ಪದ್ಯ ೨೭: ಹಸ್ತಿನಾಪುರದ ಜನರು ಎಲ್ಲಿಗೆ ಬಂದರು?

ಬಂದುದೀ ಗಜಪುರದ ನಾರೀ
ವೃಂದ ಧೃತರಾಷ್ಟ್ರಾವನೀಶನ
ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ
ಮುಂದಣಾಹವರಂಗಧಾರುಣಿ
ಯೊಂದು ಕೆಲದುಪವನದ ನೆಳಲಲಿ
ನಿಂದುದಿವರಾಗಮನವನು ಕೇಳಿದನು ಯಮಸೂನು (ಗದಾ ಪರ್ವ, ೧೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಹಸ್ತಿನಾಪುರದ ನಾರೀವೃಂದವು ಧೃತರಾಷ್ಟ್ರ, ಸಂಜಯ, ವಿದುರ, ಪುರಜನರು ರಣರಂಗಕ್ಕೆ ಬಂದುದನ್ನು, ಯುದ್ಧರಂಗದ ಒಂದು ಪಕ್ಕದ ಉಪವನದ ನೆರಳಿನಲ್ಲಿ ನಿಂತಿದ್ದ ಯುಧಿಷ್ಠಿರನು ಕೇಳಿದನು.

ಅರ್ಥ:
ಬಂದು: ಆಗಮಿಸು; ಗಜಪುರ: ಹಸ್ತಿನಾಪುರ; ನಾರಿ: ಹೆಣ್ಣು; ವೃಂದ: ಗುಂಪು; ಅವನೀಶ: ರಾಜ; ಮುಂದೆ: ಎದುರು; ಆಹವ: ಯುದ್ಧ; ಧಾರುಣಿ: ಭೂಮಿ; ಕೆಲ: ಪಕ್ಕ; ಉಪಮನ: ಉದ್ಯಾನವನ; ನೆಳಲು: ನೆರಳು; ನಿಂದು: ನಿಲ್ಲು; ಆಗಮನ: ಬರುವಿಕೆ; ಕೇಳು: ಆಲಿಸು; ಸೂನು: ಮಗ;

ಪದವಿಂಗಡಣೆ:
ಬಂದುದೀ +ಗಜಪುರದ +ನಾರೀ
ವೃಂದ +ಧೃತರಾಷ್ಟ್ರ+ಅವನೀಶನ
ಮುಂದೆ +ವೇದವ್ಯಾಸ +ಸಂಜಯ +ವಿದುರ +ಪೌರಜನ
ಮುಂದಣ್+ಆಹವರಂಗಧಾರುಣಿ
ಯೊಂದು +ಕೆಲದ್+ಉಪವನದ +ನೆಳಲಲಿ
ನಿಂದುದ್+ಇವರ್+ಆಗಮನವನು +ಕೇಳಿದನು+ ಯಮಸೂನು

ಅಚ್ಚರಿ:
(೧) ಯುದ್ಧಭೂಮಿ ಎಂದು ಹೇಳಲು – ಆಹವರಂಗಧಾರುಣಿ ಪದದ ಬಳಕೆ

ಪದ್ಯ ೨೯: ಧೃತರಾಷ್ಟ್ರನು ಸಂಜಯನನ್ನು ಯಾರ ಬಗ್ಗೆ ವಿಚಾರಿಸಿದನು?

ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ಅರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ (ಗದಾ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ದೊರೆಯ ಅಪ್ಪಣೆಯಂತೆ ಸ್ತ್ರೀವೃಂದವನ್ನು ಇಲ್ಲಿಗೆ ಕರೆತಂದೆನು. ಈ ವೃತ್ತಾಂತವಉ ಇಲ್ಲಿಯವರೆಗೆ ನಡೆಯಿತು. ಇನ್ನೇನು ಹೇಳಲಿ ಎಂದು ಹೇಳಲು, ಧೃತರಾಷ್ಟ್ರನು, ಅಶ್ವತ್ಥಾಮನು ಕೌರವನ ರಕ್ಷಣೆಗೆ ಹೋದನೇ, ಮುಂದೇನಾಯಿತು ಎಂದು ಕುತೂಹಲದಿಂದ ಕೇಳಿದನು.

