರಿ ಮಡ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿಂದ್ರಿಯ ವರ್ಗ ನೆಗ್ಗಿತು ನೆನಹಿನೊಡ್ದವಣೆ
ಹರಿದುದಂಗಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತುಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆಂಡಾದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನ ಗರ್ವದ ಬೆಟ್ಟವು ಬಿರಿಯಿತು. ಶಕ್ತಿಯ ಕಾಲು ಮುರಿಯಿತು. ಇಂದ್ರಿಯ ಶಕ್ತಿಯು ಉಡುಗಿತು. ಗೆಲ್ಲಬೇಕೆಂಬ ಆಲೋಚನೆಯು ಹಾರಿತು. ದೇಹದಲ್ಲೆಲ್ಲಾ ಬೆವರು ಹರಿಯಿತು. ಆವೇಶ, ಸೊಕ್ಕು ಹರಿದು ಹೋಯಿತು, ಪರಮಾಶ್ಚರ್ಯವಾಗುವಂತೆ ವಿರಹ ವೇದನೆಯಲ್ಲಿ ಸಿಲುಕುವಂತೆ ಅರ್ಜುನನು ಬೆಂಡಾಗಿ ಬಿದ್ದನು.

ಅರ್ಥ:
ಬಿರಿ: ಬಿರುಕು, ಸೀಳು; ಗರ್ವ: ಅಹಂಕಾರ; ಗಿರಿ: ಬೆಟ್ಟ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮುರಿ: ಸೀಳು; ಶಕ್ತಿ: ಬಲ; ಸಲೆ: ಪೂರ್ಣ, ತಕ್ಕಂತೆ; ಟೆಬ್ಬರಿಸು: ಶಕ್ತಿಗುಂದಿಸು, ಕುಗ್ಗಿಸು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವರ್ಗ: ಗುಂಪು; ನೆಗ್ಗು: ಕುಗ್ಗು, ಕುಸಿ; ನೆನಹು: ನೆನಪು; ಒಡ್ಡವಣೆ: ಗುಂಪು, ಸನ್ನಾಹ; ಹರಿ: ಪ್ರವಾಹ, ಓಡು, ಧಾವಿಸು, ಪ್ರವಹಿಸು; ಅಂಗ: ದೇಹ, ಶರೀರ, ಅವಯವ; ಸ್ವೇದಜಲ: ಬೆವರು; ಕಾಹುರ: ಆವೇಶ, ಸೊಕ್ಕು; ನಿಬ್ಬರ: ಅತಿಶಯ, ಹೆಚ್ಚಳ; ಬೆರಗು: ವಿಸ್ಮಯ, ಸೋಜಿಗ; ಬೇಟ: ವಿರಹ; ಬೆಂಡು: ತಿರುಳಿಲ್ಲದುದು, ಪೊಳ್ಳು;

ಪದವಿಂಗಡಣೆ:
ಬಿರಿದುದ್+ಈತನ +ಗರ್ವ +ಗಿರಿ +ಮಡ
ಮುರಿದುದ್+ ಈತನ +ಶಕ್ತಿ+ ಸಲೆ +ಟೆ
ಬ್ಬರಿಸಿತ್+ಇಂದ್ರಿಯ +ವರ್ಗ +ನೆಗ್ಗಿತು +ನೆನಹಿನ್+ಒಡ್ದವಣೆ
ಹರಿದುದ್+ಅಂಗ+ಸ್ವೇದಜಲ+ ಕಾ
ಹುರತೆ +ಕಾಲ್ವೊಳೆಯಾಯ್ತುಂ+ಅತಿ+ ನಿ
ಬ್ಬರದ +ಬೆರಗಿನ+ ಬೇಟದಲಿ+ ಬೆಂಡಾದನಾ +ಪಾರ್ಥ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೆರಗಿನ ಬೇಟದಲಿ ಬೆಂಡಾದನಾ
(೨) ಉಪಮಾನದ ಪ್ರಯೋಗ – ಬಿರಿದುದೀತನ ಗರ್ವ ಗಿರಿ, ಮಡ ಮುರಿದುದೀತನ ಶಕ್ತಿ ಸಲೆ, ಟೆಬ್ಬರಿಸಿತಿಂದ್ರಿಯ ವರ್ಗ, ನೆಗ್ಗಿತು ನೆನಹಿನೊಡ್ದವಣೆ

ಪದ್ಯ ೧೨: ಅರ್ಜುನನ ರಥದ ವೇಗೆ ಹೇಗಿತ್ತು?

