ಪದ್ಯ ೯: ಇಂದ್ರನು ಕರ್ಣನಿಗೆ ಏನನ್ನು ನೀಡಿದನು?

ಮೆಚ್ಚಿದೆನು ರವಿಸುತನೆ ನೀ ಮನ
ಮೆಚ್ಚಿದುದ ವರಿಸೆನಲು ತಾ ನೆನೆ
ದಚ್ಚರಿಯ ಬೇಡಿದನು ಶಕ್ತಿಯನೀವುದೆನಗೆನಲು
ಬಿಚ್ಚಿಗವಸಣಿಗೆಯಲಿ ತನ್ನಯ
ನಚ್ಚಿನಾಯುಧವನ್ನು ಕರ್ಣನ
ನಿಚ್ಚಟದ ಮನವೈದೆ ಹರುಷದಿ ಕೊಟ್ಟನಮರೇಂದ್ರ (ಅರಣ್ಯ ಪರ್ವ, ೨೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಲೈ ಕರ್ಣನೇ ನಿನ್ನ ಧೈರ್ಯ ಮತ್ತು ದಾನಕ್ಕೆ ನಾನು ಮೆಚ್ಚಿದ್ದೇನೆ, ನೀನು ಬಯಸಿದುದನ್ನು ಕೇಳು ಎಂದು ದೇವೇಂದ್ರನು ಹೇಳಲು, ಕರ್ಣನು ತನ್ನ ತಂದೆ ಸೂರ್ಯದೇವನು ಹೇಳಿದ ಮಾತುಗಳು ನೆನಪಾಗಿ, ಎಲೈ ದೇವ ನನಗೆ ಶಕ್ತಿಯನ್ನು ನೀಡು ಎಂದು ಕೇಳಲು, ಇಂದ್ರನು ತನ್ನ ನೆಚ್ಚಿನ ಶಕ್ತ್ಯಾಯುಧವನ್ನು ಅದರ ಒರೆಯಿಂದ ತೆಗೆದು ವೀರ ಕರ್ಣನಿಗೆ ಸಂತೋಷದಿಂದ ನೀಡಿದನು.

ಅರ್ಥ:
ಮೆಚ್ಚು: ಹೊಗಳು, ಪ್ರಶಂಶಿಸು; ರವಿಸುತ: ಸೂರ್ಯನ ಮಗ; ಮನ: ಮನಸ್ಸು; ವರಿಸು: ಅಂಗೀಕರಿಸು; ನೆನೆ: ಜ್ಞಾಪಿಸಿಕೋ; ಅಚ್ಚರಿ: ಆಶ್ಚರ್ಯ; ಬೇಡು: ಕೇಳು; ಶಕ್ತಿ: ಬಲ; ಈವುದು: ನೀಡು; ಬಿಚ್ಚು: ತೆರೆ; ನಚ್ಚು: ಹತ್ತಿರ, ಪ್ರಿಯ; ಆಯುಧ: ಶಸ್ತ್ರ; ನಿಚ್ಚಟ: ಕಪಟವಿಲ್ಲದುದು; ಇಚ್ಛೆ: ಆಸೆ; ಮನ: ಮನಸ್ಸು; ಹರುಷ: ಸಂತೋಷ; ಅಮರೇಂದ್ರ: ಇಂದ್ರ; ಅಮರ: ಸುರರು; ಗವಸಣಿಗೆ: ಒರೆ, ಶಸ್ತ್ರಕೋಶ;

ಪದವಿಂಗಡಣೆ:
ಮೆಚ್ಚಿದೆನು+ ರವಿಸುತನೆ+ ನೀ +ಮನ
ಮೆಚ್ಚಿದುದ +ವರಿಸೆನಲು +ತಾ +ನೆನೆದ್
ಅಚ್ಚರಿಯ +ಬೇಡಿದನು +ಶಕ್ತಿಯನ್+ಈವುದ್+ಎನಗ್+ಎನಲು
ಬಿಚ್ಚಿ+ಗವಸಣಿಗೆಯಲಿ+ ತನ್ನಯ
ನಚ್ಚಿನ್+ಆಯುಧವನ್ನು +ಕರ್ಣನ
ನಿಚ್ಚಟದ +ಮನವ್+ಐದೆ +ಹರುಷದಿ+ ಕೊಟ್ಟನ್+ಅಮರೇಂದ್ರ

ಅಚ್ಚರಿ:
(೧) ಇಂದ್ರನು ಶಸ್ತ್ರವನ್ನು ನೀಡಿದ ಪರಿ – ನಿಚ್ಚಟದ ಮನವೈದೆ ಹರುಷದಿ ಕೊಟ್ಟನಮರೇಂದ್ರ

ಪದ್ಯ ೩೯: ಕರ್ಣನ ಬಾಣಗಳ ವೇಗ ಹೇಗಿದ್ದವು?