ಅರ್ಥ:
ತಂದೆ: ಬಂದೆ, ಆಗಮಿಸು; ಸಕಲ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ನೇಮ: ಅಪ್ಪಣೆ; ವೃತ್ತಾಂತ: ವಿವರಣೆ; ವರ್ತಿಸು: ನಡೆದುದು; ಪರಿ: ರೀತಿ, ಕ್ರಮ; ಹೇಳು: ತಿಳಿಸು; ಬೆಸಸು: ಹೇಳು, ಆಜ್ಞಾಪಿಸು; ಅವನೀಪತಿ: ರಾಜ; ಹೊರೆ: ರಕ್ಷಣೆ; ಐತಂದು: ಬಂದು ಸೇರು; ಸೂನು: ಮಗ; ಹದ: ಸ್ಥಿತಿ;

ಪದವಿಂಗಡಣೆ:
ತಂದೆನ್+ಇಲ್ಲಿಗೆ +ಸಕಲ+ ನಾರೀ
ವೃಂದವನು +ಕುರುಪತಿಯ +ನೇಮದಲ್
ಇಂದಿನೀ +ವೃತ್ತಾಂತ + ವರ್ತಿಸಿತಿಲ್ಲಿ +ಪರಿಯಂತ
ಮುಂದೆ +ಹೇಳುವುದೇನು +ನೀ +ಬೆಸ
ಸೆಂದಡ್+ಅವನೀಪತಿಯ+ ಹೊರೆಗ್
ಐತಂದನೇ +ಗುರುಸೂನು +ಮೇಲಣ+ ಹದನ+ ಹೇಳೆಂದ

ಅಚ್ಚರಿ:
(೧) ತಂದೆನಿಲ್ಲಿಗೆ, ಹೊರೆಗೈತಂದನೇ – ಪದಗಳ ಬಳಕೆ

ಪದ್ಯ ೨೦: ಧೃತರಾಷ್ಟ್ರನು ಯಾರ ತಲೆಯನ್ನು ನೇವರಿಸಿದನು?

ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ (ಗದಾ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನರಮನೆಯನ್ನು ಹೊಕ್ಕು, ಸ್ತ್ರೀಯರನ್ನು ಪಲ್ಲಕ್ಕಿಗಳಲ್ಲಿ ಅವರವರ ಮನೆಗೆ ಕಳುಹಿಸಿದನು. ಧೃತರಾಷ್ಟ್ರನು ಬಂದವರಾರು ಎಂದು ಉತ್ಸಾಹದಿಂದ ಕೇಳಲು ಸಂಜಯನು ಒಡೆಯಾ ನಾನು ಎಂದು ಹೇಳಲು, ಧೃತರಾಷ್ಟ್ರನು ಉತ್ಸಾಹದಿಂದ ಅಪ್ಪಾ ಸಂಜಯ ಬಾ ಬಾ ಎಂದು ಆತನ ತಲೆಯನ್ನು ನೇವರಿಸಿದನು.

ಅರ್ಥ:
ಬಂದು: ಆಗಮಿಸು; ಅಂಧ: ಕುರುಡ; ನೃಪ: ರಾಜ; ಮಂದಿರ: ಆಲಯ; ಹೊಕ್ಕು: ಸೇರು; ಅಖಿಳ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ಕಳುಹಿದ: ತೆರಳು, ಹೊರಗಡೆ ಅಟ್ಟು; ದಂಡಿಗೆ: ಪಲ್ಲಕ್ಕಿ; ಮನೆ: ಆಲಯ, ಗೃಹ; ಜೀಯ: ಒಡೆಯ; ಉತ್ಸಾಹ: ಸಂಭ್ರಮ; ತಡವು: ನೇವರಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ಬಂದು +ಸಂಜಯನ್+ಅಂಧ+ನೃಪತಿಯ
ಮಂದಿರವ+ ಹೊಕ್ಕ್+ಅಖಿಳ +ನಾರೀ
ವೃಂದವನು +ಕಳುಹಿದನು +ದಂಡಿಗೆಗಳಲಿ+ ಮನೆಮನೆಗೆ
ಬಂದರಾರ್+ಎನೆ +ಸಂಜಯನು +ಜೀಯ್
ಎಂದಡ್+ಉತ್ಸಾಹದಲಿ +ಬಂದೈ
ತಂದೆ +ಸಂಜಯ +ಬಾಯೆನುತ +ತಡವಿದನು +ಬೋಳೈಸಿ

ಅಚ್ಚರಿ:
(೧) ಧೃತರಾಷ್ಟ್ರನನ್ನು ಕರೆದ ಪರಿ – ಅಂಧ ನೃಪತಿ, ಜೀಯ
(೨) ಅಕ್ಕರೆಯನ್ನು ತೋರುವ ಪರಿ – ಬಾಯೆನುತ ತಡವಿದನು ಬೋಳೈಸಿ