ಅರಸ ಕೇಳೈ ಬೊಬ್ಬಿರಿದು ಚ
ಪ್ಪರಿಸಿ ತೇಜಿಯ ನೂಕಿದನು ಮುರ
ಹರನು ಸೂಠಾಸೂಠಿಯಲಿ ಕೈದೋರಿದನು ಪಾರ್ಥ
ಖುರಪುಟದಲಾಕಾಶವನು ಕ
ತ್ತರಿಸುವವೊಲುಬ್ಬರದಲತಿನಿ
ಬ್ಬರದ ಗತಿಯಲಿ ನಿಗುರಿದವು ರಥವಾಜಿಗಳು ನರನ (ಕರ್ಣ ಪರ್ವ, ೨೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಬೊಬ್ಬಿರಿದು ಕುದುರೆಗಳನ್ನು ಚಪ್ಪರಿಸಿ ಮುಂದೆ ಬಿಡಲು, ಆ ವೇಗಕ್ಕನುಗುಣವಾದ ವೇಗದಿಂದ ಅರ್ಜುನನು ಬಾಣ ಪ್ರಯೋಗಮಾಡಿದನು. ಗೊರಸುಗಳಿಂದ ಆಕಾಶವನ್ನು ಕತ್ತರಿಸುವಂತೆ ಅತಿವೇಗದಿಂದ ಅರ್ಜುನನ ರಥದ ಕುದುರೆಗಳು ನುಗ್ಗಿದವು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬೊಬ್ಬಿರಿ: ಜೋರಾಗಿ ಕೂಗು; ಚಪ್ಪರಿಸು: ಸವಿ, ರುಚಿನೋಡು; ತೇಜಿ: ಕುದುರೆ; ನೂಕು: ತಳ್ಳು; ಮುರಹರ: ಕೃಷ್ಣ; ಸೂಠಾಸೂಠಿ: ರಭಸವಾಗಿ; ಕೈದೋರು: ಕೈಚಳಕ; ಖುರಪುಟ: ಗೊರಸು, ಒಂದು ಬಗೆಯ ಹುಲ್ಲು; ಆಕಾಶ: ಗಗನ; ಕತ್ತರಿಸು: ಸೀಳು; ಉಬ್ಬರ: ಹೆಚ್ಚಳ; ನಿಬ್ಬರ: ಅತಿಶಯ, ಹೆಚ್ಚಳ; ಗತಿ: ವೇಗ; ನಿಗುರು: ಹರಡು, ವ್ಯಾಪಿಸು; ರಥ: ಬಂಡಿ; ನರ: ಅರ್ಜುನ;

ಪದವಿಂಗಡಣೆ:
ಅರಸ +ಕೇಳೈ +ಬೊಬ್ಬಿರಿದು +ಚ
ಪ್ಪರಿಸಿ +ತೇಜಿಯ +ನೂಕಿದನು +ಮುರ
ಹರನು +ಸೂಠಾಸೂಠಿಯಲಿ +ಕೈದೋರಿದನು +ಪಾರ್ಥ
ಖುರಪುಟದಲ್+ಆಕಾಶವನು +ಕ
ತ್ತರಿಸುವವೊಲ್+ಉಬ್ಬರದಲ್+ಅತಿ+ನಿ
ಬ್ಬರದ +ಗತಿಯಲಿ +ನಿಗುರಿದವು +ರಥವಾಜಿಗಳು +ನರನ

ಅಚ್ಚರಿ:
(೧) ಸೂಠಾಸೂಠಿ, ನಿಬ್ಬರದ ಗತಿ – ವೇಗ ಎಂದು ಸೂಚಿಸುವ ಪದಗಳು
(೨) ಉಪಮಾನದ ಪ್ರಯೋಗ – ಖುರಪುಟದಲಾಕಾಶವನು ಕತ್ತರಿಸುವವೊಲು

ಪದ್ಯ ೩: ಯಾರು ಕರ್ಣಾರ್ಜುನರನ್ನು ಹೊಗಳಿದರು?