ಭಟರು ಮುತ್ತಿದರಿನಸುತನ ಲಟ
ಕಟಿಸಲೆಚ್ಚರು ಶಿವ ಶಿವಾ ನಿ
ಚ್ಚಟದ ನಿಬ್ಬರದಂಘವಣೆ ಮಝ ಪೂತು ಲೇಸೆನುತ
ನಿಟಿಲನೇತ್ರನ ನಯನ ಶಿಖಿಯು
ಬ್ಬಟೆಗೆ ಸಮ ಜೋಡಿಸಿತು ಕರ್ಣನ
ಚಟುಳ ವಿಕ್ರಮಪವನಪರಿಗತ ಬಾಣಶಿಖಿನಿಕರ (ಕರ್ಣ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಪಾಂಡವ ವೀರರೆಲ್ಲರೂ ಕರ್ಣನನ್ನು ಮುತ್ತಿಮಹಾ ಸತ್ವದಿಂದ ಬಾಣಗಳನ್ನು ಬಿಟ್ಟರು, ಕರ್ಣನು ಇವರ ಬಾಣಪ್ರಯೋಗವನ್ನು ನೋಡಿ, ಭಲೇ, ಭೇಷ್ ನಿಮ್ಮ ಕೈಚಳಕ ಚೆನ್ನಾಗಿದೆ ಎಂದು ಹೇಳುತ್ತಾ ವಾಯುವೇಗದಿಂದ ಅವರ ಮೇಲೆ ಬಾಣವನ್ನು ಬಿಟ್ಟನು. ಶಿವನ ಹಣೆಗಣ್ಣಿನ ಬೆಂಕಿಯಂತೆ ಆ ಬಾಣಗಳು ತೀಕ್ಷ್ಣವಾಗಿದ್ದವು.

ಅರ್ಥ:
ಭಟ: ಸೈನಿಕರು; ಮುತ್ತು: ಆವರಿಸು; ಇನ: ಸೂರ್ಯ; ಸುತ: ಮಗ; ಲಟಕಟಿ:ಉದ್ರೇಕಗೊಳ್ಳು; ಎಚ್ಚ: ಬಾಣ ಬಿಡು; ನಿಚ್ಚಟ:ನಿಜ, ಸತ್ಯ; ನಿಬ್ಬರ: ತೀಕ್ಷ್ಣತೆ, ಕಠಿಣತೆ; ಮಝ: ಭಲೇ ಭೇಷ್; ಪೂತು: ಭೇಷ್; ಲೇಸು: ಒಳಿತು; ನಿಟಿಲ:ಹಣೆ, ಫಾಲ; ನೇತ್ರ: ಕಣ್ಣು; ನಯನ: ಕಣ್ಣು; ನಿಟಿಲನೇತ್ರ: ಶಿವ; ಶಿಖಿ: ಬೆಂಕಿ; ಉಬ್ಬಟೆ: ಅತಿಶಯ, ಹಿರಿಮೆ; ಸಮ: ಸರಿಸಮಾನವಾದುದು; ಜೋಡಿಸು: ಕೂಡಿಸು, ಸೇರಿಸು; ಚಟುಳ: ಲವಲವಿಕೆಯುಳ್ಳ; ವಿಕ್ರಮ: ಶೂರ, ಸಾಹಸ; ಪವನ: ಗಾಳಿ, ವಾಯು; ಪರಿಗತ: ವೇಗ; ಬಾಣ: ಅಂಬು; ಶಿಖಿ: ಬೆಂಕಿ; ನಿಕರ: ಗುಂಪು;

ಪದವಿಂಗಡಣೆ:
ಭಟರು +ಮುತ್ತಿದರ್+ಇನಸುತನ +ಲಟ
ಕಟಿಸಲ್+ಎಚ್ಚರು +ಶಿವ +ಶಿವಾ +ನಿ
ಚ್ಚಟದ +ನಿಬ್ಬರದ್+ಅಂಘವಣೆ +ಮಝ +ಪೂತು +ಲೇಸೆನುತ
ನಿಟಿಲನೇತ್ರನ +ನಯನ +ಶಿಖಿ
ಉಬ್ಬಟೆಗೆ +ಸಮ +ಜೋಡಿಸಿತು +ಕರ್ಣನ
ಚಟುಳ +ವಿಕ್ರಮ+ಪವನಪರಿಗತ+ ಬಾಣಶಿಖಿನಿಕರ

ಅಚ್ಚರಿ:
(೧) ಬೆಂಕಿಯ ಬಾಣಗಳ ಗುಂಪು ಎಂದು ಹೇಳಲು – ಬಾಣಶಿಖಿನಿಕರ
(೨) ಬಾಣದ ವೇಗವನ್ನು ತಿಳಿಸಲು – ಪವನಪರಿಗತ
(೩) ಉಪಮಾನದ ಪ್ರಯೋಗ – ನಿಟಿಲನೇತ್ರನ ನಯನ ಶಿಖಿಯು ಬ್ಬಟೆಗೆ ಸಮ ಜೋಡಿಸಿತು ಕರ್ಣನ ಚಟುಳ ವಿಕ್ರಮಪವನಪರಿಗತ ಬಾಣಶಿಖಿನಿಕರ