ಗಬ್ಬರಿಸಿದುದು ಗಗನವನು ಬಲು
ಬೊಬ್ಬೆ ಬಹುವಿಧವಾದ್ಯರಭಸದ
ನಿಬ್ಬರದ ನಿಡುಸೂಳು ಸೂಳೈಸಿದುದು ದಿಗುತಟವ
ಉಬ್ಬುಗೆಡದಿರಿ ಕರ್ಣಪಾರ್ಥ ಸ
ಗರ್ಭರಹಿತೋ ಪೂತು ಮಝ ಎಂ
ಬಬ್ಬರಣೆ ಸುರರೂಢಿಯಲಿ ಝೊಂಪಿಸಿತು ಮೂಜಗವ (ಕರ್ಣ ಪರ್ವ, ೨೩ ಸಂಧಿ, ೩ ಪದ್ಯ)

ತಾತ್ಪರ್ಯ:
ರಣವಾದ್ಯಗಳು ರಣರಂಗದಲ್ಲಿ ಮೊಳಗಳು ಅದರ ನಾದವು ಆಗಸವನ್ನೆಲ್ಲಾ ತುಂಬಿತು. ಎಲ್ಲಾ ದಿಕ್ಕುಗಳಲ್ಲು ವಾದ್ಯದ ದೀರ್ಘವಾದ ಸದ್ದು ಮತ್ತೆ ಮತ್ತೆ ಹಬ್ಬಿತು. ಕರ್ಣಾರ್ಜುನರೇ ನಿಮ್ಮಲ್ಲಿ ಪರಾಕ್ರಮ ಅಡಗಿದೆ, ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳಬೇಡಿ, ಭಲೇ, ಭೇಷ್ ಎಂದು ದೇವತೆಗಳು ಇಬ್ಬರನ್ನು ಹೊಗಳಿದರು.

ಅರ್ಥ:
ಗಬ್ಬರಿಸು: ಆವರಿಸು, ತಗ್ಗಾಗು; ಗಗನ: ಆಗಸ; ಬಲು: ಬಹಳ; ಬೊಬ್ಬೆ: ಜೋರಾದ ಶಬ್ದ; ಬಹು: ಬಹಳ; ವಿಧ: ರೀತಿ ವಾದ್ಯ: ಸಂಗೀತದ ಸಾಧನ; ರಭಸ: ವೇಗ; ನಿಬ್ಬರ: ಅತಿಶಯ, ಹೆಚ್ಚಳ; ನಿಡು: ಉದ್ದವಾದ, ದೀರ್ಘ; ಸೂಳು: ಆರ್ಭಟ, ಬೊಬ್ಬೆ; ಸೂಳೈಸು: ಧ್ವನಿಮಾಡು, ಹೊಡೆ; ದಿಗುತಟ: ದಿಕ್ಕು; ಉಬ್ಬು: ಹಿಗ್ಗು, ಗರ್ವಿಸು; ಕೆಡಡಿರಿ: ಕಳೆದುಕೊಳ್ಳಬೇಡಿ; ಸಗರ್ಭ: ಒಳಗೆ, ಅಡಗಿದ; ಪೂತು: ಭಲೇ; ಮಝ: ಕೊಂಡಾಟದ ಮಾತು; ಅಬ್ಬರಣೆ: ಆರ್ಭಟ; ಸುರ: ದೇವತೆಗಳು; ರೂಢಿ: ವಾಡಿಕೆ, ಬಳಕೆ; ಝೊಂಪಿಸು: ಭಯಗೊಳ್ಳು, ಬೆಚ್ಚಿಬೀಳು; ಮೂಜಗ: ಮೂರು ಪ್ರಪಂಚ;

ಪದವಿಂಗಡಣೆ:
ಗಬ್ಬರಿಸಿದುದು +ಗಗನವನು +ಬಲು
ಬೊಬ್ಬೆ +ಬಹುವಿಧ+ವಾದ್ಯ+ರಭಸದ
ನಿಬ್ಬರದ +ನಿಡುಸೂಳು +ಸೂಳೈಸಿದುದು +ದಿಗುತಟವ
ಉಬ್ಬು+ಕೆಡದಿರಿ +ಕರ್ಣಪಾರ್ಥ +ಸ
ಗರ್ಭರಹಿತೋ +ಪೂತು +ಮಝ +ಎಂಬ್
ಅಬ್ಬರಣೆ +ಸುರರೂಢಿಯಲಿ +ಝೊಂಪಿಸಿತು+ ಮೂಜಗವ

ಅಚ್ಚರಿ:
(೧) ಒಂದೇ ಅಕ್ಷರದ ಜೋಡಿ ಪದಗಳು – ಗಬ್ಬರಿಸುದುದು ಗಗನ, ನಿಬ್ಬರದ ನಿಡುಸೂಳು
(೨) ಬೊಬ್ಬೆ, ಅಬ್ಬರಣೆ, ಸೂಳು, ಸೂಳೈಸು – ಸಾಮ್ಯಾರ್ಥ ಪದಗಳು

ಪದ್ಯ ೩೬: ಕರ್ಣನು ಯುಧಿಷ್ಠಿರನನ್ನು ಹೇಗೆ ಮಾತಿನಿಂದ ಇರಿದನು?

ದ್ರೋಣ ಬರಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರ ರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ (ಕರ್ಣ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ದ್ರೋಣನಂತೆ ನನ್ನ ಮಾತು ಎಂದು ನೀನು ತಿಳಿಯದಿರು, ನನ್ನನ್ನು ವ್ಯವ್ಯಹಾರಕ್ಕನುಗುಣವಾಗಿ ಕೌರವನು ಸಾಕಲಿಲ್ಲ. ಇನ್ನು ನಿನ್ನ ಪ್ರಾಣದಾಶೆಯನ್ನು ಬಿಡು, ಯಾವ ಸಂಕೋಚವೂ ಇಲ್ಲದೆ ನಿನ್ನ ಸಂಪೂರ್ಣ ಶಕ್ತಿಯಿಂದ ಯುದ್ಧಮಾಡು ಎಂದು ಕರ್ಣನು ನಿಶ್ಯಕ್ತನಾಗಿದ್ದ ಯುಧಿಷ್ಠಿರನನ್ನು ಮಾತಿನಿಂದ ಇರಿದನು.

ಅರ್ಥ:
ಬರಸು: ತುಂಬು; ಭಾಷೆ: ಮಾತು; ಕ್ಷೋಣಿಪತಿ: ರಾಜ; ಬಗೆ: ಆಲೋಚನೆ, ಯೋಚನೆ; ವಾಣಿ: ಮಾತು; ವಿವರ: ವಿಸ್ತಾರ; ಸಲಹು: ಕಾಪಾಡು; ರಾಯ: ರಾಜ; ಪ್ರಾಣ; ಜೀವ; ಆಸೆ: ಬಯಕೆ; ಮರೆ: ನೆನಪಿನಿಂದ ದೂರ ಮಾಡು; ಕೇಣ: ಹೊಟ್ಟೆಕಿಚ್ಚು, ಮತ್ಸರ ; ಕಾದು: ಯುದ್ಧಮಾಡು; ನಿತ್ರಾಣ: ಶಕ್ತಿಹೀನತೆ; ನಿಬ್ಬರ: ಕಠೋರತೆ; ನುಡಿ: ಮಾತು; ಇರಿ: ಚುಚ್ಚು;

ಪದವಿಂಗಡಣೆ:
ದ್ರೋಣ +ಬರಸಿದ +ಭಾಷೆಯೆಂದೇ
ಕ್ಷೋಣಿಪತಿ +ಬಗೆಯದಿರು +ತನ್ನನು
ವಾಣಿಯದ +ವಿವರದಲಿ +ಸಲಹನು +ಕೌರವರ+ ರಾಯ
ಪ್ರಾಣದಾಸೆಯ+ ಮರೆದು +ತನ್ನೊಳು
ಕೇಣವಿಲ್ಲದೆ +ಕಾದೆನುತ+ ನಿ
ತ್ರಾಣನನು +ನಿಬ್ಬರದ +ನುಡಿಗಳಲ್+ಇರಿದನಾ +ಕರ್ಣ

ಅಚ್ಚರಿ:
(೧) ನ ಕಾರದ ಪದ – ನಿತ್ರಾಣನನು ನಿಬ್ಬರದ ನುಡಿಗಳಲಿರಿದನಾ
(೨) ಕ್ಷೋಣಿಪತಿ, ರಾಯ; ವಾಣಿ, ನುಡಿ – ಸಮನಾರ್ಥಕ ಪದ

ಪದ್ಯ ೧೪: ರಾತ್ರಿ ಹೇಗೆ ಕಳೆಯಿತು?

ಬಿರಿದುದಬುಜಭವಾಂಡವೆನೆ ಭೋಂ
ಕರಿಸಿದವು ನಿಸ್ಸಾಳತತಿ ನಿ
ಬ್ಬರದ ಬಿರುದನು ಬೀರುತಿರ್ದವು ಗೌರುಗಹಳೆಗಳು
ಎರಲು ಸುಳಿದುದು ದೀಪಶಿಖಿ ಪರಿ
ಹರಿಸಿದತಿಬಲದಬ್ಬರದ ನಿ
ಷ್ಠುರತೆಗಂಜದೆ ಮಾಣದೆನೆ ಹೆರಹಿಂಗಿತಾ ರಜನಿ (ಕರ್ಣ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಇಡೀ ಬ್ರಹ್ಮಾಂಡವು ಸೀಳುವಂತೆ ಭೇರಿಗಳು ಭೋಂಕಾರ ಮಾಡಿದವು. ರಣಕಹಳೆಗಳು ಭಟರ ಬಿರುದನ್ನು ಹೊಗಳುವಂತೆ ಮೊರೆಯುತ್ತಿದ್ದವು. ಗಾಳಿ ಸುಳಿದು ಹಣತೆಗಳು ನಂದಿದವು. ಮಹಾಸೇನೆಯ ನಿಷ್ಠುರವಾದ ಅಬ್ಬರಕ್ಕೆ ಹೆದರಿತೆಂಬಂತೆ ರಾತ್ರಿ ಕಳೆಯಿತು.

ಅರ್ಥ:
ಬಿರಿ: ಬಿರುಕುಂಟಾಗು; ಅಬುಜಭವಾಂಡ: ಬ್ರಹ್ಮಾಂಡ; ಅಬುಜ: ತಾವರೆ; ಭೋಂಕರಿಸು: ಅಬ್ಬರ, ಗರ್ಜನೆ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಸಮೂಹ, ಗುಂಪು; ನಿಬ್ಬರ: ಅತಿಶಯ, ಹೆಚ್ಚಳ; ಬಿರುದ:ಗೌರವಸೂಚಕವಾಗಿ ಕೊಡುವ ಹೆಸರು; ಬೀರು: ತೂರು; ಗೌರು: ಗಟ್ಟಿಯಾದ ಕೀರಲು ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಎರಲ್:ಗಾಳಿ; ಸುಳಿ: ಸುತ್ತು, ಆವರ್ತ; ದೀಪ: ಹಣತೆ; ಶಿಖಿ: ಬೆಂಕಿ; ಪರಿಹರಿಸು: ನಿವಾರಿಸು; ಅತಿ: ಹೆಚ್ಚು; ಬಲ: ಶಕ್ತಿ; ಅಬ್ಬರ: ಗರ್ಜನೆ, ಜೋರಾದ ಶಬ್ದ; ನಿಷ್ಠುರ: ಕಠಿಣವಾದುದು; ಅಂಜು: ಹೆದರು; ಮಾಣ: ನಿಲ್ಲು; ಹೆರಹಿಂಗು: ಹಿಂದೆಸರಿ, ದೂರವಾಗು; ರಜನಿ: ರಾತ್ರಿ;

ಪದವಿಂಗಡಣೆ:
ಬಿರಿದುದ್+ಅಬುಜಭವಾಂಡವ್+ಎನೆ +ಭೋಂ
ಕರಿಸಿದವು+ ನಿಸ್ಸಾಳ+ ತತಿ +ನಿ
ಬ್ಬರದ +ಬಿರುದನು +ಬೀರುತಿರ್ದವು +ಗೌರು+ಕಹಳೆಗಳು
ಎರಲು +ಸುಳಿದುದು +ದೀಪಶಿಖಿ +ಪರಿ
ಹರಿಸಿತ್+ಅತಿಬಲದ್+ಅಬ್ಬರದ+ ನಿ
ಷ್ಠುರತೆಗ್+ಅಂಜದೆ +ಮಾಣದ್+ಎನೆ +ಹೆರಹಿಂಗಿತಾ +ರಜನಿ

ಅಚ್ಚರಿ:
(೧) ನಿಬ್ಬರ, ಅಬ್ಬರ – ಪ್ರಾಸ ಪದ
(೨) ರಾತ್ರಿ ಕಳೆದ ಬಗೆ – ನಿಷ್ಠುರತೆಗಂಜದೆ ಮಾಣದೆನೆ ಹೆರಹಿಂಗಿತಾ ರಜನಿ